ಗುಣಮಟ್ಟದ ಆಟಕ್ಕೆ ಒತ್ತು ಕೊಡಬೇಕು ಒಲಿಂಪಿಕ್ಸ್‌ ಎಂದಾಕ್ಷಣ ಭಾರತದ ಮಟ್ಟಿಗೆ ಮೊದಲು ನೆನಪಾಗುವುದು ಹಾಕಿ. ಎಂಟು ಸಲ ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಬಾರಿ ಕಂಚು ಗೆದ್ದ ಅತ್ಯದ್ಭುತ ಸಾಧನೆ ನಮ್ಮದು. ಇದೆಲ್ಲವೂ ಇತಿಹಾಸದ ಮಾತಾಯಿತು. ಆದರೆ ಹಿಂದಿನ ಏಳು ಒಲಿಂಪಿಕ್ಸ್‌ಗಳಿಂದ ಹಾಕಿಯಲ್ಲಿ ಭಾರತ ಒಂದೇ ಒಂದು ಪದಕ ಗೆದ್ದಿಲ್ಲ. ಪದಕದ ಮಾತು ಒತ್ತಟ್ಟಿಗಿರಲಿ. ಮೊದಲ ನಾಲ್ಕರ ಒಳಗೆ ಸ್ಥಾನ ಪಡೆಯಲು ಕೂಡ ಸಾಧ್ಯವಾಗಿಲ್ಲ. ಪ್ರತಿ ಒಲಿಂಪಿಕ್ಸ್‌ನಿಂದಲೂ ಹಾಕಿ ತಂಡದ ಪ್ರದರ್ಶನ ಕುಸಿಯುತ್ತಲೇ ಸಾಗಿದೆ. 2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಹನ್ನೆರಡೆನೇ ಸ್ಥಾನಕ್ಕೆ ಕುಸಿದು ಮುಖಭಂಗಕ್ಕೆ ಒಳಗಾಗಿತ್ತು. 1984ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಐದನೇ ಸ್ಥಾನ ಪಡೆದಿತ್ತು. ಇತ್ತೀಚಿನ ಎರಡೂವರೆ ದಶಕಗಳಲ್ಲಿ ಭಾರತದ ಉತ್ತಮ ಸಾಧನೆ ಇದು! ಆದರೂ ಒಲಿಂಪಿಕ್ಸ್‌ ಬಂದಾಗ ‘ಹಾಕಿಯಲ್ಲಿ ಈ ಬಾರಿಯಾದರೂ ಪದಕ ಲಭಿಸುವುದೇ’ ಎನ್ನುವ ಪ್ರಶ್ನೆ ನಮ್ಮ ಮುಂದೆ ಸುಳಿದಾಡುತ್ತದೆ. ಆಟಗಾರರು ಮತ್ತು ಕೋಚ್‌ಗಳು ‘ಹೌದು, ಚಿನ್ನ ಗೆಲ್ಲುವ ಗುರಿ ನಮ್ಮದು’ ಎಂದು ಹೇಳುತ್ತಾರೆ. ಈ ಬಾರಿಯೂ ಭಾರತ ತಂಡದ ಮುಖ್ಯ ಕೋಚ್ ರೋಲಂಟ್‌ ಓಲ್ಟಮಸ್‌ ಇದೇ ಮಾತನ್ನು ಹೇಳಿದ್ದಾರೆ. ‘ಹಿಂದಿನ ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ ಏನೇ ಇರಲಿ. ಅದರ ಬಗ್ಗೆ ಚಿಂತಿಸುವುದಿಲ್ಲ. ನಾಲ್ಕು ವರ್ಷಗಳಲ್ಲಿ ಸಾಕಷ್ಟು ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದೇವೆ. ಆಟಗಾರರೂ ಬಲಿಷ್ಠರಾಗಿದ್ದಾರೆ’ ಎನ್ನುತ್ತಾರೆ ಓಲ್ಟಮಸ್‌. ಭಾರತ ತಂಡದ ಹೈ ಪರ್ಫಾಮೆನ್ಸ್‌ ನಿರ್ದೇಶಕರೂ ಆಗಿರುವ ನೆದರ್ಲೆಂಡ್ಸ್‌ನ ಓಲ್ಟಮಸ್‌ ಜೊತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ವಿವರ ಇಲ್ಲಿದೆ. * ಒಲಿಂಪಿಕ್ಸ್‌ಗೆ ಸಿದ್ಧಗೊಳ್ಳಲು ವೇದಿಕೆ ಎನಿಸಿರುವ ಅಜ್ಲಾನ್ ಷಾ ಟೂರ್ನಿಗೆ ಹೇಗೆ ಸಜ್ಜಾಗಿದ್ದೀರಿ? ಒಲಿಂಪಿಕ್ಸ್‌ಗೆ ಸಿದ್ಧಗೊಳ್ಳಲು ಇದು ಮೊದಲ ಹಂತದ ಅಭ್ಯಾಸವೆನಿಸಿದೆ. ವಿಶ್ವದ ಬಲಿಷ್ಠ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತವೆ. ಇದರಲ್ಲಿ ಬಹುತೇಕ ತಂಡಗಳು ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವ ಕಾರಣ ಪ್ರತಿ ತಂಡವೂ ಗುಣಮಟ್ಟ ಹೆಚ್ಚಿಸಿಕೊಳ್ಳಲು ಒತ್ತು ಕೊಡುತ್ತವೆ. ಆಸ್ಟ್ರೇಲಿಯಾ, ಮಲೇಷ್ಯಾ, ಪಾಕಿಸ್ತಾನ, ಜರ್ಮನಿ, ಬ್ರಿಟನ್‌, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ರಾಷ್ಟ್ರಗಳ ಸವಾಲು ಎದುರಿಸಬೇಕಿದೆ. ಆದ್ದರಿಂದ ಹೊಸ ಆಟಗಾರರಿಗೆ ಅವಕಾಶ ಕೊಟ್ಟು ಪ್ರಯೋಗ ಮಾಡಲು ಟೂರ್ನಿ ಉತ್ತಮ ವೇದಿಕೆಯಾಗಿದೆ. * ಈ ಟೂರ್ನಿಯಿಂದ ಏನು ನಿರೀಕ್ಷೆ ಇಟ್ಟುಕೊಂಡಿದ್ದೀರಿ? ಒಲಿಂಪಿಕ್ಸ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಬೇಕಾದರೆ ಅಜ್ಲಾನ್ ಷಾ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಲೇಬೇಕಿದೆ. ಡ್ರ್ಯಾಗ್‌ ಫ್ಲಿಕ್‌ ಮತ್ತು ಗೋಲ್‌ಕೀಪಿಂಗ್ ವಿಭಾಗದಲ್ಲಿ ಚುರುಕಾಗಬೇಕಿದೆ. ಈ ವಿಭಾಗಕ್ಕೆ ಒತ್ತು ಕೊಟ್ಟು ಆಟಗಾರರು ಅಭ್ಯಾಸ ನಡೆಸಿದ್ದಾರೆ. ಟೂರ್ನಿಯಲ್ಲಿ ಎಷ್ಟನೇ ಸ್ಥಾನ ಪಡೆಯುತ್ತೇವೆ ಎನ್ನುವುದಕ್ಕಿಂತ ಹೆಚ್ಚಾಗಿ ಗುಣಮಟ್ಟದ ಆಟಕ್ಕೆ ಆದ್ಯತೆ ಕೊಡುತ್ತೇವೆ. * ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡದಿಂದ ಏನು ನಿರೀಕ್ಷೆ ಮಾಡುತ್ತೀರಿ? ಇಂಥದ್ದೇ ಸಾಧನೆ ಮಾಡಬೇಕು ಎಂದು ಗುರಿ ಇಟ್ಟುಕೊಂಡು ಅದನ್ನು ಆಟಗಾರರಿಗೆ ಹೇಳಿದರೆ ವಿನಾಕಾರಣ ಅವರ ಮೇಲೆ ಒತ್ತಡ ಹೇರಿದಂತೆ ಆಗುತ್ತದೆ. ಆದ್ದರಿಂದ ಹಂತ ಹಂತವಾಗಿ ಮೇಲಕ್ಕೇರುವ ಗುರಿ ನಮ್ಮದು. ಒಲಿಂಪಿಕ್ಸ್‌ನ ಮೊದಲ ಪಂದ್ಯದಲ್ಲಿ ಗೆಲುವು ಪಡೆಯುವುದು. ನಂತರ ಎರಡನೇ ಪಂದ್ಯದತ್ತ ಗಮನ ಹರಿಸುವುದು. ಹೀಗೆ ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಗಮನ ಹರಿಸುತ್ತೇವೆ. ಎಲ್ಲಾ ತಂಡಗಳಿಗೂ ಚಿನ್ನ ಗೆಲ್ಲಬೇಕೆನ್ನುವ ಆಸೆ ಇದ್ದೇ ಇರುತ್ತದೆ. ಇದರಿಂದ ನಾವೂ ಹೊರತಲ್ಲ. ಆದರೆ ಒಂದು ತಂಡಕ್ಕಷ್ಟೇ ಚಿನ್ನ ಗೆಲ್ಲಲು ಸಾಧ್ಯವಲ್ಲವೇ. * ಒಲಿಂಪಿಕ್ಸ್‌ ನಡೆಯುವ ರಿಯೊ ಡಿ ಜನೈರೊದಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಲ್ಲವೇ? ಹಾಗೇನು ಇಲ್ಲ. ಅಲ್ಲಿ ತುಂಬಾ ಬಿಸಿಲು ಇರುವುದಿಲ್ಲ. ಸಾಕಷ್ಟು ತಂಪು ಕೂಡ ಇರುವುದಿಲ್ಲ. ಆಗಸ್ಟ್‌ನಲ್ಲಿ ಡಿಯೊ ಡಿ ಜನೈರೊದಲ್ಲಿ 22ರಿಂದ 25 ಡಿಗ್ರಿ ಸೆಲ್ಸಿಯಸ್‌ವರೆಗೆ ಬಿಸಿಲು ಇರಬಹುದು. ಇದರಿಂದ ಆಟಗಾರರಿಗೆ ಕಷ್ಟವಾಗುವುದಿಲ್ಲ.. * ಈಗಿನ ಭಾರತ ಹಾಕಿ ತಂಡದಲ್ಲಿರುವ ಸಕಾರಾತ್ಮಕ ಅಂಶಗಳೇನು? ಸಾಕಷ್ಟು ಸಕಾರಾತ್ಮಕ ಅಂಶಗಳಿವೆ. ಹಿಂದಿನ ಲಂಡನ್ ಒಲಿಂಪಿಕ್ಸ್‌ ಬಳಿಕ ಗ್ಲಾಸ್ಗೊ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ, ಇಂಚೆನ್ ಏಷ್ಯನ್ ಕೂಟದಲ್ಲಿ ಚಿನ್ನ, 2015ರ ವಿಶ್ವ ಹಾಕಿ ಲೀಗ್‌ನಲ್ಲಿ ಕಂಚು, 2014ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಲ್ಕನೇ ಸ್ಥಾನ, 2013ರ ಏಷ್ಯಾಕಪ್‌ನಲ್ಲಿ ಬೆಳ್ಳಿ ಪದಕ ಹೀಗೆ ಅನೇಕ ಸಾಧನೆಗಳನ್ನು ಮಾಡಿದ್ದೇವೆ. ಈ ಪದಕಗಳಿಂದ ಆಟಗಾರರು ಯೋಚನೆ ಮಾಡುವ ರೀತಿ ಬದಲಾಗಿದೆ. ಮಾನಸಿಕವಾಗಿ ಬಲಿಷ್ಠರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಎರಡು ವರ್ಷಗಳ ಹಿಂದೆಯೇ ಒಲಿಂಪಿಕ್ಸ್‌ಗೆ ಅರ್ಹತೆ ಲಭಿಸಿರುವುದರಿಂದ ಅಭ್ಯಾಸಕ್ಕೆ ಹೆಚ್ಚು ಸಮಯ ಸಿಕ್ಕಿದೆ. * ಯಾವ ವಿಭಾಗದಲ್ಲಿ ಭಾರತ ತಂಡ ಬಲಿಷ್ಠವಾಗಬೇಕಿದೆ? ಎಲ್ಲಾ ವಿಭಾಗಗಳು ಸಮತೋಲದಿಂದ ಕೂಡಿರಬೇಕು. ನಮ್ಮ ತಂಡದಲ್ಲಿ ಶ್ರೇಷ್ಠ ಗೋಲ್ ಕೀಪರ್‌ ಇದ್ದಾರೆ. ಹರ್ಮನ್‌ಪ್ರೀತ್, ರಘುನಾಥ್‌, ಜಸ್ಜೀತ್‌ ಸಿಂಗ್‌, ರೂಪಿಂದರ್‌ ಪಾಲ್ ಅವರಂಥ ಪ್ರತಿಭಾನ್ವಿತ ಪೆನಾಲ್ಟಿ ಕಾರ್ನರ್‌ ಪರಿಣಿತರನ್ನು ತಂಡ ಹೊಂದಿದೆ. ಫಾರ್ವರ್ಡ್‌, ಡಿಫೆಂಡರ್‌ ಆಟಗಾರರ ನಡುವೆ ಉತ್ತಮ ಹೊಂದಾಣಿಕೆ ಇರಬೇಕು. ಚೆಂಡಿನ ಮೇಲೆ ನಿರಂತರವಾಗಿ ನಿಯಂತ್ರಣ ಸಾಧಿಸುವ ಕೌಶಲ ಉತ್ತಮ ಪಡಿಸಿಕೊಳ್ಳಬೇಕಿದೆ. * ತರಬೇತಿ ನೀಡುವ ವಿಷಯದಲ್ಲಿ ಯುರೋಪಿಯನ್ ಮತ್ತು ಏಷ್ಯಾದ ಶೈಲಿಗೆ ಏನು ಪ್ರಮುಖ ವ್ಯತ್ಯಾಸವೆನಿಸುತ್ತದೆ? ಯುರೋಪಿಯನ್‌ ಶೈಲಿಯಲ್ಲಿ ತರಬೇತಿ ನೀಡುವಾಗ ಚೆಂಡಿನ ಮೇಲೆ ಸದಾ ನಿಯಂತ್ರಣ ಹೊಂದುವ ವಿಷಯಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಯುವ ಆಟಗಾರರಿಗೆ ಅಭ್ಯಾಸದ ಜತೆಗೆ ಪಠ್ಯದ ತರಬೇತಿಯೂ ನೀಡುತ್ತಾರೆ. ಬೆಲ್ಜಿಯಂ, ಡೆನ್ಮಾರ್ಕ್‌, ಫ್ರಾನ್ಸ್‌, ನೆದರ್ಲೆಂಡ್ಸ್‌, ಸ್ಪೇನ್‌ ದೇಶಗಳ ಜನರಿಗೂ ಏಷ್ಯಾದ ಜನರಿಗೂ ಆಹಾರ ಪದ್ಧತಿಯಲ್ಲಿ ತುಂಬಾ ಬದಲಾವಣೆಯಿದೆ. ಯೂರೋಪಿಯನ್‌ ಶೈಲಿಯಲ್ಲಿ ಅಭ್ಯಾಸ ನಡೆಸುವ ಆಟಗಾರರ ದೈಹಿಕ ಸಾಮರ್ಥ್ಯ ಶ್ರೇಷ್ಠ ಮಟ್ಟದ್ದಾಗಿರುತ್ತದೆ. ಆದ್ದರಿಂದ ತರಬೇತಿಯ ವಿಧಾನದಲ್ಲಿ ಕೆಲ ಬದಲಾವಣೆಗಳು ಇರುತ್ತವೆ. * ಎಂಟು ಬಾರಿ ಚಿನ್ನದ ಪದಕ ಗೆದ್ದ ಭಾರತ 2008ರ ಒಲಿಂಪಿಕ್ಸ್‌ಗೆ ಅರ್ಹತೆಯೇ ಪಡೆದಿರಲಿಲ್ಲ. ಹಿಂದಿನ ಒಲಿಂಪಿಕ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿತ್ತು. ಆದ್ದರಿಂದ ಈ ಬಾರಿ ತಂಡದ ಮೇಲೆ ಒತ್ತಡವಿದೆಯೇ? ಹಾಕಿಯಲ್ಲಿ ಭಾರತ ತಂಡ ಒಂದು ಕಾಲದಲ್ಲಿ ವಿಶ್ವದ ಗಮನ ಸೆಳೆದಿತ್ತು. 1980ರ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ಚಿನ್ನ ಜಯಿಸಿದ್ದಾಗ ಬಲಿಷ್ಠ ತಂಡಗಳು ಟೂರ್ನಿಯಲ್ಲಿ ಆಡಿರಲಿಲ್ಲ. ಆಗ ಸ್ಪೇನ್‌, ಸೋವಿಯತ್‌ ಯೂನಿಯನ್‌, ಪೋಲ್ಯಾಂಡ್‌ಗಳಷ್ಟೇ ಬಲಿಷ್ಠ ತಂಡಗಳಾಗಿದ್ದವು. ಆದ್ದರಿಂದ ಆಗಿನ ಮತ್ತು ಈಗಿನ ಸ್ಥಿತಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಚಿನ್ನ ಜಯಿಸುವ ಗುರಿಯಿದೆ. ಆದರೆ ಒತ್ತಡವೇನಿಲ್ಲ. * ಹಾಕಿ ಇಂಡಿಯಾ ಲೀಗ್‌ನಿಂದ ಭಾರತದ ಯುವ ಆಟಗಾರರಿಗೆ ಏನಾದರೂ ಪ್ರಯೋಜನವಾಗಿದೆಯೇ? ಕೌಶಲ ಮತ್ತು ವೇಗ ಹೆಚ್ಚಿಸಿಕೊಳ್ಳಲು ಲೀಗ್ ಉತ್ತಮ ವೇದಿಕೆಯಾಗಿತ್ತು. ವಿಶ್ವದ ಶ್ರೇಷ್ಠ ಆಟಗಾರರ ಜೊತೆ ಆಡಲು ಅವಕಾಶ ಲಭಿಸಿತು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಆಟಗಾರರಿಗೆ ಹಾಕಿ ಆಡಿಯೂ ಬದುಕು ರೂಪಿಸಿಕೊಳ್ಳಬಹುದು ಎನ್ನುವ ವಿಶ್ವಾಸವನ್ನು ಲೀಗ್ ತುಂಬಿದೆ. * ಭಾರತ ಹಾಕಿ ತಂಡಕ್ಕೆ ಬೆಂಗಳೂರಿನಲ್ಲಿ ಶಿಬಿರ ಆಯೋಜಿಸಿದ್ದು ಖುಷಿ ನೀಡಿದೆಯೇ? ಆಟಗಾರರು ಖುಷಿಯಾಗಿದ್ದಾರೆ. ನಾನೂ ಇಲ್ಲಿಯೇ ಸಾಕಷ್ಟು ಸಮಯ ಕಳೆಯುತ್ತಿದ್ದೇನೆ. ಒಲಿಂಪಿಕ್ಸ್‌ಗೆ ಅಭ್ಯಾಸ ನಡೆಸಲು ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಉತ್ತಮ ಟರ್ಫ್‌ ನಿರ್ಮಿಸಿದ್ದಾರೆ. * ಸಾಮಾನ್ಯವಾಗಿ ಹಾಕಿ ಟರ್ಫ್‌ ಹಸಿರು ಬಣ್ಣದ್ದಾಗಿರುತ್ತದೆ. ಆದರೆ 2012ರ ಒಲಿಂಪಿಕ್ಸ್‌ನಲ್ಲಿ ನೀಲಿ ಬಣ್ಣದ ಟರ್ಫ್‌ ಮೇಲೆ ಪಂದ್ಯಗಳನ್ನು ಆಡಿಸಲಾಗಿತ್ತು. ಆದ್ದರಿಂದ ಬೆಂಗಳೂರಿನಲ್ಲಿಯೂ ಇದೆ ಬಣ್ಣದ ಟರ್ಫ್‌ ಹಾಕಲಾಗಿದೆಯೇ? ಒಲಿಂಪಿಕ್ಸ್‌ ಪಂದ್ಯಗಳು ವಾಹಿನಿಯಲ್ಲಿ ನೇರಪ್ರಸಾರವಾಗುವುದರಿಂದ ವೀಕ್ಷಕರಿಗೆ ನೋಡಲು ಹಿತವೆನಿಸಬೇಕು ಎನ್ನುವ ಲೆಕ್ಕಾಚಾರದಿಂದ ನೀಲಿ ಬಣ್ಣದ ಟರ್ಫ್‌ ಹಾಕಲಾಗಿದೆ. ಕೊಂಚ ಮಂದ ಬೆಳಕು ಇದ್ದರೂ ಈ ಬಣ್ಣದ ಟರ್ಫ್‌ ಮೇಲೆ ಯಾವ ತೊಂದರೆ ಇಲ್ಲದೆ ಆಡಬಹುದು. * ಬದಲಾದ ಟರ್ಫ್‌ ಬಣ್ಣ ಆಟದ ಪರಿಣಾಮ ಬೀರುತ್ತದೆಯೇ? ಇಲ್ಲ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿಯೂ ನೀಲಿ ಬಣ್ಣದ ಟರ್ಫ್‌ ಇರುತ್ತದೆ ಎನ್ನುವ ಸುದ್ದಿಯಿದೆ. ಅಲ್ಲಿ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಇಲ್ಲಿಯೂ ಅದೇ ಬಣ್ಣದ ಟರ್ಫ್‌ ಹಾಕಲಾಗಿದೆ. * ಸಾಕಷ್ಟು ತಂಡಗಳಿಗೆ ಕೋಚ್‌ ಆಗಿ ಕೆಲಸ ಮಾಡಿದ್ದೀರಿ. ನಿಮ್ಮ ಕ್ರೀಡಾ ಜೀವನದ ಸ್ಮರಣೀಯ ಕ್ಷಣ ಯಾವುದು? ನನ್ನ ದೇಶದ ತಂಡಗಳಿಗೆ ಕೋಚ್‌ ಆಗಿದ್ದ ದಿನಗಳು ಯಾವತ್ತಿಗೂ ಮರೆಯಲು ಆಗುವುದಿಲ್ಲ. ಮಹಿಳಾ ತಂಡ ವಿಶ್ವಕಪ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದು ಮತ್ತು ಪುರುಷರ ತಂಡ 1996ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ ಸವಿ ದಿನಗಳು ತುಂಬಾ ಖುಷಿಕೊಟ್ಟಿವೆ. **** ನಾಲ್ಕು ತಂಡಕ್ಕೆ ಕೋಚ್‌ ಆಗಿದ್ದ ಓಲ್ಟಮಸ್‌... ನೆದರ್ಲೆಂಡ್ಸ್‌ ತಂಡ ಪ್ರಮುಖ ಕ್ರೀಡಾಕೂಟಗಳಲ್ಲಿ ಎತ್ತರದ ಸಾಧನೆ ತೋರಲು ಓಲ್ಟಮಸ್ ನೀಡಿದ ತರಬೇತಿ ಪ್ರಮುಖ ಕಾರಣವಾಗಿದೆ. ಓಲ್ಟಮಸ್ 1989ರಿಂದ 1993ರ ವರೆಗೆ ತಮ್ಮದೇ ದೇಶದ ಮಹಿಳಾ ಹಾಕಿ ತಂಡಕ್ಕೆ ಕೋಚ್‌ ಆಗಿದ್ದರು. ಈ ಅವಧಿಯಲ್ಲಿ ಮಹಿಳಾ ತಂಡ 1990ರಲ್ಲಿ ಸಿಡ್ನಿಯಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿ ಮೊದಲ ಸ್ಥಾನ ಪಡೆದಿತ್ತು. 1993ರಿಂದ ನೆದರ್ಲೆಂಡ್ಸ್‌ನ ಪುರುಷರ ತಂಡಕ್ಕೆ ತರಬೇತಿ ನೀಡಿದರು. ಆಗ 1994ರಲ್ಲಿ ಸಿಡ್ನಿಯಲ್ಲಿ ನಡೆದ ವಿಶ್ವಕಪ್‌ನಲ್ಲಿ ಪುರುಷರ ತಂಡ ಬೆಳ್ಳಿ ಗೆದ್ದಿತ್ತು. 1996ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಪಡೆದಿತ್ತು. 1998ರಲ್ಲಿ ನೆದರ್ಲೆಂಡ್ಸ್‌ ವಿಶ್ವ ಕಪ್‌ನಲ್ಲಿ ಚಿನ್ನ ಜಯಿಸಿತ್ತು. ಓಲ್ಟಮಸ್‌ ಕೆಲ ತಿಂಗಳು ಸ್ವಿಟ್ಜರ್‌ಲೆಂಡ್ ತಂಡಕ್ಕೆ ಕೋಚ್‌ ಆಗಿದ್ದರು. 2003ರ ಅಂತ್ಯದಲ್ಲಿ ಪಾಕಿಸ್ತಾನ ರಾಷ್ಟ್ರೀಯ ತಂಡಕ್ಕೆ ಕೋಚ್‌ ಆಗಿ ಕೆಲಸ ಮಾಡಿದ್ದಾರೆ. 2005ರಿಂದ 2008ರ ಒಲಿಂಪಿಕ್ಸ್‌ವರೆಗೆ ನೆದರ್ಲೆಂಡ್ಸ್ ತಂಡದ ಕೋಚ್‌ ಆಗಿದ್ದರು. ಆಗ ಆ ತಂಡ ನಾಲ್ಕನೇ ಸ್ಥಾನ ಪಡೆದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.