2015 ವರ್ಷದ ಮೆಲುಕು, ನಾಳಿನ ಕನಸು ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ‘ನನ್ನ ಪಾಲಿಗೆ 2015 ಅತ್ಯಂತ ಯಶಸ್ವಿ ವರ್ಷ’ ಎಂದು ಈಚೆಗೆ ಹೇಳಿದ್ದಾರೆ. ಅವರ ಪಾಲಿಗಷ್ಟೇ ಅಲ್ಲ, ಭಾರತದ ಪಾಲಿಗೂ ಇದು ಅದೃಷ್ಟದ ವರ್ಷವೇ ಹೌದು. ಇದೊಂದೇ ವರ್ಷದಲ್ಲಿ ಸಾನಿಯಾ ಅವರು ಮಹಿಳಾ ಡಬಲ್ಸ್‌ನಲ್ಲಿ ಒಟ್ಟು ಹತ್ತು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಮೆರಿಕಾದ ಬೆಥಾನಿ ಮಾಟೆಕ್‌ ಜತೆಗೆ ಆಡಿ ಒಂದು ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರೆ, ಉಳಿದ 9 ಡಬಲ್ಸ್‌ ಪ್ರಶಸ್ತಿಗಳನ್ನು ಮಾರ್ಟಿನಾ ಹಿಂಗಿಸ್‌ ಅವರ ಜತೆಗೂಡಿ ಆಡಿ ಗೆದ್ದಿದ್ದಾರೆ. ‘ಸ್ಯಾನ್‌ಟಿನಾ’ ಎಂದೇ ಜನಪ್ರಿಯವಾಗಿರುವ ಈ ಜೋಡಿ ವಿಂಬಲ್ಡನ್‌ ಓಪನ್‌, ಯುಎಸ್‌ ಓಪನ್‌ ಸೇರಿದಂತೆ ಪ್ರಮುಖ ಪ್ರಶಸ್ತಿಗಳನ್ನು ಗೆದ್ದರು. ಬ್ಯಾಕ್‌ ಕೋರ್ಟ್‌ನಲ್ಲಿ ಸಾನಿಯಾ, ನೆಟ್‌ ಬಳಿ ಮಾರ್ಟಿನಾ ನಿಂತು ನಡೆಸುತ್ತಿದ್ದ ಹೋರಾಟ ಎದುರಾಳಿ ಆಟಗಾರ್ತಿಯರನ್ನು ಕಂಗೆಡುವಂತೆ ಮಾಡಿದೆ. 90ರ ದಶಕದಲ್ಲಿ ಲಿಯಾಂಡರ್‌ ಪೇಸ್‌ ಮತ್ತು ಮಹೇಶ್‌ ಭೂಪತಿ ಜೋಡಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಈಗ ಅಂತಹದ್ದೊಂದು ವೈಭವವನ್ನು ಸಾನಿಯಾ ಮರಳಿ ತಂದಿದ್ದಾರೆ. ಮಹಿಳಾ ಕ್ರಮಾಂಕ ಪಟ್ಟಿಯಲ್ಲಿ ಸಾನಿಯಾ ಮತ್ತು ಮಾರ್ಟಿನಾ ಜೋಡಿ ಅಗ್ರ ಸ್ಥಾನದಲ್ಲಿದೆ. ಪುರುಷರ ವಿಭಾಗದಲ್ಲಿ ಯೂಕಿ ಬಾಂಭ್ರಿ ವಿಶ್ವ ಕ್ರಮಾಂಕ ಪಟ್ಟಿಯ ನೂರರ ಒಳಗೆ ಬಂದಿರು ವುದೊಂದು ಸಾಧನೆಯೇ ಹೌದು. ಆದರೆ ಸೊಮದೇವ್‌ ದೇವವರ್ಮನ್‌ ಪಾಲಿಗೆ ಈ ವರ್ಷ ನಿರಾಶಾದಾಯಕವೇ ಆಗಿದೆ. ಲಿಯಾಂಡರ್‌ ಪೇಸ್‌ ಅವರಿಗೆ ಈಗ 42ರ ಹರೆಯ. ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡರೆ, ಅವರು ಭಾಗವಹಿಸಿದ ಏಳನೇ ಒಲಿಂಪಿಕ್ಸ್‌ ಕೂಟ ಅದಾಗುತ್ತದೆ. ಇದೀಗ ಪೇಸ್‌ ಆ ಕೂಟಕ್ಕಾಗಿ ಸಿದ್ದತೆ ನಡೆಸುತ್ತಿದ್ದಾರೆ. ಈ ವರ್ಷ ಪೇಸ್‌ ಅವರು ಮಾರ್ಟಿನಾ ಹಿಂಗಿಸ್‌ ಜತೆಗೂಡಿ ಮೂರು ಮಿಕ್ಸೆಡ್‌ ಡಬಲ್ಸ್‌ ಪ್ರಶಸ್ತಿ ಗೆದ್ದಿದ್ದಾರೆ. * ಈ ವರ್ಷ ಎರಡು ಗ್ರ್ಯಾಂಡ್‌ ಸ್ಲಾಮ್‌ ಟ್ರೋಫಿಗಳನ್ನು ಎತ್ತಿಕೊಂಡಾಗ ಅತೀವ ಖುಷಿಯಾಯಿತು. 2016ರಲ್ಲಿಯೂ ಇದೇ ಸಾಮರ್ಥ್ಯವನ್ನು ಉಳಿಸಿಕೊಳ್ಳುವುದು ನನ್ನ ಹೆಗ್ಗುರಿ. ಮಾರ್ಟಿನಾ ಹಿಂಗಿಸ್‌ ಜೊತೆಗೇ ಆಟ ಮುಂದುವರಿಸುತ್ತೇನೆ. -ಸಾನಿಯಾ ಮಿರ್ಜಾ * ಹರ್ಷದ ಬೆನ್ನೇರಿ... ಗೆಲುವಿನ ಖುಷಿಯ ಹಿಂದೆಯೇ ನಿರಾಸೆ. ಸೋಲನ್ನೇ ಸೋಲಿಸಿ ಮತ್ತೆ ಯಶಸ್ಸು ಪಡೆದ ಸಂಭ್ರಮ. ಹೀಗೆ ಹಲವು ಏಳು ಬೀಳುಗಳ ಸಂಗಮಕ್ಕೆ 2015ರ ಕ್ರಿಕೆಟ್‌ ಲೋಕ ಸಾಕ್ಷಿಯಾಯಿತು. ಭಾರತವಂತೂ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ನ ಮೇಲೆ ಗುರಿ ಇಟ್ಟು ಹೆಜ್ಜೆ ಇಟ್ಟಿರುವುದು ಎದ್ದು ಕಾಣುತ್ತಿದೆ. ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋತಿತು. ಇದರ ನಡುವೆಯೂ ಭಾರತ ತಂಡ ಪಾಕಿಸ್ತಾನ ಎದುರಿನ ಅಜೇಯ ಓಟವನ್ನು ಮುಂದುವರಿಸಿತು. ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಎದುರು ಭಾರತ ಒಮ್ಮೆಯೂ ಸೋತಿಲ್ಲ. ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಪಾಲಿಗಂತೂ ಅತ್ಯಂತ ಖುಷಿಯ ವರ್ಷ. ಲಂಕಾ ಎದುರಿನ ಟೆಸ್ಟ್‌ ಸರಣಿಯಲ್ಲಿ ಭಾರತಕ್ಕೆ ಜಯ ಲಭಿಸಿತು. ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿಯಲ್ಲಿ ಐತಿಹಾಸಿಕ ಗೆಲುವು ಪಡೆಯಿತು. ಹೋದ ವರ್ಷದ ಅಂತ್ಯದಲ್ಲಿ ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ ಸರಣಿ ರದ್ದಾಗಿತ್ತು. 