ಸಾಧನೆಯ ಹಾದಿಯಲಿ... ಭಾರತದ ಸ್ಕೇಟಿಂಗ್‌ ಕ್ಷೇತ್ರದ ಪ್ರಮುಖರಲ್ಲಿ ಮೈಸೂರಿನ ಆಕಾಶ್‌ ಆರಾಧ್ಯ ಕೂಡ ಒಬ್ಬರು. ಒಂದು ಹೆಜ್ಜೆ ಮುಂದೆ ಹೋಗಿ ಐಸ್‌ ಸ್ಕೇಟಿಂಗ್‌ನಲ್ಲಿ ತಮ್ಮ ಅದೃಷ್ಟ ಪಣಕ್ಕೊಡ್ಡಿದ್ದಾರೆ. ಅದಕ್ಕಾಗಿ ಕೆನಡಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸಾಹಸಮಯ, ದುಬಾರಿ ಹಾಗೂ ಅಪಾಯಕಾರಿ ಎನಿಸಿರುವ ಈ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಕನಸು ಅವರದ್ದು. ಅವರ ಬಗ್ಗೆ ಕೆ.ಓಂಕಾರ ಮೂರ್ತಿ ಬರೆದಿದ್ದಾರೆ ‘ರೋಲರ್‌ ಸ್ಕೇಟಿಂಗ್‌ನಲ್ಲೇ ಮುಂದುವರಿಯಬೇಕೆಂಬ ಆಸೆಯಿತ್ತು. ಆದರೆ, ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕು ಎಂಬ ಕನಸಿನಿಂದ ಐಸ್‌ ಸ್ಕೇಟಿಂಗ್‌ ಅಭ್ಯಾಸ ನಡೆಸುತ್ತಿದ್ದೇನೆ. 2018ರ ಚಳಿಗಾಲದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಗುರಿ ಇಟ್ಟುಕೊಂಡಿದ್ದೇನೆ’ ಹೀಗೆಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಆಕಾಶ್‌ ಆರಾಧ್ಯ. ವಿಶ್ವ ಸ್ಕೇಟಿಂಗ್‌ನಲ್ಲಿ ಏಳು ವರ್ಷಗಳಿಂದ ಭಾರತ ತಂಡ ಪ್ರತಿನಿಧಿಸುತ್ತಿದ್ದ ಮೈಸೂರಿನ ಆರಾಧ್ಯ, ಸದ್ಯ ಐಸ್‌ ಸ್ಕೇಟಿಂಗ್‌ನತ್ತ ಒಲವು ತೋರಿ ಅಭ್ಯಾಸ ನಡೆಸುತ್ತಿದ್ದಾರೆ. ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಐಸ್‌ ಸ್ಕೇಟಿಂಗ್‌ಗೆ ಅವಕಾಶವಿದೆ. ಅವರು ಕೆನಡಾದ ಕಲ್ಗಾರ್‌ನಲ್ಲಿ ಪ್ರಸಿದ್ಧ ಕೋಚ್‌ ಜೆಫ್ರಿ ಬಳಿ ಕಳೆದ ಐದು ತಿಂಗಳಿನಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ‘ಇದೊಂದು ದುಬಾರಿ ಕ್ರೀಡೆ. ಜೊತೆಗೆ ಅಪಾಯಕಾರಿ ಕೂಡ. ಭಾರತದಲ್ಲಿ ಅಷ್ಟೊಂದು ಪ್ರಸಿದ್ಧಿ ಪಡೆದಿಲ್ಲ. ಜಮ್ಮು ಕಾಶ್ಮೀರದ ಗುಲ್ಮಾರ್ಗ್‌ ಹಾಗೂ ಶಿಮ್ಲಾದಲ್ಲಿ ಮಾತ್ರ ಐಸ್‌ ಸ್ಕೇಟಿಂಗ್‌ಗೆ ಸಂಬಂಧಿಸಿದ ರಿಂಕ್‌ಗಳಿವೆ. ಆದರೆ, ಕೋಚ್‌ಗಳು ಹಾಗೂ ಸೌಲಭ್ಯ ಇಲ್ಲ. ಅಪರೂಪಕ್ಕೆ ಸ್ಪರ್ಧೆಗಳು