ಕ್ರಿಕೆಟ್‌ ಲಿಲ್ಲಿಪುಟ್‌ಗಳ ಹೊಸ ಹೆಜ್ಜೆ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ ಭವಿಷ್ಯದ ತಾರೆಗಳು ರೂಪುಗೊಳ್ಳಲು ಸುವರ್ಣ ವೇದಿಕೆ. ಈ ಟೂರ್ನಿಯಲ್ಲಿ ಈ ಬಾರಿ ನೇಪಾಳ, ನಮೀಬಿಯಾದಂತಹ ಪುಟ್ಟ ರಾಷ್ಟ್ರಗಳು ಅಚ್ಚರಿಯ ಫಲಿತಾಂಶ ನೀಡಿವೆ. ಈ ತಂಡಗಳ ಯಶಸ್ಸಿನ ಹಿನ್ನೆಲೆಯ ಬಗ್ಗೆ ಜಿ. ಶಿವಕುಮಾರ ಬೆಳಕು ಚೆಲ್ಲಿದ್ದಾರೆ. ನೇಪಾಳ, ನಮೀಬಿಯಾ, ಆಫ್ಘಾನಿಸ್ತಾನ, ಫಿಜಿ ರಾಷ್ಟ್ರಗಳಲ್ಲಿ ಕ್ರೀಡೆಗೆ ಪೂರಕ ವಾತಾವರಣ ಇಲ್ಲ. ಮೂಲ ಸೌಕರ್ಯಗಳಂತೂ ಅಷ್ಟಕಷ್ಟೇ. ಹಾಗಂತ ಈ ದೇಶಗಳಲ್ಲಿ ಕ್ರಿಕೆಟ್‌ ಪ್ರೀತಿಗೇನೂ ಕೊರತೆ ಇಲ್ಲ. ಇರುವ ಸೌಕರ್ಯಗಳಲ್ಲಿಯೇ ಆಟದ ಪಾಠಗಳನ್ನು ಕಲಿತು ಕ್ರಿಕೆಟ್‌ ಲೋಕಕ್ಕೆ ಅಡಿ ಇಡುತ್ತಿರುವ ಈ ತಂಡಗಳು ವಿಶ್ವದ ಬಲಾಢ್ಯ ರಾಷ್ಟ್ರಗಳೆನಿಸಿರುವ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾಗಳಿಗೆ ಸೆಡ್ಡು ಹೊಡೆದು ನಿಲ್ಲುವ ಮುನ್ಸೂಚನೆ ನೀಡಿವೆ. ಭಾನುವಾರ ಮುಗಿದ 19 ವರ್ಷ ದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಈ ತಂಡಗಳಿಂದ ಮೂಡಿ ಬಂದಿರುವ ಸಾಮರ್ಥ್ಯ ಇದಕ್ಕೆ ಪುಷ್ಠಿ ನೀಡುವಂತಿದೆ. ಈಗಿನ್ನೂ ಕ್ರಿಕೆಟ್‌ ಲೋಕದ ಕದ ತಟ್ಟುತ್ತಿ ರುವ ಈ ರಾಷ್ಟ್ರಗಳು ಬದ್ಧತೆ, ಕಠಿಣ ಪರಿಶ್ರಮಗಳನ್ನು ಮೈಗೂಡಿಸಿಕೊಂಡು ಭರವಸೆಯ ಪಥದಲ್ಲಿ ಹೆಜ್ಜೆ ಹಾಕುತ್ತಿವೆ. ಜೂನಿಯರ್‌ ವಿಶ್ವಕಪ್‌ ಟೂರ್ನಿಯಲ್ಲಿ ನಮೀಬಿಯಾ ಮತ್ತು ನೇಪಾಳ ತಂಡಗಳಿಂದ ಮೂಡಿಬಂದಿರುವ ಸಾಮರ್ಥ್ಯ ಕ್ರಿಕೆಟ್‌ ಆಡುವ ರಾಷ್ಟ್ರಗಳ ಹುಬ್ಬೇರುವಂತೆ ಮಾಡಿದೆ. ಪಂದ್ಯದಿಂದ ಪಂದ್ಯಕ್ಕೆ ಸಾಮರ್ಥ್ಯ ವೃದ್ಧಿಸಿಕೊಂಡು ಸಾಗಿದ್ದ ಈ ತಂಡಗಳು ಕ್ವಾರ್ಟರ್ ಫೈನಲ್‌ ಪ್ರವೇಶಿಸಿ ಹೊಸ ಭಾಷ್ಯ ಬರೆದಿವೆ. ನಮೀಬಿಯಾದ ನವೋಲ್ಲಾಸ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶದಂತಹ ಬಲಿಷ್ಠ ತಂಡಗಳ ಜತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಾಗಲೇ ನಮೀಬಿಯಾ ತಂಡದ ಕಥೆ ಮುಗಿಯಿತು ಎಂದು ಭಾವಿಸಿದ್ದವರೇ ಹೆಚ್ಚು. ಆದರೆ ಈ ನಿರೀಕ್ಷೆಗಳು ಕೆಲವೇ ದಿನಗಳಲ್ಲಿ ತಲೆಕೆಳಗಾದವು. ಎದುರಾಳಿ ತಂಡ ಯಾವುದು ಎಂಬುದನ್ನು ನೋಡದೆ ಛಲದೊಂದಿಗೆ ಮುನ್ನುಗ್ಗಿದ ನಮೀಬಿಯಾ ಹಿಂದಿನ ಟೂರ್ನಿಯ ಚಾಂಪಿಯನ್‌ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ ನೀಡಿ ಕ್ರಿಕೆಟ್‌ ಲೋಕ ತನ್ನತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿತು. ಅಷ್ಟಕ್ಕೂ ಈ ಸಾಧನೆ ಇರುಳುರುಳಿ ಬೆಳಗಾಗುವುದರಲ್ಲಿ ಆದದ್ದಂತೂ ಖಂಡಿತಾ ಅಲ್ಲ. ಇದರ ಹಿಂದೆ ಆಟಗಾರರು ಹಾಗೂ ಕ್ರೀಡಾ ಮಂಡಳಿಯ ಸತತ ಪರಿಶ್ರಮ ಅಡಕವಾಗಿದೆ. ಟೂರ್ನಿಗೆ ಬಲಿಷ್ಠ ತಂಡ ಕಟ್ಟುವ ಉದ್ದೇಶದಿಂದ ನಮೀಬಿಯಾ ಕ್ರಿಕೆಟ್‌ ಮಂಡಳಿ ಟೂರ್ನಿ ಆರಂಭಕ್ಕೆ ಒಂದು ವರ್ಷ ಹಿಂದೆಯೇ ಪ್ರತಿಭಾನ್ವೇಷಣೆಗೆ ಕೈ ಹಾಕಿತ್ತು. ದೇಶಿ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಆಟಗಾರರನ್ನು ಹೆಕ್ಕಿ ತೆಗೆಯುವ ಕೆಲಸ ಮಾಡಿತ್ತು. ಹೀಗೆ ಆಯ್ಕೆ ಮಾಡಿದವರಿಗೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಪಿಯೆರೆ ಡಿ ಬ್ರ್ಯೂನ್‌ ಅವರಿಂದ ವಿಶೇಷ ತರಬೇತಿ ಕೊಡಿಸಿತ್ತು. ಈ ಪ್ರಕ್ರಿಯೆ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿತ್ತು ಎಂಬುದು ಗಮನಿಸಬೇಕಾದ ಅಂಶ. ವಿವಿಧ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ಅನುಭವ ಹೊಂದಿದ್ದ ಬ್ರ್ಯೂನ್‌ , ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಜತೆಗೆ ಬಹುಮುಖ್ಯವಾಗಿ ಆಟಗಾರರಿಗೆ ಫಿಟ್‌ನೆಸ್‌ ಕಾಪಾಡಿಕೊಳ್ಳುವ ತಂತ್ರಗಳನ್ನು ಹೇಳಿಕೊಟ್ಟು ಅವರಲ್ಲಿ ನವ ಚೈತನ್ಯ ಮೂಡುವಂತೆ ಮಾಡಿದರು. ಬ್ರ್ಯೂನ್‌ ಅವರ ಶ್ರಮ ತಂಡ ಆಡಿದ ಪ್ರತಿ ಪಂದ್ಯದಲ್ಲಿಯೂ ಎದ್ದುಕಾಣುತ್ತಿತ್ತು. ಲೀಗ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಕ್ಷಿಣ ಆಫ್ರಿಕಾವನ್ನು 133ರನ್‌ಗಳಿಗೆ ಕಟ್ಟಿ ಹಾಕಿ ಈ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ ತಂಡದ ಸಾಧನೆಗೆ ಕ್ರಿಕೆಟ್‌ ವಲಯದಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದ್ದು ಉಲ್ಲೇಖಾರ್ಹ. ನೇಪಾಳದ ದಿಟ್ಟ ನಡಿಗೆ.. ದಶಕಗಳ ಹಿಂದೆ ಕ್ರಿಕೆಟ್‌ ಲೋಕದಲ್ಲಿ ನೆಲೆ ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದ ನೇಪಾಳ ಈಗ ನಿಧಾನವಾಗಿ ಈ ಕ್ರೀಡೆಯಲ್ಲಿ ತನ್ನ ಛಾಪು ಮೂಡಿಸುತ್ತಿದೆ. 