ಭಾರತದ ಮೊದಲ ಸರ್ಫಿಂಗ್‌ ರಾಣಿ ಇಶಿತಾ ಭಾರತದ ಮಟ್ಟಿಗೆ ಅಪರಿಚಿತ ಕ್ರೀಡೆಯೇ ಆಗಿರುವ ಸರ್ಫಿಂಗ್‌ನಲ್ಲಿ ಇಶಿತಾ ಮಾಳವಿಯ ಎತ್ತರದ ಸಾಧನೆ ಮಾಡಿದ್ದಾರೆ. ಮೂಲತಃ ಮುಂಬೈಯವರಾದ ಇವರು ಒಂದು ದಶಕದಿಂದ ಕನ್ನಡ ಕರಾವಳಿಯಲ್ಲಿ ಬೆರೆತು ಹೋಗಿದ್ದಾರೆ. ನೀಲ ಕಡಲ ಅಲೆಗಳ ಮೇಲೆ ಕಾಲಿಗೆ ‘ಸರ್ಫಿಂಗ್‌ ಬೋರ್ಡ್‌’ ಕಟ್ಟಿಕೊಂಡು ಸಾಹಸ ನಡೆಸುವವರನ್ನು ಟೆಲಿವಿಷನ್‌ನಲ್ಲಿ ಕಂಡಿದ್ದೇವೆ. ಈ ಕಸರತ್ತು ನಡೆಸುವವರಲ್ಲಿ ಹೆಚ್ಚು ಮಂದಿ ಅಮೆರಿಕ, ಆಸ್ಟ್ರೇಲಿಯ, ಯೂರೋಪ್‌ಗೆ ಸೇರಿದವರು ಎನ್ನುವುದೂ ನಿಜ. ಭಾರತದಲ್ಲಿಯೂ ಸರ್ಫಿಂಗ್‌ ಚಟುವಟಿಕೆ ಇದೆ. ಸುಮಾರು ನೂರಕ್ಕೂ ಹೆಚ್ಚು ಮಂದಿ ಇಂತಹ ಸಾಹಸಿಗಳಿದ್ದಾರೆ. ಇಶಿತಾ ಮಾಳವಿಯ ಎಂಬ ಯುವತಿ ಭಾರತದ ಮೊಟ್ಟ ಮೊದಲ ವೃತ್ತಿ ಪರ ಸರ್ಫರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂಬೈಯ ಇವರು ಮಣಿಪಾಲದಲ್ಲಿ ಪತ್ರಿಕೋದ್ಯಮ ಶಿಕ್ಷಣ ಪಡೆದ ನಂತರ ತಮ್ಮ ಗೆಳೆಯ ತುಷಾರ್‌ ಪತಿಯಾನ್‌ ಜತೆಗೆ ಸೇರಿಕೊಂಡು ಉಡುಪಿಗೆ ಸಮೀಪದ ಕೋಡಿಬೆಂಗ್ರೆಯಲ್ಲಿ ಸರ್ಫಿಂಗ್‌ ಕ್ಲಬ್‌ ಹುಟ್ಟು ಹಾಕಿದ್ದಾರೆ. ಒಂಬತ್ತು ವರ್ಷಗಳಿಂದ ಸರ್ಫಿಂಗ್‌ನಲ್ಲೇ ತೊಡಗಿಕೊಂಡಿದ್ದಾರೆ. ಇವರ ಜತೆಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ. * ಸರ್ಫಿಂಗ್‌ ಕ್ರೀಡೆಯ ಬಗ್ಗೆ ನಿಮಗೆ ಆಸಕ್ತಿ ಮೂಡಿದ್ದು ಯಾವಾಗ ? ನನ್ನ ಬಾಲ್ಯ ಜೀವನದಲ್ಲಿ ಸರ್ಫಿಂಗ್‌ ಕುರಿತು ಕನಸೂ ಕಂಡಿರಲಿಲ್ಲ. ಉನ್ನತ ವ್ಯಾಸಂಗಕ್ಕೆಂದು ಮಣಿಪಾಲದಲ್ಲಿದ್ದಾಗ ಈ ಬಗ್ಗೆ ಮೊದಲ ಬಾರಿಗೆ ನನಗೆ ಗೊತ್ತಾಯಿತು. ಜರ್ಮನಿಯ ಜಾನ್‌ ಎಂಬ ವಿದ್ಯಾರ್ಥಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಸರ್ಫಿಂಗ್‌ ಆಸಕ್ತರ ಗುಂಪೊಂದು ಇದೆ ಎಂದು ನನಗೆ ತಿಳಿಸಿದರು. ಗೆಳೆಯ ತುಷಾರ್‌ ಪತಿಯಾನ್‌ ಜತೆಗೆ ಮೂಲ್ಕಿಯ ‘ಸರ್ಫ್‌ ಆಶ್ರಮ’ಕ್ಕೆ ಭೇಟಿ ನೀಡಿದೆ. ಆ ಆಶ್ರಮವನ್ನು ಹುಟ್ಟು ಹಾಕಿದ್ದು ಅಮೆರಿಕಾದ ಜಾಕ್‌ ಹೆಬ್ನೆರ್‌ ಎಂಬುವವರು. ಇವರು ಕಟ್ಟಿದ ಕ್ಲಬ್‌ನ ಹೆಸರು ಮಂತ್ರ ಸರ್ಫ್ ಕ್ಲಬ್‌. ಇದು ಭಾರತದ ಮೊದಲ ಸರ್ಫ್ ಕ್ಲಬ್‌. ಸ್ಥಳೀಯರು ಇವರನ್ನು ಸರ್ಫಿಂಗ್‌ ಸ್ವಾಮಿ ಎಂದೇ ಕರೆಯುತ್ತಾರೆ. ನಮಗೂ ಈ ಕ್ರೀಡೆಯನ್ನು ಹೇಳಿಕೊಡುತ್ತೀರಾ ಎಂದು ಕೇಳಿದಾಗ, ಅತೀವ ಉತ್ಸಾಹದಿಂದ ಸರ್ಫಿಂಗ್‌ ಅ..ಆ.. ಇ..ಈ... ಹೇಳಿಕೊಟ್ಟರು. ಉಕ್ಕುವ ಅಲೆಯ ಮೇಲೆ ನಾನು ಮೊದಲ ಬಾರಿಗೆ ತೇಲಿದ ನೆನಪು ಇವತ್ತಿಗೂ ರೋಮಾಂಚಕವೇ. ಅಲ್ಲಿಂದ ಈವರೆಗೆ ಹಿಂತಿರುಗಿ ನೋಡಿಲ್ಲ. * ನೀವು ಸರ್ಫಿಂಗ್‌ ಬಗ್ಗೆ ಆಸಕ್ತಿ ತೋರಿದಾಗ ಮನೆಯಲ್ಲಿ ಪೋತ್ಸಾಹ ಸಿಕ್ಕಿತೇ ? ಆರಂಭದಲ್ಲಿ ತೀವ್ರವಾಗಿ ವಿರೋಧಿಸಿದರು. ಸರ್ಫಿಂಗ್‌ ಬೋರ್ಡ್ ಖರೀದಿಸಲು ಹಣ ನೀಡಲಿಲ್ಲ. 2007ರ ಬೇಸಿಗೆಯಲ್ಲಿ ನಾನು ಮತ್ತು ತುಷಾರ್‌ ನಮ್ಮ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ಮಾರಾಟ ಮಾಡಿದೆವು. ಅದಕ್ಕೆ ಉಳಿತಾಯದ ಹಣವನ್ನೂ ಸೇರಿಸಿ ಒಂದು ಸರ್ಫಿಂಗ್‌ ಬೋರ್ಡ್‌ ಖರೀದಿಸಿದೆವು. ಅಂದು ಆ ಬೋರ್ಡ್‌ಗೆ ₹ 10 ಸಾವಿರ ಇತ್ತು. ಇಂದು ಅಂತಹದೇ ಬೋರ್ಡ್‌ಗೆ ಸುಮಾರು ₹ ಒಂದು ಲಕ್ಷ ಬೆಲೆ ಇದೆ. * ಸರ್ಫಿಂಗ್‌ ಅಭ್ಯಾಸದ ಮೊದಲ ದಿನಗಳು ಹೇಗಿದ್ದವು ? ಮೊದಲಿಗೆ ಈ ಕ್ರೀಡೆಯ ಬಗ್ಗೆ ಆಸಕ್ತಿ ಇರುವ ಹತ್ತು ಜನರ ಗುಂಪು ಮಾಡಿಕೊಂಡೆವು. ಎಲ್ಲರೂ ಒಗ್ಗೂಡಿ ಮೂಲ್ಕಿಗೆ ಹೋಗಿ ಅಭ್ಯಾಸ ನಡೆಸಿ ಬರುತ್ತಿದ್ದೆವು. ಕೆಲವೇ ವಾರಗಳಲ್ಲಿ 3ರಿಂದ 4 ಮಂದಿಯಲ್ಲಷ್ಟೇ ಆಸಕ್ತಿ ಉಳಿಯಿತು. ಇತರರು ವಿವಿಧ ಕಾರಣ ನೀಡಿ ಬರುತ್ತಿರಲಿಲ್ಲ. ಕೊನೆಗೆ ನಾವೇ ಕೆಲವರು ಸೇರಿಕೊಂಡು ಉಡುಪಿಗೆ ಸಮೀಪ ಇರುವ ಕೋಡಿಬೆಂಗ್ರೆ ಬಳಿ ಶಾಖಾ ಸರ್ಫ್ ಕ್ಲಬ್‌ ಹುಟ್ಟು ಹಾಕಿದೆವು. ಅಭ್ಯಾಸ ನಡೆಸತೊಡಗಿದೆವು. 