ರಿಯೊದಲ್ಲಿ ಬೆಳಗುವರೆ ದೀಪಾ? ‘ಈಗ ಆಗಿರುವುದು ಶೇ 20ರಷ್ಟು ಸಾಧನೆ. ಇನ್ನೂ ಶೇ 80ರಷ್ಟು ಬಾಕಿ ಇದೆ. ಅದಕ್ಕಾಗಿ ಕಠಿಣ ಅಭ್ಯಾಸ ಮಾಡುತ್ತೇನೆ. ಅತ್ಯುತ್ತಮವಾಗಿ ಆಡುತ್ತೇನೆ. ಫಲಿತಾಂಶ ಕಾದು ನೋಡೋಣ’– ರಿಯೊ ಡಿ ಜನೈರೊದಲ್ಲಿ ನಡೆಯುವ ಒಲಿಂಪಿಕ್ಸ್‌ನ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಪ್ರಪ್ರಥಮ ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಮಾತುಗಳಿವು. ತ್ರಿಪುರಾ ರಾಜ್ಯದ 22 ವರ್ಷದ ದೀಪಾ ಅವರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಸಾಧನೆ ಮಾಡುವ ಸಾಮರ್ಥ್ಯ ಇದೆ. ಆದರೆ, ಅದು ಸುಲಭಸಾಧ್ಯವಲ್ಲ ಎನ್ನುವುದು ಅವರಿಗೂ ಗೊತ್ತಿದೆ. ಆ ಹಾದಿಯಲ್ಲಿ ಎದುರಿಸಬೇಕಾದ ಸವಾಲುಗಳ ಬಗ್ಗೆಯೂ ಅರಿತುಕೊಂಡಿದ್ದಾರೆ. ಆದರೆ ಪದಕ ಗೆದ್ದೆ ಬಿಡುತ್ತೇನೆ ಎಂದು ಅತಿಯಾದ ಆತ್ಮವಿಶ್ವಾಸವನ್ನೂ ಅವರು ವ್ಯಕ್ತಪಡಿಸುವುದಿಲ್ಲ. ಒಂದೊಂದೆ ಮೆಟ್ಟಿಲು ಏರಿ ಗುರಿ ಮುಟ್ಟುವ ತಾಳ್ಮೆ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಏಕೆಂದರೆ, ವಿಶ್ವದ ಅತಿ ದೊಡ್ಡ ಕ್ರೀಡಾ ಹಬ್ಬ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವುದೆಂದರೆ ಅದು ಜಗತ್ತನ್ನೇ ಗೆದ್ದ ಸಂಭ್ರಮ. ಅಂತರರಾಷ್ಟ್ರೀಯ ಮಟ್ಟದ ಜಿಮ್ನಾಸ್ಟಿಕ್ಸ್‌ನಲ್ಲಿ ಭಾರತದ ಸಾಧನೆ ಅಷ್ಟಕ್ಕಷ್ಟೆ. ಪುರುಷರ ವಿಭಾಗದಲ್ಲಿ ಕಳೆದ 52 ವರ್ಷಗಳಲ್ಲಿ ಒಲಿಂಪಿಕ್ಸ್‌ಗೆ ಯಾರೂ ಅರ್ಹತೆ ಗಳಿಸಿಲ್ಲ. ಭಾರತೀಯ ಜಿಮ್ನಾಸ್ಟಿಕ್ಸ್‌ ಫೆಡರೇಷನ್ ಒಳಗಿನ ಜಟಾಪಟಿಗಳು ರಹಸ್ಯವಾಗಿಯೇನೂ ಉಳಿದಿಲ್ಲ. ಆದರೆ, ಇದೀಗ ದೀಪಾ ಅವರ ಸಾಧನೆಯಿಂದ ಇಡೀ ದೇಶವೇ ಜಿಮ್ನಾಸ್ಟಿಕ್ಸ್‌ ಕ್ರೀಡೆಯತ್ತ ನೋಡುವಂತಾಗಿದೆ. ಐಪಿಎಲ್‌ ಕ್ರಿಕೆಟ್ ಅಬ್ಬರದ ನಡುವೆಯೂ ಮಾಧ್ಯಮಗಳ ಗಮನವೂ ಜಿಮ್ನಾಸ್ಟಿಕ್ಸ್‌ನತ್ತ ಹರಿದಿದೆ. ಇದರಿಂದ ನಿರೀಕ್ಷೆ, ಒತ್ತಡಗಳು ಹೆಚ್ಚುವುದು ಸಹಜ. ಆದರೆ, ಇದೆಲ್ಲದರಿಂದ ಅವರು ದೂರವೇ ಉಳಿದಿದ್ದಾರೆ. ರಿಯೊ ಹಾದಿಯ ಸವಾಲುಗಳು ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಅತ್ಯಂತ ಕಠಿಣವಾದ ವಿಭಾಗ ವಾಲ್ಟ್. ಆದರೆ ಅದರಲ್ಲಿಯೇ ಇಲ್ಲಿಯವರೆಗೆ ದೀಪಾ ಉತ್ತಮ ಸಾಧನೆ ಮಾಡುತ್ತಿದ್ದಾರೆ. 2014ರ ಕಾಮನ್‌ವೆಲ್ತ್, 2015ರ ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಕಂಚಿನ ಪದಕದ ಸಾಧನೆಯನ್ನು ಅವರು ವಾಲ್ಟ್‌ನಲ್ಲಿಯೇ ಮಾಡಿದ್ದಾರೆ. ಅವರು ಒಲಿಂಪಿಕ್ಸ್‌ ಅರ್ಹತೆ ಪಡೆದಿರುವುದೂ ಇದೇ ವಿಭಾಗದಿಂದಲೇ. 15.066 ಅಂಕಗಳನ್ನು ಕಲೆ ಹಾಕಿದ್ದಾರೆ. 14 ಸ್ಪರ್ಧಿಗಳಿದ್ದ ವಿಭಾಗದಿಂದ ಅವರು ಅರ್ಹತೆ ಪಡೆದರು. 2012ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗಳಿಸಿದ್ದ ಅಮೆರಿಕ ಮೆಕ್‌ಕೈಲಾ ವಾಲ್ಟ್ ವಿಭಾಗದಲ್ಲಿ 15.800 ಪಾಯಿಂಟ್ಸ್‌ಗಳನ್ನು ಗಳಿಸಿದ್ದರು. ರೊಮೆನಿಯಾದ ಸಾಂದ್ರಾ ಇಜ್‌ಬೆಸಾ (15.316) ಮತ್ತು ರಷ್ಯಾದ ಮರಿಯಾ (15.049) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದ್ದರು. ದೀಪಾ ಈಗ ದಾಖಲಿಸಿರುವ ಅಂಕಗಳು ಮರಿಯಾ ಅವರ ಒಲಿಂಪಿಕ್ಸ್‌ ಸಾಧನೆಗಿಂತ ಕೊಂಚ ಹೆಚ್ಚು. ಆದರೆ, ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ ವಿಭಾಗದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಪ್ರತಿ ಬಾರಿಯೂ ಸ್ಪರ್ಧೆಗಳ ಅಂಕ ಗಳಿಕೆ ಮತ್ತು ಸಾಧನೆಯ ಮಟ್ಟ ಹೆಚ್ಚಿದೆ. ಆದ್ದರಿಂದ ಈ ಬಾರಿ ಚಿನ್ನ ಗಳಿಸುವ ಸ್ಪರ್ಧಿಯು ವಾಲ್ಟ್‌ನಲ್ಲಿ ಕನಿಷ್ಠ 16.00 ಪಾಯಿಂಟ್‌ಗಳಿಗಿಂತ ಹೆಚ್ಚು ಗಳಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅಪೇಕ್ಷಣೀಯ. ಈ ಕ್ರೀಡೆಯಲ್ಲಿ ಮೊದಲಿನಿಂದಲೂ ಪ್ರಾಬಲ್ಯ ಹೊಂದಿರುವ ಜಪಾನ್, ಚೀನಾ, ರಷ್ಯಾ, ಕೊರಿಯಾ, ಅಮೆರಿಕ ಸ್ಪರ್ಧಿಗಳನ್ನು ಮೀರಿ ನಿಲ್ಲಲು ದೀಪಾ ಅವರು ಇನ್ನು ಮೂರು ತಿಂಗಳಲ್ಲಿ ಅಪಾರ ವಾಗಿ ಶ್ರಮಿಸಲೇಬೇಕು. ‘ಇನ್ನೂ ಐದು ದಿನ ಬಿಟ್ಟು ದೆಹಲಿಗೆ ತೆರಳುತ್ತೇನೆ. ನನ್ನ ಕೋಚ್ ವಿಶ್ವೇಶ್ವರ್ ನಂದಿ ಅವರು ಹೇಗೆ ಹೇಳುತ್ತಾರೋ ಆ ರೀತಿಯ ಅಭ್ಯಾಸ ಮಾಡುತ್ತೇನೆ. ಮುಂದೆ ಆ ಭಗವಂತನಿದ್ದಾನೆ’ ಎಂದು ದೀಪಾ ಹೇಳುತ್ತಾರೆ. ದೀಪಾ ಅವರ ಸಾಧನೆಯ ಹಾದಿಯನ್ನು ಒಮ್ಮೆ ಅವಲೋಕಿಸಿದರೆ ಅವರ ಬದ್ಧತೆಯ ಬಗ್ಗೆ ಅರಿವಾಗುತ್ತದೆ. ವರ್ಷದಿಂದ ವರ್ಷಕ್ಕೆ ಅವರ ಸಾಧನೆಯು ಏರುಗತಿಯಲ್ಲಿದೆ. ಕಾಮನ್‌ವೆಲ್ತ್‌ ಕೂಟದಲ್ಲಿ ಗಳಿಸಿದ್ದಕ್ಕಿಂತ ಹೆಚ್ಚು ಅಂಕಗಳನ್ನು ಅವರು ನಂತರದ ಕೂಟಗಳಲ್ಲಿ ಗಳಿಸಿದ್ದು ಅವರ ಮೇಲೆ ಭರವಸೆ ಹುಟ್ಟಲು ಕಾರಣವಾಗಿದೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಪಡೆದಿದ್ದ ಅವರು ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರಲಿಲ್ಲ. ಆದರೆ, ಛಲ ಬಿಡದ ಅವರು ಅರ್ಹತಾ ಸುತ್ತಿನಲ್ಲಿ ಮಾಡಿದ ಸಾಧನೆ ಈಗ ಎಲ್ಲರ ಕಣ್ಣ ಮುಂದಿದೆ. ಆದರೆ, ಅವರು ವಾಲ್ಟ್‌ನಲ್ಲಿ ಸಶಕ್ತರಾಗಿರುವಷ್ಟು ಉಳಿದ ಉಪವಿಭಾಗಗಳಲ್ಲಿ ಇಲ್ಲ. ಅನ್‌ಈವನ್ ಬಾರ್‌್ಸ, ಬ್ಯಾಲೆನ್ಸ್ ಬೀಮ್, ಫ್ಲೋರ್ ಎಕ್ಸೈಜ್‌ಗಳಲ್ಲಿ ಅವರು ಅಗ್ರ 20 ಆಟಗಾರರ ಯಾದಿಯಲ್ಲಿಯೂ ಇಲ್ಲ. ಒಂದೊಮ್ಮೆ ವಾಲ್ಟ್‌ನಲ್ಲಿ ಅವರು ನಿಯಂತ್ರಣ ತಪ್ಪಿದರೆ ಪದಕದ ಆಸೆ ಕೈಬಿಟ್ಟಂತೆಯೇ ಸರಿ. ಭಾರತದಲ್ಲಿ ಕ್ಷೀಣವಾಗಿರುವ ಜಿಮ್ನಾಸ್ಟಿಕ್ಸ್‌ ಕ್ರೀಡೆಯು ದೀಪಾ ಅವರ ಸಾಧನೆಯಿಂದಾಗಿ ಮೈಕೊಡವಿಕೊಂಡು ಎದ್ದಿದೆ. ಮತ್ತಷ್ಟು ಉದ ಯೋನ್ಮುಖ ಜಿಮ್ನಾಸ್ಟ್‌ಗಳಿಗೆ ಅವರು ಸ್ಪೂರ್ತಿ ತುಂಬಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಅವರಿಗೆ ಅದೃಷ್ಟ ಒಲಿದು ಪದಕ ಗೆದ್ದುಬಿಟ್ಟರೆ ಭಾರತದ ಜಿಮ್ನಾಸ್ಟಿಕ್ಸ್‌ ಕ್ರೀಡೆಯಲ್ಲಿ ಹೊಸ ಶಕೆ ಆರಂಭವಾಗುವುದು ಖಚಿತ. * ವರ್ಷಾನುಗಟ್ಟಲೆ ಅಭ್ಯಾಸ ಮಾಡುವುದು ಒಂದು ಹಂತ. ಆದರೆ, ಸ್ಪರ್ಧೆಯ ದಿನದಂದು ಎದುರಾಗುವ ಒತ್ತಡ, ಸ್ಪರ್ಧಾ ಕಣದಲ್ಲಿರುವ ಪರಿಸರಗಳು ಪರಿಣಾಮ ಬೀರುತ್ತವೆ. ಫಲಿತಾಂಶ ಏನು ಬೇಕಾದರೂ ಆಗಬಹುದು. ಆದರೆ ನಮ್ಮ ಗುರಿ ಉತ್ತಮ ಆಟದತ್ತ ಮತ್ತು ಸಂಪೂರ್ಣ ಸಮರ್ಪಣೆಯಿಂದ ಕೂಡಿದ ಪ್ರದರ್ಶನ ನೀಡುವತ್ತ ಇರಬೇಕು. ಆ ಗುಣ ದೀಪಾಗೆ ಇದೆ – ಧುಮಾಲ್ ಕರ್ಮಾಕರ್ * ದೀಪಾ ಅವರನ್ನು ನಾನು ಬಹಳ ವರ್ಷಗಳಿಂದ ಗಮನಿಸಿದ್ದೇನೆ. ಬಹಳಷ್ಟು ಸ್ಪರ್ಧೆಗಳಲ್ಲಿ ಅವರ ಪ್ರದರ್ಶನವನ್ನೂ ನೋಡಿದ್ದೇನೆ. ಒಲಿಂಪಿಕ್ಸ್‌ ಪದಕ ಸಾಧನೆಯ ಸಾಮರ್ಥ್ಯ ಅವರಿಗೆ ಇದೆ. ವಾಲ್ಟ್‌ನಲ್ಲಿ ಸಣ್ಣಪುಟ್ಟ ಕೆಲವು ಲೋಪಗಳನ್ನು ಅವರು ಸರಿಪಡಿಸಿಕೊಂಡರೆ ಪದಕ ನಿಶ್ಚಿತ. ಅದಕ್ಕಾಗಿ ವಿದೇಶಗಳಲ್ಲಿ ತರಬೇತಿ ಪಡೆಯುವ ಅವಕಾಶವೂ ಅವರಿಗೆ ಸಿಗಬಹುದು. ಸರ್ಕಾರ ಮತ್ತು ಸಾಯ್ ಎಲ್ಲ ರೀತಿಯಿಂದಲೂ ಅವರಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ – ರಾಮ ಶಿಲಾರೆ * ಸರ್ಕಾರ, ಸಂಘಟನೆಗಳು ಏನು ಮಾಡುತ್ತಿವೆ ಎಂಬುದರ ಬಗ್ಗೆ ನನಗೆನೂ ಗೊತ್ತಿಲ್ಲ. ನನ್ನ ಪ್ರತಿಯೊಂದು ಬೇಕು, ಬೇಡಗಳನ್ನು ನನ್ನ ಕೋಚ್ ವಿಶ್ವೇಶ್ವರ್ ನಂದಿ ನೋಡಿಕೊಳ್ಳುತ್ತಾರೆ. ನನ್ನ ಕೆಲಸ ಏನಿದ್ದರೂ ಜಿಮ್ನಾಸ್ಟಿಕ್ಸ್‌ ಅಭ್ಯಾಸ ಮಾಡುವುದು ಮಾತ್ರ – ದೀಪಾ ಕರ್ಮಾಕರ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.