2013ರಲ್ಲಿ ನೇಪಾಳ ಕ್ರಿಕೆಟ್‌ ಸಂಸ್ಥೆ (ಸಿಎಎನ್‌) ಅಸ್ತಿತ್ವಕ್ಕೆ ಬಂದ ಮೇಲೆ ಈ ನಾಡಿನಲ್ಲಿ ಕ್ರಿಕೆಟ್‌ ಕ್ರೀಡೆ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಈ ರಾಷ್ಟ್ರದಲ್ಲಿ 429ಕ್ಕೂ ಹೆಚ್ಚು ಸೀನಿಯರ್‌ ಮತ್ತು 227ಕ್ಕೂ ಅಧಿಕ ಜೂನಿಯರ್‌ ಕ್ರಿಕೆಟ್‌ ಕ್ಲಬ್‌ಗಳು ಉದಯಿಸಿರುವುದು ಇದಕ್ಕೆ ಒಂದು ನಿದರ್ಶನ. ತಳಸ್ತರದಿಂದ ಕ್ರಿಕೆಟ್‌ ಅನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ಸಿಎಎನ್‌ ಇದಕ್ಕಾಗಿ ಹಲವಾರು ಯೋಜನೆಗಳನ್ನೂ ರೂಪಿಸಿದೆ. ಸಿಎಎನ್‌ನ ಈ ಕಾರ್ಯಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಕೈ ಜೋಡಿಸಿದೆ. ತರಬೇತಿ, ಅಕಾಡೆಮಿಗಳ ಅಭಿವೃದ್ಧಿ, ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಆಯೋಜನೆ ಸೇರಿದಂತೆ ಹಲವು ರೀತಿಯಲ್ಲಿ ಬಿಸಿಸಿಐ ಸಿಎನ್‌ಎಗೆ ನೆರವು ಒದಗಿಸುತ್ತಿದೆ. ‘ನೇಪಾಳ ಮತ್ತು ಆಫ್ಘಾನಿಸ್ತಾನ ರಾಷ್ಟ್ರದ ತಂಡಗಳು ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿವೆ. ಕ್ರಿಕೆಟ್‌ನಲ್ಲಿ ನೆಲೆ ಕಂಡುಕೊಳ್ಳಲು ಈ ರಾಷ್ಟ್ರಗಳಿಗೆ ನಮ್ಮಿಂದ ಆದ ಸಹಾಯ ಮಾಡುತ್ತಿದ್ದೇವೆ’ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಈ ರಾಷ್ಟ್ರದ ಯುವಪಡೆ ಈ ಬಾರಿಯ ಜೂನಿಯರ್‌ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರ ಹಿಂದೆ ಈ ಎಲ್ಲಾ ಅಂಶಗಳು ಕೆಲಸ ಮಾಡಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಫಿಜಿಯಲ್ಲಿ ಎದ್ದ ಕ್ರಿಕೆಟ್‌ ಅಲೆ ಗಂಡೆದೆಯ ಆಟ ಎಂದೇ ಹೆಸರಾಗಿರುವ ರಗ್ಬಿ ಕ್ರೀಡೆಯನ್ನು ಉಸಿರಾಗಿಸಿಕೊಂಡಿರುವ ಫಿಜಿ ರಾಷ್ಟ್ರ ದಲ್ಲಿ ಈಗ ಕ್ರಿಕೆಟ್‌ ಅಲೆ ಎದ್ದಿದೆ. ಫಿಜಿ ತಂಡ ಐಸಿಸಿ ಆಯೋಜಿಸುವ ಎಲೈಟ್‌ ಹಾಗೂ ವಿವಿಧ ಡಿವಿಷನ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. 