2016ರಲ್ಲಿ ಸರಣಿ ಆಡಲು ವಿಂಡೀಸ್‌ಗೆ ಭಾರತ ತಂಡವನ್ನು ಕಳುಹಿಸಲು ಬಿಸಿಸಿಐ ನಿರ್ಧರಿಸಿದ್ದು ಮಹತ್ವದ ತೀರ್ಮಾನವಾಗಿದೆ. ಪರ್ವ: ಭಾರತದ ಕ್ರಿಕೆಟ್ ಆಡಳಿತದ ಮಟ್ಟಿಗಂತೂ ಈ ವರ್ಷ ಹೊಸ ಪರ್ವವೇ ಸರಿ. ವಿವಾದಗಳ ಗೂಡಾಗಿದ್ದ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರನ್ನು ಆಡಳಿತ ಚಟುವಟಿಕೆಗಳಿಂದ ದೂರವಿಟ್ಟು ಜನರ ನಂಬಿಕೆ ಉಳಿಸಿಕೊಳ್ಳಲು ಮಂಡಳಿ ಪ್ರಯತ್ನ ಮಾಡಿತು. ಜಗಮೋಹನ್‌ ದಾಲ್ಮಿಯಾ ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿ ನಿಧನರಾದರು. ಆಗ ಬಿಸಿಸಿಐ ಅಧ್ಯಕ್ಷರಾಗಿದ್ದು ಶಶಾಂಕ್‌ ಮನೋಹರ್‌. ಅಮಾನತು ಶಿಕ್ಷೆ: ಸುಪ್ರೀಂ ಕೋರ್ಟ್‌ ರಚಿಸಿದ್ದ ಸಮಿತಿಯು ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳನ್ನು ಎರಡು ವರ್ಷ ಅಮಾನತು ಮಾಡಿತು. ಬದಲಾಗಿ ರಾಜ್‌ಕೋಟ್‌ ಮತ್ತು ಪುಣೆ ತಂಡಗಳು ಐಪಿಎಲ್‌ನಲ್ಲಿ ಹೊಸ ಫ್ರಾಂಚೈಸ್‌ಗಳಾದವು. ಜೂನಿಯರ್ ತಂಡದ ಆಯ್ಕೆ ಸಮಿತಿಗೆ ಕನ್ನಡಿಗ ವೆಂಕಟೇಶ್‌ ಪ್ರಸಾದ್ ಮುಖ್ಯಸ್ಥರಾಗಿದ್ದು, ರಾಹುಲ್‌ ದ್ರಾವಿಡ್‌ ಜೂನಿಯರ್ ತಂಡದ ಕೋಚ್ ಆಗಿದ್ದು, ಟೆಸ್ಟ್‌ ಕ್ರಿಕೆಟ್‌ ಪಂದ್ಯವನ್ನು ಮೊದಲ ಬಾರಿಗೆ ಹೊನಲು ಬೆಳಕಿನಲ್ಲಿ ಆಡಿಸಿದ್ದು, ವೀರೇಂದ್ರ ಸೆಹ್ವಾಗ್‌ ಮತ್ತು ಜಹೀರ್‌ ಖಾನ್‌ ನಿವೃತ್ತಿಯಾಗಿದ್ದು, ಕರ್ನಾಟಕದ ಎಸ್. ಅರವಿಂದ್‌ ಹಾಗೂ ಮನೀಷ್ ಪಾಂಡೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದು 2015ರ ನೆನಪಿನ ಅಂಗಳದಲ್ಲಿ ಗಟ್ಟಿಯಾಗಿ ಬೇರೂರಿವೆ. ಆರಂಭದಲ್ಲಿ ಸಂತಸ, ಕೊನೆಯಲ್ಲಿ ನಿರಾಸೆ ಕರ್ನಾಟಕ ತಂಡ ವರ್ಷದ ಆರಂಭದಲ್ಲಿ ಮತ್ತೊಂದು ರಣಜಿ ಟ್ರೋಫಿಯನ್ನು ಎತ್ತಿ ಹಿಡಿಯಿತು. ವಿಜಯ್‌ ಹಜಾರೆ ಮತ್ತು ಇರಾನಿ ಟ್ರೋಫಿಯಲ್ಲೂ ಚಾಂಪಿಯನ್‌ ಆಗಿ ದೇಶಿ ಕ್ರಿಕೆಟ್‌ನಲ್ಲಿ ಪ್ರಾಬಲ್ಯವನ್ನು ಮುಂದುವರಿಸಿತು. ಆದರೆ, ಮುಂದಿನ ಏಳೇ ತಿಂಗಳಲ್ಲಿ ನಿರಾಸೆ ಕವಿಯಿತು. ವಿನಯ್‌ ಕುಮಾರ್‌ ನಾಯಕತ್ವದ ರಾಜ್ಯ ತಂಡ ಈ ಬಾರಿಯ ರಣಜಿಯಲ್ಲಿ ಲೀಗ್‌ ಹಂತದಿಂದಲೇ ಹೊರಬಿತ್ತು. ಬೆಂಗಳೂರಿನಲ್ಲಿ ನಡೆದ ವಿಜಯ್‌ ಹಜಾರೆ ಟೂರ್ನಿಯಲ್ಲಿ ಲೀಗ್‌ನಲ್ಲಿ ಸೋಲು ಅನುಭವಿಸಿತು. * ಬಾಕ್ಸಿಂಗ್‌ ವೃತ್ತಿಪರ ಪೈಪೋಟಿಯಲ್ಲಿ ಭರವಸೆ ವಿಜೇಂದರ್‌ ಸಿಂಗ್‌ ಭಾರತದಲ್ಲಿ ಮನೆಮಾತು. ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಕ್ರೀಡಾಕೂಟ ಮತ್ತು ಬಾಕ್ಸಿಂಗ್‌ ವಿಶ್ವಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದ ಹೆಗ್ಗಳಿಕೆ ಇವರದು. ವೃತ್ತಿಪರ ಬಾಕ್ಸಿಂಗ್‌ ಕ್ಷೇತ್ರಕ್ಕೆ ಇವರು ಧುಮುಕಿದ್ದು ಈ ವರ್ಷದ ಪ್ರಮುಖ ಘಟನೆಯೇ ಹೌದು. ಮ್ಯಾಂಚೆಸ್ಟರ್‌ ಮತ್ತು ಡಬ್ಲಿನ್‌ಗಳಲ್ಲಿ ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ನಲ್ಲಿ ನಡೆದ ಮೂರು ವೃತ್ತಿಪರ ಹಣಾಹಣಿಗಳಲ್ಲಿ ವಿಜೇಂದ್ರ ಸಿಂಗ್‌ ಗೆದ್ದರು. ಇವರು ವೃತ್ತಿಪರ ರಂಗಕ್ಕೆ ಜಿಗಿಯದೇ ಇದ್ದಿದ್ದರೆ, ರಿಯೊ ಒಲಿಂಪಿಕ್ಸ್‌ನಲ್ಲಿ ಮಿಡ್ಲ್‌ವೇಟ್‌ ಬಾಕ್ಸಿಂಗ್‌ನಲ್ಲಿ ಭಾರತದ ಸವಾಲನ್ನು ಎತ್ತಿ ಹಿಡಿಯುತ್ತಿದ್ದರೇನೋ. ಒಲಿಂಪಿಕ್ಸ್‌ ಮಟ್ಟಿಗೆ ಹೇಳುವುದಿದ್ದರೆ ಭಾರತಕ್ಕೆ ಇದೊಂದು ನಷ್ಟವೇ ಹೌದು. * ಹಾಕಿ ಆತ್ಮವಿಶ್ವಾಸದ ದಾಪುಗಾಲು ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳೆರಡೂ ಆತ್ಮವಿಶ್ವಾಸದಿಂದ ಪುಟಿಯುತ್ತಿವೆ. ಮಹಿಳೆಯರು 36 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರೆ, ಪುರುಷರ ತಂಡ ವಿಶ್ವ ಲೀಗ್‌ನಲ್ಲಿ ಕಂಚು ಗೆದ್ದು, 33 ವರ್ಷಗಳ ನಂತರ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರವಾಯಿತು. ಇಪೊ ನಗರದಲ್ಲಿ ನಡೆದ ಆರು ದೇಶಗಳ ನಡುವಣ ಅಜ್ಲಾನ್‌ ಷಾ ಕಪ್‌ ಟೂರ್ನಿಯಲ್ಲಿ ಸರ್ದಾರ್‌ ಸಿಂಗ್‌ ನೇತೃತ್ವದ ಭಾರತ ತಂಡ ದಕ್ಷಿಣ ಕೊರಿಯಾವನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು. ನ್ಯೂಜಿಲೆಂಡ್‌ ಎದುರಿನ 4 ಟೆಸ್ಟ್‌ ಪಂದ್ಯಗಳ ಸರಣಿಯನ್ನೂ ಭಾರತ ಗೆದ್ದಿತು. ನೆದರ್‌ಲೆಂಡ್ಸ್‌ನ ಕೋಚ್‌ ವಾನ್‌ ಆಸ್‌ ಅವರು ಆರು ತಿಂಗಳಷ್ಟೇ ಕೋಚ್‌ ಹುದ್ದೆಯಲ್ಲಿದ್ದುದು. ಅವರನ್ನು ಕೈ ಬಿಡಲಾಯಿತು. ಈ ವಿವಾದ ಅನೇಕ ದಿನಗಳ ಕಾಲ ಹಾಕಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆ ನಂತರ ಒಲ್ಟಮಸ್‌ ಮಾರ್ಗ ದರ್ಶನದಲ್ಲಿ ಭಾರತದ ಆಟಗಾರರು ಆಡುತ್ತಿದ್ದಾರೆ. * ಒಲಿಂಪಿಕ್ಸ್‌ ನಿಟ್ಟಿನಲ್ಲಿ ಅಥ್ಲೆಟಿಕ್ಸ್‌ ಹೆಜ್ಜೆಗಳು... ಭಾರತದ ಅಥ್ಲೆಟಿಕ್ಸ್‌ ಚಟುವಟಿಕೆಗಳ ಮಟ್ಟಿಗೆ ಹೇಳುವುದಿದ್ದರೆ, ಇದು ಒಂದಷ್ಟು ಸಂಭ್ರಮ ಪಡುವಂತಹ ವರ್ಷವೇ ಆಗಿದೆ. ಈ ವರ್ಷ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ಗಮನಾರ್ಹ ಸಾಮರ್ಥ್ಯ ತೋರಿದ ಭಾರತದ 15 ಮಂದಿ ಅಥ್ಲೀಟ್‌ಗಳು ಮುಂದಿನ ವರ್ಷ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿದ್ದಾರೆ. ಸ್ವಾತಂತ್ರ್ಯಾನಂತರದ ಭಾರತ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಒಂದೇ ಒಂದು ಪದಕ ಗೆದ್ದಿಲ್ಲ. ಹೀಗಾಗಿ ರಿಯೋದಲ್ಲಿ ಪದಕ ಗಳಿಸುವ ಹೆಗ್ಗುರಿಯೊಂದಿಗೆ ಸಿದ್ಧತೆ ನಡೆಸಿರುವುದೂ ಈ ವರ್ಷದ ಮುಖ್ಯ ‘ಅಥ್ಲೆಟಿಕ್‌ ಘಟನೆ’ಗಳಾಗಿವೆ. ಬೀಜಿಂಗ್‌ ಮತ್ತು ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತದ ಡಿಸ್ಕಸ್‌ ಎಸೆತದ ಸಾಧಕ ವಿಕಾಸ್‌ ಗೌಡ ‘ಅದೃಷ್ಟದ ಬಲ’ದಿಂದ ಅರ್ಹತೆ ಗಿಟ್ಟಿಸಿದ್ದಾರೆ. ಇವರು ಈ ಋತುವಿನಲ್ಲಿ 65.14 ಮೀಟರ್ಸ್‌ ದೂರ ಎಸೆದು ಮಾಡಿರುವ ಸಾಧನೆಯೇ ಮಹತ್ತರವಾದುದು. ಆದರೆ ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನ ಗಡಿ ದಾಟಲು 66 ಮೀಟರ್ಸ್‌ ದೂರ ಎಸೆಯಲೇ ಬೇಕಿತ್ತು. ವಿಕಾಸ್‌ ನಿರಂತರವಾಗಿ ಯತ್ನ ನಡೆಸುತ್ತಲೇ ಬಂದರು. ಆದರೂ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಈಚೆಗೆ ಅರ್ಹತಾ ಮಟ್ಟವನ್ನು 65 ಮೀಟರ್ಸ್‌ಗಳಿಗೆ ಇಳಿಸಿದಾಗ, ವಿಕಾಸ್‌ ಸಹಜವಾಗಿಯೇ ಅರ್ಹತೆ ಪಡೆದರು. ಶಾಟ್‌ಪಟ್‌ನಲ್ಲಿ ಇಂದರ್‌ಜಿತ್‌ ಸಿಂಗ್‌ ಈ ಸಲ ವಿಶ್ವ ಅಥ್ಲೆಟಿಕ್ಸ್‌, ಏಷ್ಯಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌, ರಾಷ್ಟ್ರೀಯ ಚಾಂಪಿಯನ್‌ಷಿಪ್‌, ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ಗಳಲ್ಲೆಲ್ಲಾ ಚಿನ್ನದ ಸಾಧನೆ ಮಾಡಿದ್ದಾರೆ. ಬೀಜಿಂಗ್‌ನಲ್ಲಿ ಆಗಸ್ಟ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‌ನಲ್ಲಿ 11ನೇ ಸ್ಥಾನ ಗಳಿಸಿರುವ ಇವರು, ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಹಣಾಹಣಿ ನಡೆಸುವ ಹೆಗ್ಗುರಿ ಅವರದಾಗಿದೆ. ಬೀಜಿಂಗ್‌ನಲ್ಲಿ ಮಹಿಳಾ 800 ಮೀಟರ್ಸ್‌ ಓಟದಲ್ಲಿ ಕೇರಳದ ಟಿಂಟು ಲುಕಾ ಸೆಮಿಫೈನಲ್‌ ತಲುಪುವಲ್ಲಿ ವಿಫಲರಾದರೂ, ಒಲಿಂಪಿಕ್ಸ್‌ನಲ್ಲಿ ಓಡಲು ಅರ್ಹತೆ ಗಿಟ್ಟಿಸಿದ್ದಾರೆ. ಬೀಜಿಂಗ್‌ ವಿಶ್ವ ಅಥ್ಲೆಟಿಕ್ಸ್‌ನ ನಡಿಗೆ ಸ್ವರ್ಧೆಗಳಲ್ಲಿ ಗುರುಮೀತ್‌ ಸಿಂಗ್‌, ಚಂದನ್‌ ಸಿಂಗ್‌, ಬಲ್ಜಿಂದರ್‌ ಸಿಂಗ್‌, ಕುಶ್‌ಬೀರ್‌ ಕೌರ್‌, ಸಪ್ನಾ ಭಾರತದ ಮಟ್ಟಿಗೆ ಗಮನಾರ್ಹ ಸಾಮರ್ಥ್ಯ ತೋರಿದರು. ಮ್ಯಾರಥಾನ್‌ ಓಟದ ಮಹಿಳಾ ವಿಭಾಗದಲ್ಲಿ ಜೈಶಾ ಮತ್ತು ಸುಧಾಸಿಂಗ್‌ ಕ್ರಮವಾಗಿ 18 ಮತ್ತು 19ನೇ ಸ್ಥಾನ ಪಡೆದರಾದರೂ, ಅಲ್ಲಿ ಭಾರತದ ಭರವಸೆಯ ಹೆಜ್ಜೆ ಗುರುತು ಮೂಡಿಸಿದರು. 3000 ಮೀಟರ್ಸ್‌ ಸ್ಟೀಪಲ್‌ಚೇಸ್‌ನಲ್ಲಿ ಲಲಿತಾ ಬಾಬರ್‌ 8ನೇ ಸ್ಥಾನ ಗಳಿಸಿದರಲ್ಲದೆ, ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಆದರೆ ಎಂ.ಆರ್‌.