ಬದಲಾವಣೆಯ ಹಿಂದಿನ ಗುಟ್ಟು ಕಳೆದ ಕೆಲ ವರ್ಷಗಳಲ್ಲಿ ಕ್ರೀಡಾಕ್ಷೇತ್ರದ ವಿದ್ಯಮಾನ ಗಮನಿಸಿದರೆ ದೇಶದಲ್ಲಿ ಲೀಗ್‌ಗಳ ಪರ್ವವೇ ಶುರುವಾಗಿದೆ. ಅದರಲ್ಲಿ ಬ್ಯಾಡ್ಮಿಂಟನ್‌ ಲೀಗ್‌ ಕೂಡ ಒಂದು.ಈ ಬಗ್ಗೆ ಕೆ. ಓಂಕಾರ ಮೂರ್ತಿ ಬರೆದಿದ್ದಾರೆ. ‘ಬೆಳಗಾವಿಯಿಂದ ಬಂದ ಒಬ್ಬ ಯುವಕ ಬೆಂಗಳೂರಿನಲ್ಲಿ ರಾಜ್ಯ ಕ್ರಿಕೆಟ್‌ ಲೀಗ್‌ನಲ್ಲಿ ಆಡುತ್ತಿದ್ದ. ಬೆಳಗಾವಿಯಲ್ಲೂ ಆತನಿಗೆ ಮನೆ ಇರಲಿಲ್ಲ. ತೀರಾ ಬಡ ಕುಟುಂಬ ದಿಂದ ಬಂದವನು. ಆದರೆ, ಕೆಪಿಎಲ್‌ ಟೂರ್ನಿಯ ಹರಾಜಿನಲ್ಲಿ ಆತನಿಗೆ ಉತ್ತಮ ಹಣ ಲಭಿಸಿತು. ಕೂಡಿಟ್ಟ ಹಣ ಹಾಗೂ ಕೆಪಿಎಲ್‌ನಿಂದ ಬಂದ ಹಣದಲ್ಲಿ ಊರಿನಲ್ಲಿ ಪುಟ್ಟ ಮನೆ ಖರೀದಿಸಿದ್ದಾನೆ. ಬಟ್ಟೆ, ಶೂ ಕೊಂಡುಕೊಳ್ಳಲು ಸಹಾಯ ವಾಗಿದೆ. ಈಗ ಅವನದ್ದು ನೆಮ್ಮದಿಯ ಜೀವನ. ಇದಕ್ಕೆ ಕಾರಣ ಕೆಪಿಎಲ್‌’. –ಕರ್ನಾಟಕ ಕ್ರಿಕೆಟ್‌ ನಾಯಕ ಆರ್‌. ವಿನಯ್‌ ಕುಮಾರ್‌ ಇತ್ತೀಚೆಗೆ ‘ಪ್ರಜಾವಾಣಿ’ ಜೊತೆ ಮಾತ ನಾಡುತ್ತಾ ಕೆಪಿಎಲ್‌ ಟೂರ್ನಿಯ ಉಪಯೋಗದ ಬಗ್ಗೆ ಉದಾಹರಣೆ ಯೊಂದನ್ನು ನೀಡಿದ್ದರು. ಭಾರತದಲ್ಲಿ ಆರಂಭವಾಗಿರುವ ಕ್ರೀಡಾ ಲೀಗ್‌ಗಳು ಕ್ರೀಡಾಪಟುಗಳ ಬಾಳನ್ನು ಯಾವ ರೀತಿ ಹಸನಾಗಿಸಿವೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ ಅಷ್ಟೆ. ಇದಷ್ಟೇ ಅಲ್ಲ; ಬೇರೆ ಬೇರೆ ಕಾರಣಗಳಿಂದಾಗಿ ರಾಜ್ಯ, ರಾಷ್ಟ್ರ ತಂಡ ಪ್ರತಿನಿಧಿಸಲು ಅವಕಾಶವನ್ನೇ ಕಳೆದುಕೊಂಡಿದ್ದ ಕೆಲ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸಲು ವೇದಿಕೆಯಾಗಿವೆ. ಇದರಲ್ಲಿ ಪ್ರೀಮಿಯರ್‌ ಬ್ಯಾಡ್ಮಿಂ ಟನ್‌ ಲೀಗ್‌ (ಪಿಬಿಎಲ್‌) ಕೂಡ ಒಂದು. ಸೈನಾ ನೆಹ್ವಾಲ್‌ ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದು ಹಾಗೂ 2013ರಲ್ಲಿ ಬ್ಯಾಡ್ಮಿಂಟನ್ ಲೀಗ್‌ ಆರಂಭವಾಗಿದ್ದು ಭಾರತದ ಬ್ಯಾಡ್ಮಿಂಟನ್‌ ವಲಯದಲ್ಲಿ ದೊಡ್ಡ ಕ್ರಾಂತಿ ಎನ್ನಬಹುದು. ಆ ಬಳಿಕ ಹಲವು ಬದಲಾವಣೆಗಳಾಗಿವೆ. ಹೆಚ್ಚು ಪ್ರಚಾರ ಸಿಗುತ್ತಿದೆ. ಅಷ್ಟೇ ಅಲ್ಲ; ಮೂರು–ನಾಲ್ಕು ವರ್ಷಗಳಲ್ಲಿ ಹಲವು ಅದ್ಭುತ ಸಾಧನೆಗಳು ಮೂಡಿಬಂದಿವೆ. ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌, ಒಲಿಂಪಿಕ್ಸ್‌, ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂ ಟನ್‌ ಚಾಂಪಿಯನ್‌ಷಿಪ್‌, ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟಗ ಳಲ್ಲಿ ಭಾರತದ ಆಟಗಾರರು ಗೆದ್ದ ಪದಕಗಳು ಅದಕ್ಕೊಂದು ನಿದರ್ಶನ. ಹಿಂದೆ ಅಪರೂಪಕ್ಕೊಮ್ಮೆ ಈ ಸಾಧನೆ ಮೂಡಿಬರುತಿತ್ತು. ‘ಬ್ಯಾಡ್ಮಿಂಟನ್‌ ಲೀಗ್ ಆರಂಭದ ಬಳಿಕ ಹೆಚ್ಚಿನ ಆಟಗಾರರ ಹಣಕಾಸಿನ ಪರಿಸ್ಥಿತಿ ಸುಧಾರಿಸಿದೆ. ಯುವ ಆಟಗಾರರು ಅಪೂರ್ವ ಪ್ರದರ್ಶನ ತೋರುತ್ತಿದ್ದಾರೆ. ಬ್ಯಾಡ್ಮಿಂಟನ್ ಆಡಲು ತಮ್ಮ ಮಕ್ಕಳನ್ನು ಪೋಷಕರು ಪ್ರೋತ್ಸಾಯಿಸುತ್ತಿದ್ದಾರೆ. ಯಾವುದೇ ಕ್ರೀಡೆ ಇರಲಿ. ಅದು ಯಶಸ್ವಿಯಾಗಬೇಕೆಂದರೆ ಪೋಷಕರ ಪ್ರೋತ್ಸಾಹ ತುಂಬಾ ಅಗತ್ಯ’ ಎಂದು ಹೇಳುತ್ತಾರೆ ಅನುಭವಿ ಆಟಗಾರ್ತಿ ಅಶ್ವಿನಿ ಪೊನ್ನಪ್ಪ. ಅಶ್ವಿನಿ ಮಾತು ನಿಜ. ಲೀಗ್‌ಗಳು ಬಂದ ಮೇಲೆ ಕ್ರೀಡೆಗಳನ್ನು ಆನಂದಿಸುವ ಹಾಗೂ ಪ್ರೋತ್ಸಾಹಿಸುವ ಮನೋಭಾವವೇ ಬದಲಾಗಿದೆ. ‘ಸೈನಾ, ಸಿಂಧು ರೀತಿ ನಮ್ಮ ಮಗಳು ಆಗಬೇಕು’ ಎಂದು ಅದೆಷ್ಟೊ ಅಪ್ಪಅಮ್ಮಂದಿರು ಕನಸು ಕಾಣುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬ್ಯಾಡ್ಮಿಂಟನ್‌ ಅಕಾಡೆಮಿ ಹಾಗೂ ಶಿಬಿರಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ವರ್ಷವಿಡೀ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಹಣಕಾಸಿನ ದೃಷ್ಟಿಯಿಂದಲೂ ಆಟಗಾರರಿಗೆ ಸಹಾಯವಾಗಿದೆ. ಕೆಲ ಟೂರ್ನಿಗಳಲ್ಲಿ ಪಾಲ್ಗೊಂಡು ಬಹುಮಾನ ರೂಪದಲ್ಲಿ ಸ್ವಲ್ಪ ಹಣ ಪಡೆಯುತ್ತಿದ್ದವರು ಈಗ ಲಕ್ಷ ಲಕ್ಷ ರೂಪಾಯಿಗೆ ವಿವಿಧ ಫ್ರಾಂಚೈಸ್‌ಗಳ ಪಾಲಾಗಿದ್ದಾರೆ. ಎರಡನೇ ಆವೃತ್ತಿಗೆ ಸಿದ್ಧತೆ ಈಗ ಬ್ಯಾಡ್ಮಿಂಟನ್‌ ಲೀಗ್‌ನ ಎರಡನೇ ಆವೃತ್ತಿಗೆ ಆಟಗಾರರು ಸಿದ್ಧರಾಗುತ್ತಿದ್ದಾರೆ. ಮೊದಲ ಆವೃತ್ತಿ ನಡೆದಿದ್ದು 2013ರಲ್ಲಿ. ಕೆಲ ವಿವಾದಗಳಿಂದಾಗಿ 2014 ಹಾಗೂ 2015ರಲ್ಲಿ ಈ ಟೂರ್ನಿ ಜರುಗಿರಲಿಲ್ಲ. 2016ರ ಜನವರಿ 2ರಿಂದ 17ರವರೆಗೆ ಹೊಸ ಸ್ವರೂಪ ದೊಂದಿಗೆ ಈ ಲೀಗ್ ನಡೆಯಲಿದೆ. ಹಿಂದೆ ಇಂಡಿಯನ್ ಬ್ಯಾಡ್ಮಿಂಟನ್‌ ಲೀಗ್‌ (ಐಬಿಎಲ್‌) ಎಂದಿದ್ದ ಹೆಸರು ಈಗ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಎಂದಾಗಿದೆ. ಲೀಗ್‌ ಅನ್ನು ಜಾಗತಿಕ ಟೂರ್ನಿಯನ್ನಾಗಿಸುವ ನಿಟ್ಟಿನಲ್ಲಿ ಈ ಬದಲಾವಣೆ. ಆರು ಫ್ರಾಂಚೈಸ್‌ಗಳು ಈ ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ. ‘ಚೊಚ್ಚಲ ಆವೃತ್ತಿಗಿಂತ ಚೆನ್ನಾಗಿ ಎರಡನೇ ಆವೃತ್ತಿ ಮೂಡಿಬರಲಿದೆ’ ಎಂಬ ವಿಶ್ವಾಸವನ್ನೇನೊ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ ಅಧ್ಯಕ್ಷ ಅಖಿಲೇಶ್‌ ದಾಸ್‌ ಗುಪ್ತಾ ಹೊಂದಿದ್ದಾರೆ. ಆದರೆ, ಹಣಕಾಸಿನ ವಿಚಾರದಲ್ಲಿ ಆಟಗಾರರಿಗೆ ಅಲ್ಪ ಹಿನ್ನಡೆ ಎನ್ನಬಹುದು. ಏಕೆಂದರೆ ಹರಾಜಿನಲ್ಲಿ ಎರಡು ವರ್ಷಗಳ ಹಿಂದೆ ಸಿಕ್ಕಷ್ಟು ಹಣ ಸೈನಾ ನೆಹ್ವಾಲ್‌, ಲೀ ಚೋಂಗ್ ವೀ ಅವರಿಗೆ ಈ ಬಾರಿ ಲಭಿಸಿಲ್ಲ. 2013ರಲ್ಲಿ ಹೈದರಾಬಾದ್‌ ಹಾಟ್‌ಶಾಟ್ಸ್‌ ಪರ ಆಡಿದ್ದ ಸೈನಾ ಅವರಿಗೆ ₹71.27 ಲಕ್ಷ ಸಿಕ್ಕಿತ್ತು. ಆದರೆ, ಈ ಬಾರಿ ಅವಧ್‌ ವಾರಿಯರ್ಸ್‌ ಪಾಲಾಗಿರುವ ಅವರಿಗೆ ಲಭಿಸಿರುವುದು ₹ 66.76 ಲಕ್ಷ . ಆದರೆ, ಪಿ.ವಿ. ಸಿಂಧು ಹಾಗೂ ಕೆ. ಶ್ರೀಕಾಂತ್‌ ಅವರು ಕಳೆದ ಬಾರಿಗಿಂತ ಹೆಚ್ಚಿನ ಮೊತ್ತ ಪಡೆದುಕೊಂಡಿದ್ದಾರೆ. ಪುಣೆ ಪಿಸ್ಟಾನ್ಸ್‌ ಬದಲಿಗೆ ಈ ಬಾರಿ ಚೆನ್ನೈ ಸ್ಮ್ಯಾಷರ್ಸ್‌ ಫ್ರಾಂಚೈಸ್‌ ಹೊಸದಾಗಿ ಸೇರಿಕೊಂಡಿದೆ. 2013ರಲ್ಲಿ ಆಡಿದ್ದ ಕ್ಯಾರೊಲಿನಾ ಮರಿನ್‌ ಈ ಬಾರಿ ಪಾಲ್ಗೊಳ್ಳುತ್ತಿಲ್ಲ. ಬೆಂಗಳೂರು ಟಾಪ್‌ ಗನ್ಸ್‌ ಪರ ಮಹಿಳೆಯರ ಸಿಂಗಲ್ಸ್‌ನಲ್ಲಿ ಆಡುತ್ತಿರುವ ಚೀನಾದ ಸುವೊ ಡಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಹೀಗೆ ಒಂದಿಷ್ಟು ಬದಲಾವಣೆಗಳಾಗಿವೆ. ಈ ಲೀಗ್‌ ಖಂಡಿತ ಭಾರತದ ಬ್ಯಾಡ್ಮಿಂಟನ್‌ಗೆ ಹೊಸ ತಿರುವು. ಯುವ ಆಟಗಾರರಿಗೆ ಇದೊಂದು ಅತ್ಯುತ್ತಮ ವೇದಿಕೆ. ಇದರಲ್ಲಿ ಪಾಲ್ಗೊಳ್ಳುವ ವಿದೇಶಿ ಆಟಗಾರರಿಂದ ಬಹಳಷ್ಟು ಕಲಿಯಬಹುದು. ಹೆಚ್ಚಿನ ದೇಶಗಳು ಈ ಲೀಗ್‌ನಲ್ಲಿ ಆಡಲು ತಮ್ಮ ಆಟಗಾರರಿಗೆ ಅನುಮತಿ ನೀಡಿವೆ. ಇನ್ನೇನು ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್‌ಗೆ ದಿನಗಣನೆ ಆರಂಭವಾಗಿದೆ. ಆ ನಿಟ್ಟಿನಲ್ಲಿ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಆಟಗಾರರಿಗೆ ಈ ಲೀಗ್‌ ಒಂದು ಅಪೂರ್ವ ಅವಕಾಶ. ಬ್ಯಾಡ್ಮಿಂಟನ್‌ ಲೀಗ್‌–2016 ತಂಡಗಳು * ಅವಧ್‌ ವಾರಿಯರ್ಸ್‌ * ಬೆಂಗಳೂರು ಟಾಪ್‌ ಗನ್ಸ್ * ಚೆನ್ನೈ ಸ್ಮ್ಯಾಷರ್ಸ್‌ * ಡೆಲ್ಲಿ ಏಸರ್ಸ್‌ * ಹೈದರಾಬಾದ್‌ ಹಂಟರ್ಸ್‌ * ಮುಂಬೈ ರಾಕೆಟ್ಸ್‌ ಬೆಂಗಳೂರು ಟಾಪ್ ಗನ್ಸ್‌ ಆಟಗಾರರು ಪುರುಷರ ಸಿಂಗಲ್ಸ್‌: ಆನಂದ್‌ ಪವಾರ್‌, ಸಮೀರ್‌ ವರ್ಮಾ, ಕೆ. ಶ್ರೀಕಾಂತ್‌ ಮಹಿಳೆಯರ ಸಿಂಗಲ್ಸ್‌: ಸುವೊ ಡಿ ಪುರುಷರ/ಮಿಶ್ರ ಡಬಲ್ಸ್‌: ಬಿ. ಸುಮೀತ್‌ ರೆಡ್ಡಿ, ಕಿಮ್‌ ವಾಹ್‌ ಲಿಮ್‌, ಹೂನ್‌ ತೀನ್‌ ಹೌ, ಜೋಕಿಮ್‌ ಫಿಷರ್, ರಾಬರ್ಟ್‌ ಬ್ಲೇರ್ ಮಿಶ್ರ ಡಬಲ್ಸ್‌: ಅಶ್ವಿನಿ ಪೊನ್ನಪ್ಪ ಸೈನಾ ನೆಹ್ವಾಲ್‌ 21 ವೃತ್ತಿ ಜೀವನದಲ್ಲಿ ಗೆದ್ದ ಪ್ರಶಸ್ತಿಗಳು 02 ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ 01 ಶ್ರೇಷ್ಠ ವಿಶ್ವ ರ‍್ಯಾಂಕಿಂಗ್‌ (2 ಏಪ್ರಿಲ್‌ 2015) 02 ಈ ವರ್ಷ ಗೆದ್ದ ಪ್ರಶಸ್ತಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.