ನೇಪಥ್ಯಕ್ಕೆ ಸರಿದ ಮಹಿಳಾ ತರಬೇತಿ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಧಾರವಾಡ ಕೇಂದ್ರದಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಜಿಮ್ನಾಸ್ಟಿಕ್ಸ್ ಮತ್ತು ಕಬಡ್ಡಿ ತರಬೇತಿಯನ್ನು ಸ್ಥಗಿತಗೊಳಿಸಲಾಗಿತ್ತು. ಸಾಯ್‌ನ ಕ್ರೀಡಾ ಅಭಿವೃದ್ಧಿ ಯೋಜನೆಯ ಪುನಾರಚನೆ ಕಾರ್ಯಕ್ರಮದಡಿ ನಿಲ್ಲಿಸಲಾದ ಈ ವಿಭಾಗಗಳಿಗೆ ಎರಡು ತಿಂಗಳ ನಂತರ ಮರುಜೀವ ಲಭಿಸಿತು. ಇದಕ್ಕಾಗಿ ಸಾಯ್‌ ಕೇಂದ್ರದವರು ಮತ್ತು ಈ ಭಾಗದ ಕ್ರೀಡಾ ಪ್ರಿಯರು ಭಾರಿ ಹೋರಾಟ ನಡೆಸಿದ್ದರು. ಈಗ ಭಾರತ ಕ್ರೀಡಾ ಪ್ರಾಧಿಕಾರದ ಧಾರವಾಡ ಕೇಂದ್ರಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ. ಇಲ್ಲಿ ಮಹಿಳಾ ತರಬೇತಿಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಜಿಮ್ನಾಸ್ಟಿಕ್ಸ್‌, ಅಥ್ಲೆಟಿಕ್ಸ್‌ ಮತ್ತು ಟೇಕ್ವಾಂಡೊದಲ್ಲಿ ತರಬೇತಿ ಪಡೆಯುವ ಮಹಿಳಾ ಕ್ರೀಡಾಪಟುಗಳ ಕನಸು ನುಚ್ಚುನೂರಾಗಿದೆ. ಉತ್ತಮ ಸಾಧನೆ ಕಂಡು ಬರುತ್ತಿಲ್ಲ ಎಂಬ ಕಾರಣವನ್ನು ಮುಂದಿಟ್ಟು ಹಿಂದೆ ಕಬಡ್ಡಿ ಮತ್ತು ಜಿಮ್ನಾಸ್ಟಿಕ್ಸ್‌ ತರಬೇತಿ ಸ್ಥಗಿತಗೊಳಿಸಲಾಗಿತ್ತು. ಮಹಿಳಾ ತರಬೇತಿ ಸ್ಥಗಿತಕ್ಕೆ ನಿಶ್ಚಿತ ಕಾರಣವಿಲ್ಲದಿದ್ದರೂ ಸರಿಯಾದ ಭದ್ರತಾ ವ್ಯವಸ್ಥೆ ಇಲ್ಲ ಎಂಬ ಆತಂಕ ಇಂಥ ಸ್ಥಿತಿ ಸೃಷ್ಟಿಸಿದೆ ಎಂಬುದು ಅಧಿಕಾರಿಗಳು ನೀಡುವ ಮಾಹಿತಿ. ಕೇರಳದ ಆಲಪ್ಪುಳ ಜಿಲ್ಲೆಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರದಲ್ಲಿ ಒಂದು ವರ್ಷದ ಹಿಂದೆ ನಡೆದ ಕ್ರೀಡಾಪಟುವಿನ ಆತ್ಮಹತ್ಯೆ ಪ್ರಕರಣದ ನಂತರ ಸಾಯ್‌ ಕೇಂದ್ರಗಳಸುಧಾರಣೆಗೆ ಮುಂದಾಗಿದ್ದ ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ 12 ಸೂತ್ರಗಳನ್ನು ಜಾರಿಗೆ ತರಲು ನಿರ್ಧರಿಸಿತ್ತು. ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಭದ್ರತೆ, ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮಗಳ ಆಯೋಜನೆ ಇತ್ಯಾದಿಗಳಿಗೆ ಒತ್ತು ನೀಡುವಂತೆ ಸಾಯ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿತ್ತು. ಆಯಾ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಧಾರವಾಡ ಕೇಂದ್ರಕ್ಕೂ ಪ್ರಾದೇಶಿಕ ನಿರ್ದೇಶಕ ಶ್ಯಾಮಸುಂದರ್‌ ಬಂದಿದ್ದರು. ಮಹಿಳಾ ಕ್ರೀಡಾಪಟುಗಳಿಗೆ ಬೇಕಾದ ಸೌಲಭ್ಯಗಳ ಕುರಿತು ಮಹಾನಿರ್ದೇಶಕರಿಗೆ ಮಾಹಿತಿ ನೀಡಿದ್ದರು. ಇದರ ನಂತರ ಬದಲಾವಣೆಯ ನಿರೀಕ್ಷೆಯಲ್ಲಿದ್ದ ಇಲ್ಲಿನ ಕ್ರೀಡಾಪಟುಗಳಿಗೆ ಸಿಕ್ಕಿದ್ದು ಮಹಿಳಾ ತರಬೇತಿ ಸ್ಥಗಿತಗೊಂಡ ಆಘಾತದ ಸುದ್ದಿ. ಆಲಪ್ಪುಳದಲ್ಲಿರುವ ಜಲಕ್ರೀಡೆ ತರಬೇತಿ ಕೇಂದ್ರದಲ್ಲಿ ವಿಷಪೂರಿತ ಹಣ್ಣು ತಿಂದು ರಾಷ್ಟ್ರೀಯ ಜೂನಿಯರ್‌ ರೋವಿಂಗ್‌ ಚಾಂಪಿಯನ್‌ ಅಪರ್ಣಾ ರಾಮಭದ್ರ ಸಾವಿಗೀಡಾಗಿದ್ದ ಪ್ರಕರಣ ಸಂಚಲನ ಉಂಟು ಮಾಡಿತ್ತು. ಇದಾಗಿ ಒಂದು ವರ್ಷದ ನಂತರ ಕಟಕ್‌ ತರಬೇತಿ ಕೇಂದ್ರದ ಮಹಿಳಾ ಅಥ್ಲೀಟ್‌ ಒಬ್ಬರು ಕೋಚ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಇದೇ ಸಂದರ್ಭದಲ್ಲಿ ಧಾರವಾಡ ಸಾಯ್‌ ಕೇಂದ್ರದಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಪರಿಸರದ ಕುರಿತು ಆರೋಪಗಳು ಕೇಳಿಬಂದಿದ್ದವು. ರಾಜ್ಯದಲ್ಲಿ ಕೇಂದ್ರ ಕಚೇರಿ ಬೆಂಗಳೂರು ಸೇರಿದಂತೆ ಮೂರು ಸಾಯ್‌ ತರಬೇತಿ ಕೇಂದ್ರಗಳಿವೆ. ಅವುಗಳ ಪೈಕಿ ಮಹಿಳೆಯರಿಗೆ ಜಿಮ್ನಾಸ್ಟಿಕ್ಸ್ ತರಬೇತಿ ಸಿಗುತ್ತಿರುವುದು ಧಾರವಾಡ ಕೇಂದ್ರದಲ್ಲಿ ಮಾತ್ರ. ಜಿಮ್ನಾಸ್ಟಿಕ್ಸ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿರುವ ಪೂಜಾ ಡಿ, ಸೌಮ್ಯಾ ವಾಗೋಜಿ ಮುಂತಾದವರು ಇಲ್ಲೇ ತರಬೇತಿ ಪಡೆದವರು. ಕೊರತೆ ಏನು?: ಸಾಯ್‌ ಕೇಂದ್ರದಲ್ಲಿ ಮೂಲಸೌಲಭ್ಯಗಳ ಕೊರತೆಯನ್ನು ನೀಗಿಸುವ ಕುರಿತು ಅಧಿಕಾರಿಗಳು ಮತ್ತು ತರಬೇತುದಾರರು ಅನೇಕ ವರ್ಷಗಳಿಂದ ಸರ್ಕಾರದ ಮೊರೆ ಹೋಗುತ್ತಿದ್ದಾರೆ. ಕೇಂದ್ರ ಸರ್ಕಾರ ಹಣದ ನೆರವು ನೀಡುತ್ತಿದೆಯಾದರೂ ಭೂಮಿ ಮತ್ತಿತರ ಅಗತ್ಯ ಸೌಕರ್ಯವನ್ನು ಒದಗಿಸಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಇದು ಆಗುತ್ತಿಲ್ಲ ಎಂಬುದು ಕೋಚ್‌ಗಳ ದೂರು. ಇಲ್ಲಿ ಎಲ್ಲ ವಿಭಾಗಗಳ ತರಬೇತಿ ಕೂಡ ಹೊರಾಂಗಣದಲ್ಲೇ ನಡೆಯುತ್ತದೆ. ಹೆಣ್ಣುಮಕ್ಕಳು ಜಿಮ್ನಾಸ್ಟಿಕ್ಸ್‌, ಟೇಕ್ವಾಂಡೊ ತರಬೇತಿ ಪಡೆಯುವ ಜಾಗದ ಸಮೀಪದಲ್ಲೇ ಮುಖ್ಯ ರಸ್ತೆ ಇದೆ. ಹೀಗಾಗಿ ಮುಜುಗರ ಅನುಭವಿಸುತ್ತಲೇ ಅಭ್ಯಾಸ ಮಾಡಬೇಕಾಗುತ್ತದೆ. ಇದರಿಂದ ನಿರೀಕ್ಷೆಗೆ ತಕ್ಕಂತೆ ಪ್ರತಿಭೆ ಬೆಳಗುತ್ತಿರಲಿಲ್ಲ. ತರಬೇತಿಗೆ ಹಾಜರಾಗುವವರ ಸಂಖ್ಯೆಯೂ ಕಡಿಮೆಯಾಗುತ್ತಿತ್ತು. ಕಳೆದ ಬಾರಿ ಜಿಮ್ನಾಸ್ಟಿಕ್ಸ್‌ಗೆ ಕೇವಲ ಮೂವರು ಮಾತ್ರ ಪ್ರವೇಶ ಪಡೆದಿದ್ದರೆ ಟೇಕ್ವಾಂಡೊ ಮತ್ತು ಅಥ್ಲೆಟಿಕ್ಸ್‌ಗೆ ಸೇರಲು ಯಾರೂ ಮುಂದೆ ಬರಲಿಲ್ಲ. ಮೂಲಸೌಲಭ್ಯಗಳ ಕೊರತೆಯಿಂದಾಗಿ ಸಾಯ್‌ ನಿರ್ದೇಶನಾಲಯದ ಹನ್ನೆರಡು ಸೂತ್ರಗಳನ್ನು ಜಾರಿಗೆ ತರುವುದಕ್ಕೂ ಸಾಧ್ಯವಾಗಲಿಲ್ಲ. ಮೂರೂ ವಿಭಾಗಗಳಲ್ಲಿ ಸುಮಾರು 25ರಿಂದ 30 ಮಂದಿ ಹೆಣ್ಣುಮಕ್ಕಳಿಗೆ ಪ್ರವೇಶ ನೀಡಲು ಅನುಕೂಲ ಇರುವ ಇಲ್ಲಿ ಅವರ ಸುರಕ್ಷತೆ ದೊಡ್ಡ ಸವಾಲಾಗಿತ್ತು. ಇದೆಲ್ಲವೂ ತರಬೇತಿ ಸ್ಥಗಿತಗೊಳ್ಳಲು ಕಾರಣವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.