ಪೈಲ್ವಾನರ ಊರಿನ ಆಟಗಾರ ನಿತಿನ್‌ ಉತ್ತರಪ್ರದೇಶದ ಭಾಗ್‌ಪತ್‌ ಜಿಲ್ಲೆಯ ಮಾಲಕ್‌ಪುರ್‌ ಪುಟ್ಟ ಹಳ್ಳಿ. ಇಲ್ಲಿ ಕುಸ್ತಿ ಬಹಳ ಜನಪ್ರಿಯ. ಅರ್ಜುನ ಪ್ರಶಸ್ತಿ ಪಡೆದ ಮೂವರು ಕುಸ್ತಿಪಟುಗಳು ಈ ಗ್ರಾಮದವರು. ಗ್ರಾಮದಲ್ಲಿ ಸಹಜವಾಗಿ ಕುಸ್ತಿ ಪಂದ್ಯಾಟಗಳು ಹೆಚ್ಚು. ಜಾಟರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಊರಿನಲ್ಲಿ ತಾರಾಮೌಲ್ಯದ ಕಬಡ್ಡಿ ಆಟಗಾರನಾಗಿ ಬೆಳಕಿಗೆ ಬಂದವರು ನಿತಿನ್‌ ತೋಮರ್‌. ಸರ್ವಿಸಸ್‌ ಆಟಗಾರರಿಗೆ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅವಕಾಶ ಸಿಕ್ಕಿದ್ದು ಮೂರು ವರ್ಷಗಳಲ್ಲಿ ಇದೇ ಮೊದಲು. ಬೆಂಗಾಲ್‌ ವಾರಿಯರ್ಸ್‌ ತಂಡಕ್ಕೆ ‘ಡ್ರಾ’ ಮೂಲಕ ಸೇರ್ಪಡೆಗೊಂಡ ನಿತಿನ್‌ ತೋಮಾರ್‌ ಅವರು ಪ್ರಸಕ್ತ ಲೀಗ್‌ನ ಅಗ್ರಮಾನ್ಯ ರೈಡರ್‌. ಶುಕ್ರವಾರದ ಕೊನೆಗೆ ಪಟ್ನಾ ಪೈರೇಟ್ಸ್‌ ತಂಡದ ಪ್ರದೀಪ್‌ ನರ್ವಾಲ್‌ ಮತ್ತು ನಿತಿನ್‌ ತಲಾ 42 ಅಂಕಗಳೊಂದಿಗೆ ಯಶಸ್ವಿ ರೈಡರ್‌ಗಳು ಮುಂಚೂಣಿಯಲ್ಲಿದ್ದಾರೆ. ಮುಂಬೈನಲ್ಲಿ ನೌಕಾಪಡೆಯ ಸೇಲರ್‌ (ನಾವಿಕ) ಆಗಿರುವ, 21 ವರ್ಷದ ನಿತಿನ್‌ ಪ್ರತಿ ಪಂದ್ಯಕ್ಕೆ ಸರಾಸರಿ ಏಳು ರೈಡಿಂಗ್‌ ಪಾಯಿಂಟ್‌ಗಳನ್ನು ಪಡೆದಿದ್ದು, ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮೂರು ಟ್ಯಾಕಲ್‌ ಪಾಯಿಂಟ್‌ಗಳನ್ನೂ ಅವರು ಗಳಿಸಿದ್ದಾರೆ. ಸಮತೋಲನ ನಾಯಕ ನೀಲೇಶ್‌ ಶಿಂಧೆ ಮತ್ತು ಬಾಜಿರಾವ್‌ ಹೊಡಗೆ ಅವರಂಥ ಆಟಗಾರರಿಂದ ಬೆಂಗಾಲ್‌ ವಾರಿಯರ್ಸ್‌ ದಾಳಿಗಿಂತ, ರಕ್ಷಣಾ ವಿಭಾಗದಲ್ಲೇ ಹೆಚ್ಚಿನ ಶಕ್ತಿ ಹೊಂದಿತ್ತು. ಈ ಬಾರಿ ಗಿರೀಶ್‌ ಮಾರುತಿ ಎರ್ನಾಕ್‌ ಅವರ ಸೇರ್ಪಡೆ ರಕ್ಷಣಾ ವಿಭಾಗವನ್ನು ಇನ್ನಷ್ಟು ಬಲಗೊಳಿಸಿತು. ಆದರೆ ನಿತಿನ್‌ ಸೇರ್ಪಡೆ ತಂಡಕ್ಕೆ ರೈಡಿಂಗ್‌ ವಿಭಾಗದಲ್ಲಿ ಹೆಚ್ಚಿನ ಬಲ ತಂದಿದ್ದು, ತಂಡಕ್ಕೆ ಸಮತೋಲನ ತಂದುಕೊಟ್ಟಿದೆ. ‘ಕಳೆದ ಋತುವಿನಲ್ಲಿ ನಾವು ಜಂಗ್‌ ಕುನ್‌ ಲೀ (ದಕ್ಷಿಣ ಕೊರಿಯ ಮೂಲದ ಆಟಗಾರ) ಅವರನ್ನೇ ಹೆಚ್ಚು