2007ರಿಂದ 2011ರವರೆಗಿನ ನಮ್ಮ ವಿದ್ಯಾರ್ಥಿ ಜೀವನದಲ್ಲಿ ನಾನು ಮತ್ತು ತುಷಾರ್‌ ಕೋಡಿಬೆಂಗ್ರೆಯ ಬಳಿ ಕಡಲಲ್ಲಿ ಕಾಲಿಗೆ ಬೋರ್ಡ್ ಕಟ್ಟಿಕೊಂಡು ಸಾಹಸ ನಡೆಸಿದ್ದೇ ಹೆಚ್ಚು. * ಶಿಕ್ಷಣ ಮುಗಿದ ಮೇಲೆ ಉದ್ಯೋಗ ಪಡೆಯಲು ಪ್ರಯತ್ನಿಸಲಿಲ್ಲವೇ ? ನಾನು ಪತ್ರಿಕೋದ್ಯಮದಲ್ಲಿ ಪದವಿ ಪಡೆದರೆ, ತುಷಾರ್‌ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದರು. ನಮಗಿಬ್ಬರಿಗೂ ನಾವು ಓದಿದ ವಿಷಯದಲ್ಲಿಯೇ ವೃತ್ತಿ ನಡೆಸುವ ಆಸಕ್ತಿ ಒಂದಿನಿತೂ ಇರಲಿಲ್ಲ. ಸರ್ಫಿಂಗ್‌ ಚಟುವಟಿಕೆಯಲ್ಲೇ ಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದೆವು. ದೇಶ ವಿದೇಶಗಳಲ್ಲಿ ಪ್ರವಾಸ ನಡೆಸಿ, ಸರ್ಫಿಂಗ್‌ ನಲ್ಲಿ ತೊಡಗಿಕೊಂಡಿರುವವರೊಡನೆ ಸಂವಾದ ನಡೆಸಿದೆವು. ಇದರಲ್ಲೇ ಮುಂದುವರಿಯಬೇಕೆಂಬ ಗಟ್ಟಿ ನಿರ್ಧಾರಕ್ಕೆ ಬಂದು ಬಿಟ್ಟೆವು. * ನಿಮ್ಮ ಈ ನಿರ್ಧಾರಕ್ಕೆ ಪ್ರೋತ್ಸಾಹಕವಾದ ಯಾವುದಾದರೂ ಘಟನೆ ನಡೆಯಿತೆ ? ಹೌದು, ಅದನ್ನು ನೆನೆಯುವಾಗಲೇ ಖುಷಿಯಾಗುತ್ತಿದೆ, ನೋಡಿ. 2012ರ ಮೇ ಅಥವಾ ಜೂನ್‌ ತಿಂಗಳಿರಬೇಕು. ಅಮೆರಿಕಾದ ಸರ್ಫಿಂಗ್‌ ಪಟುವೂ ಆಗಿರುವ ಚಲನಚಿತ್ರ ನಿರ್ದೇಶಕಿ ಕ್ರಿಸ್ಟಲ್ ತೋನ್‌ಬರ್ಗ್ ಹೋಮ್ಸಿ ಅವರು ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದರು. ‘ಭಾರತದ ಮಹಿಳಾ ಸರ್ಫಿಂಗ್‌ ಪಟುಗಳ ಕುರಿತು ಚಲನಚಿತ್ರವನ್ನು ತಯಾರಿಸುವ ಉದ್ದೇಶವಿದೆ. ಆಸಕ್ತಿ ಇದ್ದರೆ ಕೇರಳದಲ್ಲಿ ಡಿಸೆಂಬರ್‌ ತಿಂಗಳಲ್ಲಿ ನಮ್ಮ ತಂಡವನ್ನು ಸೇರಿಕೊಳ್ಳಬಹುದು’ ಎಂದು ಅವರು ನನಗೆ ತಿಳಿಸಿದರು. ನಾನು ತಕ್ಷಣ ಒಪ್ಪಿದೆ. * ಆ ಚಲನಚಿತ್ರ ತಂಡದೊಡನೆ ನಿಮ್ಮ ಅನುಭವ ಹೇಗಿತ್ತು ? ಅಂತರರಾಷ್ಟ್ರೀಯ ಮಹಿಳಾ ಸರ್ಫರ್‌ಗಳ ಗುಂಪು ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿತ್ತು. ಆಸ್ಟ್ರೇಲಿಯಾದ ಲಾರೆನ್‌ ಹಿಲ್, ಅಮೆರಿಕಾದ ಕ್ರಿಸ್ಟಲ್‌ ಹೋಮ್ಸಿ, ಲಿಜ್‌ ಕ್ಲಾರ್ಕ್, ಎಮಿ ಕೊಚ್‌, ಕಾಟೆ ಬಾಲ್ಡ್‌ವಿನ್‌ ಮುಂತಾದವರಿದ್ದರು. ನಾನೂ ತಂಡವನ್ನು ಸೇರಿಕೊಂಡೆ. ಈ ತಂಡ 2013ರ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ದಕ್ಷಿಣ ಭಾರತದ ಪಡುವಣ ಕಡಲಿನ ವಿವಿಧ ಕಡೆ ಚಿತ್ರೀಕರಣ ನಡೆಸಿತು. ಈ ಸಾಕ್ಷ್ಯಚಿತ್ರದ ಹೆಸರು ‘ಬಿಯಾಂಡ್‌ ದ ಸರ್‌ಫೇಸ್‌’. ಈ ಚಿತ್ರದ ಆಶಯ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹದ್ದಾಗಿದೆ. ಸರ್ಫಿಂಗ್‌, ಯೋಗ, ಪರಿಸರ ಸಂರಕ್ಷಣೆಯ ಚಿಂತನೆ ಯಾವ ರೀತಿ ಭೂಮಂಡಲದಲ್ಲಿ ಹೊಸ ಭರವಸೆ ತುಂಬಲಿದೆ ಎಂಬ ಸೂಕ್ಷ್ಮಗಳ ನವಿರಾದ ಭಾವ ಈ ಸಾಕ್ಷ್ಯ ಚಿತ್ರದಲ್ಲಿದೆ. ಈ ಅಂಶಗಳು ಸ್ಥಳೀಯರ ಬದುಕಿನಲ್ಲಿ ಮೂಡಿಸಬಹುದಾದ ಭರವಸೆಯ ಪರಿಕಲ್ಪನೆಯೂ ಈ ಚಿತ್ರದಲ್ಲಿದೆ. ಈ ಚಿತ್ರ ತಂಡದೊಡನೆ ಓಡಾಟ ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳಾಗಿವೆ. ತಂಡದೊಡನೆ ಕಳೆದ ಪ್ರತಿ ದಿನವೂ ರೋಮಾಂಚನವೇ. ಒಂದೇ ಒಂದು ದಿನವೂ ನನಗೆ ನೀರಸ ಎನಿಸಿರಲಿಲ್ಲ. * ವಿದೇಶದ ಸರ್ಫಿಂಗ್‌ ಲೋಕದಲ್ಲಿ ವಿಹರಿಸಿದ್ದೀರಾ ? ಹೌದು, ಅಮೆರಿಕ, ಆಸ್ಟ್ರೇಲಿಯ, ಮಲೇಷ್ಯಾ, ಶ್ರೀಲಂಕಾ ದೇಶಗಳ ಸರ್ಫಿಂಗ್‌ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೇನೆ. ಕ್ಯಾಲಿಫೋರ್ನಿಯ, ನ್ಯೂಯಾರ್ಕ್‌, ಹವಾಯ್‌ ಗಳಲ್ಲಿ ನಡೆಸಿದ ಸರ್ಫಿಂಗ್‌ ಅದ್ಭುತವಾಗಿತ್ತು. * ಭಾರತದ ಸರ್ಫಿಂಗ್‌ ಲೋಕದ ಬಗ್ಗೆ ನಿಮಗೇನನ್ನಿಸುತ್ತದೆ ? ಭಾರತದ ಕಡಲ ಕಿನಾರೆಗಳಲ್ಲಿ ಕೆಲವು ಅದ್ಭುತವಾದ ಸರ್ಫಿಂಗ್‌ ತಾಣಗಳಿವೆ. ವರ್ಷದ ಪ್ರತಿ ದಿನವೂ ದೊಡ್ಡ ಅಲೆಗಳಿರುವ ಕಡಲ ತೀರಗಳೂ ಇವೆ. ನಿಧಾನಗತಿಯಲ್ಲಿ ಸರ್ಫಿಂಗ್‌ ನಡೆಸುವವರಿಗೆ, ವೇಗವಾಗಿ ನಡೆಸುವವರಿಗೆ, ಹೊಸದಾಗಿ ಕಲಿಯುವವರಿಗೆ ಅಗತ್ಯವಾದ ತಾಣಗಳೂ ಇವೆ. ಭಾರತದಲ್ಲಿ ಸುಮಾರು 7,500 ಕಿ.ಮೀ. ಉದ್ದದ ಕಡಲ ತೀರ ಇದೆ. ಆದರೆ ಈ ಪ್ರದೇಶಗಳಲ್ಲಿ ಸರ್ಫಿಂಗ್‌ ಸಾಧ್ಯತೆಗಳ ಬಗ್ಗೆ ನಾವು ಯೋಚಿಸಿಯೇ ಇಲ್ಲ. ಈ ಕ್ರೀಡೆಗೆ ಇಲ್ಲಿ ಅಪಾರ ಅವಕಾಶಗಳಿವೆ. ಇವತ್ತು ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಸುಮಾರು ನೂರು ಮಂದಿ ಸರ್ಫರ್‌ಗಳಿರಬಹುದಷ್ಟೆ. ಎಲ್ಲರೂ ಎಲ್ಲರಿಗೂ ಪರಸ್ಪರ ಪರಿಚಯ. * ಭಾರತದ ಮೊದಲ ಮಹಿಳಾ ವೃತ್ತಿಪರ ಸರ್ಫರ್‌ ಎಂಬ ಹೆಗ್ಗಳಿಕೆ ನಿಮ್ಮದು ? ಒಮ್ಮೊಮ್ಮೆ ಇದೆಲ್ಲಾ ಕನಸಿರಬಹುದೇ ಎಂದೆನಿಸುತ್ತದೆ. ಏಕೆಂದರೆ ಇಂತಹದ್ದೊಂದು ಸಾಧನೆಯ ಬಗ್ಗೆ ಬಲು ಹಿಂದೆ ನಾನು ಯೋಚಿಸಿಯೂ ಇರಲಿಲ್ಲ. ನನ್ನ ಬದುಕು ಇಂತಹದ್ದೊಂದು ಹಾದಿಯಲ್ಲಿ ಸಾಗಿದ್ದು ಮಾತ್ರ ಸಾರ್ಥಕ ಎಂದು ಕೊಳ್ಳುತ್ತೇನೆ. ಹಿಂದಿನ ಜನ್ಮದಲ್ಲಿ ನಾನು ಪುಣ್ಯದ ಕೆಲಸ ಮಾಡಿರಬೇಕು. ಅದಕ್ಕೇ ಈ ಜನ್ಮದಲ್ಲಿ ನಾನು ಇಂತಹದ್ದೊಂದು ರೋಚಕ ಜೀವನ ನಡೆಸುತ್ತಿದ್ದೇನೆ ಎಂದುಕೊಂಡಿದ್ದೇನೆ. * ಸರ್ಫಿಂಗ್‌ ಸ್ವರ್ಧಾಕೂಟಗಳಲ್ಲಿ ಪಾಲ್ಗೊಂಡಿದ್ದೀರಾ ? ಹೌದು, ಭಾರತ ಸರ್ಫಿಂಗ್‌ ಫೆಡರೇಷನ್‌ ಪ್ರತಿ ವರ್ಷವೂ ರಾಷ್ಟ್ರೀಯ ಸ್ವರ್ಧಾಕೂಟಗಳನ್ನು ಸಂಘಟಿಸುತ್ತದೆ. ಮೇ ತಿಂಗಳ ಕೊನೆಯ ವಾರ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕೂಟದಲ್ಲಿ ನಾನು ಸ್ವರ್ಧಿಸಲಿದ್ದೇನೆ. * ಸಾಹಸಮಯ ಸರ್ಫಿಂಗ್‌ ಬದುಕು ನಿಮ್ಮ ಜೀವನದ ದೃಷ್ಟಿಕೋನವನ್ನೇ ಬದಲಿಸಿರಬೇಕಲ್ಲ ? ನಗರಕ್ಕೆ ತೆರಳಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕಚೇರಿಗಳಲ್ಲಿ ಕೆಲಸ ಮಾಡಿಕೊಂಡು, ಸರ್ಫಿಂಗ್‌ ಅಭ್ಯಾಸ ನಡೆಸಲು ಸಾಧ್ಯವೇ ಇಲ್ಲ ಎಂಬ ವಾಸ್ತವ ಕಂಡುಕೊಂಡೆ. ಹೀಗಾಗಿ ನಾನು ಮತ್ತು ತುಷಾರ್‌ ಒಗ್ಗೂಡಿ ಶಾಕಾ ಸರ್ಫ್‌ ಕ್ಲಬ್‌ ಕಟ್ಟಿ ಕಡಲ ಬದುಕಿನಲ್ಲಿ ಕನಸು ಕಾಣತೊಡಗಿದೆವು. ಹೆಚ್ಚು ಮಂದಿಯನ್ನು ಈ ಕಡಲ ಕ್ರೀಡೆಯತ್ತ ಆಕರ್ಷಿಸುವುದು ಇದೀಗ ನಮ್ಮ ಹೆಗ್ಗುರಿಯಾಗಿದೆ. ಸಾಗರದ ಬಗ್ಗೆ ಜನರಿಗೆ ಇರುವ ಭಯವನ್ನು ಹೋಗಲಾಡಿಸಿ, ಕಡಲಿನ ಜತೆಗೆ ಬೆರೆತು ಬಾಳುವ ಕನಸನ್ನು ಅವರಲ್ಲಿ ಅರಳಿಸುವ ಕೆಲಸದಲ್ಲಿ ನಾವೀಗ ತೊಡಗಿಕೊಂಡಿದ್ದೇವೆ. * ಸ್ಥಳೀಯರೊಂದಿಗೆ ನಿಮ್ಮ ಸಂಬಂಧ ಹೇಗಿದೆ ? ಕೋಡಿಬೆಂಗ್ರೆ ಪ್ರದೇಶದ ಮೀನುಗಾರರ ಕುಟುಂಬದ ಅನೇಕ ಹೆಣ್ಣುಮಕ್ಕಳಿಗೆ ನಾವು ಈ ಕ್ರೀಡೆಯ ಬಗ್ಗೆ ಅರಿವು ಮೂಡಿಸಿದ್ದೇವೆ. ಅವರೂ ನಮ್ಮೊಡನೆ ಕಡಲಿಗೆ ಇಳಿಯುತ್ತಾರೆ. ಕೆಲವರು ಇದೀಗ ನಿತ್ಯವೂ ನಮ್ಮೊಡನೆ ಅಭ್ಯಾಸಕ್ಕೆ ಬರುತ್ತಾರೆ. ದೊಡ್ಡ ನಗರಗಳ ಮಂದಿಗೆ ಇದು ಸಾಧ್ಯವಿಲ್ಲ. ಅವರೆಲ್ಲಾ ವಾರಾಂತ್ಯದಲ್ಲಿ ಮನರಂಜನೆಗೆ ಕಾಲಿಗೆ ಸರ್ಫಿಂಗ್‌ ಬೋರ್ಡ್‌ ಕಟ್ಟಿಕೊಂಡು ತೀರದಲ್ಲಿ ಒಂದಷ್ಟು ಓಡಾಡಿ ವಾಪಾಸಾಗಿಬಿಡುತ್ತಾರಷ್ಟೆ. ಕಡಲಿನಲ್ಲಿ ಬಿಸಿಲಲ್ಲಿ ಹೆಚ್ಚು ಹೊತ್ತು ಕಳೆಯುವುದರಿಂದ ಮೈಬಣ್ಣ ಒಂದಷ್ಟು ಕಪ್ಪಗಾಗುತ್ತದೆ, ನಿಜ. ನಮ್ಮಲ್ಲಿ ಕಪ್ಪು ಬಣ್ಣ ಸುಂದರವಲ್ಲ ಎಂಬ ಭ್ರಮೆ ಇರುವುದರಿಂದ ಇಲ್ಲಿ ಬಹಳಷ್ಟು ಹೆಣ್ಣು ಮಕ್ಕಳು