ಒಲಿಂಪಿಕ್ಸ್‌ಗಾಗಿ ‘ಕುಸ್ತಿ’... ಟ್ರಯಲ್ಸ್‌ ಮೂಲಕ ಆಯ್ಕೆ ಮಾಡಿ ಒಲಿಂಪಿಕ್ಸ್‌ಗೆ ಅರ್ಹತೆ ಕೊಡಿ ಎಂದು ಸುಶೀಲ್‌ ಕುಮಾರ್ ಕೇಳುತ್ತಿದ್ದಾರೆ. ಅರ್ಹತೆ ಪಡೆದಿದ್ದು ನಾನು. ಆದ್ದರಿಂದ ನಾನೇ ಒಲಿಂಪಿಕ್ಸ್‌ಗೆ ಅರ್ಹ ಎಂಬುದು ನರಸಿಂಗ್ ಯಾದವ್‌ ವಾದ. ಇವರ ನಡುವಣ ‘ಕುಸ್ತಿ’ ಭಾರತದ ಕ್ರೀಡಾ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ. ಈ ಬಗ್ಗೆ ಪ್ರಮೋದ್‌ ಜಿ.ಕೆ. ವಿಶ್ಲೇಷಿಸಿದ್ದಾರೆ. ರಿಯೊ ಒಲಿಂಪಿಕ್ಸ್‌ ಆರಂಭವಾಗಲು ಮೂರು ತಿಂಗಳಷ್ಟೇ ಬಾಕಿಯಿದೆ. ಅರ್ಹತೆ ಪಡೆದ ಕ್ರೀಡಾಪಟುಗಳು ಪದಕ ಗೆಲ್ಲುವ ಹುಮ್ಮಸ್ಸಿನೊಂದಿಗೆ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ಭಾರತದಲ್ಲಿ ‘ಕುಸ್ತಿ’ ನಡೆಯುತ್ತಿದೆ. ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಯಾರನ್ನು ಕಳುಹಿಸಬೇಕು. ಅವರನ್ನು ಹೇಗೆ ಆಯ್ಕೆ ಮಾಡಬೇಕು ಎನ್ನುವ ವಿಷಯದ ಬಗ್ಗೆ ಜೋರು ಚರ್ಚೆ ಶುರುವಾಗಿದೆ. ಪುರುಷರ 74 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಒಂದು ಕೋಟಾ ಇದೆ. ಪ್ರತಿಭಾನ್ವಿತ ‘ಪೈಲ್ವಾನ’ ನರಸಿಂಗ್ ಪಂಚಮ್‌ ಯಾದವ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿ ದ್ದಾರೆ. ಹಿಂದಿನ ಎರಡೂ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿರುವ ಸುಶೀಲ್‌ ಕುಮಾರ್ ಕೂಡ ತಮಗೂ ಅವಕಾಶ ಕೊಡಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ಒಬ್ಬರನ್ನಷ್ಟೇ ಕಳುಹಿಸಬೇಕಾದ ಕಾರಣ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದೇ ಭಾರತ ಕುಸ್ತಿ ಫೆಡರೇಷನ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ದೆಹಲಿಯ ಸುಶೀಲ್‌ ಕುಮಾರ್‌ 2008ರ ಬೀಜಿಂಗ್ ಮತ್ತು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಕಂಚು ಮತ್ತು ಬೆಳ್ಳಿ ಪದಕವನ್ನು ಜಯಿಸಿದ್ದರು. ಎರಡೂ ಕೂಟಗಳಲ್ಲಿ ಅವರು 66 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದರೆ, ವಿಶ್ವ ಕುಸ್ತಿ ಫೆಡರೇಷನ್‌ ಈ ಹಿಂದೆ ಕೆಲ ತೂಕದ ವಿಭಾಗಗಳಲ್ಲಿ ಬದಲಾವಣೆ ಮಾಡಿದೆ. ಹೀಗಾಗಿ ಸುಶೀಲ್‌ 74 ಕೆ.