ಭಾರತದಲ್ಲಿ ನವಚೈತನ್ಯ ಟೇಬಲ್‌ ಟೆನಿಸ್‌ ಕ್ರೀಡೆಗೆ ಕ್ರಿಕೆಟಿನ ಜನಪ್ರಿಯತೆ, ಫುಟ್‌ಬಾಲ್‌ಗೆ ಇರುವಷ್ಟು ಅಭಿಮಾನಿಗಳ ಬಳಗ ಇಲ್ಲ. ಆದರೆ, ಇತರ ಕ್ರೀಡೆಗಳಿಗಿಂತಲೂ ಹೆಚ್ಚು ಚುರುಕುತನ ಬೇಡುವ ಕ್ರೀಡೆಯಿದು. 19ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿದ ಟೇಬಲ್‌ ಟೆನಿಸ್‌ ಸದ್ಯ ಚೀನಾ ಏಕಸ್ವಾಮ್ಯ ಹೊಂದಿದೆ. ಹಂಗರಿ, ಜಪಾನ್‌, ಸಿಂಗಪುರ, ಸ್ವೀಡನ್‌, ಆಸ್ಟ್ರೀಯಾ, ಇಂಗ್ಲೆಂಡ್ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿಯೂ ಈ ಕ್ರೀಡೆ ಜನಪ್ರಿಯವೇ. 1920ರ ಸುಮಾರಿಗೆ ಬ್ರಿಟಿಷರ ಮೂಲಕ ಭಾರತಕ್ಕೆ ಟಿಟಿ ಪರಿಚಯಗೊಂಡಿತು. 1937ರಲ್ಲಿ ಭಾರತ ಟೇಬಲ್‌ ಟೆನಿಸ್‌ ಫೆಡರೇಷನ್ ಜನ್ಮತಾಳಿತು. ಅಂದಿನಿಂದ ಈವರೆಗೂ ಮೂರು ವಿಶ್ವಚಾಂಪಿಯನ್‌ ಷಿಪ್‌ಗಳಿಗೆ (1952ರಲ್ಲಿ ಬಾಂಬೆ, 1975ರಲ್ಲಿ ಕಲ್ಕತ್ತಾ ಹಾಗೂ 1987ರಲ್ಲಿ ನವದೆಹಲಿ) ಭಾರತ ಆತಿಥ್ಯ ವಹಿಸಿದೆ. ಪುರುಷರ ವಿಭಾಗದಲ್ಲಿ ಉತ್ತಮ್ ಚಂದ್ರನ್, ವಿ.ಶಿವರಾಮನ್, ಕಲ್ಯಾಣ್, ಜಯಂತ್, ಸುಧೀರ್‌ ಥ್ಯಾಕರ್ಸೆ, ಗೌತಮ್ ದಿವಾನ್ ಹಾಗೂ ಕರ್ನಾಟಕದ ಕೃಷ್ಣ ನಾಗರಾಜ, ಚೇತನ್‌ ಬಬೂರ್ ಹಾಗೂ ಮಹಿಳಾ ವಿಭಾಗದಲ್ಲಿ ಗೂಲ್ ನಾಸಿಕ್‌ವಾಲಾ, ಸಯೀದಾ ಸುಲ್ತಾನಾ, ಉಷಾ ಸುಂದರರಾಜ್, ಕೈತಿ ಚಾರ್ಗೆಮನ್‌... ಹೀಗೆ ಹಲವು ದಿಗ್ಗಜರು ಈ ಕ್ರೀಡೆಯಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಭಾರತದ ಸಾಧನೆ... ವಿಶ್ವ ಕ್ರಮಾಂಕದಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡ ಕ್ರಮವಾಗಿ 22 ಹಾಗೂ 28ನೇ ಸ್ಥಾನದಲ್ಲಿವೆ. ಸ್ವಾತಂತ್ರ್ಯಕ್ಕೂ ಮುನ್ನ 1926ರಲ್ಲಿ ನಡೆದ ವಿಶ್ವ ಟೇಬಲ್ ಟೆನಿಸ್‌ ಚಾಂಪಿಯನ್‌ ಷಿಪ್‌ನಲ್ಲಿ ಭಾರತ ಕಂಚಿನ ಸಾಧನೆ ತೋರಿತ್ತು. 1950ರ ಅವಧಿ ಬ್ಯಾಡ್ಮಿಂಟನ್‌ನಂತೆ ಟೇಬಲ್‌ ಟೆನಿಸ್‌ಗೂ ಸುವರ್ಣ ಕಾಲ. 1952ರಲ್ಲಿ ಸಿಂಗಪುರದಲ್ಲಿ ನಡೆದ ಚೊಚ್ಚಲ ಏಷ್ಯನ್‌ ಟಿಟಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಆಟಗಾರ್ತಿ ಗೂಲ್ ನಾಸಿಕ್‌ವಾಲಾ ಮೂರು ಬಂಗಾರದ ಪದಕಗಳನ್ನು ಗೆದ್ದರು. 1956ರಲ್ಲಿ ಟೋಕಿಯೊದಲ್ಲಿ ನಡೆದ ವಿಶ್ವ ಟಿಟಿ ಚಾಂಪಿಯನ್‌ಷಿಪ್‌ನಲ್ಲಿ ಕೃಷ್ಣ ನಾಗರಾಜ್ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿ ಗಮನ ಸೆಳೆದಿದ್ದರು. 1959ರಲ್ಲಿ ಜರ್ಮನಿಯಯಲ್ಲಿ ನಡೆದ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪುರುಷರ ತಂಡವು 10ನೇ ಸ್ಥಾನ ಗಳಿಸಿತ್ತು. ಟೆನಿಸ್‌ ಲೋಕ ಭಾರತದತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿತ್ತು. ಆ ನಂತರದ ಅವಧಿಯಲ್ಲಿ ಭಾರತದ ತಂಡಗಳಿಂದ ಹೇಳಿ ಕೊಳ್ಳುವಂಥ ಸಾಮರ್ಥ್ಯ ಮೂಡಿ ಬಂದಿಲ್ಲ. ಮತ್ತೆ ಮಿಂಚು ಹಿಂದಿನ ನಿರಾಸೆಗಳಿಂದ ಭಾರತ ಈಗ ಮೈಕೊಡವಿ ನಿಂತಿದೆ. ಇತ್ತೀಚೆಗೆ ನಡೆದ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಥಿರ ಪ್ರದರ್ಶನ ತೋರುತ್ತಿರುವ ಅಚಂತಾ ಶರತ್ ಕಮಲ್, ಸೌಮ್ಯಜಿತ್ ಘೋಷ್, ಹರ್ಮಿತ್ ದೇಸಾಯಿ, ಮೌಮಾ ದಾಸ್‌, ಮನಿಕಾ ಬಾತ್ರಾ, ಕೆ.ಶಾಮಿನಿ ಸೇರಿದಂತೆ ಹಲವರು ಹೊಸ ಭರವಸೆ ಮೂಡಿಸಿದ್ದಾರೆ. ಟೇಬಲ್‌ ಟೆನಿಸ್‌ ಕ್ರೀಡೆಯಲ್ಲಿ ಶನಿವಾರ ಹೊಸ ಇತಿಹಾಸ ನಿರ್ಮಾಣವಾಗಿದೆ. ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆದ ವಿಶ್ವ ಟಿಟಿ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಪುರಷರ ಹಾಗೂ ಮಹಿಳೆಯರ ತಂಡಗಳು ಚಿನ್ನ ಗೆದ್ದು ಚಾಂಪಿಯನ್ಸ್‌ ಡಿವಿಷನ್‌ಗೆ ಅರ್ಹತೆ ಪಡೆದಿವೆ. ಬೇಕಿದೆ ವೃತ್ತಿಪರತೆ.. ವಿಶ್ವದಲ್ಲಿ ಚೀನಾದಂತೆಯೇ ಭಾರತದಲ್ಲಿ ಆದಿಯಿಂದಲೂ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಸ್ಪರ್ಧಿಗಳು ಟಿಟಿಯಲ್ಲಿ ಹಿಡಿತ ಸಾಧಿಸಿದ್ದಾರೆ. ಆದರೆ, ಚೆಸ್‌ನಂತೆಯೇ ಟೇಬಲ್‌ ಟೆನಿಸ್ ಕೂಡ ಶಾಲೆ, ಕಾಲೇಜು, ಕಚೇರಿ, ಹವ್ಯಾಸಕ್ಕೆ ಸೀಮಿತಗೊಂಡಿದೆ. ‘ಕೋಟಾ’ ಮೂಲಕ ಶೈಕ್ಷಣಿಕ ಲಾಭ ಪಡೆಯುವ ಉದ್ದೇಶದೊಂದಿಗೆ ಮಕ್ಕಳ ಕೈಗೆ ರಾಕೆಟ್‌ ನೀಡುವ ಪ್ರವೃತ್ತಿ ಬದಲಾಗಬೇಕಿದೆ. ವೃತ್ತಿಪರತೆಗೆ ಒತ್ತು ನೀಡುವ ಅಗತ್ಯವಿದೆ. ಲೀಗ್ ವೃತ್ತಿಪರತೆ ಹೆಚ್ಚಿಸುವ ನಿಟ್ಟಿನಲ್ಲಿ ಟಿಟಿ ಕೂಡ ಲೀಗ್‌ ಎಂಬ ಜನಪ್ರಿಯ ಪಥ ತುಳಿಯಲು ಮುಂದಾಗಿದೆ. ಐಪಿಎಲ್‌, ಐಎಸ್‌ಎಲ್‌, ಪಿಬಿಎಲ್‌ ಇವೆಲ್ಲವುಗಳ ಯಶಸ್ಸು ಈ ನಡೆಗೆ ಕಾರಣವಿರಬಹುದು. ಮುಂಬರುವ ಮೇ ಹಾಗೂ ಜೂನ್‌ ತಿಂಗಳಲ್ಲಿ ಚೊಚ್ಚಲ ಟೂರ್ನಿ ನಡೆಯಲಿದೆ. ಬಹುಮಾನದ ಮೊತ್ತ ಒಂದು ಕೋಟಿ ರೂಪಾಯಿ. ಇದು ದೇಶದ ಟಿಟಿಯಲ್ಲಿ ಹೊಸ ಚೈತನ್ಯ ತುಂಬುವ ನಿರೀಕ್ಷೆ ಮೂಡಿಸಿದ್ದು, ಫಲಿತಾಂಶ ಕಾದು ನೋಡಬೇಕಿದೆ. ಟಿಟಿ ಹೆಜ್ಜೆಗುರುತು... 19ನೇ ಶತಮಾನದಲ್ಲಿ ಟೇಬಲ್‌ ಟೆನಿಸ್‌ ಕ್ರೀಡೆ ಇಂಗ್ಲೆಂಡ್‌ನಲ್ಲಿ ಜನ್ಮ ತಾಳಿತು. ಆ ಬಳಿಕ ಈ ಕ್ರೀಡೆಯ ಕಂಪು ನಿಧಾನವಾಗಿ ವಿಶ್ವದ ಇತರೆಡೆಗೂ ಪಸರಿಸಿದೆ. 20ನೇ ಶತಮಾನದ ಆದಿಯಲ್ಲಿ ಈ ಕ್ರೀಡೆಯಲ್ಲಿ ಯೂರೋಪಿಯನ್ ರಾಷ್ಟ್ರಗಳ ಪಾರಮ್ಯವಿತ್ತು. ಆದರೆ, 1950ರ ನಂತರದ ದಶಕಗಳಲ್ಲಿ ಪೂರ್ವ ಏಷ್ಯಾ ರಾಷ್ಟ್ರಗಳು ಸ್ಥಿರ ಪ್ರದರ್ಶನ ನೀಡುತ್ತಿವೆ. ಅದರಲ್ಲೂ ಚೀನಾ ಆಧುನಿಕ ತವರು ಎನಿಸುವ ಮಟ್ಟಿಗೆ ಏಕಸ್ವಾಮ್ಯ ಸಾಧಿಸಿದೆ. ದಶಕಗಳು ಉರುಳಿದಂತೆ ಸ್ಕೋರಿಂಗ್ ವ್ಯವಸ್ಥೆ ಬದಲಾಗಿದೆ. 2003ಕ್ಕೂ ಮೊದಲು ‘ಟೇಬಲ್‌ ಟೆನಿಸ್ ವಿಶ್ವ ಚಾಂಪಿಯನ್‌ಷಿಪ್‌’ ಹೆಸರಿನಲ್ಲಿ ಟೂರ್ನಿ ನಡೆಯುತ್ತಿತ್ತು. 2003ರ ಬಳಿಕ ಅದನ್ನು ವೈಯಕ್ತಿಕ ಹಾಗೂ ತಂಡ ವಿಭಾಗ ಎಂದು ವರ್ಗೀಕರಿಸಲಾಗಿದೆ. 2, 4, 6 ಹೀಗೆ ಸಮ ವರ್ಷಗಳಲ್ಲಿ ‘ವೈಯಕ್ತಿಕ ವಿಶ್ವ ಚಾಂಪಿಯನ್‌ಷಿಪ್‌’ ಹಾಗೂ 1, 3, 5 ಹೀಗೆ ಬೆಸ ವರ್ಷಗಳಲ್ಲಿ ‘ವಿಶ್ವ ತಂಡ ಚಾಂಪಿಯನ್‌ಷಿಪ್‌’ ನಡೆಯುತ್ತ ಬರುತ್ತಿದೆ. ಹೋದ ವಾರ ಮಲೇಷ್ಯಾದಲ್ಲಿ ತಂಡ ಚಾಂಪಿಯನ್‌ಷಿಪ್‌ ನಡೆದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.