ಆತಂಕ ತಂದ ಆನಂದ್‌ ಹಿನ್ನಡೆ ವಿಶ್ವನಾಥನ್ ಆನಂದ್ ಅವರ ಪಾಲಿಗೆ 2015ರ ಕೊನೆಯ ಕೆಲವು ತಿಂಗಳು ಉತ್ತಮವಾದುದೇನೂ ಆಗಿರಲಿಲ್ಲ. ವರ್ಷದ ಆರಂಭದಲ್ಲಿ ಎರಡು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು ಕೊನೆಯಲ್ಲಿ ಗೆಲುವಿನ ಲಯ ಕಂಡುಕೊಳ್ಳಲು ಪರದಾಡುವಂತಾಯಿತು. ಈ ಬಗ್ಗೆ ನಾಗೇಶ್‌ ಶೆಣೈ ಬರೆದಿದ್ದಾರೆ. ಭಾರತದಲ್ಲಿ ಸುಮಾರು ಮೂರು ದಶಕಗಳಿಂದ ಚೆಸ್‌ಗೆ ಅನ್ವರ್ಥನಾಮ ಎಂಬ ಹಿರಿಮೆ ಉಳಿಸಿಕೊಂಡವರು ವಿಶ್ವನಾಥನ್‌ ಆನಂದ್‌. ದೇಶದ ಈ ಅಗ್ರಮಾನ್ಯ ಆಟಗಾರ, ಅಂತರರಾಷ್ಟ್ರೀಯ ಚೆಸ್‌ನಲ್ಲಿ ಕಳೆದ ವರ್ಷದ ಮೊದಲ ಅರ್ಧಭಾಗ ಗಮನ ಸೆಳೆಯುವ ರೀತಿಯಲ್ಲೇ ಆಡಿದ್ದರು. ಆದರೆ ಕೊನೆಯ ಕೆಲವು ತಿಂಗಳಲ್ಲಿ ಅವರು ಕಂಡಿದ್ದು ನಿರಾಶೆಯನ್ನು. ವರ್ಷದ ಆರಂಭದಲ್ಲಿ ಒಂದು ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡು, ಎರಡು ಟೂರ್ನಿಗಳಲ್ಲಿ ರನ್ನರ್‌ ಆಪ್‌ ಆಗಿದ್ದ ಆನಂದ್‌ ಕೊನೆಯ ನಾಲ್ಕು ತಿಂಗಳಲ್ಲಿ ಗೆಲುವಿನ ಲಯ ಕಂಡುಕೊಳ್ಳಲು ಪರದಾಡಬೇಕಾಯಿತು. ವಿಶ್ವ ಚೆಸ್‌ನಲ್ಲಿ ಬೇರೂರಲು ಯತ್ನಿಸುತ್ತಿರುವ ಯುವ ಆಟಗಾರರ ಎದುರು ಅವರು ಡ್ರಾ ಮಾಡಿಕೊಳ್ಳುತ್ತಿದ್ದುದು, ಇತ್ತೀಚಿನ ದಿನಗಳಲ್ಲಿ ಅವರ ಪ್ರದರ್ಶನದ ಮಟ್ಟ ಕುಸಿಯುತ್ತಿದೆಯೇ ಎಂಬ ಪ್ರಶ್ನೆ ಏಳಲೂ ಕಾರಣವಾಯಿತು. ಈ ವರ್ಷ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಅಮೆರಿಕದಲ್ಲಿ ನಿಗದಿಯಾಗಿದ್ದು, ಇದರಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರನಾಗಿರುವ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಸವಾಲು ಹಾಕುವ ಆಟಗಾರ ಯಾರೆಂದು ನಿರ್ಧಾರವಾಗಲಿದೆ. ಎರಡು ಬಾರಿ ಆನಂದ್‌ ಅವರಿಗೆ ಎದುರಾಳಿಯಾಗಿದ್ದರು. ಈ ಬಾರಿಯೂ 46 ವರ್ಷದ ಆನಂದ್‌, ಚಾಂಪಿಯನ್‌ಗೆ ಸವಾಲಿಗನಾಗುವ ಸನ್ನಾಹದಲ್ಲಿದ್ದಾರೆ. ಅಮೋಘ ಚೇತರಿಕೆ ಕಳೆದ ವರ್ಷದ ಮೊದಲ ಅರ್ಧ ಆನಂದ್‌ ಅವರ ಪ್ರದರ್ಶನ ಅಂಥ ಕಳಪೆಯೇನೂ ಆಗಿರಲಿಲ್ಲ. ಫೆಬ್ರುವರಿಯಲ್ಲಿ ಜರ್ಮನಿಯ ಬಡೆನ್‌ನಲ್ಲಿ ನಡೆದಿದ್ದ ಗ್ರೆಂಕೆ ಚೆಸ್‌ ಕ್ಲಾಸಿಕ್‌ ಟೂರ್ನಿಯಲ್ಲಿ ಅವರು ಹಿನ್ನಡೆ (7 ಸುತ್ತುಗಳಲ್ಲಿ 2.5 ಅಂಕ, 7ನೇ ಸ್ಥಾನ) ಕಂಡಿದ್ದರು. ವರ್ಷದ ಈ ಮೊದಲ ‘ಕ್ಲಾಸಿಕಲ್‌’ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದು ಫೆವರೀಟ್‌ ಆಗಿದ್ದ ಕಾರ್ಲ್‌ಸನ್‌ ಅವರೇ. ಆದರೆ ನಂತರದ ಎರಡು ಟೂರ್ನಿಗಳಲ್ಲಿ ಭಾರತದ ಆಟಗಾರ ಚೇತರಿಸಿಕೊಂಡ ರೀತಿ ಅಮೋಘವಾಗಿತ್ತು. ಸ್ವಿಜರ್ಲೆಂಡ್‌ನ ಜ್ಯೂರಿಕ್‌ನಲ್ಲಿ ಅದೇ ತಿಂಗಳಲ್ಲಿ ನಡೆದ ಜ್ಯೂರಿಕ್‌ ಚಾಲೆಂಜ್‌ ಚೆಸ್‌ ಟೂರ್ನಿಯ ಕ್ಲಾಸಿಕಲ್‌ ಮಾದರಿಯಲ್ಲಿ ಎರಡು ಗೆಲುವು, ಮೂರು ಡ್ರಾ ದಾಖಲೆಯೊಡನೆ ಅವರೇ ಚಾಂಪಿಯನ್‌ ಆದರು. ಏಪ್ರಿಲ್‌ನಲ್ಲಿ ಅಜರ್‌ಬೈಜಾನ್‌ನಲ್ಲಿ ನಡೆದ ಶಂಕೀರ್‌ ಚೆಸ್ ಟೂರ್ನಿಯಲ್ಲೂ ಅವರದ್ದು ಅಜೇಯ ಸಾಧನೆ. ಒಟ್ಟಾರೆ ಕಾರ್ಲ್‌ಸನ್‌ ನಂತರ ಎರಡನೇ ಸ್ಥಾನ ಗಳಿಸಿದ್ದು ಕಡಿಮೆಯೇನೂ ಅಲ್ಲ. 9 ಸುತ್ತುಗಳಲ್ಲಿ ಮೂರು ಗೆಲುವು, ಆರು ಡ್ರಾ ಅವರ ಸ್ಥಿರ ಪ್ರದರ್ಶನಕ್ಕೆ ನಿದರ್ಶನವಾಯಿತು. ನಾರ್ವೆಯಲ್ಲಿ ನಡೆದ ಸ್ಟಾವೆಂಜರ್‌ ಚೆಸ್‌ ಟೂರ್ನಿಯಲ್ಲೂ ಅವರ ಅಜೇಯ ಸಾಧನೆ ಮುಂದುವರಿಯಿತು. ಆರು ಡ್ರಾ, ಮೂರು ಗೆಲುವು, ಇಲ್ಲೂ ಎರಡನೇ ಸ್ಥಾನ. ಮೊದಲ ಸ್ಥಾನ ವ್ಯಾಸಿಲಿನ್‌ ಟೊಪಾಲೊವ್‌ (ಬಲ್ಗೇರಿಯಾ) ಅವರದ್ದಾಗಿತ್ತು. ಈ ಮಧ್ಯೆ, ಮೇ ತಿಂಗಳಲ್ಲಿ, ಅವರ ತಾಯಿ ಸುಶೀಲಾ ಚೆನ್ನೈನಲ್ಲಿ ನಿಧನರಾಗಿದ್ದರು. ಆನಂದ್‌ ಅವರಿಗೆ ಚೆಸ್‌ ಪಾಠಗಳನ್ನು ಕಲಿಸಿದ್ದು ಸುಶೀಲಾ ಅವರೇ. ಪರದಾಟ ಆಗಸ್ಟ್‌ನಲ್ಲಿ ನಡೆದ ಪ್ರತಿಷ್ಠಿತ ಸಿಂಕ್ವೆಫೀಲ್ಡ್‌ ಕಪ್‌ ಟೂರ್ನಿಯಿಂದ ಆನಂದ್‌ ಹಿನ್ನಡೆ ಆರಂಭವಾಯಿತು. ಅಲ್ಲಿ ಅವರು 9 ಸುತ್ತುಗಳಿಂದ ಪಡೆದಿದ್ದು ಕೇವಲ ಮೂರೂವರೆ ಪಾಯಿಂಟ್‌ ಗಳನ್ನು. ಗಳಿಸಿದ್ದು ಎಂಟನೇ ಸ್ಥಾನವನ್ನು. ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ವಿಶ್ವ ರ‍್ಯಾಪಿಡ್‌ (ವೇಗದ) ಮತ್ತು ಬ್ಲಿಟ್ಜ್‌ (ಮಿಂಚಿನ) ಟೂರ್ನಿಯಲ್ಲಿ ಕೂಡ ಆನಂದ್‌ ಅವರ ಪ್ರದರ್ಶನ ನಿರಾಸೆಗೆ ಕಾರಣವಾಯಿತು. ಅಕ್ಟೋಬರ್‌ನಲ್ಲಿ ನಡೆದಿದ್ದ ರ‍್ಯಾಪಿಡ್‌ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಶ್ರೇಯಾಂಕ ಪಡೆದಿದ್ದ ಆನಂದ್‌, ಈ ಚಾಂಪಿಯನ್‌ಷಿಪ್‌ ಮುಗಿಸಿದ್ದು 25ನೇ ಸ್ಥಾನದಲ್ಲಿ. ಅಗ್ರ ಕ್ರಮಾಂಕದ ಕಾರ್ಲ್‌ಸನ್‌ ಇಲ್ಲಿ ಸತತ ಎರಡನೇ ಬಾರಿ ಕಿರೀಟ ಧರಿಸಿದರು. 2014ರಲ್ಲಿ ದುಬೈನಲ್ಲಿ ನಡೆದ ಈ ಕೂಟದಲ್ಲೂ ನಾರ್ವೆಯ ಆಟಗಾರ ವಿಶ್ವ ಚಾಂಪಿಯನ್‌ ಆಗಿದ್ದರು. ಇದರ ಬೆನ್ನಲ್ಲೇ ನಡೆದ ಬ್ಲಿಟ್ಜ್‌ ಮಾದರಿಯ ಚಾಂಪಿಯನ್‌ಷಿಪ್‌ನಲ್ಲಿ ಆನಂದ್‌ 22ನೇ ಸ್ಥಾನಕ್ಕೆ ಸರಿದರು. ನಾಲ್ವರು ಆಟಗಾರರ ರೌಂಡ್‌ರಾಬಿನ್‌ ಲೀಗ್‌ ಮಾದರಿಯ ಬಿಲ್ಬಾವೊ ಚೆಸ್‌ ಟೂರ್ನಿಯಲ್ಲಿ ಅವರು ಮೂರನೇ ಸ್ಥಾನಕ್ಕಿಳಿದರು. ಅಲ್ಲೂ ಕೆಲವು ರೇಟಿಂಗ್‌ ಪಾಯಿಂಟ್ಸ್‌ ಕಳೆದುಕೊಂಡರು. ಈ ಹಿನ್ನಡೆಯ ನಂತರ ಲಂಡನ್‌ ಚೆಸ್‌ ಕ್ಲಾಸಿಕ್‌ನಲ್ಲಿ ಅವರು ಪ್ರದರ್ಶನದ ಮಟ್ಟ ಕೆಳಗಿಳಿಯುತ್ತ ಹೋಯಿತು. ಗ್ರ್ಯಾಂಡ್‌ ಚೆಸ್‌ ಸಿರೀಸ್‌ನ ಕೊನೆಯ ಭಾಗವಾಗಿದ್ದ ಲಂಡನ್‌ ಕ್ಲಾಸಿಕ್‌ ಚೆಸ್‌ನಲ್ಲಿ ಅವರು ಪೂರ್ಣ ಅಂಕ ಪಡೆದಿದ್ದು ಒಮ್ಮೆ ಮಾತ್ರ. ಐದು ಪಂದ್ಯಗಳಲ್ಲಿ ‘ಡ್ರಾ’ಕ್ಕೆ ತೃಪ್ತಿಪಟ್ಟ ಭಾರತದ ಆಟಗಾರ, ಮೂರು ಪಂದ್ಯಗಳಲ್ಲಿ ಎದುರಾಳಿಗಳಿಗೆ ಶರಣಾಗಬೇಕಾಯಿತು. ಅವರು ಇಲ್ಲಿನ ‘ಸಾಧಾರಣ’ ಮಟ್ಟದ ನಿರ್ವಹಣೆಯಿಂದ 11 ರೇಟಿಂಗ್‌ ಪಾಯಿಂಟ್‌ಗಳನ್ನು ಕಳೆದುಕೊಂಡರು. ಆನಂದ್‌ ಕೇವಲ ಒಂದು ವರ್ಷದ ಹಿಂದೆ (2014 ಡಿಸೆಂಬರ್‌) ಇದೇ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು ಎನ್ನುವುದು ಗಮನಾರ್ಹ. ಯುವ ಪಡೆ ಕಳೆದ ಕೆಲವು ವರ್ಷಗಳಿಂದ ಕಾರ್ಲ್‌ಸನ್‌ ಜೊತೆಗೆ ಇತರ ಕೆಲವು ಯುವ ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರಲ್ಲಿ ಇಟಲಿಯ ಫ್ಯಾಬಿಯಾನ ಕರುವಾನಾ, ಅರ್ಮೆನಿಯದ ಲೆವೊನ್‌ ಅರೋನಿಯನ್‌, ರಷ್ಯಾದ ಅಲೆಕ್ಸಾಂಡರ್‌ ಗ್ರಿಶ್ಚುಕ್‌, ಸೆರ್ಗೆಯಿ ಕರ್ಯಾಕಿನ್‌, ನೆದರ್ಲೆಂಡ್ಸ್‌ನ ಅನಿಶ್‌ ಗಿರಿ, ಅಮೆರಿಕದ ವೆಸ್ಲಿ ಸೊ, ಹಿಕಾರು ನಕಾಮುರಾ, ಫ್ರಾನ್ಸ್‌ನ ಮ್ಯಾಕ್ಸಿಮ್‌ ವ್ಯಾಕಿಯರ್‌ ಲ್ಯಾಗ್ರೆವ್‌, ಎಟಿನೆ ಬ್ಯಾಕ್ರೊಟ್‌ ಪ್ರಮುಖರು. ಇವರಲ್ಲಿ ಕೆಲವರ ವಯಸ್ಸು ಆನಂದ್‌ ಅವರ ಅರ್ಧದಷ್ಟು! ಕೆಲವು ಯುವ ಆಟಗಾರರು ಈಗಾಗಲೇ ವಿವಿಧ ಮಾದರಿಯ ಚೆಸ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಯಸ್ಸಿನ ಜೊತೆಗೆ ಯುವ ಆಟಗಾರರ ಪೈಪೋಟಿಯನ್ನು ಆನಂದ್‌ ಹೇಗೆ ಎದುರಿಸುತ್ತಾರೆ ಎಂಬ ಕುತೂಹಲ ಈ ವರ್ಷವೂ ಮುಂದುವರಿಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.