ಜಿ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದ ನರಸಿಂಗ್ ಯಾದವ್ ಮೊದಲಿನಿಂದಲೂ 74 ಕೆ.ಜಿ ವಿಭಾಗದಲ್ಲಿ ಪೈಪೋಟಿ ನಡೆಸುತ್ತಾ ಬಂದಿದ್ದಾರೆ. ಇದೇ ವಿಭಾಗದಲ್ಲಿ ಅವರು ಹೋದ ವರ್ಷ ಲಾಸ್‌ ವೇಗಾಸ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು, 2014ರ ಇಂಚೆನ್ ಏಷ್ಯನ್ ಕೂಟದಲ್ಲಿ ಕಂಚು, 2015ರ ದೋಹಾ ಏಷ್ಯನ್‌ ಕೂಟದಲ್ಲಿ ಕಂಚು ಜಯಿಸಿದ್ದರು. ಭಾರತದಲ್ಲಿ 2010ರಲ್ಲಿ ಜರುಗಿದ್ದ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಜಯಿಸಿದ್ದ ಯಾದವ್ ನಂತರದ ವರ್ಷದಲ್ಲಿ ಮೆಲ್ಬರ್ನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಸಾಧನೆ ತೋರಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಾಗ ಯಾದವ್‌ಗೆ ಒಲಿಂಪಿಕ್ಸ್‌ ಅರ್ಹತೆ ಲಭಿಸಿತ್ತು. ಆದರೆ, ಒಬ್ಬರನ್ನು ಮಾತ್ರ ಕಳುಹಿಸಬೇಕಿರುವ ಕಾರಣ ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ಈಗ ಎದ್ದಿರುವ ವಿವಾದಕ್ಕೆ ಕಾರಣ. 32 ವರ್ಷದ ಸುಶೀಲ್‌ 2010ರ ಮಾಸ್ಕೊ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದರು. ಕಾಮನ್‌ವೆಲ್ತ್‌ ಕೂಟದಲ್ಲಿ ಎರಡು, ಏಷ್ಯನ್‌ ಕೂಟದಲ್ಲಿ ಒಂದು, ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಮತ್ತು ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಐದು ಪದಕಗಳನ್ನು ಜಯಿಸಿದ್ದಾರೆ. ಇವೆಲ್ಲಾ ಪದಕಗಳು ಬಂದಿದ್ದು 66 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ. ಒಲಿಂಪಿಕ್ಸ್‌ನಲ್ಲಿ ಅವಕಾಶ ಪಡೆಯುವ ಸಲುವಾಗಿ ಸುಶೀಲ್‌ ಬದಲಾದ ನಿಯಮಗಳಲ್ಲಿ ತಮ್ಮ ಸ್ಪರ್ಧೆಯ ವಿಭಾಗವನ್ನೂ ಬದಲಿಸಿಕೊಂಡಿದ್ದಾರೆ. ‘ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ನನ್ನನ್ನೇ ಆಯ್ಕೆ ಮಾಡಿ ಎಂದು ಕೇಳುತ್ತಿಲ್ಲ. ಆದರೆ ಟ್ರಯಲ್ಸ್‌ ನಡೆಸಿ’ ಎಂದು ಸುಶೀಲ್‌ ಒತ್ತಾಯಿಸುತ್ತಿದ್ದಾರೆ. ಸುಶೀಲ್‌ ಮತ್ತು ಯಾದವ್ ನಡುವಣ ‘ಕುಸ್ತಿ’ಗೆ ಸಾಮಾಜಿಕ ತಾಣಗಳಲ್ಲಿಯೂ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದಕ್ಕೆ ಮುನ್ನುಡಿ ಬರೆದಿದ್ದು ಸುಶೀಲ್‌. ‘ದೇಶವನ್ನು ಪ್ರತಿನಿಧಿಸಬೇಕು ಎಂದು ಪ್ರತಿಯೊಬ್ಬರಿಗೂ ಆಸೆ ಇದ್ದೇ ಇರುತ್ತದೆ. ಇದು ತಪ್ಪೇನೂ ಅಲ್ಲ. ಇದರಿಂದ ನಾನೂ ಹೊರತಲ್ಲ. ಯಾದವ್‌ ಜೊತೆಗೆ ನಾನು ಒಲಿಂಪಿಕ್ಸ್‌ಗೆ ಅರ್ಹ. ಇಬ್ಬರ ನಡುವೆ ಟ್ರಯಲ್ಸ್ ನಡೆಸಿ. ಗೆದ್ದವರಿಗೆ ಒಲಿಂಪಿಕ್ಸ್‌ ಪ್ರವೇಶಕ್ಕೆ ಅವಕಾಶ ಕೊಡಿ‘ ಎಂದು ಸುಶೀಲ್‌ ಭಾರತ ಕುಸ್ತಿ ಫೆಡರೇಷನ್‌ಗೆ ಒತ್ತಾಯಿಸಿದ್ದಾರೆ. ಇದಕ್ಕಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಜನಾಂದೋಲನ ರೂಪಿಸಲು ಯತ್ನಿಸುತ್ತಿದ್ದಾರೆ. ‘ಮೂರನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಹೆಗ್ಗುರಿ ಹೊಂದಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು’ ಎನ್ನುವ ಸಂದೇಶವನ್ನು ಒಳಗೊಂಡ ವಿಡಿಯೊವನ್ನು ಅವರು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಜೊತೆಗೆ ಟ್ರಯಲ್ಸ್‌ ನಡೆಸಲು ಮುಂದಾಗುವಂತೆ ಫೆಡರೇಷನ್‌ಗೆ ಒತ್ತಾಯಿಸಬೇಕು ಎಂದೂ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಬಾರಿಯ ಒಲಿಂಪಿಕ್ಸ್‌ಗೆ ಕುಸ್ತಿಯಲ್ಲಿ ಮೂರು ವಿಭಾಗಗಳಲ್ಲಿ ಮೂವರು ಸ್ಪರ್ಧಿಗಳು ಪಾಲ್ಗೊಳ್ಳಬೇಕಿದೆ. 57 ಮತ್ತು 65 ಕೆ.ಜಿ. ವಿಭಾಗದಲ್ಲಿ ಕ್ರಮವಾಗಿ ಸಂದೀಪ್‌ ತೋಮಾರ್‌ ಹಾಗೂ ಯೋಗೇಶ್ವರ್ ದತ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ಉಳಿದಿರುವುದು 74 ಕೆ.ಜಿ. ವಿಭಾಗ ಮಾತ್ರ. ಇದೇ ಮೊದಲಲ್ಲ ಒಲಿಂಪಿಕ್ಸ್‌ಗೆ ಕುಸ್ತಿ ಪಟುವನ್ನು ಆಯ್ಕೆ ಮಾಡಲು ವಿವಾದ ಉಂಟಾಗಿರುವುದು ಇದು ಮೊದಲೇನಲ್ಲ. 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿಯೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಏಷ್ಯನ್‌ ಕೂಟದಲ್ಲಿ ಪದಕ ಜಯಿಸಿದ್ದ ಪಪ್ಪು ಯಾದವ್‌ ಮತ್ತು ಕಾಕಾ ಪವಾರ್‌ ಇವರಬ್ಬರಲ್ಲಿ ಭಾರಿ ಪೈಪೋಟಿ ನಡೆದಿತ್ತು. ಗ್ರೀಕೊ ರೋಮನ್‌ನ 48 ಕೆ.ಜಿ ವಿಭಾಗದಲ್ಲಿ ಕಾಕಾ ಪವಾರ್‌ ಮತ್ತು 52 ಕೆ.