ಈ ಕ್ರೀಡೆಗೆ ಬರಲು ಹಿಂದೇಟು ಹಾಕುವುದನ್ನು ನಾನು ಕಂಡುಕೊಂಡಿದ್ದೇನೆ. * ಭವಿಷ್ಯದಲ್ಲಿ ಇನ್ನೇನು ಯೋಜನೆಗಳನ್ನಿಟ್ಟುಕೊಂಡಿದ್ದೀರಿ ? ಹೆಚ್ಚು ಹೆಚ್ಚು ಪ್ರವಾಸ ನಡೆಸಬೇಕು. ಜಗತ್ತಿನಾದ್ಯಂತ ವಿಭಿನ್ನ ಅಲೆಗಳಲ್ಲಿ ಸರ್ಫಿಂಗ್‌ ನಡೆಸಬೇಕು. ಉತ್ತಮ ಚಲನಚಿತ್ರಗಳನ್ನು ನಿರ್ಮಿಸಬೇಕು. ಸರ್ಫಿಂಗ್‌ ಸ್ವರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಗೆಲ್ಲಬೇಕು... ‘ಇಂಡಿಯಾ ಸರ್ಫ್‌ ಸ್ಟೋರಿ’ ಇಶಿತಾ ಮಾಳವಿಯ, ತುಷಾರ್‌ ಪತಿಯಾನ್‌ ಮತ್ತು ಕ್ರಿಸ್‌ ಮಖೀಜಾ ಒಗ್ಗೂಡಿ ‘ಎ ರೈಸಿಂಗ್‌ ಟೈಡ್‌; ಇಂಡಿಯಾ ಸರ್ಫ್‌ ಸ್ಟೋರಿ’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ನೂರು ಕೋಟಿಗೂ ಹೆಚ್ಚಿನ ಜನಸಂಖ್ಯೆ ಇರುವ ಭಾರತದಲ್ಲಿ ಕೇವಲ ನೂರು ಮಂದಿಯಷ್ಟೇ ಸರ್ಫಿಂಗ್‌ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಸಾಹಸಿಗಳ ಭಾವ, ಬದುಕಿನ ಮಾಹಿತಿ ಈ ಚಿತ್ರದಲ್ಲಿದೆ. ಭಾರತದ ಸರ್ಫಿಂಗ್‌ ಚಟುವಟಿಕೆ ಕುರಿತ ಮೊದಲ ಸಾಕ್ಷ್ಯ ಚಿತ್ರ ಇದು. ಜಾಕ್‌ ಹೆಬ್ನೆರ್‌, ಮುಖೇಶ್‌ ಪಂಜನಾಥನ್‌, ವೇಲು ಮುರುಗನ್‌, ಸತ್ಯರಾಜ್‌ ದಾಸ್‌, ತುಷಾರ್‌ ಪತಿಯಾನ್‌, ಇಶಿತಾ ಮಾಳವಿಯ, ಕಿಶೋರ್‌ ಕುಮಾರ್‌, ಕಿರಣ್‌ ಕುಮಾರ್‌, ಸ್ಪಂದನ್‌ ಬ್ಯಾನರ್ಜಿ, ರಾಹುಲ್‌ ಮಲಾನಿ, ಶಮಂತ್‌ ಕುಮಾರ್‌, ಮೂರ್ತಿ ಮೇಘವನ್‌, ಕಲ್ಯಾಣ್‌ ರೈತಿ, ಅನುದೀಪ್‌ ಮುಂತಾದವರ ಹೆಜ್ಜೆಜಾಡುಗಳ ಬಣ್ಣನೆ ಈ ಸಾಕ್ಷ್ಯಚಿತ್ರದಲ್ಲಿವೆ. ‘ಬೈರನ್‌ ಬೇ ಸರ್ಫ್‌ ಫೆಸ್ಟಿವಲ್‌ 2014’ರಲ್ಲಿ ಈ ಸಾಕ್ಷ್ಯ ಚಿತ್ರಕ್ಕೆ ಮೂರನೇ ಬಹುಮಾನ ಬಂದಿತ್ತು. ಒಲಿಂಪಿಕ್ಸ್‌ ಹಾದಿಯಲ್ಲಿ ಸರ್ಫಿಂಗ್‌... ಟೋಕಿಯೊ ನಗರದಲ್ಲಿ 