ವೇಗದ ತಾರೆ ಗೌರವ್‌ ಗಿಲ್‌ ಎಪಿಆರ್‌ಸಿ ರ‍್ಯಾಲಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ದೆಹಲಿಯ ಗೌರವ್‌ ಗಿಲ್‌ ಅವರದು. ಇವರ ವೃತ್ತಿಪರ ಚಾಲನಾ ಕೌಶಲ್ಯ ಮತ್ತು ವೇಗದ ಸಾಮರ್ಥ್ಯಕ್ಕೆ ತಲೆದೂಗದವರೇ ಇಲ್ಲ. ಇವರೊಡನೆ ‘ಪ್ರಜಾವಾಣಿ’ಗಾಗಿ ಕೆ. ಎಂ. ಸಂತೋಷ್‌ ಕುಮಾರ್‌ ನಡೆಸಿದ ಸಂದರ್ಶನ ಇಲ್ಲಿದೆ. ಅತಿ ದುಬಾರಿ ವೆಚ್ಚದ ಮತ್ತು ಸಾಹಸಮಯ ಕ್ರೀಡೆಯಾಗಿರುವ ಮೋಟಾರ್‌ ಸ್ಪೋರ್ಟ್ಸ್ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಮಹಾನಗರಗಳಿಗೆ ಸೀಮಿತವಾಗಿದ್ದ ರಾಷ್ಟ್ರಮಟ್ಟದ, ಅಂತರರಾಷ್ಟ್ರೀಯ ಮಟ್ಟದ ರ‍್ಯಾಲಿಗಳು ಪುಟ್ಟಪುಟ್ಟ ನಗರಗಳಲ್ಲೂ ನಡೆಯುತ್ತಿವೆ. ಅದರಲ್ಲೂ ಚಿಕ್ಕಮಗಳೂರಿನಂತಹ ಸಣ್ಣ ನಗರವು ಕಳೆದ ಮೂರು ದಶಕಗಳಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ಬೈಕ್‌, ಕಾರು ರ‍್ಯಾಲಿಗಳನ್ನು ಆಯೋಜಿಸಿ ಕ್ರೀಡಾರಂಗದ ಗಮನ ಸೆಳೆಯುತ್ತಿದೆ. ಈ ವರ್ಷ ಏಷ್ಯಾಕಪ್‌ ರ‍್ಯಾಲಿ ಆಯೋಜಿಸಿ, ಮುಂದಿನ ವರ್ಷ ಅತಿ ಮಹತ್ವದ ಎಪಿಆರ್‌ಸಿ ರ‍್ಯಾಲಿ ಸಂಘಟಿಸುವ ಅವಕಾಶ ಗಿಟ್ಟಿಸುವ ಉತ್ಸುಕತೆಯಲ್ಲಿದೆ. ಚಿಕ್ಕಮಗಳೂರಿನಲ್ಲಿ ನಡೆಯುವ ರ‍್ಯಾಲಿಗಳಲ್ಲಿ ಪ್ರತಿ ವರ್ಷವೂ ತಪ್ಪದೇ ಅಗ್ರಮಾನ್ಯ ಚಾಲಕ ಸ್ಪರ್ಧಿ ಗೌರವ್‌ಗಿಲ್‌ ಭಾಗವಹಿಸುತ್ತಿದ್ದಾರೆ. ಆರಂಭದಲ್ಲಿ ಮೋಟಾರ್‌ ಬೈಕ್‌ ಸವಾರನಾಗಿ 1998ರಲ್ಲಿ ರ‍್ಯಾಲಿ ಅಖಾಡ ಪ್ರವೇಶಿಸಿದ ಗೌರವ್‌ ಗಿಲ್‌, ಎರಡೇ ವರ್ಷಗಳಲ್ಲಿ ಕಾರು ಓಡಿಸಲು ಆರಂಭಿಸಿದರು. 2003ರಲ್ಲಿ ನ್ಯಾಷನಲ್‌ ರೋಡ್‌ ರೇಸ್‌ ಚಾಂಪಿಯನ್‌ಷಿಪ್‌ ಮುಡಿಗೇರಿಸಿಕೊಂಡಿದ್ದರು. ಕ್ರೀಡಾ ಕುಟುಂಬದಿಂದ ಬಂದ ಗಿಲ್‌ ಕಳೆದ ಒಂದು ದಶಕದಲ್ಲಿ ಮಾಡಿರುವ ಸಾಧನೆ ಈ ಕ್ಷೇತ್ರ ಪ್ರವೇಶಿಸುವ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ಗೌರವ್‌ಗಿಲ್‌ * ಹುಟ್ಟಿದ್ದು: 1981ರ ಡಿಸೆಂಬರ್‌ 2. * ಗೆದ್ದ ಪ್ರಶಸ್ತಿಗಳು: ಎಪಿಆರ್‌ಸಿ ರ‍್ಯಾಲಿ –2013, 5 ಬಾರಿ ಐಎನ್‌ಆರ್‌ಸಿ ಚಾಂಪಿಯನ್‌ಶಿಪ್‌ (2007, 2009, 2010, 2013, 2014) 2008ರಲ್ಲಿ ಮೋಟಾರ್‌ ಕ್ರೀಡೆಯಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ, ನ್ಯಾಷನಲ್‌ ರೋಡ್‌ ರೇಸಿಂಗ್‌ ಚಾಂಪಿಯನ್‌ (2004, 2006) * ಪ್ರತಿನಿಧಿಸುವ ತಂಡ: ಟೀಮ್‌ ಎಂಆರ್‌ಎಫ್‌ * ನೆಚ್ಚಿನ ಕಾರುಗಳು: ಮಿಸ್ತುಬಿಷಿ ಲ್ಯಾನ್ಸರ್‌ ಇವೊ, ಸ್ಕೋಡಾ ಫ್ಯಾಬಿಯಾ ಎಸ್‌2000, ಎಕ್ಸ್‌ಯುವಿ 500, ಸೂಪರ್‌ ಎಕ್ಸ್‌ಯುವಿ * ರ‍್ಯಾಲಿಯಲ್ಲಿ ಆಸಕ್ತಿ ಬೆಳೆದಿದ್ದು ಹೇಗೆ? ಚಿಕ್ಕ ಹುಡುಗನಾಗಿದ್ದಾಗಲೇ ರ‍್ಯಾಲಿ ಮೇಲೆ ಸಹಜ ಆಸಕ್ತಿ ಮೂಡಿತ್ತು. ಏಕೆಂದರೆ ನಮ್ಮ ಮನೆಯಲ್ಲಿ ರ‍್ಯಾಲಿಗೆ ಬಳಸುವ ದೊಡ್ಡ ದೊಡ್ಡ ಮೋಟಾರ್‌ ಬೈಕುಗಳು, ರ‍್ಯಾಲಿ ಕಾರುಗಳು ಇದ್ದವು. ಸ್ವತಃ ನಮ್ಮ ಚಿಕ್ಕಪ್ಪ ಡಿಕ್ಕಿ ಗಿಲ್‌ ರ‍್ಯಾಲಿಪಟುವಾಗಿ ಹೆಸರು ಮಾಡಿದ್ದರು. ಇಂತಹ ವಾತಾವರಣದಲ್ಲಿ ಬೆಳೆದ ನನಗೆ ರ‍್ಯಾಲಿ ಅಖಾಡ ಪ್ರವೇಶಿಸುವುದು ಸುಲಭವಾಯಿತು. * ನೀವು ಸಾಕಷ್ಟು ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದ್ದೀರಿ, ನೀವು ಮರೆಯಲಾಗದ ರ‍್ಯಾಲಿ ಯಾವುದು? ನನಗೆ ಪ್ರತಿಯೊಂದು ರ‍್ಯಾಲಿಯೂ ಮಹತ್ವದ್ದೆ. ಐಎನ್‌ಆರ್‌ಸಿ, ಎಪಿಆರ್‌ಸಿ, ಡಬ್ಲ್ಯುಆರ್‌ಸಿ ಹೀಗೆ ಯಾವುದೇ ಚಾಂಪಿಯನ್‌ಷಿಪ್‌ ರ‍್ಯಾಲಿ ಇರಲಿ ಅವೆಲ್ಲವನ್ನು ಒಂದೇ ರೀತಿ ಸ್ವೀಕರಿಸುತ್ತೇನೆ. ಪೋರ್ಚುಗಲ್‌ನಲ್ಲಿ ನಡೆದ ವಿಶ್ವ ರ‍್ಯಾಲಿ ಚಾಂಪಿಯನ್‌ಷಿಪ್‌ನಲ್ಲಿ 2 ಅಥವಾ 3ನೇ ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಅದರಲ್ಲಿ ನನಗೆ 6ನೇ ಸ್ಥಾನ ಸಿಕ್ಕಿತ್ತು. ಚಿಕ್ಕಮಗಳೂರಿನಲ್ಲಿ ನಡೆದಿರುವ ಐಎನ್‌ಆರ್‌ಸಿ ಚಾಂಪಿಯನ್‌ಷಿಪ್‌ಗಳಲ್ಲಿ ಹಲವು ಬಾರಿ ಭಾಗವಹಿಸಿದ್ದೇನೆ. ಇಲ್ಲಿನ ರ‍್ಯಾಲಿಗಳನ್ನು ಯಾವತ್ತೂ ತಪ್ಪಿಸಿಕೊಳ್ಳುವುದಿಲ್ಲ. ಮುಂದಿನ ವರ್ಷ ಇಲ್ಲಿ ನಡೆಯಲಿರುವ ಎಪಿಆರ್‌ಸಿ ರ‍್ಯಾಲಿ ನನ್ನ ಪಾಲಿಗೆ ಮರೆಯಲಾಗದ ರ‍್ಯಾಲಿ ಎನಿಸಬಹುದು. * ನಿಮ್ಮ ಸಾಧನೆಗೆ ಸ್ಫೂರ್ತಿಯಾಗಿ ಯಾರಾದರೂ ಇದ್ದಾರಾ? ವೈಯಕ್ತಿಕವಾಗಿ ನನಗೆ ಯಾರೂ ಸ್ಫೂರ್ತಿ ಅಲ್ಲ. ಪ್ರತಿಯೊಂದು ಚಾಂಪಿಯನ್‌ಷಿಪ್‌ನಲ್ಲೂ ಭಾಗವಹಿಸುವಾಗ ನನಗೆ ನಾನೇ ಸ್ಪರ್ಧಿಯಾಗಿರುತ್ತೇನೆ. ಪ್ರತಿ ಬಾರಿಯೂ ಉತ್ತಮ ಪ್ರದರ್ಶನಮಟ್ಟ, ಗರಿಷ್ಠ ವೇಗ ಮುಟ್ಟಲು ಪ್ರಯತ್ನಿಸುತ್ತೇನೆ. ರ‍್ಯಾಲಿ ಕ್ಷೇತ್ರದಲ್ಲಿ ತುಂಬಾ ಇಷ್ಟ ಆಗುವ ವ್ಯಕ್ತಿ ವಿಶ್ವಚಾಂಪಿಯನ್ನಾಗಿ ಮೆರೆದ ಕಾಲಿನ್‌ ಮೆಕ್ರೆ. ಅವರ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಬಯಸುತ್ತೇನೆ. * ನಿಮ್ಮ ಕ್ರೀಡಾ ಹಾದಿಯಲ್ಲಿ ಅತ್ಯಂತ ಕಷ್ಟದ ಮತ್ತು ಸವಾಲಿನ ರ‍್ಯಾಲಿ ಎನಿಸಿದ್ದು ಯಾವುದು? ಕೆಲವು ಅಂತರರಾಷ್ಟ್ರೀಯ ರ‍್ಯಾಲಿಗಳು ಕಷ್ಟಕರ ಅನುಭವ ನೀಡಿವೆ. ಟ್ರ್ಯಾಕ್‌ ತುಂಬಾ ದೂರದ ಹಾದಿಯಾಗಿರುತ್ತದೆ. ಮಲೇಷ್ಯಾದಂತಹ ದೇಶದಲ್ಲಿ ಉಷ್ಣಾಂಶ 40 ಡಿಗ್ರಿವರೆಗೂ ತಲುಪುತ್ತದೆ. ಕಾರು ಓಡಿಸುವಾಗ ಕೇವಲ 2 ದಿನಗಳಲ್ಲಿ 7ರಿಂದ 8 ಕೆ.ಜಿ.ವರೆಗೂ ದೇಹದ ತೂಕ ಕಳೆದುಕೊಂಡ ಉದಾಹರಣೆಗಳಿವೆ. ಅಂತಹ ರ‍್ಯಾಲಿಗಳಲ್ಲಿ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲು. ಮಲೇಷ್ಯಾ ರ‍್ಯಾಲಿ ಯಾವಾಗಲೂ ಸವಾಲು ಎನಿಸಿದೆ. * ನಿಮ್ಮ ಕನಸುಗಳ ಬಗ್ಗೆ ಹೇಳಿ? ಈಗ ಸದ್ಯಕ್ಕೆ ವಿಶ್ವಚಾಂಪಿಯನ್‌ಷಿಪ್‌ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇನೆ. ಅದಕ್ಕೆ ಪೂರಕ ತಯಾರಿ ಮಾಡುತ್ತಿದ್ದೇನೆ. ಮುಂದಿನ ವರ್ಷ ಇದೇ ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಎಪಿಆರ್‌ಸಿ ರ‍್ಯಾಲಿಯನ್ನು ದೇಶಕ್ಕಾಗಿ ಗೆಲ್ಲುವ ಕನಸು ಕಟ್ಟಿದ್ದೇನೆ. . * ಕಾಫಿ ಕಣಿವೆಯಲ್ಲಿ ನಿಮಗಿರುವ ದೊಡ್ಡ ಅಭಿಮಾನಿ ಬಳಗದ ಬಗ್ಗೆ ಏನಂತೀರಿ? ಇದೊಂದು ಪುಟ್ಟ ನಗರವಾದರೂ ಮೋಟಾರ್‌ ವಾಹನಗಳ ರ‍್ಯಾಲಿಗೆ ದೊಡ್ಡ ಸಂಖ್ಯೆಯ ಕ್ರೀಡಾ ಪ್ರೇಮಿಗಳನ್ನು ಹೊಂದಿದೆ. ಇಡೀ ದೇಶ ಚಿಕ್ಕಮಗಳೂರು ಜನರ ಕ್ರೀಡಾ ಪ್ರೀತಿ ನೋಡಿ ಕಲಿಯಬೇಕಿದೆ. ಇಲ್ಲಿ ಕಾರು ರ‍್ಯಾಲಿಯನ್ನು ಪ್ರೀತಿಸುವವರ ಸಂಖ್ಯೆ ಅಪಾರ. ಇಲ್ಲಿನ ಜನರ ಅಭಿಮಾನಕ್ಕೆ ಆಭಾರಿಯಾಗಿದ್ದೇನೆ. * ಏಷ್ಯಾ ಕಪ್‌ ಆತಿಥ್ಯ ಭಾರತಕ್ಕೆ ಸಿಕ್ಕಿರುವುದು ಏನನಿಸುತ್ತದೆ? ಯಾವಾಗಲೂ ಮಲೇಷ್ಯಾ, ಜಪಾನ್‌, ಚೀನಾ, ಥಾಯ್ಲೆಂಡ್‌ ಏಷ್ಯಾಕಪ್‌ ಆತಿಥ್ಯ ವಹಿಸುತ್ತಿದ್ದವು. ಈ ಬಾರಿ ಅಂತಹ ಒಂದು ದೊಡ್ಡ ಅವಕಾಶ, ಒಳ್ಳೆಯ ಸಂಘಟನಾ ಆಯೋಜಕರನ್ನು ಹೊಂದಿರುವ ಭಾರತಕ್ಕೆ ಸಿಕ್ಕಿದೆ. ಅದರಲ್ಲೂ ನಾವು ಹೆಚ್ಚು ಇಷ್ಟಪಡುವ ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ಗೆ ಈ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. * ನಿಮ್ಮ ನೆಚ್ಚಿನ ಟ್ರ್ಯಾಕ್‌ ಯಾವುದು? ನನಗೆ ಅನಿಸುವಂತೆ ದೇಶದಲ್ಲಿ ಚಿಕ್ಕಮಗಳೂರು ಮತ್ತು ನಾಸಿಕ್‌ ಟ್ರ್ಯಾಕ್‌ಗಳು ಅತ್ಯಂತ ತಾಂತ್ರಿಕತೆಯಿಂದ ಕೂಡಿವೆ. ಅಂತರರಾಷ್ಟ್ರೀಯ ಗುಣಮಟ್ಟದ ಟ್ರ್ಯಾಕ್‌ಗಳಿಗೆ ಇವು ತುಂಬಾ ಹತ್ತಿರದಲ್ಲಿವೆ. ದೇಶದಲ್ಲಿ ಇವರೆಡೂ ಟ್ರ್ಯಾಕ್‌ಗಳು ನನಗೆ ಇಷ್ಟವಾಗುತ್ತವೆ. * ರ‍್ಯಾಲಿ ಹೊರತಾಗಿ ಬಿಡುವಿನ ಸಮಯ ಹೇಗೆ ಕಳೆಯುತ್ತೀರಿ? ಬಹುತೇಕ ಸಮಯ ರ‍್ಯಾಲಿಯಲ್ಲೇ ಕಳೆದು ಹೋಗುತ್ತದೆ. ಇನ್ನು ಬಿಡುವು ಸಿಕ್ಕಿದರೆ ಆ ಸಮಯವನ್ನು ಕುಟುಂಬದೊಂದಿಗೆ ಕಳೆಯಲು ಇಷ್ಟಪಡುತ್ತೇನೆ. * ನಿಮ್ಮ ಹವ್ಯಾಸಗಳು? ಹೊರಗಡೆ ಸುತ್ತಾಡುವುದು, ಸ್ಕೀಯಿಂಗ್‌, ಸೈಕ್ಲಿಂಗ್‌ಗಳಂತಹ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುತ್ತೇನೆ. ಒಟ್ಟಿನಲ್ಲಿ ಯಾವಾಗಲು ವೇಗದಲ್ಲಿರಲು ಬಯಸುತ್ತೇನೆ. *** ಮೈಸೂರಿನ ಸಾಧಕ ಲೋಹಿತ್‌ ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ಶ್ರೇಷ್ಠ ಮಟ್ಟದ ಸಾಮರ್ಥ್ಯ ತೋರಿರುವ ಮೈಸೂರಿನ ಲೋಹಿತ್‌ ವಿ.ಅರಸ್‌ ಅವರು ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿದ್ದಾರೆ. ವೃತ್ತಿಪರ ಚಾಂಪಿಯನ್‌ ಚಾಲಕ. ಮೈಸೂರಿನಲ್ಲಿ ತಮ್ಮದೇ ಫ್ಯಾಕ್ಟರಿ ಮತ್ತು ಕಾರುಗಳ ಡೀಲರ್‌ಶಿಪ್‌ ಹೊಂದಿರುವ ಇವರು, ಆಟೋ ಮೊಬೈಲ್‌ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಇದರ ಜತೆಜತೆಯಲ್ಲೇ ಮೋಟಾರ್‌ ಸ್ಪೋರ್ಟ್ಸ್‌ನಲ್ಲೂ ಛಾಪು ಮೂಡಿಸಿ, ಅನೇಕ ರ‍್ಯಾಲಿಗಳನ್ನು ಗೆದ್ದುಕೊಂಡಿದ್ದಾರೆ. ಈ ವರ್ಷದ ಇಂಡಿಯನ್‌ ನ್ಯಾಷನಲ್‌ ಚಾಂಪಿಯನ್‌ಷಿಪ್‌ನ ನಾಲ್ಕು ಸುತ್ತುಗಳಲ್ಲಿ ಮುನ್ನಡೆಯಲ್ಲಿದ್ದು, ಚಾಂಪಿಯನ್‌ಷಿಪ್‌ ಗೆದ್ದುಕೊಳ್ಳುವ ಭರವಸೆ ಮೂಡಿಸಿರುವ ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನ ಇಲ್ಲಿದೆ. * ಕಾರು ರ‍್ಯಾಲಿ ಅಖಾಡ ಪ್ರವೇಶಿಸಿದ್ದು ಹೇಗೆ? ಚಿಕ್ಕಂದಿನಿಂದಲೂ ನನಗೆ ರ‍್ಯಾಲಿ ಕ್ರೇಜ್‌ ಇತ್ತು. ನನ್ನ ತಂದೆ ನಾನು 5 ವರ್ಷದ ಹುಡುಗನಾಗಿದ್ದಾಗಲೇ ರ‍್ಯಾಲಿಗಳನ್ನು ನೋಡಲು ಕರೆದುಕೊಂಡು ಹೋಗುತ್ತಿದ್ದರು. 10ನೇ ವಯಸ್ಸಿಗೆ ಕಾರು ಓಡಿಸುವುದನ್ನು ಕಲಿತಿದ್ದೆ. ನಮ್ಮ ಫ್ಯಾಕ್ಟರಿ ಆವರಣದಲ್ಲಿ ಕಾರು ಚಾಲನೆ ಅಭ್ಯಾಸ ಮಾಡುತ್ತಿದ್ದೆ. ಇದು ಸಹಜವಾಗಿಯೇ ನನ್ನನ್ನು ರ‍್ಯಾಲಿ ಅಖಾಡಕ್ಕೆ ಎಳೆದುತಂದಿತು. 16ನೇ ವಯಸ್ಸಿಗೆ ಮೊದಲ ಬಾರಿಗೆ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದೆ. * ಚಾಂಪಿಯನ್‌ ಹಾದಿಯಲ್ಲಿ ನಡೆದು ಬಂದ ಬಗೆ ಹೇಳಿ? ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ನನ್ನ ಇದುವರೆಗಿನ ಇಡೀ ಬದುಕು ಕಳೆದಿದ್ದೇನೆ. ಮೋಟಾರ್‌ ಸ್ಪೋರ್ಟ್ಸ್‌ ನನ್ನ ಬದುಕಿನಲ್ಲಿ ನನಗೊಂದು ಕಲಿಕಾ ಶಾಲೆಯಾಗಿ ಪಾತ್ರ ವಹಿಸಿದೆ. ಈ ಕ್ರೀಡೆಯಿಂದಲೇ ಇಡೀ ದೇಶ ಸುತ್ತಿದ್ದೇನೆ. ನನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಮತ್ತು ಹೊರಗಿನ ಸಮಾಜಕ್ಕೆ ನನ್ನನ್ನು ತೆರೆದುಕೊಳ್ಳಲು ವೇದಿಕೆ ಒದಗಿಸಿದೆ. . * ಮೋಟಾರ್‌ ಸ್ಪೋರ್ಟ್ಸ್‌ಗೆ ದೇಶದಲ್ಲಿ ಪ್ರೋತ್ಸಾಹ ಹೇಗಿದೆ? ಕ್ರಿಕೆಟ್‌ಗೆ ಸಿಗುತ್ತಿರುವ ಅಬ್ಬರದ ಪ್ರಚಾರದ ಮುಂದೆ ಉಳಿದೆಲ್ಲ ಕ್ರೀಡೆಗಳು ಮಂಕಾಗಿವೆ. ಮೋಟಾರ್‌ ಸ್ಪೋರ್ಟ್ಸ್‌ ಅನ್ನು ದುಬಾರಿ ವೆಚ್ಚ ಬಯಸುವ ಕ್ರೀಡೆ ಎನ್ನುತ್ತಾರೆ. ಆದರೆ, ಕ್ರಿಕೆಟ್‌ಗಿಂತ ಇದು ದುಬಾರಿ ಅಲ್ಲ. ನನಗೆ ಗೊತ್ತಿರುವಂತೆ ಕ್ರಿಕೆಟ್‌ಗೆ ಒಂದು ಅಭ್ಯಾಸ ಪಿಚ್‌ ಸಿದ್ಧಪಡಿಸಲು ಸುಮಾರು ₹18 ಕೋಟಿ ವೆಚ್ಚ ಮಾಡುತ್ತಾರೆ. ನಮ್ಮ ಎಫ್‌ಎಂಎಸ್‌ಸಿ ಒಟ್ಟು ಬಜೆಟ್ಟೇ ಅಷ್ಟೊಂದಿಲ್ಲ. * ಮನರಂಜನೆ ಮತ್ತು ಸಾಹಸಕ್ಕೆ ಮಾತ್ರ ಈ ಕ್ರೀಡೆ ಸೀಮಿತವೇ? ಖಂಡಿತಾ ಇಲ್ಲ, ಕಾರು ಓಡಿಸಲು ವೃತ್ತಿಪರ ಕೌಶಲ್ಯ ಬೇಕು. ಇದೊಂದು ವೃತ್ತಿಪರ ಕ್ರೀಡೆ. ಹೊಸದಾಗಿ ತಯಾರಾಗಿ ಮಾರುಕಟ್ಟೆ ಪ್ರವೇಶಿಸುವ ಪ್ರತಿಯೊಂದು ಕಾರುಗಳಿಗೆ ಮೋಟಾರ್‌ ಸ್ಪೋರ್ಟ್ಸ್‌ ರ‍್ಯಾಲಿ ‘ಪರೀಕ್ಷಾರ್ಥ ಅಖಾಡ’ವಿದ್ದಂತೆ. * ನಿಮಗೆ ಕುಂಟುಂಬ ಮತ್ತು ಹೊರಗಿನಿಂದ ಬೆಂಬಲ ಹೇಗಿದೆ? ಮೊದಲು ಕುಟುಂಬದಿಂದ ಅಷ್ಟೇನು ಬೆಂಬಲ ಸಿಗಲಿಲ್ಲ. ಇದು ಭಾರತೀಯ ಮನಸ್ಥಿತಿ. ಒಂದು ದುಡಿಯಲು ಏನಾದರೂ ಕೆಲಸ ಮಾಡು ಅನ್ನುತ್ತಾರೆ. ಆದರೆ, ಈಗ ಇಡೀ ಕುಟುಂಬ ನನ್ನ ಬೆನ್ನಿಗೆ ನಿಂತಿದೆ. ನಮಗೆ ಎಂಆರ್‌ಎಫ್‌, ಟರ್ಬೊ ಅಂತಹ ಕಂಪನಿಗಳು ಪ್ರಾಯೋಜಕತ್ವ ನೀಡುತ್ತಿವೆ. * ನಿಮ್ಮ ಕನಸು ಮತ್ತು ಗುರಿಗಳು ಏನಿವೆ? ಯುವ ಪ್ರತಿಭೆಗಳನ್ನು ಹುಟ್ಟು ಹಾಕಬೇಕು. ದೇಶದಲ್ಲಿ ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗಳು ನಡೆಯಲಿವೆ. ಚಿಕ್ಕಮಗಳೂರಿನಲ್ಲಿ ಎಪಿಆರ್‌ಸಿ ರ‍್ಯಾಲಿ ನಡೆದರೆ ಅಲ್ಲಿ ವಿದೇಶಿ ಕಾರುಗಳು ಬಂದು ಮಿಂಚಿದರೆ ಸಾಲದು, ನಮ್ಮಲ್ಲಿರುವ ಪ್ರತಿಭೆಗಳೇ ರ‍್ಯಾಲಿ ಗೆಲ್ಲಬೇಕು. ಅಂತಹ ಪ್ರತಿಭಾನ್ವಿತ ಯುವಕರ ಪಡೆ ಸಜ್ಜುಗೊಳಿಸುವ ಗುರಿ ಇದೆ. ಎಪಿಆರ್‌ಸಿ ರ‍್ಯಾಲಿ ನಾವೇ ಗೆಲ್ಲಬೇಕೆಂಬ ಕನಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.