ನಡೆಯುತ್ತವೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಡೆಹ್ರಡೂನ್‌ನಲ್ಲಿದ್ದ ಐಸ್‌ ಸ್ಕೇಟಿಂಗ್‌ ರಿಂಕ್‌ ಮುಚ್ಚಲಾಗಿದೆ. ಕೆಲವೆಡೆ ಕೃತಕ ಐಸ್‌ ರಿಂಕ್‌ಗಳಿವೆ’ ಎನ್ನುತ್ತಾರೆ 26 ವರ್ಷ ವಯಸ್ಸಿನ ಆರಾಧ್ಯ. ‘ಈ ಕಾರಣ ವಿದೇಶಕ್ಕೆ ತೆರಳಿ ಅಭ್ಯಾಸ ನಡೆಸುತ್ತಿದ್ದೇನೆ. ವಾಸ್ತವ್ಯ, ಆಹಾರ, ಕೋಚ್‌ ಭತ್ಯೆ ಸೇರಿ ತಿಂಗಳಿಗೆ ಸುಮಾರು ಒಂದು ಲಕ್ಷ ರೂಪಾಯಿ ಖರ್ಚಾಗುತ್ತಿದೆ. ಭಾರತೀಯ ಐಸ್‌ ಸ್ಕೇಟಿಂಗ್‌ ಸಂಸ್ಥೆ ಕೂಡ ಹಣಕಾಸು ನೆರವು ನೀಡುತ್ತಿದೆ. ಆದರೆ, ಉಳಿದ ಹಣವನ್ನು ನಾನೇ ಭರಿಸಬೇಕಾಗಿದೆ’ ಎಂದು ಅವರು ಹೇಳುತ್ತಾರೆ. ಆರಾಧ್ಯ ಅವರಲ್ಲದೆ, ಹೈದರಾಬಾದ್‌ನ ಸ್ಟೀಫನ್‌ ಹಾಗೂ ಪುಣೆಯ ಸೋಹಾನ್‌ ಥಾರ್ಕರ್‌ ಸದ್ಯ ಭಾರತದ ಪ್ರಮುಖ ಐಸ್‌ ಸ್ಕೇಟಿಂಗ್‌ ಸ್ಪರ್ಧಿಗಳು. 2017ರಲ್ಲಿ ಐಸ್‌ ಸ್ಕೇಟಿಂಗ್‌ ವಿಶ್ವಕಪ್‌ ಜರುಗಲಿದ್ದು, ಅಗ್ರ 32 ಸ್ಥಾನ ಪಡೆದವರು 2018ರ ಚಳಿಗಾಲದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ. ಈಚೆಗೆ ಜರ್ಮನಿಯಲ್ಲಿ ನಡೆದ ವಿಶ್ವಕಪ್‌ನಲ್ಲಿ ಆರಾಧ್ಯ 51ನೇ ಸ್ಥಾನ ಪಡೆದಿದ್ದರು. ‘ಐಸ್‌ ಸ್ಕೇಟಿಂಗ್‌ನಲ್ಲಿ ವಿಶ್ವದ ಪ್ರಮುಖರಿಗೆ ಸಡ್ಡೊಡೆಯಲು ಉನ್ನತ ಮಟ್ಟದ ತರಬೇತಿ ಅಗತ್ಯ. ಜೊತೆಗೆ ಹೆಚ್ಚಿನ ಸ್ಪರ್ಧೆಗಳಲ್ಲಿ ಪಾಲ್ಗೊಂಡಂತೆ ಕೌಶಲ ಹೆಚ್ಚಿಸಿಕೊಳ್ಳಬಹುದು. ವಿವಿಧ ದೇಶಗಳ ಸ್ಪರ್ಧಿಗಳೊಂದಿಗೆ ಬೆರೆಯಲು, ಅವರ ಅನುಭವ ಹಂಚಿಕೊಳ್ಳಲು ಅವಕಾಶ ಸಿಗುತ್ತದೆ’ ಎಂದು ಆರಾಧ್ಯ ನುಡಿಯುತ್ತಾರೆ. ಆರಂಭದಲ್ಲಿ ರೋಲರ್‌ ಸ್ಕೇಟಿಂಗ್‌ನಲ್ಲಿ ಸಕ್ರಿಯವಾಗಿದ್ದ ಆರಾಧ್ಯ 2010ರಲ್ಲಿ ಚೀನಾದ ಗುವಾಂಜ್‌ಜೌನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟ, 2012ರಲ್ಲಿ ಇಟಲಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌, 2014ರಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ, ವಿಶ್ವಕಪ್‌ ಹಾಗೂ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿ ಪದಕ ಜಯಿಸಿದ್ದಾರೆ. ಹಲವು ದಾಖಲೆಗಳು ಇವರ ಹೆಸರಿನಲ್ಲಿವೆ. ‘2010ರಲ್ಲಿ ಗುವಾಂಗ್‌ಜೌನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಕಡಿಮೆ ಸಂಖ್ಯೆಯಲ್ಲಿ ಐಸ್‌ ಸ್ಕೇಟಿಂಗ್‌ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಈ ಕಾರಣಕ್ಕಾಗಿ ಈ ಸ್ಪರ್ಧೆಯನ್ನು ಏಷ್ಯನ್‌ ಕೂಟದಿಂದ ಕೈಬಿಡಲಾಯಿತು’ ಎನ್ನುತ್ತಾರೆ ಆರಾಧ್ಯ. ಅವರು ಡಿ.ಬನುಮಯ್ಯ ಕಾಲೇಜಿನಲ್ಲಿ ಬಿ.ಕಾಂ ಓದಿದ್ದಾರೆ. ಮುಂದೆ ಸಿ.ಎ ಮಾಡುವ ಆಸೆಯಲ್ಲಿದ್ದಾರೆ. ಕಳೆದ ವಾರ ಅವರು ಏಕಲವ್ಯ ಪ್ರಶಸ್ತಿಗೆ ಭಾಜನರಾದರು. ತರಬೇತಿ ಮುಂದುವರಿಸಲು ಅವರು ಮತ್ತೆ ಕೆನಡಾಕ್ಕೆ ತೆರಳಿದ್ದಾರೆ ಐಸ್‌ ಸ್ಕೇಟಿಂಗ್ ಬಗ್ಗೆ... ಯೂರೋಪ್‌ನಿಂದ ಪ್ರಭಾವಿತರಾಗಿ 1740ರಲ್ಲಿ ಉತ್ತರ ಅಮೆರಿಕದಲ್ಲಿ ಐಸ್ ಸ್ಕೇಟಿಂಗ್‌ ಪ್ರಾರಂಭಿಸಲಾಯಿತು. ಕೆನಡಾದಲ್ಲಿ ಬೀಡುಬಿಟ್ಟಿದ್ದ ಬ್ರಿಟನ್‌ ಸೈನಿಕರು ಇದಕ್ಕೆ ಪ್ರಮುಖ ಕಾರಣಕರ್ತರು. ಮುಂದೆ ಐಸ್‌ ಹಾಕಿ ಆರಂಭಿಸಿದರು. ಲಂಡನ್‌ನಲ್ಲಿ ನಡೆದ 1908ರ ಒಲಿಂಪಿಕ್ಸ್‌ನಲ್ಲಿ ಒಳಾಂಗಣ ಕ್ರೀಡೆಯಾಗಿ ಫಿಗರ್‌/ಸ್ಪೀಡ್‌ ಸ್ಕೇಟಿಂಗ್‌ಗೆ ಅವಕಾಶ ನೀಡಲಾಯಿತು. 1924ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಮೊದಲ ಚಳಿಗಾಲದ ಒಲಿಂಪಿಕ್ಸ್‌ನಲ್ಲೂ ಸ್ಕೇಟಿಂಗ್‌ ಸ್ಥಾನ ಪಡೆಯಿತು. ಆ ಬಳಿಕ ಈ ಕ್ರೀಡೆ ಚಳಿಗಾಲದ ಒಲಿಂಪಿಕ್ಸ್‌ನಲ್ಲೇ ಶಾಶ್ವತವಾಗಿ ನೆಲೆ ಪಡೆಯಿತು. ಈ ಸ್ಪರ್ಧೆಯಲ್ಲಿ ಅಮೆರಿಕದವರದ್ದೇ ಹೆಚ್ಚು ಪ್ರಾಬಲ್ಯ. ಸುಮಾರು 40 ಪದಕ ಜಯಿಸಿದ್ದಾರೆ. ಫಿಗರ್‌, ಸ್ಪೀಡ್‌, ಐಸ್‌ ಸ್ಕೇಟಿಂಗ್‌ ವಿಭಾಗದಲ್ಲಿ ಸ್ಪರ್ಧೆಗಳು ಜರುಗುತ್ತವೆ. ಐಸ್‌ ಸ್ಕೇಟಿಂಗ್‌ನಲ್ಲಿ 500, 1,000, 1,500 ಮೀಟರ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಬ್ರಿಟನ್‌, ಕೆನಡಾ, ಅಮೆರಿಕ, ಹಂಗೇರಿ ಹಾಗೂ ರಷ್ಯಾದ ಸ್ಪರ್ಧಿಗಳು ಪ್ರಸಿದ್ಧಿ ಪಡೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.