ಸ್ಕ್ವಾಷ್‌ ಭರವಸೆ ದೀಪಿಕಾ ಪಳ್ಳಿಕಲ್‌ ಅಮ್ಮನ ಕ್ರಿಕೆಟ್‌ ಪ್ರೀತಿಯಿಂದಾಗಿ ಎಳವೆಯಲ್ಲೇ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ದೀಪಿಕಾ ಪಳ್ಳಿಕಲ್‌ ಸ್ಕ್ವಾಷ್‌ ಕ್ರೀಡೆಯಲ್ಲಿ ಇಂದು ಭಾರತದ ಭರವಸೆಯಾಗಿ ಬೆಳೆದಿದ್ದಾರೆ. ಸೂಸನ್‌ ಇಟ್ಟಿಚೆರಿಯಾ ಅವರು ಏಳು ಟೆಸ್ಟ್‌ ಹಾಗೂ ಎರಡು ಏಕದಿನ ಪಂದ್ಯಗಳಲ್ಲಿ ಭಾರತ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದಾರೆ. ಸೂಸನ್‌ ಅವರ ಕ್ರೀಡಾಸಕ್ತಿ ಮಗಳ ಬದುಕಿಗೆ ಹೊಸ ಆಯಾಮ ನೀಡಿತು. ಚೆನ್ನೈಯಲ್ಲಿ ಹುಟ್ಟಿ ಬೆಳೆದ ದೀಪಿಕಾ ಸ್ಕ್ವಾಷ್‌ ಕ್ರೀಡೆಯನ್ನು ತಮ್ಮ ವೃತ್ತಿ ಬದುಕಿನಲ್ಲಿ ಆಯ್ಕೆ ಮಾಡಿಕೊಳ್ಳುವ ಹೊತ್ತಿಗೆ ಈ ಆಟ ಭಾರತದಲ್ಲಿ ಅಷ್ಟೇನು ಜನಪ್ರಿಯವಾಗಿರಲಿಲ್ಲ. ಯೂರೋಪ್‌ನಲ್ಲಿ ಈ ಕ್ರೀಡೆ ಸಾಕಷ್ಟು ಖ್ಯಾತಿ ಹೊಂದಿತ್ತು. ದೀಪಿಕಾ ಮೊದಲ ಬಾರಿಗೆ ಈ ಕ್ರೀಡೆಯ ಮಹಿಳಾ ವಿಭಾಗದಲ್ಲಿ ಭಾರತದ ಗಮನಸೆಳೆದರು. ಮಹಿಳೆಯರ ಸ್ಕ್ವಾಷ್‌ ನಲ್ಲಿ ಕೇಳಿಬರುವ ಇನ್ನೊಂದು ಹೆಸರು ಜೋಷ್ನಾ ಚಿಣ್ಣಪ್ಪ. ಆರನೇ ತರಗತಿಯಲ್ಲಿ ಓದುವಾಗಲೇ ಲಂಡನ್‌ನಲ್ಲಿ ಪಳ್ಳಿಕಲ್‌ ತಮ್ಮ ಮೊದಲ ಅಂತರರಾಷ್ಟ್ರೀಯ ಸ್ಕ್ವಾಷ್‌ ಟೂರ್ನಿಯನ್ನು ಆಡಿದರು. ಯುರೋಪಿಯನ್‌ ಜೂನಿಯರ್ ಸ್ಕ್ವಾಷ್‌ ಸರ್ಕೀಟ್‌ನಲ್ಲಿ ಅವರು ಹಲವು ಟೂರ್ನಿಗಳನ್ನು ಗೆದ್ದರು. ವೃತ್ತಿಪರ ಸ್ಕ್ವಾಷ್‌ಗೆ ಕಾಲಿಟ್ಟ ದೀಪಿಕಾ: ಆ ನಂತರ ಹಿಂತಿರುಗಿ ನೋಡದ ದೀಪಿಕಾ ವೃತ್ತಿಪರ ಸ್ಕ್ವಾಷ್‌ ಟೂರ್ನಿಗೆ ಕಾಲಿಡಲು ಸಂಪೂರ್ಣ ತಯಾರಿ ನಡೆಸಿ 2006ರಲ್ಲಿ ವೃತ್ತಿಪರರಾದರು. ಈಜಿಪ್ಟ್‌ನಲ್ಲಿ 2011ರಲ್ಲಿ ಕೆಲವು ವಾರಗಳ ಕಾಲ ಈ ಕ್ರೀಡೆಯ ತಂತ್ರಗಳ ಬಗ್ಗೆ ಅಭ್ಯಾಸ ನಡೆಸಿದ್ದು ಇವರಿಗೆ ಬಹಳಷ್ಟು ಅನುಕೂಲವಾಯಿತು. ಆರಂಭದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡ ಅವರು ಬಳಿಕ ಕೆಲವು ಟೂರ್ನಿಗಳಲ್ಲಿ ಮುಖ್ಯ ಹಂತ ತಲುಪುವಲ್ಲಿ ಯಶಸ್ವಿಯಾದರು. ದೀಪಿಕಾ ಅವರ ವೃತ್ತಿಜೀವನದಲ್ಲಿ 2012 ಅದೃಷ್ಟದ ವರ್ಷ ಎಂದೇ ಹೇಳಬಹುದು. ಈ ಋತುವಿನಲ್ಲಿ ಅವರು ನ್ಯೂಯಾರ್ಕ್‌ನಲ್ಲಿ ನಡೆದ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ತಲುಪಿದ ಭಾರತದ ಮೊದಲ ಆಟಗಾರ್ತಿ ಎಂಬ ಶ್ರೇಯಕ್ಕೆ ಪಾತ್ರರಾದರು. ಅದೇ ವರ್ಷ ನಡೆದ ಆಸ್ಟ್ರೇಲಿಯಾ ಓಪನ್‌ನಲ್ಲಿ ಸೆಮಿಫೈನಲ್‌ ತಲುಪುವ ಮೂಲಕ ಸ್ಕ್ವಾಷ್‌ನಲ್ಲಿ ಭಾರತದ ಮಹಿಳೆಯರು ಜಗತ್ತಿನ ಇತರ ಸ್ಪರ್ಧಿಗಳಿಗೆ ಪೈಪೋಟಿ ನೀಡಬಲ್ಲರು ಎಂಬುದನ್ನು ಸಾಬೀತು ಮಾಡಿದರು. 