ಮೊದಲ ಪದಕದ ನಿರೀಕ್ಷೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತದ ಆರ್ಚರಿ ಪಟುಗಳು ಒಮ್ಮೆಯೂ ಪದಕ ಜಯಿಸಿಲ್ಲ ನಿಜ. ಆದರೆ ಪ್ರತಿ ಬಾರಿಯೂ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಮುಂದಿನ ಕೆಲ ವರ್ಷಗಳಲ್ಲಿ ಪದಕ ಗೆಲ್ಲುವ ಭರವಸೆ ಮೂಡಿದೆ. ಇದರ ಬಗ್ಗೆ ಪ್ರಮೋದ್‌ ಜಿ.ಕೆ. ವಿಶ್ಲೇಷಿಸಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ಫಿಫಾ ವಿಶ್ವಕಪ್‌ ಟೂರ್ನಿಗೆ ಆತಿಥ್ಯ ಒದಗಿಸಿದ್ದ ಸಾಂಬಾ ನಾಡು ಬ್ರೆಜಿಲ್‌ನಲ್ಲಿ ಈಗ ಮತ್ತೆ ಕ್ರೀಡಾ ಸಂಭ್ರಮ. ರಿಯೊ ಒಲಿಂಪಿಕ್ಸ್‌ ಆರಂಭವಾಗಲು ಆರು ತಿಂಗಳಷ್ಟೇ ಬಾಕಿಯಿದ್ದು ಕ್ರೀಡಾಪಟುಗಳು ಪದಕದ ಕನಸು ಕಾಣುತ್ತಿದ್ದಾರೆ. ಇದರಿಂದಾಗಿ ಒಲಿಂಪಿಕ್ಸ್‌ನಲ್ಲಿ ಯಾರು ಪದಕ ಗೆಲ್ಲುತ್ತಾರೆ ಎನ್ನುವ ಲೆಕ್ಕಾಚಾರ ಗರಿಗೆದರಿದೆ. ಭಾರತವೂ ಇದರಿಂದ ಹಿಂದೆ ಬಿದ್ದಿಲ್ಲ. ನಮ್ಮ ಅಥ್ಲೀಟ್‌ಗಳು ಹಿಂದಿನ ಎಲ್ಲಾ ಒಲಿಂಪಿಕ್ಸ್‌ಗಳಿಗಿಂತ ಹೆಚ್ಚು ಪದಕಗಳನ್ನು ಗೆಲ್ಲಲಿ ಎಂದು ಸರ್ಕಾರ ತರಬೇತಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದಕ್ಕಾಗಿಯೇ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಮ್‌ (ಟಾಪ್‌) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಸರ್ಕಾರ ಈಗಷ್ಟೇ ಪ್ರಗತಿ ಕಾಣುತ್ತಿರುವ ಆರ್ಚರಿ, ಯಾಚಿಂಗ್‌ನಂಥ ಪುಟ್ಟ ಕ್ರೀಡೆಗಳನ್ನು ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ. ಈ ಕ್ರೀಡೆಗಳಲ್ಲಿ ಭಾರತ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಷ್ಟು ಇನ್ನು ಬಲಿಷ್ಠವಾಗಿಲ್ಲ ಎಂಬುದು ಗೊತ್ತಿದ್ದೂ ಸರ್ಕಾರ ಬೆಂಬಲ ನೀಡುತ್ತಿದೆ. ಇದರಿಂದಾಗಿ ವಿಶ್ವದ ಶ್ರೇಷ್ಠ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ‘ಗುರಿಕಾರರ’ ಸಂಖ್ಯೆ ಹೆಚ್ಚಾಗುತ್ತಿದೆ. 1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಎರಡನೇ ಒಲಿಂಪಿಕ್ಸ್‌ನಲ್ಲಿ ಆರ್ಚರಿಗೆ ಅವಕಾಶ ಲಭಿಸಿತು. ಆದರೆ ಭಾರತ ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 1988ರಲ್ಲಿ. ಸೋಲ್‌ನಲ್ಲಿ ನಡೆದ ಆ ಒಲಿಂಪಿಕ್ಸ್‌ನಲ್ಲಿ ರಾಜಸ್ತಾನದ ಶ್ಯಾಮ್‌ ಲಾಲ್‌, ಲಿಂಬಾ ರಾಮ್‌ ಮತ್ತು ಸಂಜೀವ್ ಸಿಂಗ್‌ ದೇಶವನ್ನು ಪ್ರತಿನಿಧಿಸಿದ್ದರು. 