ಎಎಫ್‌ಸಿ ಕಪ್‌ ಬಾಗನ್‌, ಬಿಎಫ್‌ಸಿ ಮಿಂಚು ಮೋಹನ್‌ ಬಾಗನ್‌ ಮತ್ತು ಬಿಎಫ್‌ಸಿ ತಂಡಗಳು ಪ್ರಸಕ್ತ ನಡೆಯುತ್ತಿರುವ ಎಎಫ್‌ಸಿ ಕಪ್‌ ಟೂರ್ನಿಯ ನಾಕೌಟ್‌ ಹಂತ ಪ್ರವೇಶದ ಹೊಸ್ತಿಲಲ್ಲಿವೆ. ಭಾರತದ ಫುಟ್‌ಬಾಲ್‌ಗೆ ಸಂಬಂಧಿಸಿದಂತೆ ಇದು ಸಂತಸದ ವಿಚಾರ. ಈ ಬಗ್ಗೆ ಮಹಮ್ಮದ್‌ ನೂಮಾನ್‌ ವಿವರಿಸಿದ್ದಾರೆ. ಅಂತರರಾಷ್ಟ್ರೀಯ ಫುಟ್‌ಬಾಲ್‌ ಫೆಡರೇಷನ್‌ನ ಮಾಜಿ ಅಧ್ಯಕ್ಷ ಸೆಪ್‌ ಬ್ಲಾಟರ್‌ ಭಾರತದ ಫುಟ್‌ಬಾಲ್‌ ಕ್ರೀಡೆಯನ್ನು ಉದ್ದೇಶಿಸಿ ‘ನಿದ್ರಿಸುತ್ತಿರುವ ದೈತ್ಯ’ ಎಂದಿದ್ದರು. ಈ ದೇಶದ ಫುಟ್‌ಬಾಲ್‌ ಕ್ರೀಡೆ ಪೂರ್ಣವಾಗಿ ‘ಎಚ್ಚೆತ್ತು’ಕೊಂಡರೆ ಜಗತ್ತಿನ ಪ್ರಬಲ ಶಕ್ತಿಯಾಗಿ ಬೆಳೆಯಬಹುದು ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದರು. ಬ್ಲಾಟರ್‌ ಈ ಮಾತುಗಳನ್ನಾಡಿ 10 ವರ್ಷಗಳಾಗುತ್ತಾ ಬಂದಿದೆ. ಆದರೆ ಭಾರತದ ಫುಟ್‌ಬಾಲ್‌ ಇನ್ನೂ ಪೂರ್ಣವಾಗಿ ಎಚ್ಚೆತ್ತುಕೊಂಡಿಲ್ಲ. ಇಂಡಿಯನ್‌ ಸೂಪರ್‌ ಲೀಗ್‌ ಟೂರ್ನಿ ಆರಂಭವಾದ ಬಳಿಕ ದೇಶದಲ್ಲಿ ಫುಟ್‌ಬಾಲ್‌ ಬಗ್ಗೆ ಜನರಿಗಿದ್ದ ಒಲವು ಅಲ್ಪ ಹೆಚ್ಚಿರುವುದು ನಿಜ. ಅದೇ ರೀತಿ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಗೆ ಮುಂದಿನ ವರ್ಷ ಭಾರತ ಆತಿಥ್ಯ ವಹಿಸಲಿರುವುದು ಕೂಡಾ ಫುಟ್‌ಬಾಲ್‌ ಕ್ರೀಡೆಯ ಬೆಳವಣಿಗೆಗೆ ಸಹಕಾರಿ ಯಾಗಬಹುದು ಎಂದು ಭಾವಿಸಲಾಗಿದೆ. ಫಿಫಾ ಟೂರ್ನಿ ಭಾರತದ ಫುಟ್‌ಬಾಲ್‌ ಕ್ರೀಡೆಯ ದಿಕ್ಕನ್ನೇ ಬದಲಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅಂತಹ ಕ್ಷಿಪ್ರ ಬದಲಾವಣೆ ನಿರೀಕ್ಷಿಸುವುದು ತಪ್ಪು. ನಮ್ಮ ರಾಷ್ಟ್ರೀಯ ತಂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಲು ವಿಫಲವಾಗುತ್ತಲೇ ಇದೆ. ಆದರೆ ಇಲ್ಲಿನ ಕೆಲವು ಕ್ಲಬ್‌ಗಳು ಏಷ್ಯಾದಲ್ಲಿ ತಮ್ಮ ಛಾಪು ಮೂಡಿಸಲು ಪ್ರಯತ್ನಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಪ್ರಸಕ್ತ ದೇಶದ ಅಗ್ರಮಾನ್ಯ ಕ್ಲಬ್‌ ಎನಿಸಿರುವ ಮೋಹನ್‌ ಬಾಗನ್‌ ಮತ್ತು ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡಗಳು ಜನರಲ್ಲಿ ಫುಟ್‌ಬಾಲ್‌ ಬಗ್ಗೆ ಆಸಕ್ತಿ ಮೂಡಿಸಲು ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಎನ್ನಬಹುದು. ಇವೆರಡು ತಂಡಗಳು ಈ ಋತುವಿನ ಎಎಫ್‌ಸಿ ಕಪ್‌ ಟೂರ್ನಿಯ ನಾಕೌಟ್‌ ಹಂತ ಪ್ರವೇಶಿಸುವ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಟ್ಟಿವೆ. 2015ರ ಋತುವಿನ ಐ–ಲೀಗ್‌ ಟೂರ್ನಿ ಗೆಲ್ಲುವ ಮೂಲಕ ಬಾಗನ್‌ ತಂಡ ಎಎಫ್‌ಸಿ ಕಪ್‌ನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿದ್ದರೆ, ಬಿಎಫ್‌ಸಿ ತಂಡ ಫೆಡರೇಷನ್‌ ಕಪ್‌ನಲ್ಲಿ ಚಾಂಪಿಯನ್‌ ಆಗುವ ಮೂಲಕ ಅವಕಾಶ ಗಿಟ್ಟಿಸಿಕೊಂಡಿತ್ತು. ಐತಿಹಾಸಿಕ ಸಾಧನೆಯತ್ತ ಹೆಜ್ಜೆ: ಕೋಲ್ಕತ್ತದ ಮೋಹನ್‌ ಬಾಗನ್‌ ತಂಡ ಎಎಫ್‌ಸಿ ಟೂರ್ನಿಯಲ್ಲಿ ‘ಜಿ’ ಗುಂಪಿನಲ್ಲಿದ್ದು, ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಒಂದು ‘ಡ್ರಾ’ ದೊಂದಿಗೆ ಒಟ್ಟು 10 ಪಾಯಿಂಟ್ಸ್‌ನಿಂದ ಅಗ್ರಸ್ಥಾನದಲ್ಲಿದೆ. ಸತತ ಮೂರು ಗೆಲುವು ಪಡೆದಿದ್ದ ಬಾಗನ್‌ ಹೋದ ಬುಧವಾರ ನಡೆದ ತನ್ನ ನಾಲ್ಕನೇ ಪಂದ್ಯದಲ್ಲಿ ಮ್ಯಾನ್ಮಾರ್‌ನ ಯಾಂಗೂನ್‌ ಯುನೈಟೆಡ್‌ ಎದುರು 1–1ರಲ್ಲಿ ಡ್ರಾ ಸಾಧಿಸಿತ್ತು. ಈ ಪಂದ್ಯದಲ್ಲಿ ಗೆಲುವು ಪಡೆದಿದ್ದರೆ ನಾಕೌಟ್‌ನಲ್ಲಿ ಸ್ಥಾನ ಖಚಿತಪಡಿಸಬಹುದಿತ್ತು. ಆದರೂ ಬಾಗನ್‌ಗೆ ಅತ್ಯುತ್ತಮ ಅವಕಾಶವಿದೆ. ಈ ತಂಡ ಕೊನೆಯ ಎರಡು ಲೀಗ್‌ ಪಂದ್ಯಗಳಲ್ಲಿ ಕ್ರಮವಾಗಿ ಮಾಲ್ಡೀವ್ಸ್‌ನ ಮಜಿಯಾ (ಏಪ್ರಿಲ್‌ 27 ರಂದು) ಮತ್ತು ಹಾಂಕಾಂಗ್‌ನ ಸೌತ್‌ ಚೀನಾ (ಮೇ 11) ತಂಡಗಳನ್ನು ಎದುರಿಸಲಿದೆ. ಇವುಗಳಲ್ಲಿ ಒಂದರಲ್ಲಿ ಗೆದ್ದರೂ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಲಿದೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ನಾಕೌಟ್‌ ಹಂತ ಪ್ರವೇಶಿಸಲಿವೆ. ಐದು ಪಾಯಿಂಟ್‌ ಹೊಂದಿರುವ ಯಾಂಗೂನ್‌ ಯುನೈಟೆಡ್‌ ಎರಡನೇ ಸ್ಥಾನದಲ್ಲಿದೆ. ಮೋಹನ್‌ ಬಾಗನ್‌ ಕ್ಲಬ್‌ಗೆ ಭಾರತದ ಫುಟ್‌ಬಾಲ್‌ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ. ಈ ತಂಡ ಒಮ್ಮೆಯೂ ಎಎಫ್‌ಸಿ ಕಪ್‌ನ ನಾಕೌಟ್‌ ಹಂತ ಪ್ರವೇಶಿಸಿಲ್ಲ. 2007 ಮತ್ತು 2009 ರಲ್ಲಿ ಆಡಿದ್ದರೂ ಲೀಗ್‌ ಹಂತದಲ್ಲೇ ಹೊರಬಿದ್ದಿತ್ತು. ಈ ಬಾರಿ ಐತಿಹಾಸಿಕ ಸಾಧನೆ ಮಾಡುವ ಅತ್ಯುತ್ತಮ ಅವಕಾಶ ದೊರೆತಿದೆ. ಐ–ಲೀಗ್‌ನಲ್ಲೂ ಬಾಗನ್‌ ತಂಡ ಉತ್ತಮವಾಗಿ ಆಡುತ್ತಿದ್ದು, ಪಾಯಿಂಟ್‌ ಪಟ್ಟಿಯಲ್ಲಿ ಬಿಎಫ್‌ಸಿ ಬಳಿಕ ಎರಡನೇ ಸ್ಥಾನದಲ್ಲಿದೆ. ಬಿಎಫ್‌ಸಿಗೂ ಅವಕಾಶ: ‘ಎಚ್‌’ ಗುಂಪಿನಲ್ಲಿರುವ ಬಿಎಫ್‌ಸಿ ಮೊದಲ ನಾಲ್ಕು ಪಂದ್ಯಗಳ ಬಳಿಕ ಆರು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನುಳಿದ ಪಂದ್ಯಗಳಲ್ಲಿ ಗೆದ್ದರೆ ಬಿಎಫ್‌ಸಿಗೂ ನಾಕೌಟ್‌ ಹಂತ ತಲುಪಬಹುದು. ಹಾಲಿ ಚಾಂಪಿಯನ್‌ ಮಲೇಷ್ಯಾದ ಜೊಹೊರ್‌ ದಾರುಲ್‌ ತಾಜಿಮ್‌ ತಂಡ 12 ಪಾಯಿಂಟ್ಸ್‌ನಿಂದ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಬಿಎಫ್‌ಸಿ ಹೋದ ವರ್ಷ ನಾಕೌಟ್‌ ಹಂತ ಪ್ರವೇಶಿಸಿತ್ತು. ಆದರೆ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಂಕಾಂಗ್‌ನ ಸೌತ್‌ ಚೀನಾ ಕ್ಲಬ್‌ ಎದುರು ಸೋತು ಹೊರಬಿದ್ದಿತ್ತು. ಬೆಂಗಳೂರಿನ ತಂಡ ಹೋದ ವರ್ಷ ಎದುರಾದ ನಿರಾಸೆಯನ್ನು ಈ ಬಾರಿ ಮರೆಸುವುದೇ ಎಂಬುದನ್ನು ನೋಡಬೇಕು. ಎಎಫ್‌ಸಿ ಕಪ್‌ನಲ್ಲಿ ಒಂದೇ ವರ್ಷ ಭಾರತದ ಎರಡು ಕ್ಲಬ್‌ಗಳು ಒಮ್ಮೆಯೂ ನಾಕೌಟ್‌ ಹಂತ ಪ್ರವೇಶಿಸಿಲ್ಲ. ಬಿಎಫ್‌ಸಿ ಮತ್ತು ಬಾಗನ್‌ ಈ ಬಾರಿ ಮುಂದಿನ ಹಂತ ಪ್ರವೇಶಿಸಲು ಯಶಸ್ವಿಯಾದರೆ ಭಾರತದ ಫುಟ್‌ಬಾಲ್‌ನಲ್ಲಿ ಹೊಸ ಮೈಲಿಗಲ್ಲು ಎನಿಸಲಿದೆ. ವಿದೇಶಿ ಆಟಗಾರರ ಬಲ: ಎಎಫ್‌ಸಿ ಟೂರ್ನಿಯಲ್ಲಿ ಆಡುತ್ತಿರುವ ವಿವಿಧ ಕ್ಲಬ್‌ಗಳು ವಿದೇಶಿ ಆಟಗಾರರನ್ನೇ ಹೆಚ್ಚಾಗಿ ನೆಚ್ಚಿಕೊಂಡಿವೆ. ಬಿಎಫ್‌ಸಿ ಮತ್ತು ಬಾಗನ್‌ ಕೂಡಾ ಅದರಿಂದ ಹೊರತಾಗಿಲ್ಲ. ಬಹರೇನ್‌, ಮಲೇಷ್ಯಾ, ಸಿರಿಯಾ, ಒಮನ್‌, ಜೋರ್ಡನ್‌ ಮತ್ತು ಮ್ಯಾನ್ಮಾರ್‌ನ ಕ್ಲಬ್‌ಗಳು ಕೂಡಾ ಬ್ರೆಜಿಲ್‌, ನೈಜೀರಿಯಾ ಮತ್ತು ಜಪಾನ್‌ ದೇಶಗಳ ಆಟಗಾರರ ಜತೆ ಸಹಿ ಹಾಕಿಕೊಂಡಿವೆ. ಪ್ರಶಸ್ತಿ ಇನ್ನೂ ಮರೀಚಿಕೆ ಭಾರತದ ಕ್ಲಬ್‌ಗೆ ಎಎಫ್‌ಸಿ ಕಪ್‌ನಲ್ಲಿ ಪ್ರಶಸ್ತಿ ಮರೀಚಿಕೆಯಾಗಿಯೇ ಉಳಿದುಕೊಂಡಿದೆ. ಡೆಂಪೊ ಮತ್ತು ಈಸ್ಟ್‌ ಬೆಂಗಾಲ್‌ ತಂಡಗಳು ಸೆಮಿಫೈನಲ್‌ ಹಂತ ಪ್ರವೇಶಿಸಿದ್ದು ಭಾರತದ ಕ್ಲಬ್‌ ತೋರಿದ ಅತ್ಯುತ್ತಮ ಸಾಧನೆಯಾಗಿದೆ. ಡೆಂಪೊ 2008ರ ಟೂರ್ನಿಯಲ್ಲಿ ಸೆಮಿ ಪ್ರವೇಶಿಸಿದ್ದರೆ, ಈಸ್ಟ್‌ ಬೆಂಗಾಲ್‌ 2013 ರಲ್ಲಿ ಇಂತಹದೇ ಸಾಧನೆ ಮಾಡಿತ್ತು. ಎಎಫ್‌ಸಿ ಕಪ್‌ನಲ್ಲಿ ಆಡಿರುವ ಭಾರತದ ಕ್ಲಬ್‌ಗಳು * 2004 ಈಸ್ಟ್‌ ಬೆಂಗಾಲ್‌, ಮಹೀಂದ್ರಾ ಯುನೈಟೆಡ್‌ * 2005 ಈಸ್ಟ್‌ ಬೆಂಗಾಲ್‌, ಡೆಂಪೊ * 2006 ಡೆಂಪೊ, ಮಹೀಂದ್ರಾ ಯುನೈಟೆಡ್‌ * 2007 ಮಹೀಂದ್ರಾ ಯುನೈಟೆಡ್‌, ಮೋಹನ್‌ ಬಾಗನ್‌ * 2008 ಡೆಂಪೊ, ಈಸ್ಟ್‌ ಬೆಂಗಾಲ್‌ * 2009 ಮೋಹನ್ ಬಾಗನ್, ಡೆಂಪೊ * 2010 ಈಸ್ಟ್‌ ಬೆಂಗಾಲ್‌, ಚರ್ಚಿಲ್‌ ಬ್ರದರ್ಸ್‌ * 2011 ಡೆಂಪೊ, ಈಸ್ಟ್‌ ಬೆಂಗಾಲ್‌ * 2012 ಸಲಗಾಂವ್ಕರ್‌, ಈಸ್ಟ್‌ ಬೆಂಗಾಲ್‌ * 2013 ಈಸ್ಟ್‌ ಬೆಂಗಾಲ್‌, ಚರ್ಚಿಲ್‌ ಬ್ರದರ್ಸ್‌ * 2014 ಪುಣೆ ಎಫ್‌ಸಿ, ಚರ್ಚಿಲ್‌ ಬ್ರದರ್ಸ್‌ * 2015 ಬಿಎಫ್‌ಸಿ, ಈಸ್ಟ್‌ ಬೆಂಗಾಲ್‌ * 2016 ಮೋಹನ್‌ ಬಾಗನ್‌, ಬಿಎಫ್‌ಸಿ ಎಎಫ್‌ಸಿ ಕಪ್‌ ಬಗ್ಗೆ... ಏಷ್ಯಾದ ಎರಡನೇ ಡಿವಿಷನ್‌ ಕ್ಲಬ್‌ಗಳಿಗಾಗಿ ನಡೆಯುವ ಟೂರ್ನಿ ಇದಾಗಿದೆ. ಎಎಫ್‌ಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 14 ಸ್ಥಾನಗಳಿಗಿಂತ ಕೆಳಗಿನ ಕ್ರಮಾಂಕದಲ್ಲಿರುವ ದೇಶಗಳ ಕ್ಲಬ್‌ಗಳು ಆಡುತ್ತವೆ. ಒಟ್ಟು 32 ತಂಡಗಳನ್ನು ಎಂಟು ಗುಂಪುಗಳಲ್ಲಿ ವಿಂಗಡಿಸಿ ಲೀಗ್‌ ಹಂತದ ಪೈಪೋಟಿ ಏರ್ಪಡಿಸಲಾಗುತ್ತದೆ. ಪ್ರತಿ ಗುಂಪುಗಳಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ನಾಕೌಟ್‌ ಹಂತ ಪ್ರವೇಶಿಸುತ್ತವೆ. ಜೊಹೊರ್‌ ದಾರುಲ್‌ ಹೋದ ವರ್ಷ ಚಾಂಪಿಯನ್‌ ಆಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.