2012ರಲ್ಲಿಯೇ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಏರಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿ ಅವರ ಪಾಲಾಯಿತು. ಈ ಸಾಧನೆಯಿಂದ ಅವರಿಗೆ ಅರ್ಜುನ ಪ್ರಶಸ್ತಿ ಕೂಡ ಲಭಿಸಿತು. ದೀಪಿಕಾ ಈ ಗೌರವ ಪಡೆದ ಭಾರತದ ಮೊದಲ ಸ್ಕ್ವಾಷ್‌ ಆಟಗಾರ್ತಿ. 2014ರಲ್ಲಿ ಮತ್ತೊಮ್ಮೆ 10ನೇ ರ್‍ಯಾಂಕಿಂಗ್‌ ಸ್ಥಾನಕ್ಕೆ ಏರಿದ್ದರು. ಇದೇ ವರ್ಷ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಹಿಳೆಯರ ಡಬಲ್ಸ್‌ನಲ್ಲಿ ಜೋಷ್ನಾ ಚಿಣ್ಣಪ್ಪ ಅವರೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು. ಸ್ಕ್ವಾಷ್‌ ಕ್ರೀಡೆಯಲ್ಲೇ ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪ್ರಶಸ್ತಿ ಇದಾಗಿದೆ. ತಾರತಮ್ಯಕ್ಕೆ ವಿರೋಧ: ದೀಪಿಕಾ ಸ್ಕ್ವಾಷ್‌ನಲ್ಲಿ ಎತ್ತರದ ಸಾಧನೆ ಮಾಡುವ ಹಂಬಲ ಇಟ್ಟುಕೊಂಡಿದ್ದಾರೆ. ಆದರೆ ಅವರು ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮಹಿಳೆಯರಿಗೆ ಆಗುತ್ತಿದ್ದ ತಾರತಮ್ಯವನ್ನು ವಿರೋಧಿಸಿದರು.ಪುರುಷ ಹಾಗೂ ಮಹಿಳಾ ಚಾಂಪಿಯನ್‌ಗಳಿಗೆ ನೀಡುವ ಪ್ರಶಸ್ತಿಯಲ್ಲಿ ತಾರತಮ್ಯವನ್ನು ವಿರೋಧಿಸಿ ಅವರು ಈ ಹಿಂದಿನ ನಾಲ್ಕು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. 2015ರ ಆಗಸ್ಟ್‌ 18 ರಂದು ಕ್ರಿಕೆಟಿಗ ದಿನೇಶ್ ಕಾರ್ತಿಕ್‌ ಅವರನ್ನು ದೀಪಿಕಾ ಮದುವೆಯಾದರು. ಮದುವೆ ದೀಪಿಕಾ ಅವರ ಕ್ರೀಡಾ ಸಾಧನೆಯ ದಾಪುಗಾಲಿಗೆ ಒಂದಿನಿತೂ ಅಡ್ಡಿಯಾಗಿಲ್ಲ. ಮದುವೆಯ ನಂತರ ಹಾಂಕಾಂಗ್‌ ಓಪನ್‌ನಲ್ಲಿ ನಿರಾಸೆ ಕಂಡರಾದರೂ, 2016ರಲ್ಲಿ ಉತ್ತಮ ಆರಂಭ ಪಡೆದಿದ್ದಾರೆ. ಕೆನಡಾದ ಟೊರಾಂಟೊದಲ್ಲಿ ನಡೆದ ಡಬ್ಲ್ಯುಎಸ್‌ಎ ಗ್ರಾನೇಟ್ ಓಪನ್‌ನಲ್ಲಿ ಈ ಸಲ ಅವರು ಸೆಮಿಫೈನಲ್‌ ತಲುಪಿರುವುದು ಕಡಿಮೆ ಸಾಧನೆ ಏನಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.