ಅರ್ಚನಾ ಕಾಮತ್‌ ಒಲಿಂಪಿಕ್ಸ್‌ ಪದಕದ ಹೆಗ್ಗುರಿ 21 ವರ್ಷದೊಳಗಿನವರ ರಾಷ್ಟ್ರೀಯ ಯೂತ್‌ ಬಾಲಕಿಯರ ವಿಭಾಗದಲ್ಲಿ ಪದಕ ಗೆದ್ದ ಭಾರತದ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆ ಕರ್ನಾಟಕದ ಅರ್ಚನಾ ಕಾಮತ್‌ ಅವರದ್ದು. ವೃತ್ತಿ ಬದುಕಿನಲ್ಲಿ 17 ಪದಕಗಳನ್ನು ಗೆದ್ದಿರುವ ಅರ್ಚನಾ ಟೇಬಲ್‌ ಟೆನಿಸ್‌ನಲ್ಲಿ ಭಾರತದ ಆಶಾಕಿರಣವಾಗಿ ಗೋಚರಿಸಿದ್ದಾರೆ. ಅವರೊಂದಿಗೆ ಜಿ.ಶಿವಕುಮಾರ ಮಾತುಕತೆ ನಡೆಸಿದ್ದಾರೆ. ಎಳವೆಯಲ್ಲಿಯೇ ತಮ್ಮ ಅನನ್ಯ ಸಾಧನೆಯ ಮೂಲಕ ಟೇಬಲ್‌ ಟೆನಿಸ್‌ ಲೋಕದಲ್ಲಿ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿರುವ ಪ್ರತಿಭಾನ್ವಿತೆ ಅರ್ಚನಾ ಕಾಮತ್‌. ಛಲ ಮತ್ತು ಬದ್ಧತೆಯನ್ನು ಮೈಗೂಡಿಸಿಕೊಂಡಿರುವ ಇವರು ಈ ಕ್ರೀಡೆಯಲ್ಲಿ ಹಲವು ಮೊದಲುಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಸಬ್‌ ಜೂನಿಯರ್‌, ಜೂನಿಯರ್‌, ಯೂತ್‌ ಹಾಗೂ ಮಹಿಳೆ ಹೀಗೆ ನಾಲ್ಕು ವಯೋಮಿತಿಯ ವಿಭಾಗಗಳಲ್ಲಿ ಸ್ಪರ್ಧಿಸಿ ವಯಸ್ಸಿಗೂ ಮೀರಿದ ಸಾಧನೆ ಮಾಡಿದ ದಿಟ್ಟೆ ಬೆಂಗಳೂರಿನ ಅರ್ಚನಾ. ದಕ್ಷಿಣ ಕೊರಿಯಾ, ಮಲೇಷ್ಯಾ ಮತ್ತು ಜಪಾನ್‌ ಸೇರಿದಂತೆ ಕೆಲವು ರಾಷ್ಟ್ರಗಳ ಸ್ಪರ್ಧಿಗಳ ಕಠಿಣ ಸವಾಲನ್ನು ಮೆಟ್ಟಿನಿಂತು ಅಂತರರಾಷ್ಟ್ರೀಯ ಟೂರ್ನಿಗಳಲ್ಲೂ ಪದಕ ಗೆದ್ದಿರುವ 15 ವರ್ಷ ವಯಸ್ಸಿನ ಅರ್ಚನಾ ಮುಂದೊಂದು ದಿನ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ಗೆದ್ದುಕೊಡುವ ಹೆಗ್ಗುರಿ ಹೊಂದಿದ್ದಾರೆ. 2015ರಲ್ಲಿ ನಡೆದ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪದಕದ ಸಾಧನೆ ಮಾಡಿರುವ ಅರ್ಚನಾ ಹೋದ ವರ್ಷದ ನವೆಂಬರ್‌ನಲ್ಲಿ ರಾಷ್ಟ್ರಪತಿಗಳಿಂದ ‘ರಾಷ್ಟ್ರೀಯ ಮಕ್ಕಳ ಪುರಸ್ಕಾರ’ ಪಡೆದ ಹೆಗ್ಗಳಿಕೆ ಹೊಂದಿದ್ದಾರೆ. ಅವರು ತಮ್ಮ ಸಾಧನೆಯ ಹಾದಿ ಹಾಗೂ ಭವಿಷ್ಯದ ಕನಸುಗಳ ಬಗ್ಗೆ ‘ಪ್ರಜಾವಾಣಿ’ ಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. * 2015ರ ಪಯಣ ಹೇಗಿತ್ತು? 