11 ಸಹ ಸಂಸ್ಥೆಗಳನ್ನು ಹೊಂದಿರುವ ಫಿಜಿ ಕ್ರಿಕೆಟ್‌ ಎಳವೆಯಿಂದಲೇ ಮಕ್ಕಳಲ್ಲಿ ಕ್ರಿಕೆಟ್‌ ಬಗ್ಗೆ ಆಸಕ್ತಿ ಬೆಳೆಸುವ ಕಾರ್ಯದಲ್ಲಿ ತೊಡಗಿದೆ. ಇದಕ್ಕಾಗಿ ಅಂತರ ಶಾಲಾ, ಕಾಲೇಜು ಹಾಗೂ ವಯೋಮಿತಿಯ ಕ್ರಿಕೆಟ್‌ ಟೂರ್ನಿಗಳನ್ನು ಆಯೋಜಿಸಿ ಆ ಮೂಲಕ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಕೈಗೊಂಡಿದೆ. ಇಲ್ಲಿ ಆಟಗಾರರು ತೋರುವ ಸಾಮರ್ಥ್ಯದ ಆಧಾರದಲ್ಲಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಜತೆಗೆ ಅವರಿಗೆ ಗುಣಮಟ್ಟದ ತರಬೇತಿಯನ್ನೂ ಕೊಡಿಸಲಾಗುತ್ತಿದೆ. ಆಫ್ಘನ್‌ನಲ್ಲಿ ಪಸರಿಸಿದ ಕಂಪು ಸದಾ ಮದ್ದು, ಗುಂಡುಗಳ ಸದ್ದಿನಿಂದ ಬೆಚ್ಚಿ ಬೀಳುತ್ತಿದ್ದ ಆಫ್ಘಾನಿಸ್ತಾನದಲ್ಲಿ ಈಗ ಕ್ರಿಕೆಟ್‌ ಕಂಪು ಪಸರುತ್ತಿದೆ. ಆಫ್ಘನ್‌ ನಾಡಿನಲ್ಲಿ ‘ಸಭ್ಯರ ಆಟ’ ನೆಲೆಯೂರಲು ಪಾಕಿಸ್ತಾನವೂ ಒಂದು ರೀತಿಯಲ್ಲಿ ಕಾರಣ. ಒಂದು ಕಾಲದಲ್ಲಿ ಪಿಸ್ತೂಲು, ಕತ್ತಿ ಹಿಡಿದು ಓಡಾಡುತ್ತಿದ್ದ ಆಫ್ಘನ್‌ನ ಯುವಕರು ಈಗ ಕ್ರಿಕೆಟ್‌ ಬ್ಯಾಟು ಮತ್ತು ಚೆಂಡುಗಳನ್ನು ಹಿಡಿದು ಅಂಗಳದಲ್ಲಿ ಆಡುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ರಾಷ್ಟ್ರದಲ್ಲಿ ಸದ್ಯ 320ಕ್ಕೂ ಹೆಚ್ಚು ಕ್ರಿಕೆಟ್‌ ಕ್ಲಬ್‌ಗಳು ತಲೆ ಎತ್ತಿವೆ ಎಂದರೆ ಅದೊಂದು ಅಸಾಮಾನ್ಯ ಸಂಗತಿ. ಕ್ರಿಕೆಟ್‌ ಚಟುವಟಿಕೆಗಳ ಮೇಲೆ ತಾಲಿಬಾನ್‌ ಹೇರಿದ್ದ ನಿಷೇಧದ ಕವಚ 2000ರಲ್ಲಿ ಕಳಚಿತ್ತು. ಆ ಬಳಿಕ ನಿಧಾನವಾಗಿ ಈ ನಾಡಿನಲ್ಲಿ ಕ್ರಿಕೆಟ್‌ ಚಟುವಟಿಕೆಗಳು ಗರಿಗೆದರಿದ್ದವು. ಇದಾದ ಎರಡು ವರ್ಷದಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ಗೆ ಅರ್ಹತೆ ಗಳಿಸಿದ್ದ ತಂಡ ಈ ಬಾರಿಯೂ ಗಮನಾರ್ಹ ಸಾಮರ್ಥ್ಯ ತೋರಿದೆ. ಸ್ಕಾಟ್ಲೆಂಡ್‌, ಐರ್ಲೆಂಡ್‌ ರಾಷ್ಟ್ರದ ತಂಡಗಳೂ ಈಗ ಕ್ರಿಕೆಟ್‌ನಲ್ಲಿ ಎತ್ತರದ ಸಾಧನೆ ಮಾಡುವ ಹಂಬಲ ಹೊತ್ತಿವೆ. ಇದಕ್ಕೆ ಪೂರಕವಾಗಿ ಈ ರಾಷ್ಟ್ರಗಳಲ್ಲಿಯೂ ಈಗ ಮೂಲಭೂತ ಸೌಲಭ್ಯಗಳು ಸಿಗುತ್ತಿರುವುದು ಉತ್ತಮ ಬೆಳವಣಿಗೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.