ಮಹಿಳಾ ಸವಾಲು ಆ ಊರಿನಲ್ಲಿ ಕಟ್ಟಾ ಸಂಪ್ರದಾಯವಾದಿಗಳೇ ಹೆಚ್ಚು. ಹೆಣ್ಣುಮಕ್ಕಳು ಮನೆಬಿಟ್ಟು ಹೊರಬರುವುದೇ ಅಪರಾಧ ಎಂಬಂತಹ ಸ್ಥಿತಿ. ಇನ್ನು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮಾತೆಲ್ಲಿ. ಇದರ ಜೊತೆಗೆ ಆ ಗ್ರಾಮದ ಕಟ್ಟುಪಾಡುಗಳು ಹೆಣ್ಣುಮಕ್ಕಳ ಪಾಲಿಗೆ ಬೇಧಿಸಲಾಗದ ಚಕ್ರವ್ಯೂಹದಂತೆ ಇದ್ದವು. ಇಂಥ ಸಂದಿಗ್ಧತೆಯ ನಡುವೆ ‘ಅಖಾಡ’ಕ್ಕಿಳಿದ ವಿನೇಶ್ ಪೋಗಟ್‌ ಈಗ ಭಾರತದ ಭರವಸೆಯ ಕುಸ್ತಿಪಟು. ಹೋದ ವರ್ಷ ಗ್ಲಾಸ್ಗೊ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ, ಏಷ್ಯನ್ ಗೇಮ್ಸ್‌ನಲ್ಲಿ ಕಂಚು, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ. 21 ವರ್ಷದ ವಿನೇಶ್‌ ಹರಿಯಾಣದ ಬಿಲಾಲಿ ಗ್ರಾಮದವರು. ಗ್ರಾಮಸ್ಥರ ವಿರೋಧವನ್ನೂ ಲೆಕ್ಕಿಸದೇ ಮುನ್ನುಗ್ಗಿದ ವಿನೇಶ್‌ಗೆ ಕುಟುಂಬದ ಬೆಂಬಲವೇ ಆಸರೆ. ಇವರ ತಂದೆ ಮಹಾವೀರ್‌ ಸಿಂಗ್‌ ಪೋಗಟ್‌ ಕೂಡ ಕುಸ್ತಿ ಪಟು. ಮಹಾವೀರ್‌ ಸಿಂಗ್ ಸಹೋದರ ರಾಜ್‌ಪಾಲ್‌ ಅವರೂ ಪೈಲ್ವಾನರಾಗಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿರುವ ಗೀತಾ ಪೋಗಟ್ ಮತ್ತು ಬಬಿತಾ ಕುಮಾರಿ ಅವರು ವಿನೇಶ್‌ ಸಹೋದರ ಸಂಬಂಧಿಗಳು. ಇದು ವಿನೇಶ್‌ ಕುಟುಂಬದ ಕಥೆಯಾಯಿತು. ಇದೇ ರೀತಿ ಅನೇಕ ಕುಸ್ತಿಪಟುಗಳು ಹಲವಾರು ಸವಾಲುಗಳನ್ನು ಎದುರಿಸಿ ಮುಂಚೂಣಿಗೆ ಬರುತ್ತಿದ್ದಾರೆ. ಅವರ ಶ್ರಮಕ್ಕೆ ಈಗ ಪ್ರೊ ಕುಸ್ತಿ ಲೀಗ್‌ ಮೂಲಕ ‘ಬೆಲೆ’ ಸಿಗುತ್ತಿದೆ. ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದಾಗ ಸಿಗುವ ಬಹುಮಾನವೂ ಅಷ್ಟಕಷ್ಟೆ. ಕುಸ್ತಿಯನ್ನು ಬೆಳೆಸಿ ಪೈಲ್ವಾನರು ಬಡವರಾಗುತ್ತಿರುವ ಸಮಯದಲ್ಲಿ ಬಂದ ಲೀಗ್‌ ಕುಸ್ತಿ ವಲಯದಲ್ಲಿ ಆಶಾಕಿರಣವಾಗಿ ಗೋಚರಿಸಿದೆ. ಮಹಿಳಾ ಕುಸ್ತಿಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದರೂ ಬೇಗನೆ ಗೊತ್ತಾಗುತ್ತಿರಲಿಲ್ಲ. ಈಗ ಕುಸ್ತಿ ಲೀಗ್‌ ಜನರನ್ನು ಸೆಳೆಯುತ್ತಿದೆ. ಈ ಲೀಗ್‌ಗೆ ದಕ್ಷಿಣಕ್ಕಿಂತ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಾರ ಲಭಿಸಿದೆ. ‘ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಯಾರೂ ಗುರುತಿಸುತ್ತಿರಲಿಲ್ಲ. ಎದುರಿಗೆ ಸಿಕ್ಕಾಗ ನನ್ನ ಪರಿಚಯವನ್ನು ನಾನೇ ಹೇಳಿಕೊಳ್ಳಬೇಕಿತ್ತು. ಕುಸ್ತಿ ಲೀಗ್‌ ಆರಂಭವಾದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನ ಗುರುತಿಸುತ್ತಿದ್ದಾರೆ. ಮುಂದಿನ ವರ್ಷದ ವೇಳೆಗೆ ಲೀಗ್‌ ಇನ್ನಷ್ಟು ಖ್ಯಾತಿ ಪಡೆಯುತ್ತದೆ’ ಎಂದು ಗೀತಿಕಾ ಜಾಕರ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಬೆಂಗಳೂರಿನಲ್ಲಿ ಎರಡು ದಿನ ನಡೆದ ಕುಸ್ತಿ ಲೀಗ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಎರಡನೇ ದಿನ ಮುಂಬೈ ಗರುಡಾ ಮತ್ತು ಹರಿಯಾಣ ಹ್ಯಾಮರ್ಸ್ ನಡುವಿನ ಪಂದ್ಯ ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಅದರಲ್ಲೂ ಗೀತಿಕಾ ಪೈಪೋಟಿಯನ್ನು ನೋಡಲು ಬಂದವರೇ ಹೆಚ್ಚು. ಗ್ಯಾಲರಿಯಲ್ಲಿ ಪ್ರೇಕ್ಷಕರು ಗೀತಿಕಾ ಹೆಸರಿನ ಭಿತ್ತಿಪತ್ರ ತೋರಿಸಿ ಸಂಭ್ರಮಿಸಿದ್ದು ಇದಕ್ಕೆ ಸಾಕ್ಷಿ. ಅಂದ ಹಾಗೆ ಗೀತಿಕಾ ಕುಸ್ತಿ ಲೀಗ್‌ನಲ್ಲಿ ಪಾಲ್ಗೊಂಡ ಹಿರಿಯ ಸ್ಪರ್ಧಿ. 30 ವರ್ಷದ ಗೀತಿಕಾ ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ, ದೋಹಾ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದಾರೆ. ಅಭಿಮಾನಿಗಳ ಬೆಂಬಲ ಕಂಡು ಗೀತಿಕಾ ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. ‘ಹೊರಗಿನ ತಂಡಗಳಿಗೂ ಬೆಂಗಳೂರಿನ ಅಭಿಮಾನಿಗಳು ಪ್ರೋತ್ಸಾಹ ನೀಡಿದ್ದರಿಂದ ಸಂತೋಷವಾಗಿದೆ. ಕುಸ್ತಿ ಲೀಗ್‌ ಮುಂಬರುವ ವರ್ಷಗಳಲ್ಲಿ ಉತ್ತುಂಗಕ್ಕೆ ಏರಲಿದೆ ಎನ್ನುವುದಕ್ಕೆ ಈ ಅಭಿಮಾನವೇ ಸಾಕ್ಷಿಯಾಗಿದೆ’ ಎಂದು ಗೀತಿಕಾ ಹೇಳಿದ್ದರು. ಕಟ್ಟು ಮಸ್ತಾದ ದೇಹ, ಚುರುಕಿನ ಪಾದ ಚಲನೆ ಮತ್ತು ವಿಭಿನ್ನ ತಂತ್ರಗಳ ಮೂಲಕ ಅಭಿಮಾನಿಗಳಿಗೆ ರಂಜನೆ ನೀಡಿದ ವಿದೇಶಿ ಮಹಿಳಾ ಕುಸ್ತಿಪಟುಗಳೂ ಗಮನ ಸೆಳೆದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡು ವರ್ಷ ಕಂಚು ಗೆದ್ದಿರುವ ರಷ್ಯಾದ ಎಲಿಫ್‌ ಜಾಲೆ ಯೆಸಿಲಿರಿಮಕ್‌, ಉಕ್ರೇನ್‌ನ ಒಲೆಸಂದ್ರಾ ಕೊಹುಟ್‌ ಮತ್ತು 2013ರಲ್ಲಿ ಫಿಲಾ ವಿಶ್ವ ಕುಸ್ತಿಯಲ್ಲಿ ಕಂಚು ಜಯಿಸಿದ್ದ ಬೆಂಗಳೂರು ಯೋಧಾಸ್ ತಂಡದ ಅಲಿಸಾ ಲಿಂಪೆ ಪ್ರಮುಖವಾಗಿ ಗಮನ ಸೆಳೆದರು. 28 ವರ್ಷದ ಕೊಹುಟ್‌ 2009ರ ಹೆರ್ನಿಂಗ್‌ ಮತ್ತು 2010ರ ಮಾಸ್ಕೊ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕಂಚು ಹಾಗೂ ಚಿನ್ನ ಜಯಿಸಿದ್ದರು. ಅಮೆರಿಕದ ಅಡಿಲೈನ್‌ ಗ್ರೇ ಅವರು ಲೀಗ್‌ನಲ್ಲಿ ಹೆಚ್ಚು ಗಮನ ಸೆಳೆದ ಆಟಗಾರ್ತಿ. ಎದುರಾಳಿ ವಿರುದ್ಧ ಬೇಗನೆ ನಿಯಂತ್ರಣ ಸಾಧಿಸುತ್ತಿದ್ದ ರೀತಿ, ಪಾದರಸದ ವೇಗದಲ್ಲಿ ಚೇತರಿಸಿಕೊಳ್ಳುವ ಕೌಶಲದಿಂದ ಅಡಿಲೈನ್‌ ಆಕರ್ಷಣೆ ಎನಿಸಿದರು. 24 ವರ್ಷದ ಅಡಿಲೈನ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 2011ರಿಂದ ಸತತವಾಗಿ ಪದಕಗಳನ್ನು ಜಯಿಸಿದ್ದಾರೆ. 2012, 2014 ಮತ್ತು 2015 ರಲ್ಲಿ ಚಿನ್ನ ಗೆದ್ದಿದ್ದಾರೆ. ಆದ್ದರಿಂದ ಮುಂಬೈ ಗರುಡಾ ಫ್ರಾಂಚೈಸ್‌ ₹ 37 ಲಕ್ಷ ನೀಡಿ ಖರೀದಿಸಿತ್ತು. ಒಲಿಂಪಿಕ್ಸ್‌ನಲ್ಲಿ ಆಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಕೀರ್ತಿ ಹೊಂದಿರುವ ಹರಿಯಾಣದ ಗೀತಾ ಪೋಗಟ್‌ ಕೂಡ ಲೀಗ್‌ನುದ್ದಕ್ಕೂ ಗುರುತಿಸಿಕೊಂಡರು. ಪಂಜಾಬ್‌ ರಾಯಲ್ಸ್ ತಂಡ ಇವರನ್ನು ₹ 33 ಲಕ್ಷ ನೀಡಿ ಖರೀದಿಸಿತ್ತು. ಕಾಮನ್‌ವೆಲ್ತ್‌ ಕ್ರೀಡಾಕೂಟದ 55 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ದಾಖಲೆಯೂ ಗೀತಾ ಹೆಸರಿನಲ್ಲಿದೆ. 2010ರಲ್ಲಿ ಅವರು ಈ ಸಾಧನೆ ಮಾಡಿದ್ದರು. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಎರಡು ಪದಕ ಜಯಿಸಿರುವ ಭಾರತದ ಬಬಿತಾ ಕುಮಾರಿ ಕೂಡ ಗಮನ ಸೆಳೆದರು. ಲೀಗ್‌ ಪರ್ವವೇ ಆರಂಭವಾಗಿರುವ ಭಾರತದಲ್ಲಿ ಮೊದಲ ಬಾರಿಗೆ ನಡೆದ ಕುಸ್ತಿ ಲೀಗ್‌ ಉತ್ತಮ ಮುನ್ನುಡಿಯನ್ನು ಬರೆದಿದೆ. ಚುರುಕಿನ ಆಟ ಮತ್ತು ಹೆಚ್ಚು ಹಣ ಪಡೆದ ವಿಷಯದಲ್ಲಿ ಮಹಿಳಾ ಸ್ಪರ್ಧಿಗಳೇ ಪ್ರಾಬಲ್ಯ ಮೆರೆದದ್ದು ವಿಶೇಷ. * ಒಸ್ಕಾನಾ, ಬೇಡಿಕೆಯ ಕುಸ್ತಿಪಟು ಕುಸ್ತಿ ಲೀಗ್‌ನಲ್ಲಿ ಪುರುಷ ಸ್ಪರ್ಧಿಗಳಿಗಿಂತ ಮಹಿಳಾ ‘ಪೈಲ್ವಾನ’ರಿಗೆ ಭಾರಿ ಬೇಡಿಕೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹನ್ನೊಂದು ಪದಕಗಳನ್ನು ಗೆದ್ದಿರುವ ಯೋಗೇಶ್ವರ್‌ ದತ್‌ ಅವರಿಗಿಂತಲೂ ಉಕ್ರೇನ್‌ನ ಒಸ್ಕಾನಾ ಹೆರ್ಹೆಲ್ ಮತ್ತು ಬೆಲಾರಸ್‌ನ ವಸಿಲ್ಸಾ ಮರ್ಜಾಲಿಯುಕ್‌ ಹೆಚ್ಚು ಬೆಲೆ ಗಿಟ್ಟಿಸಿದ್ದರು. ಯೋಗೇಶ್ವರ್‌ ಅವರಿಗೆ ₹ 39 ಲಕ್ಷ ಲಭಿಸಿದರೆ ಒಸ್ಕಾನಾ ₹ 41.3 ಲಕ್ಷ ಮತ್ತು ಮರ್ಜಾಲಿಯುಕ್‌ ₹ 40.2 ಲಕ್ಷಕ್ಕೆ ಮಾರಾಟವಾಗಿದ್ದರು. ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದಿರುವ ಸುಶೀಲ್‌ ಕುಮಾರ್‌ ಅವರನ್ನೂ ಒಸ್ಕಾನಾ ಹಿಂದಿಕ್ಕಿದ್ದರು. ಈ ಆಟಗಾರ್ತಿ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ 58 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು. ಅಂದ ಹಾಗೆ ಒಸ್ಕಾನಾಗೆ 21 ವರ್ಷ! ವಿಶ್ವ ಚಾಂಪಿಯನ್‌ ಷಿಪ್‌ನಲ್ಲಿ ಮೂರು ಬಾರಿ ಕಂಚು ಗೆದ್ದಿರುವ ಮರ್ಜಾಲಿಯುಕ್‌ ಅವರಿಗೂ ಹೆಚ್ಚು ಬೇಡಿಕೆ ಲಭಿಸಿತ್ತು. ಬೆಲಾರಸ್‌ನ ಈ ಕುಸ್ತಿಪಟು ಇದೇ ವರ್ಷ ಬಾಕುವಿನಲ್ಲಿ ನಡೆದ ಯೂರೋಪಿಯನ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು. ಇವರು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿಯೂ ಪಾಲ್ಗೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.