ಟ್ರಕ್‌ರೇಸ್‌ನಲ್ಲಿ ದೇಸಿ ವೇಗ ಭಾರತದ ರೇಸ್‌ ಟ್ರ್ಯಾಕ್‌ನೊಳಗೆ ಟ್ರಕ್‌ಗಳು ಅಬ್ಬರಿಸಲು ಶುರುವಾಗಿದ್ದು ಎರಡು ವರ್ಷದಿಂದೀಚೆಗಷ್ಟೆ. ಅಮೆರಿಕದಲ್ಲಿ ಆರಂಭವಾದ ಟ್ರಕ್‌ರೇಸ್‌ ಸ್ಪರ್ಧೆ ಭಾರತದಲ್ಲಿ ತಕ್ಕಮಟ್ಟಿಗೆ ಪರಿಚಿತವಾಗಿದೆ. ಆದರೆ, ಭಾರತದ ಟ್ರಕ್‌ ಚಾಲಕರು ಈವರೆಗೂ ಟ್ರಕ್‌ರೇಸ್‌ ಸ್ಪರ್ಧೆಗಿಳಿದಿಲ್ಲ. ಸಾಮಾನ್ಯ ಟ್ರಕ್‌ ಚಾಲಕರೂ ಟ್ರಕ್‌ರೇಸ್‌ನಲ್ಲಿ ಮಿಂಚುವ ಅವಕಾಶವನ್ನು ಇದೀಗ ಟಾಟಾ ಮೋಟಾರ್ಸ್‌ ಕಂಪೆನಿ ಕಲ್ಪಿಸಿದೆ. ಎರಡು ಆವೃತ್ತಿಯ ಟಿ1 ಟ್ರಕ್‌ರೇಸ್‌ ಆಯೋಜಿಸಿರುವ ಟಾಟಾ ಕಂಪೆನಿ, ಮೂರನೇ ಆವೃತ್ತಿಯ ಟಿ1 ಟ್ರಕ್‌ರೇಸ್‌ಗೆ ಸಿದ್ಧತೆ ನಡೆಸುತ್ತಿದೆ. ಟಿ1 ಟ್ರಕ್‌ರೇಸ್‌ನ ಈ ಬಾರಿಯ ವಿಶೇಷ ದೇಶದ ಸಾಮಾನ್ಯ ಟ್ರಕ್‌ ಚಾಲಕರು ಟ್ರ್ಯಾಕ್‌ಗಿಳಿಯುತ್ತಿರುವುದು! ಟ್ರಕ್‌ ಚಾಲನಾ ನಿಪುಣರ ತಂಡ ಕಳೆದೊಂದು ತಿಂಗಳಿಂದ ದೇಶದ 26 ಮಂದಿ ಟ್ರಕ್‌ ಚಾಲಕರನ್ನು ಈ ಸ್ಪರ್ಧೆಗಾಗಿ ಅಣಿಗೊಳಿಸುತ್ತಿದೆ. ಚೆನ್ನೈನ ಮದ್ರಾಸ್‌ ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ನ ಟ್ರ್ಯಾಕ್‌ನಲ್ಲಿ ಚಾಲಕರ ಟ್ರಕ್‌ರೇಸ್‌ ಅಭ್ಯಾಸ ನಡೆಯುತ್ತಿದೆ. ಟ್ರಕ್‌ರೇಸ್‌ನಲ್ಲಿ ಭಾರತದ ಪ್ರತಿಭೆಗಳು ಮುಂದೆ ಬರಬೇಕೆಂಬ ಉದ್ದೇಶದಿಂದ ಈ ಬಾರಿ ದೇಸೀ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ. 45 ವರ್ಷದೊಳಗಿನ ಆರೋಗ್ಯವಂತ, ಸದೃಢ ಟ್ರಕ್‌ ಚಾಲಕರನ್ನು ಈ ಸ್ಪರ್ಧೆಗಾಗಿ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಟಾಟಾ ಕಂಪೆನಿ ಜನವರಿ ತಿಂಗಳಲ್ಲಿ ಆರಂಭಿಸಿತು. ದೇಶದ ಬೇರೆ ಬೇರೆ ಭಾಗದ 132 ಮಂದಿ ಚಾಲಕರ ಪೈಕಿ 26 ಮಂದಿಯನ್ನು ಆಯ್ದು ಅವರಿಗೆ ಈ ರೇಸ್‌ನ ತರಬೇತಿ ನೀಡಲಾಗಿದೆ. ಇವರಲ್ಲಿ 14 ಮಂದಿ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ಈ ಹಿಂದೆ ಭಾರತದಲ್ಲಿ ನಡೆದಿರುವ ಎರಡೂ ಆವೃತ್ತಿಯ ಟಿ1 ಟ್ರಕ್‌ರೇಸ್‌ಗಳಲ್ಲಿ ಗೆಲುವು ಕಂಡಿರುವುದು ಬ್ರಿಟನ್‌ನ ಟ್ರಕ್ ರೇಸರ್‌ ಸ್ಟುವರ್ಟ್‌ ಆಲಿವರ್‌. ಮೂರನೇ ಆವೃತ್ತಿಯ ಸ್ಪರ್ಧೆಯಲ್ಲಿ ಭಾರತದ ಪ್ರತಿಭೆ ‘ಇಂಡಿಯನ್‌ ಟ್ರಕ್‌ ರೇಸರ್‌’ ಪಟ್ಟ ತಮ್ಮದಾಗಿಸಿಕೊಳ್ಳಲಿದ್ದಾರೆ. ಅಂದಹಾಗೆ ಇದು ಭಾರತೀಯ ಟ್ರಕ್‌ ಚಾಲಕರಿಗಾಗಿಯೇ ನಡೆಯುತ್ತಿರುವ ಮೊದಲ ಸ್ಪರ್ಧೆ. ‘ಮದ್ರಾಸ್‌ ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ನ 12 ಕ್ಲಿಷ್ಟಕರ ತಿರುವುಗಳ 3.74 ಕಿ.ಮೀನ ರೇಸ್‌ ಟ್ರ್ಯಾಕ್‌ನಲ್ಲಿ ಟಾಟಾ ಪ್ರೈಮಾ ಟ್ರಕ್‌ಗಳನ್ನು ಚಾಲನೆ ಮಾಡುವ ತಂತ್ರಗಳನ್ನು ಚಾಲಕರಿಗೆ ಕಲಿಸಲಾಗಿದೆ. ರೇಸ್‌ಗಾಗಿ ಟ್ರಕ್‌ ಚಾಲನೆಯ ಸೂಕ್ಷ್ಮಗಳ ಜತೆಗೆ ಟ್ರ್ಯಾಕ್‌ನಲ್ಲಿ ಟ್ರಕ್‌ ಮುನ್ನಡೆಸಲು ಬೇಕಾದ ಕುಶಲತೆಯ ಬಗ್ಗೆ ಚಾಲಕರಿಗೆ ತರಬೇತಿ ನೀಡಲಾಗಿದೆ’ ಎಂದು ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನಗಳ ಘಟಕದ ಹಿರಿಯ ಉಪಾಧ್ಯಕ್ಷ ಆರ್‌. ರಾಮಕೃಷ್ಣನ್‌ ಮಾಹಿತಿ ನೀಡಿದರು. ‘12 ವರ್ಷದಿಂದ ಟ್ರಕ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ತಿಂಗಳ ಕಾಲ ನಡೆದ ತರಬೇತಿಯಲ್ಲಿ ಟ್ರಕ್‌ರೇಸ್‌ಗಾಗಿ ಅಗತ್ಯವಿರುವ ತಾಂತ್ರಿಕ ಅಂಶಗಳ ಜತೆಗೆ ಮನೋಬಲ ಹೆಚ್ಚಿಸಿಕೊಳ್ಳುವ ಬಗ್ಗೆಯೂ ಸಾಕಷ್ಟು ಕಲಿಸಿದ್ದಾರೆ. ಅಂತಿಮ ಸ್ಪರ್ಧೆಯಲ್ಲಿ ನಾನೇ ಗೆಲ್ಲುತ್ತೇನೆಂಬ ವಿಶ್ವಾಸವಿದೆ’ ಎಂದವರು ಹರಿಯಾಣದ ಚಾಲಕ ಆನಂದ್‌. ದೆಹಲಿ ಬಳಿಯ ಗ್ರೇಟರ್‌ ನೋಯ್ಡಾದಲ್ಲಿರುವ ಬುದ್ಧ ಇಂಟರ್‌ನ್ಯಾಷನಲ್‌ ಸರ್ಕಿಟ್‌ನಲ್ಲಿ ಮಾರ್ಚ್‌ 20ರಂದು ಮೂರನೇ ಆವೃತ್ತಿಯ ಟಿ1 ಟ್ರಕ್‌ರೇಸ್‌ ಅಂತಿಮ ಸ್ಪರ್ಧೆ ನಡೆಯಲಿದೆ. 14 ಮಂದಿ ಚಾಲಕರ ಪೈಕಿ ಭಾರತದ ಮೊದಲ ಟ್ರಕ್‌ರೇಸರ್‌ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.