2014ಕ್ಕೆ ಹೋಲಿಸಿದರೆ 2015 ನನ್ನ ಪಾಲಿಗೆ ಸ್ಮರಣೀಯವಾಗಿತ್ತು. ಹಿಂದಿನ ಋತುವಿನಲ್ಲಿ ನಾನು ಭಾಗವಹಿಸಿದ್ದ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಗೆಲ್ಲಲು ಸಾಧ್ಯವಾಯಿತು. ಇದು ನನ್ನಲ್ಲಿ ನವೋಲ್ಲಾಸ ಮೂಡುವಂತೆ ಮಾಡಿತು. * ಹೊಸ ವರ್ಷಕ್ಕೆ ನಿಮ್ಮ ಮುಂದಿರುವ ಸವಾಲುಗಳೇನು? ಈ ತಿಂಗಳಿನಲ್ಲಿ ರಾಷ್ಟ್ರೀಯ ಸೀನಿಯರ್‌ ಮತ್ತು ವಿಶ್ವ ಜೂನಿಯರ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ಗಳಿವೆ. ಈ ಎರಡೂ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದು ಹೊಸ ವರ್ಷಕ್ಕೆ ಮುನ್ನುಡಿ ಬರೆಯಲು ಕಾತರಳಾಗಿದ್ದೇನೆ. ಆ ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇರುವುದರಿಂದ ಯಾವುದೇ ಟೂರ್ನಿಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ. * ಸಿದ್ಧತೆ ಹೇಗೆ ನಡೆಯುತ್ತಿದೆ? ಟೂರ್ನಿ ಇರಲಿ ಬಿಡಲಿ ಅಭ್ಯಾಸ ಮಾತ್ರ ನಡೆಯುತ್ತಿರುತ್ತದೆ. ಪ್ರತಿನಿತ್ಯ ಬೆಳಿಗ್ಗೆ ನನ್ನ ವೈಯಕ್ತಿಕ ಕೋಚ್‌ ಸಗಾಯ್‌ ರಾಜ್‌ ಅವರೊಂದಿಗೆ ಆಡುತ್ತೇನೆ. ಸಂಜೆ 4.45ರಿಂದ 8 ಗಂಟೆಗೆ ವಿದ್ಯಾಪೀಠದಲ್ಲಿರುವ ತರಬೇತಿ ಶಿಬಿರದಲ್ಲಿ ರಾಜ್ಯ ತಂಡದ ತರಬೇತುದಾರರ ಮಾರ್ಗದರ್ಶನದಲ್ಲಿ ತಾಲೀಮು ನಡೆಸುತ್ತೇನೆ. * ಓದು ಮತ್ತು ವ್ಯಾಸಂಗ ಎರಡನ್ನೂ ಹೇಗೆ ಸರಿದೂಗಿಸುತ್ತೀರಿ? ಸದ್ಯ ನಾನು ಸದಾಶಿವನಗರದಲ್ಲಿರುವ ಪೂರ್ಣ ಪ್ರಜ್ಞಾ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿ ಓದುತ್ತಿದ್ದೇನೆ. ಚಾಂಪಿಯನ್‌ಷಿಪ್‌ಗಳು ಇದ್ದಾಗ ಶಾಲೆಗೆ ಹೋಗಲು ಆಗುವುದಿಲ್ಲ. ಬಿಡುವಿನ ವೇಳೆಯಲ್ಲಿ ತಪ್ಪದೇ ಹೋಗುತ್ತೇನೆ. ಏನಾದರೂ ಅನುಮಾನಗಳಿದ್ದರೆ ಶಿಕ್ಷಕರ ಬಳಿ ಕೇಳಿ ಬಗೆಹರಿಸಿಕೊಳ್ಳುತ್ತೇನೆ. ಈ ವಿಷಯದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಸದಾ ಬೆಂಬಲವಾಗಿ ನಿಂತಿದ್ದಾರೆ. * ನಾಲ್ಕು ವಯೋಮಿತಿಯ ವಿಭಾಗಗಳಲ್ಲಿ ಆಡುವುದು ಕಷ್ಟ ಎನಿಸುವುದಿಲ್ಲವೇ? ಖಂಡಿತವಾಗಿಯೂ ಇಲ್ಲ. ಟೇಬಲ್‌ ಟೆನಿಸ್‌ ಅಂದರೆ ನನಗೆ ಪ್ರಾಣ. ಟೂರ್ನಿ ಯಾವುದೇ ಇರಲಿ ಎದುರಾಳಿ ಯಾರೇ ಆಗಿರಲಿ ಅದರ ಬಗ್ಗೆ ಯೋಚಿಸುವುದಿಲ್ಲ. ಅಂಗಳಕ್ಕೆ ಇಳಿದಾಗ ನನ್ನ ಮುಂದಿರುವ ಏಕೈಕ ಗುರಿ ಗೆಲುವು. ಅದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಇದೇ ನನ್ನ ಯಶಸ್ಸಿನ ಗುಟ್ಟು ಕೂಡಾ. * ನಿಮಗೆ ಯಾವ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ಆಡುವುದು ಕಠಿಣ ಎನಿಸುತ್ತದೆ? ಟೇಬಲ್‌ ಟೆನಿಸ್‌ ಆಡುವ ಯಾವುದೇ ರಾಷ್ಟ್ರದ ಸ್ಪರ್ಧಿಗಳಿಂದಲೂ ಕಠಿಣ ಪೈಪೋಟಿ ಎದುರಾಗುತ್ತದೆ. ಅದರಲ್ಲೂ ಮುಖ್ಯವಾಗಿ ಚೀನಾ, ದಕ್ಷಿಣ ಕೊರಿಯಾ ಮತ್ತು ಜಪಾನ್‌ ದೇಶದ ಸ್ಪರ್ಧಿಗಳನ್ನು ಎದುರಿಸುವುದು ಸವಾಲೇ ಸರಿ. * ಭಾರತದ ವಿಷಯಕ್ಕೆ ಬರುವುದಾದರೆ ಇಲ್ಲಿ ಯಾವ ರೀತಿಯ ಸ್ಪರ್ಧೆ ಇದೆ? ಭಾರತದಲ್ಲೂ ಸಾಕಷ್ಟು ಮಂದಿ ಪ್ರತಿಭಾನ್ವಿತ ಸ್ಪರ್ಧಿಗಳಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ವಿವಿಧ ಕ್ರೀಡಾ ಮಂಡಳಿಗಳ ಸ್ಪರ್ಧಿಗಳಿಂದ ಕಠಿಣ ಸ್ಪರ್ಧೆ ಎದುರಾಗುತ್ತದೆ. * ಟೇಬಲ್‌ ಟೆನಿಸ್‌ನತ್ತ ಆಸಕ್ತಿ ಬೆಳೆದಿದ್ದು ಹೇಗೆ? ನಾನು ಒಂಬತ್ತು ವರ್ಷದವಳಿದ್ದಾಗ ಬೇಸಿಗೆ ರಜೆಯಲ್ಲಿ ಅಪ್ಪ ಅಮ್ಮನೊಂದಿಗೆ ಮಂಗಳೂರಿನಲ್ಲಿರುವ ನಮ್ಮ ನೆಂಟರ ಮನೆಗೆ ಹೋಗಿದ್ದೆ. ಅವರ ಮನೆಯಲ್ಲಿ ಹಳೆಯ ಟಿ.ಟಿ.ಬೋರ್ಡ್‌ ಇತ್ತು. ತುಂಬಾ ಬಿಸಿಲು ಇದ್ದ ಕಾರಣ ನಮಗೆ ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಹೀಗಾಗಿ ನಾನು ಮತ್ತು ನನ್ನ ಸಹೋದರ ಸಂಬಂಧಿ ಅಲ್ಲಿ ಒಂದೆರಡು ದಿನ ಆಟ ಆಡಿದೆವು. ಬಳಿಕ ನನಗೆ ಅರಿವಿಲ್ಲದ ಹಾಗೆ ಈ ಆಟದತ್ತ ಆಕರ್ಷಿತಳಾದೆ. ಬೆಂಗಳೂರಿಗೆ ಹೋದ ಮೇಲೆ ಅಪ್ಪನ ಬಳಿ ಹೇಳಿ ಹೊಸ ಟೇಬಲ್‌ ತರಿಸಿಕೊಂಡು ಮನೆಯ ನೆಲ ಮಹಡಿಯಲ್ಲಿದ್ದ ಕೊಠಡಿಯಲ್ಲಿ ನಿತ್ಯ ಅಭ್ಯಾಸ ಮಾಡಲು ಶುರುಮಾಡಿದೆ. ಕ್ರಮೇಣ ಈ ಆಟವನ್ನು ಗಂಭೀರವಾಗಿ ಪರಿಗಣಿಸಿ ಇದರಲ್ಲಿ ಎತ್ತರದ ಸಾಧನೆ ಮಾಡಲು ನಿರ್ಧರಿಸಿದೆ. * ಅಪ್ಪ– ಅಮ್ಮನ ಬೆಂಬಲ ಹೇಗಿತ್ತು? ನನ್ನ ಎಲ್ಲಾ ಆಸೆ, ಕನಸುಗಳಿಗೆ ಪೋಷಕರು ಬೆಂಬಲವಾಗಿ ನಿಂತಿದ್ದಾರೆ. ಅಪ್ಪ, ಅಮ್ಮ ಇಬ್ಬರೂ ವೈದ್ಯರು. ನಾನು ವಿವಿಧ ಟೂರ್ನಿಗಳಲ್ಲಿ ಭಾಗವಹಿಸುವಾಗ ಜತೆಯಲ್ಲಿ ಒಬ್ಬರು ಇರಬೇಕಲ್ಲ. ಅದಕ್ಕಾಗಿ ಅಮ್ಮ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ದ್ದಾರೆ. ಅವರ ಈ ತ್ಯಾಗ ನನ್ನಲ್ಲಿ ಇನ್ನಷ್ಟು ಸಾಧನೆಯ ಛಲ ತುಂಬಿರುವುದಂತೂ ಸುಳ್ಳಲ್ಲ. * ನಿಮ್ಮ ಹವ್ಯಾಸಗಳೇನು? ಬಿಡುವಿದ್ದಾಗ ಇತಿಹಾಸದ ಪುಸ್ತಕಗಳನ್ನು ಓದುತ್ತೇನೆ. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಅವರ ಕುರಿತಾದ ಪುಸ್ತಕಗಳನ್ನು ಓದುವುದನ್ನೂ ರೂಢಿಸಿಕೊಂಡಿದ್ದೇನೆ. ತುಂಬಾ ಬೇಸರವಾದಾಗ ಸದಭಿರುಚಿಯ ಚಲನಚಿತ್ರಗಳನ್ನು ವೀಕ್ಷಿಸುತ್ತೇನೆ. * ನಿಮ್ಮ ಮುಂದಿರುವ ಗುರಿ? ಎಲ್ಲಾ ಕ್ರೀಡಾಪಟುಗಳಂತೆ ನನಗೂ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬೇಕೆಂಬ ಕನಸಿದೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದೇನೆ. ಮುಂದೊಂದು ದಿನ ಖಂಡಿತವಾಗಿಯೂ ಗುರಿ ತಲುಪುತ್ತೇನೆ ಎಂಬ ವಿಶ್ವಾಸ ಇದೆ. ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ * 15 ವರ್ಷದೊಳಗಿನವರ ವಿಭಾಗ: 14 * 18 ವರ್ಷದೊಳಗಿನವರ ವಿಭಾಗ: 65 ರಾಷ್ಟ್ರೀಯ ರ‍್ಯಾಂಕಿಂಗ್‌ * ಸಬ್‌ ಜೂನಿಯರ್‌ ಬಾಲಕಿಯರು: (15 ವರ್ಷ ವರ್ಷದೊಳಗಿನ): 01 * ಜೂನಿಯರ್‌ ಬಾಲಕಿಯರು: (18 ವರ್ಷ ವರ್ಷದೊಳಗಿನ): 01 * ಯುವ ಬಾಲಕಿಯರ ವಿಭಾಗ: (21 ವರ್ಷ ವರ್ಷದೊಳಗಿನ): 03 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.