ನೆಚ್ಚಿಕೊಳ್ಳಬೇಕಿತ್ತು. ಆದರೆ ನಿತಿನ್‌ ನಮ್ಮ ಶಕ್ತಿಯನ್ನು ಹೆಚ್ಚಿಸಿದ್ದಾರೆ. ನಮ್ಮಲ್ಲಿ ಸೇರ್ಪಡೆಗೊಳ್ಳುವ ಮೊದಲು ಅವರು ಭಾರತ ತಂಡದ ಶಿಬಿರದಲ್ಲೂ ಭಾಗವಹಿಸಿದ್ದರು. ಹೀಗಾಗಿ ನಮಗೆ ಅನುಕೂಲವೇ ಆಯಿತು’ ಎಂದು ಖುಷಿಯಿಂದ ಹೇಳುತ್ತಾರೆ ನಾಯಕ ನೀಲೇಶ್‌ ಶಿಂಧೆ. ಈ ಬಾರಿ ಬೆಂಗಾಲ್‌ ವಾರಿಯರ್ಸ್‌ ತಂಡದ ಕೋಚ್‌ ಆಗಿರುವ ಪ್ರತಾಪ್‌ ಶೆಟ್ಟಿ ಕೂಡ ‘ನಿತಿನ್‌ ನಮಗೆ ಡ್ರಾ ಮೂಲಕ ಸಿಕ್ಕಿದ ಆಟಗಾರ. ಆದರೆ ಅವರ ಆಗಮನ ತಂಡಕ್ಕೆ ಸಂಜೀವಿನಿ ರೀತಿಯಂತೆ ಆಗಿದೆ’ ಎಂದು ಹೇಳುತ್ತಾರೆ. ಕುಸ್ತಿಯ ತವರು ‘ನನ್ನ ಊರು ಕುಸ್ತಿಗೆ ಪ್ರಸಿದ್ಧ. ಜಾಟರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಊರಿನಲ್ಲಿ ನೂರಾರು ಪೈಲ್ವಾನರಿದ್ದಾರೆ. ನಮ್ಮ ತಂದೆ ಕೂಡ ಪೈಲ್ವಾನರೇ. ಬಾಲ್ಯದಲ್ಲಿ ನಾನೂ ಕುಸ್ತಿಗೆ ಹೋಗುತ್ತಿದ್ದೆ. ಆದರೆ ಕಬಡ್ಡಿ ಆಟಗಾರನಾಗಿದ್ದು ಆಕಸ್ಮಿಕ. ಶಾಲಾ ಬಾಲಕನಾಗಿದ್ದಾಗ ನಮ್ಮೂರಿನಲ್ಲಿ ಒಂದು ಕಬಡ್ಡಿ ಟೂರ್ನಿ ನಡೆಯಿತು. ಅದನ್ನು ನೋಡಿದ ಮೇಲೆ ನಾನೂ ಏಕೆ ಕಬಡ್ಡಿ ಆಟಗಾರನಾಗಬಾರದು ಎಂಬ ಆಸೆ ಮೂಡಿತು. ಇದು ಕಬಡ್ಡಿ ಆಟದತ್ತ ಆಕರ್ಷಿತನಾಗಲು ಕಾರಣವಾಯಿತು’ ಎನ್ನುತ್ತಾರೆ ನಿತಿನ್‌. ಮೀರತ್‌ನಲ್ಲಿ ಪದವಿ ಓದಿರುವ ನಿತಿನ್‌ ತಮಗೆ ನೌಕಾಪಡೆಯ ಕೋಚ್‌ ನವೀನ್‌ ಕುಮಾರ್‌ ನೀಡಿರುವ ಪ್ರೋತ್ಸಾಹವನ್ನೂ ನೆನಪು ಮಾಡಿಕೊಳ್ಳುತ್ತಾರೆ. ‘ನಾನು ಒಳ್ಳೆಯ ಆಟಗಾರನಾಗಬೇಕು. ದೇಶಕ್ಕೆ ಆಡುತ್ತಲೇ ಇರಬೇಕು ಎನ್ನುವುದು ನನ್ನ ಕನಸು’ ಎನ್ನುತ್ತಾರೆ. ಯು ಮುಂಬಾದಲ್ಲಿರುವ ಭಾರತ ತಂಡದ ಆಟಗಾರ ಅನೂಪ್‌ಕುಮಾರ್‌ ನನಗೆ ‘ಆದರ್ಶಪ್ರಾಯ ವ್ಯಕ್ತಿ’ ಎನ್ನುತ್ತಾರೆ ನಿತಿನ್‌. ಪ್ರೊ ಕಬಡ್ಡಿಯಲ್ಲಿ ನನ್ನ ಯಶಸ್ಸು ನೋಡಿದ ನಂತರ ಊರಿನಲ್ಲಿ ಎಲ್ಲರೂ ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಊರಿಗೆ ಹೋದರೆ ಜನ ಮುತ್ತಿಕೊಳ್ಳುತ್ತಾರೆ’ ಎಂದು ಹೇಳುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.