ರಷ್ಯಾದ ಹೊಸ ಭರವಸೆ ಸರ್ಜಿ ಕರ್ಜಕಿನ್‌ ಚೆಸ್‌ ಕ್ರೀಡೆಯಲ್ಲಿ ರಷ್ಯಾದ ಪ್ರಾಬಲ್ಯ ಏನೆಂಬುದು ಎಲ್ಲರಿಗೂ ತಿಳಿದಿದೆ. ಅನಾತೊಲಿ ಕಾರ್ಪೊವ್‌, ಗ್ಯಾರಿ ಕ್ಯಾಸ್ಪರೋವ್‌, ವ್ಲಾದಿಮಿರ್‌ ಕ್ರಾಮ್ನಿಕ್‌... ರಷ್ಯಾದ ಶ್ರೇಷ್ಠ ಚೆಸ್‌ ಆಟಗಾರರ ಪಟ್ಟಿ ಹೀಗೆ ಬೆಳೆಯುತ್ತದೆ. ಆದರೆ 2006ರಲ್ಲಿ ವ್ಲಾದಿಮಿರ್‌ ಕ್ರಾಮ್ನಿಕ್‌ ವಿಶ್ವ ಚಾಂಪಿಯನ್‌ ಆದ ಬಳಿಕ ರಷ್ಯಾದ ಯಾರಿಗೂ ಈ ಪ್ರಶಸ್ತಿ ಗೆಲ್ಲಲು ಆಗಿಲ್ಲ. ಕ್ರಾಮ್ನಿಕ್‌ ಅವರಿಗೆ 2008 ರಲ್ಲಿ ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಪೈಪೋಟಿ ನಡೆಸುವ ಅವಕಾಶ ದೊರೆತಿತ್ತು. ಆದರೆ ಭಾರತದ ವಿಶ್ವನಾಥನ್‌ ಆನಂದ್‌ ಎದುರು ಸೋಲು ಅನುಭವಿಸಿದ್ದರು. ಎಂಟು ವರ್ಷಗಳ ಬಿಡುವಿನ ಬಳಿಕ ಇದೇ ಮೊದಲ ಬಾರಿಗೆ ರಷ್ಯಾದ ಸ್ಪರ್ಧಿಯೊಬ್ಬರಿಗೆ ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಪೈಪೋಟಿ ನಡೆಸುವ ಅವಕಾಶ ದೊರೆತಿದೆ. ಮಾಸ್ಕೊದಲ್ಲಿ ಹೋದ ವಾರ ಕೊನೆಗೊಂಡ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಗೆದ್ದ ರಷ್ಯಾದ ಸರ್ಜಿ ಕರ್ಜಕಿನ್‌ ಇದೇ ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಎದುರಿಸಲಿದ್ದಾರೆ. 26ರ ಹರೆಯದ ಕರ್ಜಕಿನ್‌ ಎಂಬ ಪ್ರತಿಭೆಯ ಮೂಲಕ ರಷ್ಯಾ ಚೆಸ್‌ ಕ್ರೀಡೆಯಲ್ಲಿ ಮತ್ತೆ ಪ್ರಬಲ ಶಕ್ತಿಯಾಗಿ ಮೆರೆಯಲಿದೆಯೇ ಎಂಬ ಕುತೂಹಲ ಚೆಸ್‌ ಪ್ರಿಯರನ್ನು ಕಾಡುತ್ತಿದೆ. ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್‌ ಉಕ್ರೇನ್‌ ದೇಶದ ಕ್ರಿಮಿಯಾದ ಸಿಂಫರೆಪೊಲ್‌ನಲ್ಲಿ 1990 ರಲ್ಲಿ ಜನಿಸಿದ ಕರ್ಜಕಿನ್‌ ಎಳವೆಯಲ್ಲೇ ತಮ್ಮ ಬುದ್ದಿಮತ್ತೆಯನ್ನು ಜಗತ್ತಿಗೆ ಪರಿಚಯಿಸಿದ್ದರು. 2002ರ ಆಗಸ್ಟ್‌ನಲ್ಲಿ ‘ಗ್ರ್ಯಾಂಡ್‌ಮಾಸ್ಟರ್‌’ ಪಟ್ಟ ದೊರೆತಾಗ ಅವರ ವಯಸ್ಸು 12 ವರ್ಷ 7 ತಿಂಗಳು. ವಿಶ್ವದ ಅತಿ ಕಿರಿಯ ಗ್ರ್ಯಾಂಡ್‌ ಮಾಸ್ಟರ್‌ ಎಂಬ ಗೌರವ ಈಗಲೂ ಅವರ ಹೆಸರಿನಲ್ಲಿದೆ. ಅದನ್ನು ಮುರಿಯಲು ಯಾರಿಗೂ ಆಗಿಲ್ಲ. ಕರ್ಜಕಿನ್‌ 2001 ರಲ್ಲಿ 12 ವರ್ಷ ವಯಸ್ಸಿನೊಳಗಿನವರ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿದ್ದರು. 2004 ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ಡಾರ್ಟ್‌ಮಂಡ್‌ ಸ್ಪಾರ್ಕಾಸೆನ್‌ ಟೂರ್ನಿಯಲ್ಲಿ ಅಂದಿನ ವಿಶ್ವ ಚಾಂಪಿಯನ್‌ ವ್ಲಾದಿಮಿರ್‌ ಕ್ರಾಮ್ನಿಕ್‌ ಅವರನ್ನು ಮಣಿಸಿ ವಿಶ್ವದ ಗಮನ ಸೆಳೆದಿದ್ದರು. ಉಕ್ರೇನ್‌ ತೊರೆದು ರಷ್ಯಾದ ಮಾಸ್ಕೊಗೆ ಬಂದು ನೆಲೆಸಿದ ಕರ್ಜಕಿನ್‌ 2009 ರಲ್ಲಿ ರಷ್ಯಾದ ಪೌರತ್ವ ಪಡೆದರು. ‘ಉಕ್ರೇನ್‌ನಲ್ಲಿ ಸೂಕ್ತ ತರಬೇತಿ ಮತ್ತು ಪ್ರಾಯೋಜಕತ್ವ ದೊರೆಯದ ಕಾರಣ ರಷ್ಯಾವನ್ನು ಪ್ರತಿನಿಧಿಸಲು ನಿರ್ಧರಿಸಿದೆ’ ಎಂದು ಅವರು ತಮ್ಮ ನಿರ್ಧಾರದ ಹಿಂದಿನ ಕಾರಣ ತಿಳಿಸಿದ್ದರು. ಎಳೆ ವಯಸ್ಸಿನಲ್ಲಿ ಅಮೋಘ ಸಾಧನೆಯ ಮೂಲಕ ಮಿಂಚಿದ್ದ ಅವರಿಗೆ ವಿಶ್ವಚಾಂಪಿಯನ್‌ಪಟ್ಟ ಇನ್ನೂ ಒಲಿಯದೇ ಇದ್ದದ್ದು ಹಲವರಿಗೆ ಅಚ್ಚರಿ ಉಂಟಮಾಡಿತ್ತು. ಇದೀಗ ವಿಶ್ವಚಾಂಪಿಯನ್‌ ಎನಿಸುವ ಅವಕಾಶ ದೊರೆತಿದೆ. ಮಾಸ್ಕೊದಲ್ಲಿ ನಡೆದ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ವಿಶ್ವದ ಪ್ರಮುಖ ಎಂಟು ಆಟಗಾರರು ಪಾಲ್ಗೊಂಡಿದ್ದರು. ಚಾಣಾಕ್ಷ ನಡೆಗಳ ಮೂಲಕ ಇತರ ಸ್ಪರ್ಧಿಗಳನ್ನು ಹಿಂದಿಕ್ಕಿ ಒಟ್ಟು 8.5 ಪಾಯಿಂಟ್‌ಗಳೊಂದಿಗೆ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕರ್ಜಕಿನ್‌ ಅಂತಿಮ ಸುತ್ತಿನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನ ಅವರನ್ನು ಮಣಿಸಿದ್ದರು. ರಷ್ಯಾದ ಆಟಗಾರನಿಗೆ ಈ ಟೂರ್ನಿಯಲ್ಲಿ ಕೇವಲ ಒಂದು ಸೋಲು ಎದುರಾಗಿತ್ತು. ಅದು ವಿಶ್ವನಾಥನ್‌ ಆನಂದ್‌ ಕೈಯಲ್ಲಿ ಬಂದಿತ್ತು. ಕಾರ್ಲ್‌ಸನ್‌ಗೆ ಸವಾಲು 12 ಸುತ್ತುಗಳನ್ನು ಹೊಂದಿರುವ ವಿಶ್ವಚಾಂಪಿಯನ್‌ಷಿಪ್‌ ಸ್ಪರ್ಧೆ ನ್ಯೂಯಾರ್ಕ್‌ನಲ್ಲಿ ನವೆಂಬರ್‌ 11 ರಿಂದ 30ರ ವರೆಗೆ ನಡೆಯಲಿದೆ. ಫಿಡೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಕಾರ್ಲ್‌ಸನ್‌ ಅಗ್ರಸ್ಥಾನದಲ್ಲಿದ್ದರೆ, ಕರ್ಜಕಿನ್‌ 13ನೇ ಸ್ಥಾನದಲ್ಲಿದ್ದಾರೆ. ಆದ್ದರಿಂದ ಕಾರ್ಲ್‌ಸನ್‌ ಎದುರು ‘ಅಂಡರ್‌ಡಾಗ್‌’ ಎಂಬ ಹಣೆಪಟ್ಟಿಯೊಂದಿಗೆ ಕರ್ಜಕಿನ್‌ ಕಣಕ್ಕಿಳಿಯಲಿದ್ದಾರೆ. ಕಾರ್ಲ್‌ಸನ್‌ ಅವರು ರಷ್ಯಾದ ಆಟಗಾರನ ವಿರುದ್ಧ 3–1ರ ಗೆಲುವಿನ ದಾಖಲೆ (ಕ್ಲಾಸಿಕಲ್‌ ಗೇಮ್‌ಗಳಲ್ಲಿ) ಹೊಂದಿದ್ದಾರೆ. ಇತರ 15 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇವರಿಬ್ಬರ ವಯಸ್ಸಿನ ನಡುವಿನ ಅಂತರ ಕೇವಲ 10 ತಿಂಗಳು ಮಾತ್ರ. 2013 ಮತ್ತು 14 ರಲ್ಲಿ ವಿಶ್ವ ಪಟ್ಟಕ್ಕಾಗಿ ಕಾರ್ಲ್‌ಸನ್‌ ಜತೆ ಆನಂದ್‌ (46 ವರ್ಷ) ಪೈಪೋಟಿ ನಡೆಸಿದ್ದರು. ಆಗ ಇಬ್ಬರ ವಯಸ್ಸಿನ ನಡುವಿನ ಅಂತರ ಕೂಡಾ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ಬಾರಿ ವಯಸ್ಸಿನ ಬಗ್ಗೆ ಚರ್ಚೆ ನಡೆಯದು. ವಿಶ್ವಚಾಂಪಿಯನ್‌ ಪಟ್ಟಕ್ಕಾಗಿ ಇಬ್ಬರು ಯುವ ಆಟಗಾರರು ಪೈಪೋಟಿ ನಡೆಸಲಿರುವುದು ಕುತೂಹಲ ಗರಿಗೆದರುವಂತೆ ಮಾಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.