ತೆರೆಮರೆಯಲ್ಲಿ ಮಿಂಚುತ್ತಿರುವ ವನಿತೆಯರು ಭಾರತದಲ್ಲಿ ಈಗ ಚುಟುಕು ಕ್ರಿಕೆಟ್ ಸಂಭ್ರಮ. ಪುರುಷರ ಕ್ರಿಕೆಟ್‌ ಪಂದ್ಯಗಳೇ ಹೆಚ್ಚು ಸುದ್ದಿಯಲ್ಲಿ ಇರುವಾಗ ತೆರೆ ಮರೆಯಲ್ಲೇ ಸದ್ದು ಮಾಡುತ್ತಿರುವ ಭಾರತ ವನಿತೆಯರ ತಂಡ ಈಗ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಈ ವರ್ಷ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ ಗೆದ್ದು ‘ನಮ್ಮನ್ನು ಕಡೆಗಣಿಸಬೇಡಿ’ ಎಂಬ ಸಂದೇಶ ನೀಡಲು ಸಜ್ಜಾಗಿದೆ. ಈಗಾಗಲೇ ಮೊದಲ ಅಭ್ಯಾಸ ಪಂದ್ಯದಲ್ಲಿ ಐರ್ಲೆಂಡ್‌ ತಂಡವನ್ನು ಮಣಿಸಿ ಪ್ರಮುಖ ಸವಾಲಿಗೆ ಗೆಲುವಿನ ಮುನ್ನುಡಿ ಬರೆದಿದೆ. ವನಿತೆಯರ ತಂಡಕ್ಕೆ 2016 ಅದೃಷ್ಟದ ವರ್ಷ ಎನಿಸಿದೆ. ಈ ಋತುವಿನ ಆರಂಭದಲ್ಲೇ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಆಟಗಾರ್ತಿಯರು ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯಲ್ಲಿ ಎರಡು ಪಂದ್ಯ ಗೆದ್ದು ಮೊದಲ ಬಾರಿಗೆ ಆಸ್ಟ್ರೇಲಿಯಾದ ಎದುರು ಅವರ ನೆಲದಲ್ಲೇ ಸರಣಿ ಜಯಿಸಿದ ಚಾರಿತ್ರಿಕ ಸಾಧನೆ ಮಾಡಿದೆ. ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲಿ ಭಾರತ ತಂಡ ಮೊದಲು ಮೂರು ಏಕದಿನ ಪಂದ್ಯಗಳನ್ನೂ ಆಡಿತ್ತು. ಆದರೆ ಆಡಿದ ಮೂರು ಪಂದ್ಯಗಳಲ್ಲಿ ವನಿತೆಯರಿಗೆ ಸೋಲು ಎದುರಾಗಿತ್ತು. ಆದರೆ ಟ್ವೆಂಟಿ–20ಯಲ್ಲಿ ಭಾರತದ ಆಟಗಾರ್ತಿಯರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ವಿಶ್ವಾಸ ಇಮ್ಮಡಿ ಮಾಡಿಕೊಂಡಿದ್ದಾರೆ. ‘ಭಾರತಕ್ಕೆ ಕಠಿಣ ಸ್ಪರ್ಧಿ ಆಸ್ಟ್ರೇಲಿಯಾ. ನಮ್ಮ ತಂಡಕ್ಕೆ ಪ್ರಬಲ ಸವಾಲು ಒಡ್ಡಲು ಚಾಂಪಿಯನ್‌ ತಂಡಕ್ಕೆ ಸಾಧ್ಯವಿದೆ’ ಎಂದು ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕಿ ಮಿಥಾಲಿ ರಾಜ್‌ ಹೇಳಿದ್ದರು. ಈ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೊಂದಿರುವ ಮಿಥಾಲಿ ‘ಭಾರತ ತಂಡವನ್ನು ಮಣಿಸಲು ಸಾಧ್ಯವಾದರೆ ಅದು ಆಸ್ಟ್ರೇಲಿಯಾ ತಂಡಕ್ಕೆ ಮಾತ್ರ’ ಎಂಬ ಸಂದೇಶ ರವಾನಿಸುವ ಮೂಲಕ ಆತಿಥೇಯ ಭಾರತ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿರುವ ಮುನ್ಸೂಚನೆ ನೀಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಬಳಿಕ ಭಾರತದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟ್ವೆಂಟಿ–20 ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧಿಸಿದ್ದು ವನಿತೆಯರ ತಂಡದ ಹೆಗ್ಗಳಿಕೆಯನ್ನು ಹೆಚ್ಚಿಸಿದೆ. ಮಿತಿಗಳು: ಭಾರತ ವನಿತೆಯರ ತಂಡ ಚುಟುಕು ಕ್ರಿಕೆಟ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವುದು ಅನುಮಾನವಿಲ್ಲ. ಆದರೆ ಕೆಲವು ವಿಭಾಗಗಳಲ್ಲಿ ಕೊರತೆ ಅನುಭವಿಸುತ್ತಿದೆ. ಚುರುಕಿನ ಕ್ಷೇತ್ರರಕ್ಷಣೆ ಮೊದಲಿನಿಂದಲೂ ಭಾರತ ತಂಡದ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ತಂಡದ ಆಟಗಾರರು ದೇಶದ ಯಾವುದೇ ಕ್ರೀಡಾಂಗಣದಲ್ಲಿ ಪಂದ್ಯ ಆಡಿದರೂ ಪತ್ರಕರ್ತರಿಂದ ಎದುರಾಗುವ ಸಾಮಾನ್ಯ ಪ್ರಶ್ನೆ ತಂಡದ ಕಳಪೆ ಕ್ಷೇತ್ರರಕ್ಷಣೆಯದ್ದೇ ಆಗಿದೆ. ಕ್ಯಾಚ್‌ಗಳನ್ನು ಕೈಚೆಲ್ಲುವುದು, ಬೌಂಡರಿಗಳನ್ನು ತಡೆಯಲು ಸಾಧ್ಯವಾಗದೇ ಇರುವುದು. ರನ್‌ಔಟ್ ಮಾಡಲು ವಿಫಲರಾಗುತ್ತಿರುವುದು ತಂಡದ ಪ್ರಮುಖ ಮಿತಿಗಳಲ್ಲಿ ಒಂದು. ಬ್ಯಾಟ್ಸ್‌ವುಮನ್‌ಗಳು ಏಕದಿನ ಕ್ರಿಕೆಟ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವುದಕ್ಕೆ ಪ್ರಮುಖ ಕಾರಣ ವಿಕೆಟ್‌ಗಳ ಮಧ್ಯೆ ಚುರುಕಾಗಿ ಓಡದೇ ಇರುವುದು. ಓವರ್‌ನಲ್ಲಿ 1 ರಿಂದ ಎರಡು ಬೌಂಡರಿ ಗಳು ಬಂದರೂ ರನ್‌ ವೇಗ ಹೆಚ್ಚುತ್ತಿಲ್ಲ. ಇದು ಚುಟುಕು ಕ್ರಿಕೆಟ್‌ನಲ್ಲೂ ಕೆಲವೊಮ್ಮೆ ಭಾರತದ ಹಿನ್ನಡೆಗೆ ಕಾರಣವಾಗಿದೆ. ಭಾರತ ತಂಡದ ಪ್ರಮುಖ ಶಕ್ತಿ ಎಂದು ಪರಿಗಣಿಸಬಹುದಾದ ಏಕೈಕ ಆಟಗಾರ್ತಿ ತಂಡದಲ್ಲಿ ಇಲ್ಲ. ಪ್ರತೀ ಪಂದ್ಯಗಳಲ್ಲೂ ಭರವಸೆ ಉಳಿಸಿಕೊಂಡು ಆಡುವ ಆಟಗಾರ್ತಿಯ ಕೊರತೆ ತಂಡಕ್ಕೆ ಇದೆ. ನಿರಂತರವಾಗಿ ಫಾರ್ಮ್‌ ಕಂಡುಕೊಂಡು ಆಡುವುದು ಸಾಧ್ಯವಾಗುತ್ತಿಲ್ಲ. ಒಂದು ಪಂದ್ಯದಲ್ಲಿ ಮಿಥಾಲಿ ರಾಜ್‌ ಮಿಂಚಿದರೆ, ಇನ್ನೊಂದು ಪಂದ್ಯದಲ್ಲಿ ಹರ್ಮನ್‌ ಪ್ರೀತ್‌ ಕೌರ್ ಆಡುತ್ತಾರೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ ಶ್ರೀಲಂಕಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಆಡಲಿಲ್ಲ. ಅಂತಿಮ ಪಂದ್ಯದಲ್ಲಿ ಮಿಂಚಿದರು. ಆಲ್‌ರೌಂಡರ್ ಶಿಖಾ ಪಾಂಡೆ ಎಂದಿನ ಚಾಕಚಕ್ಯತೆ ಕಳೆದುಕೊಂಡಿದ್ದಾರೆ. ರಾಜ್ಯದ ವಿ.