ಜಿ. ವಿಭಾಗದಲ್ಲಿ ಪಪ್ಪು ಯಾದವ್ ಇವರಿಬ್ಬರಲ್ಲಿ ಒಬ್ಬರನ್ನಷ್ಟೇ ಒಲಿಂಪಿಕ್ಸ್‌ಗೆ ಕಳುಹಿಸಲು ಅವಕಾಶವಿತ್ತು. ಆಗಲೂ ಕುಸ್ತಿ ಫೆಡರೇಷನ್‌ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಟ್ರಯಲ್ಸ್‌ ನಡೆಸಲಾಗಿತ್ತು. ಟ್ರಯಲ್ಸ್‌ನಲ್ಲಿ ಗೆಲುವು ಪಡೆದ ಪಪ್ಪು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಆದ್ದರಿಂದ ಈಗಲೂ ಟ್ರಯಲ್ಸ್‌ ಮೂಲಕವೇ ಸಮಸ್ಯೆ ಪರಿಹರಿಸಬಹುದು ಎಂಬುದು ಸುಶೀಲ್‌ ವಾದ. ಇದಕ್ಕಾಗಿ ಅವರು ಕೇಂದ್ರಕ್ರೀಡಾ ಸಚಿವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೊರೆ ಹೋಗಿದ್ದಾರೆ. ಸುಶೀಲ್‌ ವಾದ ಸರಿಯೇ? ಏಷ್ಯಾ ಮತ್ತು ವಿಶ್ವ ಮಟ್ಟದ ಕೂಟಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದವರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಲಭಿಸುತ್ತದೆ. ನರಸಿಂಗ್ ಯಾದವ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿ ಒಲಿಂಪಿಕ್ಸ್‌ ಅರ್ಹತೆ ಪಡೆದಿದ್ದಾರೆ. ಆದರೆ ವಿಶ್ವ ಚಾಂಪಿಯನ್‌ಷಿಪ್‌ ವೇಳೆ ಭುಜದ ನೋವಿನಿಂದ ಬಳಲಿದ್ದ ಕಾರಣ ಸುಶೀಲ್‌ ಪಾಲ್ಗೊಂಡಿರಲಿಲ್ಲ. ಆದರೆ ಈಗ ಅವರು ‘ದೇಶಕ್ಕೆ ಪದಕ ತಂದುಕೊಡುವ ಆಸೆಯಿದೆ. ಆದ್ದರಿಂದ ಟ್ರಯಲ್ಸ್‌ ನಡೆಸಿ’ ಎಂದು ಕೇಳುತ್ತಿದ್ದಾರೆ. ಸುಶೀಲ್‌ ಅವರ ವಾದಕ್ಕೆ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಷ್ಟೇ ಏಕೆ, ಫೆಡರೇನಷ್‌ ಕೂಡ ಸುಶೀಲ್‌ ವಾದವನ್ನು ಒಪ್ಪಲು ಸಿದ್ಧವಿಲ್ಲ. ‘ಮೊದಲಿನಿಂದಲೂ ಯಾವ ವಿಭಾಗದಲ್ಲಿ ಸ್ಪರ್ಧಿಸುತ್ತಾರೊ ಅವರು ಅರ್ಹತೆ ಪಡೆದು ಒಲಿಂಪಿಕ್ಸ್‌ಗೆ ಹೋಗಬೇಕು. ಇದು ಕುಸ್ತಿಯಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದ ಪರಂಪರೆ. ಇದೆಲ್ಲವನ್ನೂ ಬಿಟ್ಟು ಟ್ರಯಲ್ಸ್‌ ನಡೆಸಿ ಒಲಿಂಪಿಕ್ಸ್‌ಗೆ ಅವಕಾಶ ಕೊಡುವುದು ಕಷ್ಟ. ಸುಶೀಲ್‌ ನಮಗೆ ಪತ್ರ ಬರೆದಿದ್ದಾರೆ ನಿಜ. ಆದರೆ ಟ್ರಯಲ್ಸ್‌ ನಡೆಸುತ್ತೇವೆ ಎಂದು ಅವರಿಗೆ ಭರವಸೆ ಕೊಟ್ಟಿಲ್ಲ’ ಎಂದು ಫೆಡರೇಷನ್‌ ತಿಳಿಸಿದೆ. ಬೇರೆ ದೇಶಗಳ ಕುಸ್ತಿ ಪಟುಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ನಮ್ಮಲ್ಲಿ ಯಾರನ್ನು ಕಳುಹಿಸಬೇಕು ಎನ್ನುವ ವಿವಾದವೇ ಪರಿಹಾರವಾಗಿಲ್ಲ. ಇದು ಪೈಲ್ವಾನರ ಪ್ರದರ್ಶನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅರ್ಹತೆಗಿಂತ ಟ್ರಯಲ್ಸ್‌ ಮುಖ್ಯವೇ? ‘ಬೇರೆ ಎಲ್ಲಾ ಕ್ರೀಡೆಗಳಲ್ಲಿ ಅರ್ಹತೆ ಪಡೆದವರು ಮಾತ್ರ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆಯುತ್ತಾರೆ. ಇದು ಮೊದಲಿ ನಿಂದಲೂ ನಡೆದುಕೊಂಡು ಬಂದಿದೆ. ಆದರೆ ಕುಸ್ತಿಯಲ್ಲಿ ಮಾತ್ರ ಏಕೆ ಇಲ್ಲಸಲ್ಲದ ವಿವಾದ. ಯಾರು ಅರ್ಹತೆ ಪಡೆದಿರುತ್ತಾರೊ ಅವರೇ ಒಲಿಂಪಿಕ್ಸ್‌ಗೆ ಅರ್ಹರು. ವಿನಾಕಾರಣ ವಿವಾದ ಹುಟ್ಟು ಹಾಕುವುದರಿಂದ ನಮ್ಮ ವಿಶ್ವಾಸವೇ ಕುಸಿದು ಹೋಗುತ್ತದೆ...’ ಹೀಗೆ ಬೇಸರದಿಂದ ‘ಪ್ರಜಾವಾಣಿ’ ಎದುರು ನೋವು ತೋಡಿಕೊಂಡಿದ್ದು ನರಸಿಂಗ್ ಯಾದವ್‌. ಪ್ರೊ ಕುಸ್ತಿ ಲೀಗ್‌ನಲ್ಲಿ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಅವರು ಪತ್ರಿಕೆ ಎದುರು ವಿವಾದದ ಕುರಿತು ಬೇಸರ ವ್ಯಕ್ತಪಡಿಸಿದರು. ‘ಸುಶೀಲ್‌ ಟ್ರಯಲ್ಸ್‌ ನಡೆಸಬೇಕು ಎಂದು ಕೇಳುತ್ತಿದ್ದಾರೆ. ಅವರು ಹೀಗೆ ಕೇಳುವುದರಲ್ಲಿ ಏನಾದರೂ ಅರ್ಥವಿದೆಯೇ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಆಸೆಹೊತ್ತು ಸೋನೆಪತ್‌ನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಹಗಲಿರುಳೆನ್ನದೇ ಬೆವರು ಸುರಿಸಿದ್ದೇನೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಠಿಣ ಸವಾಲು ಎದುರಿಸಿ, ಎಲ್ಲಾ ಸ್ಪರ್ಧೆಗಳನ್ನು ಗೆದ್ದು ಅರ್ಹತೆ ಪಡೆದುಕೊಂಡಿದ್ದೇನೆ. ಇದರ ಹಿಂದೆ ಸಾಕಷ್ಟು ಶ್ರಮವಿದೆ’ ಎಂದು ನರಸಿಂಗ್ ಹೇಳಿದರು. ಯಾದವ್‌ಗೆ ಅವಕಾಶ ಹೆಚ್ಚು ಪರಂಪರೆಯಂತೆ ಅರ್ಹತೆ ಪಡೆದವರಿಗೆ ಒಲಿಂಪಿಕ್ಸ್‌ನಲ್ಲಿ ಅವಕಾಶ ಕೊಡಲು ಕುಸ್ತಿ ಫೆಡರೇಷನ್‌ ಆಸಕ್ತಿ ಹೊಂದಿದೆ. ಈ ಬಗ್ಗೆ ಫೆಡರೇಷನ್‌ನ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಸುಳಿವು ನೀಡಿದ್ದಾರೆ. 74 ಕೆ.ಜಿ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುವ ಒಬ್ಬ ಕುಸ್ತಿಪಟುವಿನ ಹೆಸರನ್ನು ಒಲಿಂಪಿಕ್ಸ್‌ ಆರಂಭವಾಗಲು 12 ಗಂಟೆ ಮೊದಲು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಗೆ ಕೊಡಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.