ಛಲದ ಆಟಗಾರ ಮಂಜೀತ್... ಪ್ರೊ ಕಬಡ್ಡಿ ಲೀಗ್‌ ಮೂರನೇ ಆವೃತ್ತಿಯಲ್ಲಿ ಅಚ್ಚರಿಯ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯ ಪ್ರದರ್ಶಿಸಿದ ತಂಡ ಪುಣೇರಿ ಪಲ್ಟನ್. ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ‘ಸಮ’ ಮಾಡಿಕೊಂಡ ಏಕೈಕ ತಂಡ ಇದು. ಅದೂ ಈ ಆವೃತ್ತಿಯ ಅತ್ಯಂತ ಬಲಿಷ್ಠ ತಂಡವಾಗಿರುವ ಪಟ್ನಾ ಪೈರೇಟ್ಸ್‌ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಸಮಬಲ ಪ್ರದರ್ಶಿಸಿದ ಪಲ್ಟನ್ ಹಿಂದಿರುವ ಶಕ್ತಿ ಮಂಜೀತ್ ಚಿಲಾರ. ಒಟ್ಟು ಎಂಟು ಪಂದ್ಯಗಳಲ್ಲಿ ಎರಡು ಗೆದ್ದಿರುವ ಪಲ್ಟನ್ ಮೂರರಲ್ಲಿ ಸೋತಿದೆ. ಪಾಯಿಂಟ್ ಪಟ್ಟಿಯಲ್ಲಿ (ಶುಕ್ರವಾರದ ಅಂತ್ಯಕ್ಕೆ) ಐದನೇ ಸ್ಥಾನದಲ್ಲಿದೆ. ಪ್ರೊ ಕಬಡ್ಡಿಯ ಮೊದಲ ಎರಡು ಋತುಗಳಲ್ಲಿ ಬೆಂಗಳೂರು ಬುಲ್ಸ್ ತಂಡದ ನಾಯಕರಾಗಿದ್ದ ಮಂಜೀತ್ ಈಗ ಪುಣೇರಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೋದ ವರ್ಷ ಬುಲ್ಸ್ ತಂಡವು ರನ್ನರ್ಸ್ ಅಪ್ ಆಗಿತ್ತು. ತಮ್ಮ ಆಟದ ಮೂಲಕ ಪುಣೆಯ ಪ್ರೇಕ್ಷಕರ ಮನಗೆದ್ದಿದ್ದಾರೆ. ಹರಿಯಾಣದ 29 ವರ್ಷದ ಆಲ್‌ರೌಂಡರ್ ಮಂಜೀತ್ ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನ ಇಲ್ಲಿದೆ. * ಪುಣೇರಿ ತಂಡದ ನಾಯಕನಾಗಿ ಎದುರಿಸಿದ ಸವಾಲುಗಳ ಬಗ್ಗೆ. ಹೊಸ ತಂಡದಲ್ಲಿ ಹೊಂದಿಕೊಳ್ಳಲು ಏನೂ ಕಷ್ಟವಾಗಲಿಲ್ಲ. ಎಲ್ಲರಿಂದಲೂ ಉತ್ತಮ ಸಹಕಾರ ದೊರೆಯುತ್ತಿದೆ. ಕೋಚ್ ಅಶೋಕ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಬೆಂಗಳೂರು ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ. ಅದೇ ಸಾಮರ್ಥ್ಯವನ್ನು ಇಲ್ಲಿಯೂ ಮುಂದುವರಿಸಿದ್ದೇನೆ. ನಾವು ಯಾವ ತಂಡವನ್ನೂ ಹಗುರವಾಗಿ ಪರಿಗಣಿಸಿಲ್ಲ. * ಸದ್ಯದ ಟೂರ್ನಿಯಲ್ಲಿ ನಿಮ್ಮ ತಂಡವು ಪ್ಲೇ ಆಫ್ ಪ್ರವೇಶಿಸಲು ಇರುವ ಅವಕಾಶದ ಕುರಿತು ಹೇಳಿ. ಮೂರು ಪಂದ್ಯಗಳು ಡ್ರಾ ಆಗಿದ್ದರಿಂದ ಮುಂದಿನ ಪಂದ್ಯಗಳನ್ನು ಜಯಿಸುವ ಅನಿವಾರ್ಯತೆ ಇದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರುವತ್ತ ನಮ್ಮ ಗುರಿಯಿದೆ. ಆದ್ದರಿಂದ ಮುಂದಿನ ಪಂದ್ಯಗಳನ್ನು ಬಹಳ ಎಚ್ಚರಿಕೆಯಿಂದ ಆಡಿ ಗೆಲ್ಲುತ್ತೇವೆ. * ನಿಮ್ಮ ತಂಡದ ಟ್ರಂಪ್ ಕಾರ್ಡ್‌ ಅಜಯ್ ಠಾಕೂರ್ ಕುರಿತು ಅಭಿಪ್ರಾಯ. ಅಜಯ್ ಠಾಕೂರ್ ಫಾರ್ಮ್‌ಗೆ ಮರಳಿರುವುದು ಬಹುದೊಡ್ಡ ವರದಾನವಾಗಿದೆ. ಕಳೆದ ಮೂರು ಲೀಗ್‌ಗಳಿಂದಲೂ ನಾವಿಬ್ಬರೂ ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ. ಅಜಯ್ ಭಾರತದ ಭರವಸೆಯ ಆಟಗಾರ. ರೈಡಿಂಗ್‌ನಲ್ಲಿ ಅವರು ತಂಡಕ್ಕೆ ನೀಡುತ್ತಿರುವ ಉಪಯುಕ್ತ ಕಾಣಿಕೆ ನಮ್ಮ ಹೋರಾಟಕ್ಕೆ ಬಲ ತುಂಬುತ್ತಿದೆ. ಅವರ ಪ್ರದರ್ಶನದಿಂದ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. * ಒಂದು ವರ್ಷಕ್ಕೆ ಎರಡು ಟೂರ್ನಿಗಳನ್ನು ನಡೆಸುತ್ತಿರುವುದು ಸೂಕ್ತವೇ? ಒಂದು ವರ್ಷದ ಅವಧಿಯಲ್ಲಿ ಎರಡು ಲೀಗ್‌ಗಳು ನಡೆದರೆ ಆಟಗಾರರಿಗೆ ಒಳ್ಳೆಯದು. ಅಭ್ಯಾಸ ಮಾಡಲು ಉತ್ತಮ ಅವಕಾಶ ಸಿಗುತ್ತದೆ. ಇದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ನಮಗೆ ಬಿಟ್ಟ ವಿಷಯ. ಇದು ಆಟದ ಬೆಳವಣಿಗೆಗೂ ಸಹಕಾರಿ. ನೀವೇ ನೋಡಿ ಇಷ್ಟು ಕಡಿಮೆ ಅವಧಿಯಲ್ಲಿ ಮತ್ತೊಂದು ಲೀಗ್‌ ಆಯೋಜನೆಗೊಂಡರೂ ಅಭಿಮಾನಿಗಳಿಂದ ಸಿಗುತ್ತಿರುವ ಸ್ಪಂದನೆ ಅದ್ಭುತವಾಗಿದೆ. ಕ್ರೀಡೆಯ ಬೆಳವಣಿಗೆಗೆ ಇದು ಅವಶ್ಯಕ. * ಪುಣೆಯ ಪ್ರೇಕ್ಷಕರ ಬೆಂಬಲ ಹೇಗಿದೆ? ಮಹಾರಾಷ್ಟ್ರದಲ್ಲಿ ಕಬಡ್ಡಿ ಬಹಳ ಜನಪ್ರಿಯ ಕ್ರೀಡೆ. ಒಳ್ಳೆಯ ಆಟಗಾರರನ್ನು ಬೆಂಬಲಿಸುವ ಗುಣ ಇಲ್ಲಿಯ ಕ್ರೀಡಾಪ್ರೇಮಿಗಳಿಗೆ ರಕ್ತಗತವಾಗಿಯೇ ಬಂದಿದೆ. ನಮ್ಮ ತಂಡ ಮತ್ತು ವೈಯಕ್ತಿಕವಾಗಿ ನನ್ನನ್ನು ಮರಾಠಿಗರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.