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಸರ್ಫಿಂಗ್‌ ಸ್ವರ್ಧೆಗಳನ್ನು ನೋಡಬಹುದಾದ ಸಾಧ್ಯತೆ ಬಹಳಷ್ಟಿದೆ. ಒಲಿಂಪಿಕ್ಸ್‌ನಲ್ಲಿ ಸರ್ಫಿಂಗ್‌ ಇರಬೇಕೆಂಬ ಬಗ್ಗೆ ಒತ್ತಡ ಇಂದು ನಿನ್ನೆಯದೇನಲ್ಲ. 1992ರಲ್ಲಿಯೇ ಅಂತರರಾಷ್ಟ್ರೀಯ ಸರ್ಫಿಂಗ್‌ ಸಂಸ್ಥೆಯು ಈ ಕುರಿತು ಒಲಿಂಪಿಕ್‌ ಸಮಿತಿಯಲ್ಲಿ ಪ್ರಸ್ತಾಪವಾಗುವಂತೆ ನೋಡಿಕೊಂಡಿತ್ತು. ಆ ನಂತರ ಪ್ರತಿ ಒಲಿಂಪಿಕ್ಸ್‌ ಸಂದರ್ಭದಲ್ಲಿಯೂ ಈ ಕ್ರೀಡೆ ಒಲಿಂಪಿಕ್ಸ್‌ನಲ್ಲಿ ಇರಬೇಕಿತ್ತು ಎಂಬ ಧ್ವನಿ ಕೇಳಿ ಬರುತ್ತಲೇ ಇದೆ. ಅಂತರರಾಷ್ಟ್ರೀಯ ಸರ್ಫಿಂಗ್‌ ಸಂಸ್ಥೆಯ ಅಧ್ಯಕ್ಷ ಫರ್ನಾಂಡೊ ಅಗ್ಯುರೆ ಅವರು ಒಲಿಂಪಿಕ್‌ ಸಮಿತಿಯ ಮನವೊಲಿಸಲಿಕ್ಕಾಗಿ ಕಳೆದ ಒಂದು ದಶಕದಿಂದ ಪ್ರಯತ್ನಿಸುತ್ತಿದ್ದಾರೆ. ಫರ್ನಾಂಡೊ ಅವರು ಹೇಳುವಂತೆ ‘ಈ ಕ್ರೀಡೆ ನೂರು ದೇಶಗಳಲ್ಲಿ ಜನಪ್ರಿಯವಾಗಿದೆ. ಕೇವಲ ಹತ್ತಿಪ್ಪತ್ತು ದೇಶಗಳಲ್ಲಿ ಆಡುವ ಕೆಲವು ಕ್ರೀಡೆಗಳು ಒಲಿಂಪಿಕ್ಸ್ ಚೌಕಟ್ಟಿನೊಳಗೆ ಸ್ಥಾನ ಪಡೆದಿರುವಾಗ ಸರ್ಫಿಂಗ್‌ಗೆ ಅವಕಾಶ ಸಿಗಲೇ ಬೇಕಲ್ಲ’. ಈ ಎಲ್ಲಾ ಒತ್ತಡಗಳ ನಡುವೆ ಇದೀಗ ಸರ್ಫಿಂಗ್‌ ಕ್ರೀಡೆ ಒಲಿಂಪಿಕ್ಸ್‌ ಹೆಬ್ಬಾಗಿಲ ಲ್ಲಿ ನಿಂತಿದೆ. 2016ರ ಆಗಸ್ಟ್‌ನಲ್ಲಿ ರಿಯೋ ಡಿ ಜನೈರೊ ನಗರದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ 129ನೇ ಮಹಾಧಿವೇಶನ ನಡೆಯಲಿದೆ. ಅಲ್ಲಿನ ಕಾರ್ಯಸೂಚಿಯಲ್ಲಿ ಸರ್ಫಿಂಗ್‌ ಕುರಿತ ಪ್ರಸ್ತಾಪವಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆಯನ್ನು ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಅಲ್ಲಿ ಹಸಿರು ನಿಶಾನೆ ಸಿಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.