ಮಹಿಳಾ ಕ್ರಿಕೆಟ್‌ ಜಾಡಿನಲ್ಲಿ... ಮಹಿಳೆಯರಲ್ಲಿ ಕ್ರಿಕೆಟ್‌ ಆಡುವ ಉತ್ಸಾಹವಿದೆ. ಗ್ರಾಮೀಣ ಭಾಗದ ಹುಡುಗಿಯರೂ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ಅವರ ಆಸೆಗೆ ತಕ್ಕಂತೆ ಟೂರ್ನಿಗಳೇ ನಡೆಯುತ್ತಿಲ್ಲ. ಸರಿಯಾದ ವೇದಿಕೆ ಹಾಗೂ ಪ್ರೋತ್ಸಾಹ ಸಿಗುತ್ತಿಲ್ಲ. ಇದರ ನಡುವೆಯೂ ಗ್ರಾಮೀಣ ಭಾಗದ ಕೆ. ರಕ್ಷಿತಾ ಅವರು ರಾಜ್ಯ ಕ್ರಿಕೆಟ್‌ ತಂಡದ ಚುಕ್ಕಾಣಿ ಹಿಡಿದಿರುವುದು ಆಶಾದಾಯಕ ಬೆಳವಣಿಗೆ.ಈ ಬಗ್ಗೆ ಕೆ. ಓಂಕಾರ ಮೂರ್ತಿ ಬರೆದಿದ್ದಾರೆ. ‘ನಾನು ಹಳ್ಳಿಯಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದವಳು. ನನ್ನೂರು ಮಂಡ್ಯ ಜಿಲ್ಲೆಯ ಮಳವಳ್ಳಿ. ಹುಡುಗರು ಕ್ರಿಕೆಟ್‌ ಆಡುವುದನ್ನು ತುಂಬಾ ಹೊತ್ತು ನೋಡುತ್ತಾ ನಿಂತಿರುತ್ತಿದ್ದೆ. ಒಂದು ದಿನ ನನಗೂ ಅವಕಾಶ ಕೊಟ್ಟರು. ಚೆನ್ನಾಗಿ ಆಡಿದ್ದರಿಂದ ಪ್ರತಿ ದಿನ ಅವಕಾಶ ಲಭಿಸಿತು. ಅದು ನನ್ನ ಜೀವನದ ಮಹತ್ವದ ತಿರುವು’ –ಈ ರೀತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಕೆ. ರಕ್ಷಿತಾ. ಕರ್ನಾಟಕ ಟ್ವೆಂಟಿ–20 ಕ್ರಿಕೆಟ್‌ ತಂಡದ ನಾಯಕಿಯಾಗಿ ಆಯ್ಕೆಯಾಗಿರುವ ಅವರು ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ. ಇವರ ಪೋಷಕರು ಕೃಷಿಕರು. ಕ್ರಿಕೆಟ್‌ ಆಡಲೆಂದು ಪಿಯುಸಿಗೇ ಶಿಕ್ಷಣ ತೊರೆದಿದ್ದ ಅವರು ಕೋಚ್‌ ಒತ್ತಾಯಕ್ಕೆ ಮಣಿದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಎ ಪದವಿ ಓದುತ್ತಿದ್ದಾರೆ. ‘ಕ್ರಿಕೆಟ್‌ ಆಡಬೇಕೆಂಬ ಆಸೆ ಹುಡುಗಿಯರಿಗೂ ಇದೆ. ಆದರೆ, ಅದಕ್ಕೊಂದು ಸರಿಯಾದ ವೇದಿಕೆಯೇ ಲಭಿಸುತ್ತಿಲ್ಲ. ಕಾಲೇಜುಗಳಲ್ಲಿಯೂ ಕ್ರಿಕೆಟ್‌ ಟೂರ್ನಿಗಳು ನಡೆಯುತ್ತಿಲ್ಲ. ರಾಜ್ಯ ಕ್ರಿಕೆಟ್‌ ಸಂಸ್ಥೆಯಿಂದಾಗಿ ನಮಗೆಲ್ಲಾ ಅವಕಾಶ ಲಭಿಸಿದೆ. ರಾಜ್ಯ, ದೇಶ ತಂಡ ಪ್ರತಿನಿಧಿಸಲು ಸಾಧ್ಯವಾಗಿದೆ’ ಎನ್ನುತ್ತಾರೆ ರಕ್ಷಿತಾ. ‌ಅವರ ಮಾತು ನಿಜ. ಮಹಿಳಾ ಕ್ರಿಕೆಟ್‌ ಬಗ್ಗೆ ಯಾರಿಗೂ ಒಲವು ಇಲ್ಲ. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಕ್ರಿಕೆಟ್‌ ತಂಡಗಳೇ ಇಲ್ಲ. ರಾಷ್ಟ್ರಮಟ್ಟದಲ್ಲೂ ಮಹಿಳೆಯರ ಟೂರ್ನಿಗಳು ಕಡಿಮೆ. ಅಂತರರಾಜ್ಯ ಮಹಿಳಾ ಏಕದಿನ ಹಾಗೂ ಟ್ವೆಂಟಿ–20 ಟೂರ್ನಿ ವರ್ಷಕ್ಕೊಮ್ಮೆ ನಡೆಯುತ್ತಿವೆ ಅಷ್ಟೆ. ರಾಜ್ಯದಲ್ಲಿ ನಡೆಯುವ ಲೀಗ್‌ ಟೂರ್ನಿಗಳೂ ಕಡಿಮೆ. ಮಾಜಿ ನಾಯಕಿ ಶಾಂತ ರಂಗಸ್ವಾಮಿ ಕೂಡ ಈ ಬಗ್ಗೆ ಒಮ್ಮೆ ಆತಂಕ ವ್ಯಕ್ತಪಡಿಸಿದ್ದರು. ಉಳಿದ ಕ್ರಿಕೆಟ್‌ ಸಂಸ್ಥೆಗಳಿಗೆ ಹೋಲಿಸಿದರೆ ಕೆಎಸ್‌ಸಿಎ ಪರವಾಗಿಲ್ಲ. ವಿಶೇಷವೆಂದರೆ ರಾಜ್ಯ ತಂಡದಲ್ಲಿ ಇರುವ ಆಟಗಾರ್ತಿಯರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದಿಂದ ಬಂದವರು. ಮೈಸೂರಿನ ರಕ್ಷಿತಾ, ವಿಜಯಪುರದ ಪೂಜಾ ಪಾಂಚಾಲ್‌, ಸಹನಾ ಎಸ್‌. ಪವಾರ್‌, ರಾಮೇಶ್ವರಿ ಗಾಯಕ್ವಾಡ್‌, ಹುಬ್ಬಳ್ಳಿಯ ಪುಷ್ಪಾ ಕಿರೇಸೂರ್‌ ತಂಡದಲ್ಲಿದ್ದಾರೆ. ಕಡೂರಿನ ವೇದಾ ಕೃಷ್ಣಮೂರ್ತಿ, ವಿಜಯಪುರದ ರಾಜೇಶ್ವರಿ ಗಾಯಕ್ವಾಡ್‌ ಹಾಗೂ ವಿ.ಆರ್‌. ವನಿತಾ ಹಾಗೂ ಕರುಣಾ ಜೈನ್‌ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಆಟಗಾರ್ತಿಯರು. ಜೈನ್‌ ಅವರು ಅತ್ಯುತ್ತಮ ವಿಕೆಟ್ ಕೀಪರ್ ಕೂಡ. ಅವರು 44 ಏಕದಿನ ಹಾಗೂ 5 ಟೆಸ್ಟ್‌ ಪಂದ್ಯ ಆಡಿದ್ದಾರೆ. ಆರಕ್ಕೇರದ ಪ್ರದರ್ಶನ ರಾಷ್ಟ್ರಮಟ್ಟದಲ್ಲಿ ರಾಜ್ಯ ತಂಡದ ಪ್ರದರ್ಶನ ಅಷ್ಟಕಷ್ಟೆ. ಪಶ್ಚಿಮ ಬಂಗಾಳ, ಗೋವಾ, ಮಧ್ಯಪ್ರದೇಶ, ಪಂಜಾಬ್‌, ದೆಹಲಿ, ಮುಂಬೈ, ಗುಜರಾತ್‌, ಮಹಾರಾಷ್ಟ್ರ ತಂಡಗಳು ಬಲಿಷ್ಠವಾಗಿವೆ. 2011, 2012ರಲ್ಲಿ ಕರ್ನಾಟಕ ತಂಡ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಸೂಪರ್‌ ಲೀಗ್‌ ಹಂತ ತಲುಪಿತ್ತು. ಅದನ್ನು ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ತೋರಿಲ್ಲ. ಎಲೈಟ್‌ ಗುಂಪಿನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ. ರಾಜ್ಯ ತಂಡದವರು ಈಗ ಮತ್ತೊಂದು ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಹರಿಯಾಣದ ಲಾಲಿಯಲ್ಲಿ ನಡೆಯುತ್ತಿರುವ ಅಂತರರಾಜ್ಯ ಟ್ವೆಂಟಿ–20 ಟೂರ್ನಿಯಲ್ಲಿ ಆಡುತ್ತಿದ್ದಾರೆ. ಪ್ಲೇಟ್‌ ಗುಂಪಿನಲ್ಲಿರುವ (‘ಸಿ’ ಗುಂಪು) ಕರ್ನಾಟಕ ತಂಡದ ಜೊತೆಗೆ ಹರಿಯಾಣ, ಜಾರ್ಖಂಡ್‌, ಆಂಧ್ರಪ್ರದೇಶ, ತಮಿಳುನಾಡು ಇವೆ. ಫೈನಲ್‌ ತಲುಪಿದರೆ ಮಾತ್ರ ಎಲೈಟ್‌ ಗುಂಪಿನಲ್ಲಿ ಆಡಲು ಅವಕಾಶ ಸಿಗುತ್ತದೆ. ಎ, ಬಿ, ಸಿ ಗುಂಪುಗಳಿಂದ ಒಟ್ಟು 16 ತಂಡಗಳು ಆಡುತ್ತಿವೆ. ‘ಎಲೈಟ್‌ ಗುಂಪಿನಲ್ಲಿ ಸ್ಥಾನ ಪಡೆಯುವುದು ನಮ್ಮ ಗುರಿ. ಈ ಬಾರಿ ಸಮತೋಲನದಿಂದ ಕೂಡಿದ ತಂಡವಿದೆ. ಆಲ್‌ರೌಂಡರ್‌ಗಳು ಹೆಚ್ಚಿದ್ದಾರೆ. ಕರುಣಾ ಜೈನ್‌ ಅವರಂಥ ಅನುಭವಿ ಆಟಗಾರ್ತಿಯರಿದ್ದಾರೆ. ತಂಡದ ಮೇಲೆ ಭರವಸೆ ಇಟ್ಟುಕೊಳ್ಳಬಹುದು’ ಎಂದು ರಕ್ಷಿತಾ ಹೇಳುತ್ತಾರೆ. ಮೈಸೂರಿನಿಂದ ಮೊದಲ ನಾಯಕಿ ಕರ್ನಾಟಕ ತಂಡದ ಚುಕ್ಕಾಣಿ ಹಿಡಿದಿರುವ ಆಲ್‌ರೌಂಡರ್‌ ಕೆ. ರಕ್ಷಿತಾ ಅವರು ಈ ಗೌರವಕ್ಕೆ ಪಾತ್ರರಾದ ಮೈಸೂರಿನ ಮೊದಲ ಆಟಗಾರ್ತಿ. ಈ ಹಿಂದೆ ಮೈಸೂರಿನ ಜ್ಯೋತಿ ಬೊಳ್ಳಮ್ಮ, ರುತ್‌, ಕಾಂತಾಮಣಿ ಸೇರಿದಂತೆ ಪ್ರಮುಖರು ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ತಂಡದ ಸಾರಥ್ಯ ವಹಿಸಲು ಯಾರಿಗೂ ಅವಕಾಶ ಲಭಿಸಿರಲಿಲ್ಲ ಎನ್ನುತ್ತಾರೆ ಕೋಚ್‌ ಮನ್ಸೂರ್‌ ಅಹಮ್ಮದ್‌. ರಕ್ಷಿತಾ ಅವರಿಗೆ ಶಾಂತಾ ರಂಗಸ್ವಾಮಿ ಹಾಗೂ ಕಲ್ಪನಾ ಕೂಡ ತರಬೇತಿ ನೀಡಿದ್ದಾರೆ. ಹೋದ ವರ್ಷ ಗೋವಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಕೊನೆಯ ಓವರ್‌ನಲ್ಲಿ ಗೆಲ್ಲಲು ಗೋವಾ ತಂಡಕ್ಕೆ 9 ರನ್‌ ಬೇಕಿತ್ತು. ಆ ಓವರ್‌ ಬೌಲ್‌ ಮಾಡಿದ್ದ ರಕ್ಷಿತಾ 6 ರನ್‌ ನೀಡಿ 3 ವಿಕೆಟ್‌ ಕಬಳಿಸಿದ್ದರು. ಈಚೆಗೆ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ನಡೆದ ಚಾಲೆಂಜರ್‌ ಟ್ರೋಫಿ ಟೂರ್ನಿಯಲ್ಲಿ ಅವರು ಇಂಡಿಯಾ ಬ್ಲ್ಯೂ ತಂಡದಲ್ಲಿ ಆಡಿದ್ದರು. ಈ ಟೂರ್ನಿಯ ವಿವಿಧ ತಂಡಗಳಲ್ಲಿ ರಾಜ್ಯದ ಐವರು ಆಟಗಾರ್ತಿಯರು ಸ್ಥಾನ ಪಡೆದಿದ್ದರು. ಇಂಡಿಯಾ ಬ್ಲ್ಯೂ ತಂಡದಲ್ಲಿ ಕಡೂರಿನ ವೇದಾ ಕೃಷ್ಣಮೂರ್ತಿ, ಇಂಡಿಯಾ ರೆಡ್‌ ತಂಡದಲ್ಲಿ ವಿಜಯಪುರದ ರಾಜೇಶ್ವರಿ ಗಾಯಕ್ವಾಡ್‌ ಹಾಗೂ ಇಂಡಿಯಾ ಗ್ರೀನ್‌ ತಂಡದಲ್ಲಿ ಬೆಂಗಳೂರಿನ ದಿವ್ಯಾ ಮತ್ತು ಹುಬ್ಬಳ್ಳಿಯ ಪುಷ್ಪಾ ಕಿರೇಸೂರ್‌ ಆಡಿದ್ದರು. *** ಕ್ರಿಕೆಟ್‌ ಆಡುವ ಆಸಕ್ತಿ ಇರುವ ಹೆಣ್ಣುಮಕ್ಕಳು ಬಹಳಷ್ಟಿದ್ದಾರೆ. ಆದರೆ ಅವರಿಗೆ ಸರಿಯಾದ ವೇದಿಕೆಯೇ ಇಲ್ಲ. –ಕೆ.ರಕ್ಷಿತಾ *** 'ಹೊಸಬರ ದಂಡು' ಕರ್ನಾಟಕದಲ್ಲಿ ಹೆಚ್ಚು ಹೊಸ ಆಟಗಾರ್ತಿಯರು ಬರುತ್ತಿದ್ದಾರೆ. ರಾಜ್ಯ ತಂಡದಲ್ಲೂ ಹೊಸಬರೇ ಹೆಚ್ಚು. ಇನ್ನೊಂದು ಎರಡು ವರ್ಷಗಳಲ್ಲಿ ಈ ತಂಡ ದೇಶದ ಪ್ರಬಲ ತಂಡವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಕರ್ನಾಟಕದ ಗ್ರಾಮೀಣ ಪ್ರದೇಶಗಳಿಂದ ಹೆಚ್ಚು ಆಟಗಾರ್ತಿಯರು ಬರುತ್ತಿರುವುದು, ಆ ಪ್ರದೇಶಗಳಲ್ಲಿ ಕ್ರಿಕೆಟ್‌ ಜನಪ್ರಿಯತೆ ಪಡೆದುಕೊಂಡಿರುವುದರ ದ್ಯೋತಕವಾಗಿದೆ. –ಶಾಂತಾ ರಂಗಸ್ವಾಮಿ, ಮಾಜಿ ಅಂತರರಾಷ್ಟ್ರೀಯ ಆಟಗಾರ್ತಿ *** ಕರ್ನಾಟಕದಲ್ಲಿ ಏಳು ವರ್ಷಗಳ ಹಿಂದೆ ಅತ್ಯುತ್ತಮ ಆಟಗಾರ್ತಿಯರ ತಂಡ ಇತ್ತು. ಮಮತಾ, ಸಿಂಧು, ಶಿಲ್ಪಾ, ಶ್ರೇಯಾ ಮುಂತಾದವರು ಮದುವೆಯಾದ ಮೇಲೆ ಕ್ರಿಕೆಟ್ ಚಟುವಟಿಕೆ ನಿಲ್ಲಿಸಿದರು. ಇದೀಗ ಉತ್ತಮ ಆಟಗಾರ್ತಿಯರ ದಂಡು ಹೊರಹೊಮ್ಮುತ್ತಿರುವುದು ಬಹಳ ಖುಷಿ ಕೊಡುವಂತಹದ್ದು. ನಮ್ಮ ಅಕಾಡೆಮಿಯಲ್ಲಿಯೇ ತರಬೇತು ಪಡೆದಿರುವ ವಿ.ಆರ್‌.ವನಿತಾ, ಕರುಣಾ ಜೈನ್‌, ವೇದಾ ಕೃಷ್ಣಮೂರ್ತಿ ಭಾರತದ ಉತ್ತಮ ಆಟಗಾರ್ತಿಯರಾಗಿ ಬೆಳಗುತ್ತಿದ್ದಾರೆ. ವೇದಾ ಈ ವರ್ಷದಿಂದ ರೈಲ್ವೆ ತಂಡಕ್ಕೆ ಆಡುತ್ತಿರುವುದು ಕರ್ನಾಟಕದ ಪಾಲಿಗೆ ದೊಡ್ಡ ನಷ್ಟವೇ ಹೌದು. –ಇರ್ಫಾನ್‌ ಸೇಠ್‌, ಮುಖ್ಯಸ್ಥರು, ಕರ್ನಾಟಕ ಇನ್ಸ್‌ಟ್ಯೂಟ್‌ ಆಫ್‌ ಕ್ರಿಕೆಟ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.