ಪೂವಮ್ಮ, ಜಿಶ್ನಾ ಮ್ಯಾಥ್ಯೂ, ದೇವಶ್ರೀ, ಟಿಂಟು ಅವರನ್ನು ಒಳಗೊಂಡ ರಿಲೆ ತಂಡ ಸಂಪೂರ್ಣ ವೈಫಲ್ಯ ಕಂಡಿತು. ವುಹಾನ್‌ನಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ವಿಕಾಸ್‌ ಗೌಡ, ಇಂದರ್‌ಜಿತ್‌, ಲಲಿತಾ ಬಾಬರ್‌, ಟಿಂಟುಲುಕಾ ಗೆದ್ದ ಚಿನ್ನಗಳೂ ಸೇರಿದಂತೆ ಭಾರತ ಒಟ್ಟು 13 ಪದಕಗಳನ್ನು ಗೆದ್ದು ಗಮನ ಸೆಳೆಯಿತು. ಈಚೆಗಿನ ವರ್ಷಗಳಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ ಅಥ್ಲೀಟ್‌ಗಳಲ್ಲಿ ಒಬ್ಬರಾದ ಕರ್ನಾಟಕದ ಪೂವಮ್ಮ ಅವರಿಗೆ ಕೇಂದ್ರ ಸರ್ಕಾರ ಇದೇ ವರ್ಷ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತು. ಇಂಗ್ಲೆಂಡ್‌ನ ಸೆಬಾಸ್ಟಿಯನ್‌ ಕೊ ಅವರು ಹಿಂದೆ ದೂರ ಅಂತರದ ಓಟದಲ್ಲಿ ಮಹತ್ವದ್ದನ್ನು ಸಾಧಿಸಿದವರು. ಒಲಿಂಪಿಕ್ಸ್‌ ಚಿನ್ನ ಗೆದ್ದವರು. ಇವರು ಲಂಡನ್‌ ಒಲಿಂಪಿಕ್ಸ್‌ ಸಂಘಟನೆಯ ಸಂದರ್ಭದಲ್ಲಿ ಮಹತ್ತರ ಜವಾಬ್ದಾರಿ ನಿಭಾಯಿಸಿದರು. ಇದೇ ವರ್ಷ ಇವರು ಅಂತರ ರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ನ ಅಧ್ಯಕ್ಷ ಪಟ್ಟಕ್ಕೆ ಏರಿದರು. ಭಾರತದ ಮಾಜಿ ವೇಗದ ಓಟಗಾರ ಮತ್ತು ಭಾರತ ಅಥ್ಲೆಟಿಕ್‌ ಫೆಡರೇಷನ್‌ನ ಅಧ್ಯಕ್ಷ ಆದಿಲ್‌ ಸುರಿವಾಲಾ ಅವರು ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ನ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. * ಸತ್ನಾಮ್‌ ಸಿಂಗ್‌ ದಾಖಲೆ ಅಮೆರಿಕದ ಎನ್‌ಬಿಎ ಲೀಗ್‌ನಲ್ಲಿ ಆಡಿದ ಭಾರತದ ಮೊದಲ ಆಟಗಾರ ಎನ್ನುವ ಚಾರಿತ್ರಿಕ ಹೆಗ್ಗಳಿಕೆ ಸತ್ನಾಮ್‌ ಸಿಂಗ್‌ ಭಾಮರ ಅವರದು. ಪಂಜಾಬ್‌ನ ಸತ್ನಾಮ್‌ ಏಳು ಅಡಿ ಎರಡು ಇಂಚು ಎತ್ತರವಿದ್ದಾರೆ. 2011 ಮತ್ತು 2013ರಲ್ಲಿ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು. ಎನ್‌ಬಿಎನಲ್ಲಿ ಡಲ್ಲಾಸ್‌ ಮ್ಯಾವರಿಕ್ಸ್‌ ಕ್ಲಬ್‌ ಪ್ರತಿನಿಧಿಸುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.