ಆರ್‌ ವನಿತಾ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಅವರು ಅಂತಿಮ 11ರಲ್ಲಿ ಅವಕಾಶ ಪಡೆದು 28 ರನ್‌ ದಾಖಲಿಸಿದ್ದರು. ಶ್ರೀಲಂಕಾ ಸರಣಿಯಲ್ಲಿ ಕ್ರಮವಾಗಿ 12, 5, 34 ರನ್ ಗಳಿಸಿದ್ದಾರೆ. ಹರ್ಮನ್‌ಪ್ರೀತ್‌ ಕೌರ್‌ 30ಕ್ಕಿಂತ ಹೆಚ್ಚು ರನ್‌ ಗಳಿಸುವ ಗೋಜಿಗೆ ಹೋಗುತ್ತಿಲ್ಲ. ದೊಡ್ಡ ಮೊತ್ತ ದಾಖಲಿಸುವಲ್ಲಿ ಆಟಗಾರ್ತಿಯರು ಹಿನ್ನಡೆ ಅನುಭವಿಸುತ್ತಿದ್ದಾರೆ. ಬೌಲರ್‌ಗಳು ಸತತವಾಗಿ ಫಾರ್ಮ್‌ ಉಳಿಸಿಕೊಂಡು ದಾಳಿ ನಡೆಸುತ್ತಿಲ್ಲ. ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌ ಸ್ವಲ್ಪಮಟ್ಟಿನ ಭರವಸೆ ಉಳಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳಲ್ಲಿ ಅನುಜಾ ಪಾಟೀಲ್‌, ಏಕ್ತಾ ಬಿಷ್ಠ್‌ ಕ್ರಮವಾಗಿ 5 ಮತ್ತು 7 ವಿಕೆಟ್ ಪಡೆದು ಭವಿಷ್ಯದಲ್ಲಿ ಭಾರತಕ್ಕೆ ನೆರವಾಗುವ ಮುನ್ಸೂಚನೆ ನೀಡಿದ್ದಾರೆ. ಶಿಖಾ ಪಾಂಡೆ ಆಗಾಗ ಮಿಂಚಿ ಮರೆಯಾಗುತ್ತಾರೆ. ತಂಡದ ಪ್ರಮುಖ ಶಕ್ತಿ: ಭಾರತ ತಂಡದಲ್ಲಿ ಸತತ ಫಾರ್ಮ್‌ ಕಂಡುಕೊಂಡು ಆಡುತ್ತಿರುವವರಲ್ಲಿ ಸ್ಮೃತಿ ಮಂದನಾ ಕೂಡ ಒಬ್ಬರು. ಅವರು ಈ ಹಿಂದೆ ಆಡಿದ ಕೆಲವು ಪಂದ್ಯಗಳಲ್ಲಿ ಮಾತ್ರ ವೈಫಲ್ಯ ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕ್ರಮವಾಗಿ 35, 5, 43 ರನ್‌ ದಾಖಲಿಸಿದ್ದಾರೆ. ಬಳಿಕ ನಡೆದ ವಿಶ್ವ ಟ್ವೆಂಟಿ–20 ಟೂರ್ನಿಯ ಮೊದಲ ಅಭ್ಯಾಸ ಪಂದ್ಯದಲ್ಲಿ 73 ರನ್‌ ಗಳಿಸಿ ವಿಶ್ವಕಪ್‌ನಲ್ಲಿ ಭಾರತದ ನೆರವಿಗೆ ನಿಲ್ಲುವ ಸೂಚನೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅವರು (102) ಶತಕದ ಆಟ ಆಡಿದ್ದರು. ಇಲ್ಲಿಂದ ಹಿಂತಿರುಗಿ ನೋಡದ ಸ್ಮೃತಿ ಚುಟುಕು ಕ್ರಿಕೆಟ್‌ನಲ್ಲೂ ಉತ್ತಮ ಫಾರ್ಮ್‌ ಕಂಡುಕೊಂಡಿದ್ದಾರೆ.ನಾಯಕಿ ಮಿಥಾಲಿ ಶ್ರೀಲಂಕಾ ವಿರುದ್ಧ ಆಡಿದ ಸರಣಿಯಲ್ಲಿ (ಎರಡು ಪಂದ್ಯಗಳಲ್ಲಿ; 3, 51) ಒಂದು ಅರ್ಧಶತಕ ದಾಖಲಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.