ಮಹಿಳಾ ಕ್ರಿಕೆಟ್‌ಗೂ ಬರಲಿ ಐಪಿಎಲ್‌... ಹೋದ ವಾರ ಮುಗಿದ ವಿಶ್ವ ಟ್ವೆಂಟಿ–20 ಟೂರ್ನಿಯ ವೇಳೆ ಮಹಿಳೆಯರ ಕ್ರಿಕೆಟ್ ಕೂಡ ಗಮನ ಸೆಳೆಯಿತು. ವನಿತೆಯರ ಕ್ರಿಕೆಟ್‌ ಸುಧಾರಣೆ ಆಗಬೇಕಾದರೆ ಅವರಿಗೂ ಐಪಿಎಲ್‌ ನಡೆಯಬೇಕು ಎನ್ನುವ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಮಹಿಳಾ ವಿಭಾಗದಲ್ಲಿ ವೆಸ್ಟ್‌ ಇಂಡೀಸ್ ಪ್ರಶಸ್ತಿ ಗೆದ್ದ ಬಳಿಕ ಆ ತಂಡದ ನಾಯಕಿ ‘ವನಿತೆಯರಿಗೂ ಐಪಿಎಲ್‌ ನಡೆಯಲಿ’ ಎಂದರು. ಇದಕ್ಕೂ ಮೊದಲು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳ ನಾಯಕಿಯರು ಇದೇ ಮಾತನ್ನು ಹೇಳಿದ್ದರು. ಐಪಿಎಲ್ ಆರಂಭವಾದ ಬಳಿಕ ಪುರುಷರ ಕ್ರಿಕೆಟ್‌ ಜನಸ್ನೇಹಿಯಾಗಿದೆ. ಆದರೆ ಪುರುಷರಿಗೆ ಸಿಕ್ಕಷ್ಟು ಪ್ರಾಶಸ್ತ್ಯ ಮಹಿಳಾ ಕ್ರಿಕೆಟ್‌ಗೆ ಸಿಕ್ಕಿಲ್ಲ. 2006ರಲ್ಲಿ ಮಹಿಳಾ ಕ್ರಿಕೆಟ್‌ ಬಿಸಿಸಿಐ ಸುಪರ್ದಿಗೆ ಬಂದ ಬಳಿಕ ಹಂತ ಹಂತವಾಗಿ ಸುಧಾರಣೆ ಕಾಣುತ್ತಿದೆ. ಆದರೆ ಇನ್ನೂ ಎತ್ತರಕ್ಕೆ ಏರಬೇಕಾದರೆ ವನಿತೆಯರಿಗೂ ಐಪಿಎಲ್‌ ಅಗತ್ಯವಿದೆ. ವಿಶ್ವ ಟೂರ್ನಿಯ ಫೈನಲ್‌ ಪಂದ್ಯಗಳು ಕೋಲ್ಕತ್ತದಲ್ಲಿ ನಡೆದವು. ಮೊದಲು ಮಹಿಳೆಯರ ಫೈನಲ್ ನಡೆದಾಗ ಕ್ರೀಡಾಂಗಣದಲ್ಲಿ ಕಡಿಮೆ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದರು. ಆದರೆ ಪುರುಷರ ಫೈನಲ್ ಆರಂಭವಾಗಲು ಒಂದು ಗಂಟೆ ಇರುವಂತೆಯೇ ಕ್ರಿಕೆಟ್‌ ಪ್ರೇಮಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಜನ ಮಹಿಳಾ ಕ್ರಿಕೆಟ್‌ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ವಿಶ್ವ ಟೂರ್ನಿಯ ಫೈನಲ್‌ ಪಂದ್ಯಕ್ಕೂ ಮೊದಲು ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ‘ನಮಗೂ ಪ್ರತ್ಯೇಕ ಐಪಿಎಲ್ ರೂಪಿಸಿದಲ್ಲಿ ಮಹಿಳಾ ಕ್ರಿಕೆಟ್‌ನ ಬೆಳವಣಿಗೆ ಮತ್ತು ಜನಪ್ರಿಯತೆಗೆ ವೇದಿಕೆ ಸಿಕ್ಕಂತಾಗುತ್ತದೆ’ ಎಂದಿದ್ದರು. ‘ನಾವು ಹೆಚ್ಚು ಟೆಸ್ಟ್ ಆಡಬಯಸುತ್ತೇವೆ - ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಟ್ವೆಂಟಿ-20 ಪಂದ್ಯಗಳು ಸಹಕಾರಿಯಾಗಿವೆ. ಈ ಪಂದ್ಯಗಳು ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿಸುತ್ತವೆ ದೆಹಲಿ ಮತ್ತು ಧರ್ಮಶಾಲಾದಲ್ಲಿ ನಡೆದ ವಿಶ್ವ ಟೂರ್ನಿಯ ಪಂದ್ಯಗಳನ್ನು 7000ಕ್ಕೂ ಹೆಚ್ಚು ಭಾರತೀಯ ಪ್ರೇಕ್ಷಕರು ವೀಕ್ಷಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.' ಎಂದು ಲ್ಯಾನಿಂಗ್ ಹೇಳಿದ್ದರು. ಹತ್ತು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲೆಂಡ್ ಮಹಿಳಾ ತಂಡವನ್ನು ಮುನ್ನಡೆಸಿರುವ ಚಾರ್ಲೊಟ್ ಎಡ್ವರ್ಡ್ಸ್ ಕೂಡ ಲ್ಯಾನಿಂಗ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಪ್ರತ್ಯೇಕ ಐಪಿಎಲ್ ನಡೆದರೆ ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಬೆಳವಣಿಗೆಯ ವೇಗ ಹೆಚ್ಚಾಗುತ್ತದೆ ಎಂದು ಎಡ್ವರ್ಡ್ಸ್‌ ಹೇಳಿದ್ದಾರೆ. ಈಗಾಗಲೇ ಇತರ ರಾಷ್ಟ್ರಗಳಲ್ಲಿ ಮಹಿಳೆಯರಿಗಾಗಿ ಐಪಿಎಲ್ ಮಾದರಿಯ ಟ್ವೆಂಟಿ-20 ಟೂರ್ನಿಗಳು ನಡೆದಿವೆ. ಇವುಗಳಲ್ಲಿ ಡಬ್ಲ್ಯುಬಿಬಿಎಲ್ (ಮಹಿಳಾ ಬಿಗ್ ಬ್ಯಾಷ್ ಲೀಗ್) ಪ್ರಮುಖವಾದದ್ದು. ಹೋದ ವರ್ಷ ಈ ಟೂರ್ನಿ ಆರಂಭವಾಗಿದೆ. ಇದನ್ನು ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್ ಲೀಗ್ (ಡಬ್ಲ್ಯುಎನ್ ಸಿ ಎಲ್) ಎನ್ನುವ ಹೆಸರಿನಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ 2007–08ರಿಂದ ರಾಷ್ಟ್ರೀಯ ಮಟ್ಟದಲ್ಲಿ ‘ಆಸ್ಟ್ರೇಲಿಯಾ ಮಹಿಳಾ ಟ್ವೆಂಟಿ-20 ಕಪ್’ ಎಂಬ ಹೆಸರಿನಲ್ಲಿ ನಡೆಸಿತ್ತು. ಆಸ್ಟ್ರೇಲಿಯಾದ ಸುಮಾರು ನೂರು ಕ್ರಿಕೆಟ್ ಆಟಗಾರರು ತಮ್ಮ ದೇಶದ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಹಣ ವಿನಿಯೋಗಿಸಲು ಮುಂದೆ ಬಂದಿದ್ದರು. ಬಿಗ್‌ ಬ್ಯಾಷ್ ಲೀಗ್‌ನಲ್ಲಿ ಆಸ್ಟ್ರೇಲಿಯಾ,ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ನ ಆಟಗಾರ್ತಿಯರು ಆಡುತ್ತಿದ್ದಾರೆ. ಆದರೆ ಭಾರತಕ್ಕೆ ಇನ್ನು ಅವಕಾಶ ಲಭಿಸಿಲ್ಲ. ಇಂಗ್ಲೆಂಡ್ ಸಹ ಇದೇ ಮಾದರಿಯ ಟ್ವೆಂಟಿ-20 ಪಂದ್ಯಗಳನ್ನು 'ಮಹಿಳೆಯರ ಸೂಪರ್ ಲೀಗ್' ಹೆಸರಿನಲ್ಲಿ ನಡೆಸುತ್ತಿದೆ. ಬಿಗ್‌ಬ್ಯಾಷ್‌ ಟೂರ್ನಿಗೂ ಮೊದಲು 2014ರಲ್ಲಿ ಸಿಂಗಪುರದ ಸಂಸ್ಥೆಯೊಂದು ಭಾರತದ ಐಪಿಎಲ್ ಮಾದರಿಯಲ್ಲಿ 'ವುಮೆನ್ಸ್ ಇಂಟರ್‌ ನ್ಯಾಷನಲ್‌ ಕ್ರಿಕೆಟ್ ಲೀಗ್' ಗಾಗಿ ಐಸಿಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್‌ ಮಂಡಳಿಗಳು ತಮ್ಮ ದೇಶದ ಆಟಗಾರ್ತಿಯರನ್ನು ಕಳುಹಿಸಲು ನಿರಾಕರಿಸಿದ್ದರಿಂದ ಈ ಟೂರ್ನಿ ನಡೆಯಲಿಲ್ಲ. ಭಾರತದ ಮಾಜಿ ಕ್ರಿಕೆಟಿಗರಾದ ಸುನಿಲ್ ಗಾವಸ್ಕರ್ ಮಹಿಳೆಯರಿಗೆ ಪ್ರತ್ಯೇಕ ಐಪಿಎಲ್‌ ನಡೆಸಬೇಕೆಂದು ಹೇಳಿದ್ದರು. ಇದೆಲ್ಲದರ ನಡುವೆ ಬಿಸಿಸಿಐ ಮೊದಲ ಬಾರಿಗೆ ಮಹಿಳಾ ಕ್ರಿಕೆಟಿಗೆ ಗುತ್ತಿಗೆ ಪದ್ಧತಿಯನ್ನು ಜಾರಿಗೆ ತಂದಿದೆ. ಹೆಚ್ಚೆಚ್ಚು ಟೂರ್ನಿಗಳನ್ನು ಆಯೋಜಿಸುತ್ತಿದೆ. ಮುಂದೊಂದು ದಿನ ಐಪಿಎಲ್‌ ನಡೆದರೆ ಮಹಿಳಾ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಹೊಂದಿರುವ ಇಂಗ್ಲೆಂಡ್‌, ಆಸ್ಟ್ರೇಲಿಯಾ, ವೆಸ್ಟ್‌ ಇಂಡೀಸ್‌ ಆಟಗಾರ್ತಿಯರು ಭಾರತದತ್ತ ಕಣ್ಣು ಹಾಯಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.