ಅಂಗವಿಕಲರ ಕ್ರಿಕೆಟ್‌ ಬದಲಾವಣೆಯ ಗಾಳಿ ತೋಳಿನ ಭಾಗದಿಂದ ಒಂದು ಕೈ ತುಂಡಾದ ವ್ಯಕ್ತಿ, ಕತ್ತರಿಸಿದ ಕಾಲನ್ನು ನೇತಾಡಿಸುತ್ತ ಊರುಗೋಲಿನ ನೆರವಿನಿಂದ ನಡೆಯುವ ಮತ್ತೊಬ್ಬ ವ್ಯಕ್ತಿ... ಹೀಗೆ ನಾನಾ ಬಗೆಯ ಅಂಗವೈಕಲ್ಯವನ್ನು ಹೊಂದಿದ್ದರೂ ಕುಂದದ ಜೀವನೋತ್ಸಾಹವನ್ನು ವ್ಯಕ್ತಪಡಿಸುತ್ತಾ ಓಡಾಡುವವರ ಪೈಕಿ ಅನೇಕರು ಕ್ರಿಕೆಟ್‌ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಬ್ಯಾಟ್‌ ಹಿಡಿಯಲು ಅಥವಾ ಚೆಂಡು ಎಸೆಯಲು ಸಾಧ್ಯವೇ ಎಂಬ ಸಂದೇಹದಿಂದ ನೋಡುತ್ತಿದ್ದಂತೆ ಅದ್ಭುತ ಸಾಮರ್ಥ್ಯ ಪ್ರದರ್ಶಿಸಿ ಮೆಚ್ಚುಗೆ ಗಳಿಸಬಲ್ಲ ಪ್ರತಿಭೆಗಳು ಅಂಗವಿಕಲರ ಕ್ರಿಕೆಟ್‌ನಲ್ಲಿ ಇದ್ದಾರೆ. ಇಂಥವರ ಆತ್ಮವಿಶ್ವಾಸಕ್ಕೆ ಮೆಚ್ಚಿರುವ ಅಖಿಲ ಭಾರತ ಅಂಗವಿಕಲರ ಕ್ರಿಕೆಟ್ ಸಂಸ್ಥೆ (ಎ.ಐ.ಸಿ.ಎ.ಪಿ.ಸಿ) ಇದೀಗ ಅನೇಕ ಬದಲಾವಣೆಗಳನ್ನು ಮಾಡುವ ದಿಶೆಯಲ್ಲಿ ಹೆಜ್ಜೆ ಇರಿಸಿದೆ. ಇದರ ಮೊದಲ ಹೆಜ್ಜೆಯಾಗಿ ಲೆದರ್‌ ಬಾಲ್ ಬಳಕೆಗೆ ವೇದಿಕೆ ಸಿದ್ಧವಾಗಿದೆ. 1998ರಲ್ಲಿ ಅಸ್ತಿತ್ವಕ್ಕೆ ಬಂದ ಎ.ಐ.ಸಿ.ಎ.ಪಿ.ಸಿಗೆ ಫೆಬ್ರುವರಿ 24 ಮಹತ್ವದ ದಿನ. ಆಂಧ್ರಪ್ರದೇಶದ ಅನಂತಪುರದಲ್ಲಿ ಅಂದು ಆರಂಭವಾಗಲಿರುವ ಅಂಗವಿಕಲರ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಲೆದರ್‌ ಬಾಲ್ ಬಳಸಲು ನಿರ್ಧರಿಸಲಾಗಿದೆ. ಟೂರ್ನಿಯಲ್ಲಿ ಸಮರ್ಪಕವಾಗಿ ಆಡುವ ಸಲುವಾಗಿ ತಂಡಗಳು ಈಗಾಗಲೇ ಲೆದರ್ ಬಾಲ್‌ನಲ್ಲಿ ಅಭ್ಯಾಸ ನಡೆಸಿದ್ದು ಹೊಸತನಕ್ಕೆ ಅಂಗವಿಕಲರು ಒಗ್ಗಿಕೊಂಡರೆ ಈ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಲಿದೆ. ಯಾಕೆಂದರೆ ಅಂಗವಿಕಲರ ಕ್ರಿಕೆಟ್‌ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾನ್ಯತೆ ಸಿಗುವ ಪ್ರಯತ್ನಕ್ಕೆ ಇದು ಮೊದಲ ಹೆಜ್ಜೆಯಾಗಲಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅಜಿತ್‌ ವಾಡೇಕರ್‌ ಸ್ಥಾಪಿಸಿದ ಅಂಗವಿಕಲರ ಕ್ರಿಕೆಟ್‌ ಸಂಸ್ಥೆಗೆ ಬಿಸಿಸಿಐ ಮಾನ್ಯತೆ ನೀಡಬೇಕೆಂಬ ಬೇಡಿಕೆ ಅನೇಕ ವರ್ಷಗಳಿಂದ ಇದೆ. ಈ ಬೇಡಿಕೆ ಈಡೇರಿಸಲು ಇದ್ದ ದೊಡ್ಡ ಅಡ್ಡಿ ಎಂದರೆ ಚೆಂಡು. ಇಲ್ಲಿಯವರೆಗೆ ಅಂಗವಿಕಲರ ಕ್ರಿಕೆಟ್‌ನಲ್ಲಿ ಸಾಫ್ಟ್ ಲೆದರ್‌ ಬಾಲ್‌ ಬಳಸಲಾಗುತ್ತಿತ್ತು. ಲೆದರ್ ಬಾಲ್ ಬಳಸಿದರೆ ಮಾತ್ರ ಬಿಸಿಸಿಐ ಮಾನ್ಯತೆಗೆ ಪ್ರಯತ್ನ ಮಾಡಬಹುದು ಎಂಬುದನ್ನು ಮನಗಂಡ ಎ.ಐ.ಸಿ.ಎ.ಪಿ.ಸಿ ಕೆಲವು ತಿಂಗಳುಗಳಿಂದ ಇದಕ್ಕಾಗಿ ಸಿದ್ಧತೆ ನಡೆಸಿದೆ. ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಲೆದರ್‌ ಬಾಲ್‌ನಲ್ಲೇ ಭಾರತ ತಂಡ ಆಡಿತ್ತು. ಅಲ್ಲಿ ಕಂಡ ಯಶಸ್ಸು ಸಾಫ್ಟ್ ಲೆದರ್‌ ಬಾಲ್‌ ಅನ್ನು ಕಣದಿಂದ ದೂರ ಇರಿಸಲು ಪ್ರೇರೇಪಿಸಿದೆ. ಚೆಂಡು ಬದಲಾಗುವುದರೊಂದಿಗೆ ಆಟದ ನಿಯಮಗಳಲ್ಲೂ ಕೆಲ ಬದಲಾವಣೆಗಳಾಗಿವೆ. ಇನ್ನು ಮುಂದೆ ಕನಿಷ್ಠ 40 ಶೇಕಡ ಅಂಗವೈಕಲ್ಯ ಇದ್ದವರು ಮಾತ್ರ ಅಂಗವಿಕಲರ ಕ್ರಿಕೆಟ್ ಆಡಲು ಅರ್ಹರು. ಬ್ಯಾಟ್ಸ್‌ಮನ್‌ ವಿಕೆಟ್ ಮಧ್ಯೆ ಓಡಲು ರನ್ನರ್‌ ನೆರವು ಪಡೆಯುವಂತಿಲ್ಲ. ಈ ಹಿಂದೆ ಟೂರ್ನಿಗಳು ನಾಕೌಟ್ ಮಾದರಿಯಲ್ಲಿ ನಡೆಯುತ್ತಿದ್ದರೆ, ಇನ್ನು ಲೀಗ್ ಕಮ್‌ ನಾಕೌಟ್‌ ಮಾದರಿಯಲ್ಲಿ ಜರುಗಲಿವೆ. ‘ಇಂಗ್ಲೆಂಡ್‌, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಅಂಗವಿಕಲರ ಕ್ರಿಕೆಟ್‌ಗೆ ಅಲ್ಲಿನ ಕ್ರಿಕೆಟ್ ಸಂಸ್ಥೆಗಳು ಮಾನ್ಯತೆ ನೀಡಿವೆ. ಅಲ್ಲಿ ಲೆದರ್ ಬಾಲ್ ಬಳಸಲಾಗುತ್ತದೆ. ಭಾರತದಲ್ಲಿ ಬಿಸಿಸಿಐ ಮಾನ್ಯತೆ ಲಭಿಸಿದರೆ ಅಂಗವಿಕಲರ ಕ್ರಿಕೆಟ್‌ನಲ್ಲಿ ಹೊಸ ಶಕೆ ಆರಂಭವಾಗಲಿದೆ. ಆದ್ದರಿಂದ ಹೊಸ ನಿಯಮಗಳನ್ನು ಅಳವಡಿಸಲಾಗುತ್ತಿದೆ. ಲೆದರ್ ಬಾಲ್ ಬಳಸುವುದರಿಂದ ಇನ್ನು ಮುಂದೆ ಅಂಗವಿಕಲರ ಕ್ರಿಕೆಟ್‌ನಲ್ಲೂ ಹೆಲ್ಮೆಟ್ ಮತ್ತು ಪ್ಯಾಡ್ ಕಡ್ಡಾಯವಾಗಿ ಬಳಸಬೇಕಾಗುತ್ತದೆ’ ಎಂದು ಎ.ಐ.ಸಿ.ಎ.ಪಿ.ಸಿ ದಕ್ಷಿಣ ವಲಯ ಪ್ರತಿನಿಧಿ ಶಿವಾನಂದ ಗುಂಜಾಳ ಹೇಳುತ್ತಾರೆ. ‘ಲೆದರ್ ಬಾಲ್‌ನಲ್ಲಿ ಆಡುವುದು ಕಷ್ಟವಾಗಲಾರದು. ಅಂಗವಿಕಲರು ಕ್ರಿಕೆಟ್‌ನಲ್ಲಿ ಈಗಾಗಲೇ ಪಳಗಿದ್ದಾರೆ. ಆದ್ದರಿಂದ ಚೆಂಡು ಬದಲಾದ ಮಾತ್ರಕ್ಕೆ ಆಟದಲ್ಲಿ, ಆಟದ ಶೈಲಿಯಲ್ಲಿ ಬದಲಾವಣೆಯಾಗದು. ಹೊಸ ಚೆಂಡು, ಹೊಸ ನಿಯಮಗಳು ಅಂಗವಿಕಲರ ಕ್ರಿಕೆಟ್‌ನ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದು ರಾಜ್ಯದ ಆಟಗಾರ ಮಂಜುನಾಥ ಮರಾಠೆ ಹೇಳಿದರು. ****** ‘ಕೋಟಾ ಪದ್ಧತಿ ಇರಲಾರದು’ ಹೊಸ ನಿಯಮಗಳ ಪ್ರಕಾರ ಇನ್ನು ಮುಂದೆ ಅಂಗವಿಕಲರ ಕ್ರಿಕೆಟ್‌ನಲ್ಲಿ ಆಡಲು ಎಲ್ಲರಿಗೂ ಅವಕಾಶ ಸಿಗದು. ಈ ತನಕ ಕೈಯ ಒಂದು ಬೆರಳು ಮುರಿದು ಹೋಗಿದ್ದರೂ ಅವರನ್ನು ಅಂಗವಿಕಲರು ಎಂದು ಪರಿಗಣಿಸಲಾಗುತ್ತಿತ್ತು. ವೈಕಲ್ಯದ ಪ್ರಮಾಣ ಕನಿಷ್ಠ 40 ಶೇಕಡ ಇದ್ದರೆ ಮಾತ್ರ ಇನ್ನು ಮುಂದೆ ಆಡಲು ಅವಕಾಶ ಸಿಗಲಿದೆ. ಆಯ್ಕೆಯಾದ ಆಟಗಾರರನ್ನು ವೈಕಲ್ಯದ ಪ್ರಮಾಣದ ಆಧಾರದಲ್ಲಿ ಬೇರ್ಪಡಿಸಿ ಅವರವರ ವಿಭಾಗದ ಕೋಟಾದಡಿ ಆಡಲು ಅವಕಾಶ ನೀಡುವ ಪದ್ಧತಿ ಇಲ್ಲಿಯವರೆಗೆ ಇತ್ತು. ಇನ್ನು ಮುಂದೆ 40 ಶೇಕಡ ವೈಕಲ್ಯ ಇರುವವರಿಗೆ ಮಾತ್ರ ಅವಕಾಶ ಇರುತ್ತದೆ. ಅವರು ಮಾತ್ರ ತಂಡದಲ್ಲಿ ಇರುತ್ತಾರೆ. ಬದಲಾವಣೆಗಳಿಂದಾಗಿ ಅಂಗವಿಕಲರ ಕ್ರಿಕೆಟ್ ಹೆಚ್ಚು ಬೆಳಕಿಗೆ ಬರಲಿದೆ. ಅಂಗವಿಕಲರು ಹೋರಾಟದ ಶಕ್ತಿ ಹೆಚ್ಚಿಸಿಕೊಂಡಿರುವುದರಿಂದ ಲೆದರ್‌ ಬಾಲ್ ಬಳಕೆ ಮತ್ತಿತರ ಹೊಸತನಗಳು ದುಷ್ಪರಿಣಾಮ ಬೀರಲಾರವು. ಆದ್ದರಿಂದ ಆಟಗಾರರು ಕೂಡ ಇನ್ನು ಮುಂದೆ ಮಿಂಚಲಿದ್ದಾರೆ ಎಂಬುದು ಅಂಗವಿಕಲರ ಕ್ರಿಕೆಟ್‌ನ ರಾಜ್ಯ ತಂಡದ ತರಬೇತುದಾರ ಮಹಮ್ಮದ್‌ ಅತ್ತಾರ್‌ ಅವರ ವಿಶ್ವಾಸದ ಮಾತುಗಳು. - ಮಹಮ್ಮದ್‌ ಅತ್ತಾರ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.