1985ರಿಂದ 1995ರ ಅವಧಿಯಲ್ಲಿ ಉದಯಪುರ ಜಿಲ್ಲೆಯ ಲಿಂಬಾ ಆರ್ಚರಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 1989ರಲ್ಲಿ ಬೀಜಿಂಗ್‌ನಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಚಿನ್ನ, ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಮತ್ತು ನವದೆಹಲಿಯಲ್ಲಿ 1995ರಲ್ಲಿ ಜರುಗಿದ್ದ ಕಾಮನ್‌ವೆಲ್ತ್‌ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕಗಳನ್ನು ಜಯಿಸಿದ್ದರು. 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಿಂದ ಆರ್ಚರಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಸ್ಪರ್ಧೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಕ್ರೀಡೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರ ಈ ಬಾರಿ 16 ಕ್ರೀಡಾಪಟುಗಳನ್ನು ‘ಟಾಪ್‌’ ಯೋಜನೆಗೆ ಸೇರಿಸಿದೆ. ಒಲಿಂಪಿಕ್ಸ್ ಸಂಘಟಕರು ಕೂಡ ಆರ್ಚರಿ ಪಟುಗಳ ಸಂಖ್ಯೆ ಹೆಚ್ಚಿಸಲು ಯತ್ನಿಸುತ್ತಿದ್ದಾರೆ. ಆತಿಥ್ಯ ರಾಷ್ಟ್ರದ ಮೂವರು ಸ್ಪರ್ಧೆಗಳಿಗೆ ನೇರವಾಗಿ ಸ್ಥಾನ ಲಭಿಸುತ್ತದೆ. ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಎಂಟು ಸ್ಥಾನ ಪಡೆಯುವ ತಂಡಗಳ ನಿಯಮಿತ ಸ್ಪರ್ಧಿಗಳೂ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬಹುದು. ರಿಕರ್ವ್‌ ಮತ್ತು ಕಾಂಪೌಂಡ್‌ ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಸೆಮಿಫೈನಲ್‌ ತಲುಪಿದರೂ ಪದಕ ಗೆಲ್ಲಲು ಅವಕಾಶವಿರುತ್ತದೆ. ನಾಲ್ಕರ ಘಟ್ಟದಲ್ಲಿ ಸೋತರೆ ಒಂದು ‘ಪ್ಲೇ ಆಫ್‌’ ಪಂದ್ಯ ಆಡಿಸಲಾಗುತ್ತದೆ. ಆ ಪಂದ್ಯದಲ್ಲಿ ಗೆದ್ದವರಿಗೆ ಕಂಚು ಖಚಿತ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಪರ್ಧಿಗಳ ಸಂಖ್ಯೆ ಏಳಕ್ಕೆ ಮುಟ್ಟಿತ್ತು. ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿರುವ ದೀಪಿಕಾ ಕುಮಾರಿ, ಜಯಂತ್‌ ತಾಲ್ಲೂಕ್ದಾರ್‌, ರಾಹುಲ್‌ ಬ್ಯಾನರ್ಜಿ, ತರುಣದೀಪ್‌ ರೈ, ಬೊಂಬಯಾಲಾ ದೇವಿ, ಚಕ್ರೊವೊಲೊ ಸ್ವರೊ, ಲಿಂಬಾ ರಾಮ್‌ ಆರ್ಚರಿ ತಂಡದಲ್ಲಿದ್ದರು. ಭಾರತದ ಸೇನೆಯ ರವಿ ಶಂಕರ್‌, ಟಾಟಾ ಆರ್ಚರಿ ಅಕಾಡೆಮಿಯ ಪೂರ್ಣಿಮಾ ಮಹತೊ ಮತ್ತು ಭಾರತ ಆರ್ಚರಿ ಸಂಸ್ಥೆಯ ಲಿಂಗಾ ರಾಮ್‌ ಕೋಚ್‌ಗಳಾಗಿದ್ದರು. ಗುರಿ ಮುಟ್ಟುವ ಸವಾಲು ಒಲಿಂಪಿಕ್ಸ್‌ನಲ್ಲಿ ಭಾರತ ಇದುವರೆಗೂ ಒಂದೂ ಪದಕ ಜಯಿಸಿಲ್ಲ. ಆದರೆ ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ದೀಪಿಕಾ ಕುಮಾರಿ, ಲಕ್ಷ್ಮಿರಾಣಿ ಮಾಜ್ಹಿ, ರಿಮಿಲ್‌ ಬುರೈಲಿ ಮತ್ತು ಮಂಗಲ್‌ ಸಿಂಗ್‌ ಚಂಪಿಯಾ ಅವರು ಹಲವು ವಿಶ್ವ ಮಟ್ಟದ ಟೂರ್ನಿಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಇವರು ಈಗಾಗಲೇ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದುಕೊಂಡಿದ್ದಾರೆ. 2012ರ ಒಲಿಂಪಿಕ್ಸ್‌ನ ಪುರುಷರ ವಿಭಾಗದಲ್ಲಿ ಜಯಂತ್‌ ಮೊದಲ ಸುತ್ತಿನಲ್ಲಿಯೇ ಸೋತಿದ್ದರು. ರಾಹುಲ್‌ ಬ್ಯಾನರ್ಜಿ ಹಾಗೂ ತರುಣ್‌ದೀಪ್‌ ರೈ ವೈಯಕ್ತಿಕ ಸ್ಪರ್ಧೆಯಲ್ಲಿ 32ರ ಘಟ್ಟ ತಲುಪಿದ್ದರು. ಜಯಂತ್‌, ರಾಹುಲ್‌ ಮತ್ತು ತರುಣದೀಪ್‌ ಅವರನ್ನು ಒಳಗೊಂಡ ತಂಡ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು ಗರಿಷ್ಠ ಸಾಧನೆಯೆನಿಸಿತ್ತು. ಲೈಷರಾಮ್‌, ದೀಪಿಕಾ, ಸ್ವರೊ ಅವರಿದ್ದ ಮಹಿಳಾ ತಂಡ ಕೂಡ 16ರ ಘಟ್ಟ ಪ್ರವೇಶಿಸಿತ್ತು. ಆರ್ಚರಿಯಲ್ಲಿ ಭಾರತ ಈಗಷ್ಟೇ ಬೆಳೆಯುತ್ತಿರುವ ತಂಡ. ಆದ್ದರಿಂದ ದಕ್ಷಿಣ ಕೊರಿಯಾ, ಅಮೆರಿಕ, ಇಟಲಿ, ಚೀನಾ, ಸೋವಿಯತ್‌ ಯೂನಿಯನ್‌, ಫಿನ್‌ಲ್ಯಾಂಡ್‌, ಉಕ್ರೇನ್‌, ಆಸ್ಟ್ರೇಲಿಯಾ ಸವಾಲು ಎದುರಿಸುವುದು ಕಷ್ಟ. ಪ್ರತಿ ಒಲಿಂಪಿಕ್ಸ್‌ನಲ್ಲೂ ಕೊರಿಯಾ ತಂಡಕ್ಕೆ ಮೇಲುಗೈ. ಈ ದೇಶದವರು ಒಲಿಂಪಿಕ್ಸ್‌ನಲ್ಲಿ ಒಟ್ಟು 19 ಚಿನ್ನ, 9 ಬೆಳ್ಳಿ ಮತ್ತು ಆರು ಚಿನ್ನದ ಪದಕಗಳನ್ನು ಜಯಿಸಿ ಅಗ್ರಸ್ಥಾನದಲ್ಲಿರುವುದು ಇದಕ್ಕೆ ಸಾಕ್ಷಿ. ದೀಪಿಕಾ ಕೂಡ ಇದೇ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ‘ಕೊರಿಯಾ ಮತ್ತು ಚೀನಾದಿಂದ ಕಠಿಣ ಹೋರಾಟ ಕಂಡು ಬರುವುದು ನಿಶ್ಚಿತ. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಾಗ ನನಗೆ 17 ವರ್ಷ. ಆಗ ಒತ್ತಡದ ಸಂದರ್ಭವನ್ನು ಎದುರಿಸುವ ಶಕ್ತಿ ಇರಲಿಲ್ಲ. ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಜಯಿಸಿದ್ದೇನೆ. ಬ್ರೆಜಿಲ್‌ನಿಂದ ಈ ಬಾರಿ ಬರಿಗೈಯಿಂದ ಬರುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಂಚಿಯ ಬಿಹಾರ್‌ ಜಿಲ್ಲೆಯವರಾದ ದೀಪಿಕಾ ಲಂಡನ್‌ ಒಲಿಂಪಿಕ್ಸ್ ಬಳಿಕ ಎರಡು ಮಹತ್ವದ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿದ್ದಾರೆ. 2013ರಲ್ಲಿ ಶಾಂಘೈಯಲ್ಲಿ ನಡೆದ ವಿಶ್ವಕಪ್‌ನಲ್ಲಿ ಬೆಳ್ಳಿ ಹೋದ ವರ್ಷ ಕೋಪನ್‌ಹೇಗ್‌ನಲ್ಲಿ ಜರುಗಿದ ವಿಶ್ವ ಚಾಂಪಿಯನ್‌ಷಿಪ್‌ನ ತಂಡ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು. ರಿಕರ್ವ್‌ ವಿಭಾಗದಲ್ಲಿ ಸ್ಪರ್ಧಿಸುವ ಲಕ್ಷ್ಮಿರಾಣಿ ಕೂಡ ಈ ತಂಡದಲ್ಲಿದ್ದರು. 25 ವರ್ಷದ ರಿಮಿಲ್‌ ಬುರೈಲಿ 2010ರ ಏಷ್ಯನ್‌ ಕ್ರೀಡಾಕೂಟದ ತಂಡ ವಿಭಾಗದಲ್ಲಿ ಕಂಚು ಗೆದ್ದಿದ್ದರು. ಈ ಆಟಗಾರ್ತಿ ಜೂನಿಯರ್ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಷಿಪ್‌, ಏಷ್ಯಾ ಗ್ರ್ಯಾಂಡ್ ಪ್ರಿ ಹೀಗೆ ಹಲವು ಟೂರ್ನಿಗಳಲ್ಲಿ ಪದಕ ಜಯಿಸಿದ್ದಾರೆ. 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಜೇಮ್‌ಷೆಡ್‌ಪುರದ ಮಂಗಲ್‌ ಸಿಂಗ್ ಚಂಪಿಯಾ ಪುರುಷರ ವಿಭಾಗದಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ. 2008, 2009, 2010 ಮತ್ತು 2015ರ ಆರ್ಚರಿ ವಿಶ್ವಕಪ್‌ಗಳಲ್ಲಿ ಪದಕ ಗೆದ್ದ ತಂಡದಲ್ಲಿದ್ದರು. 2006ರ ದೋಹಾ ಏಷ್ಯನ್‌ ಗೇಮ್ಸ್‌ನಲ್ಲಿ ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. ಆದರೆ ಇವರು ವೈಯಕ್ತಿಕ ವಿಭಾಗದಲ್ಲಿ ಒಮ್ಮೆಯೂ ಪ್ರಶಸ್ತಿ ಜಯಿಸಿಲ್ಲ. ಭಾರತದಲ್ಲಿ ಈ ಕ್ರೀಡೆಯ ಬೆಳವಣಿಗೆಗೆ ಕ್ರೀಡಾ ಸಂಸ್ಥೆಗಿಂತ ಖಾಸಗಿ ಸಂಸ್ಥೆಗಳೇ ಮುಂಚೂಣಿಯಲ್ಲಿವೆ. ಟಾಟಾ ಆರ್ಚರಿ ಅಕಾಡೆಮಿ, ರೈಲ್ವೇಸ್‌, ಭಾರತದ ಸೇನೆ, ಮಿತ್ತಲ್‌ ಚಾಂಪಿಯನ್ಸ್‌ ಟ್ರಸ್ಟ್‌ ಬಿಲ್ಲುಗಾರಿಕೆಗೆ ಬೆಂಬಲ ನೀಡುತ್ತಿವೆ. ಟಾಟಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ದೀಪಿಕಾ ಈಗ ವಿಶ್ವದ ಅಗ್ರರ್‍ಯಾಂಕ್‌ನ ಆಟಗಾರ್ತಿ. ಹತ್ತು ವರ್ಷಗಳ ಹಿಂದೆಯಷ್ಟೇ ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿದ ಅವರು ಭಾರತದ ಭರವಸೆಯ ತಾರೆ. ಆದ್ದರಿಂದ ಒಲಿಂಪಿಕ್ಸ್‌ನಲ್ಲಿ ಮೊದಲ ಪದಕದ ಕನಸನ್ನು ನನಸು ಮಾಡುವ ಜವಾಬ್ದಾರಿ ‘ಚಿನ್ನದ ಹುಡುಗಿ’ ದೀಪಿಕಾ ಮೇಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.