ಮರಳುಗಾಡಿನಲ್ಲಿ ರ‍್ಯಾಲಿ ರೋಮಾಂಚನ... ಕೋಟೆ ಕೊತ್ತಲಗಳ ಸುಂದರ ನಾಡು ರಾಜಸ್ತಾನದಲ್ಲಿ ಏಪ್ರಿಲ್‌ ಎರಡನೇ ವಾರದಲ್ಲಿ ನಡೆದ ಡೆಸರ್ಟ್‌ ಸ್ಟಾರ್ಮ್‌ ರ‍್ಯಾಲಿ ನೋಡುಗರ ಮೈ ಮನ ತಣಿಸಿತು. ನಿರೀಕ್ಷೆಯಂತೆಯೇ ಈ ಬಾರಿ ರ‍್ಯಾಲಿಯಲ್ಲಿ ಕನ್ನಡಿಗರು ಮಿಂಚು ಹರಿಸಿದರು. ಈ ಬಗ್ಗೆ ಜಿ.ಶಿವಕುಮಾರ ಬರೆದಿದ್ದಾರೆ. ಬಿಸಿಲ ಝಳಕ್ಕೆ ಇಳೆ ನಿಗಿ ನಿಗಿ ಕೆಂಡದಂತೆ ಕಾದಿತ್ತು. ಸುಡು ಬಿಸಿಲಿನಲ್ಲಿ ಕಣ್ಣಾಯಿಸಿದಷ್ಟೂ ದೂರ ಮೈ ಚಾಚಿಕೊಂಡಿದ್ದ ಮರಳಿನಲ್ಲಿ ಅನತಿ ದೂರ ನಡೆದರೂ ಒಂದೇ ಸಮನೇ ಬೆವರು ಒಸರಿ ಮೈ ಒದ್ದೆಯಾಗಿರುತ್ತಿತ್ತು. ಆದರೆ ರ‍್ಯಾಲಿಪಟುಗಳು ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದಂತೆ ದುರ್ಗಮ ಟ್ರ್ಯಾಕ್‌ಗಳಲ್ಲಿ ದೂಳೆಬ್ಬಿಸುತ್ತಾ ಗುರಿಯತ್ತ ಮುನ್ನುಗ್ಗುತ್ತಿದ್ದ ರೀತಿ ಮೈನವಿರೇಳಿಸುವಂತಿತ್ತು. ಬೈಕ್‌ ಮತ್ತು ಮೋಟಾರು ಕಾರು ಸಾಹಸಿಗಳು ಕಲ್ಲು ಮುಳ್ಳು, ತಗ್ಗು ದಿಣ್ಣೆಗಳನ್ನು ಲೆಕ್ಕಿಸದೆ ರೊಂಯ್‌ ಎಂದು ಸದ್ದು ಹೊರಡಿಸುತ್ತಾ ಶರವೇಗದಲ್ಲಿ ಸಾಗುತ್ತಿದ್ದ ರೀತಿ ನೋಡುಗರನ್ನು ಮೋಡಿ ಮಾಡುವಂತಿತ್ತು. ರಾಜಸ್ತಾನದಲ್ಲಿ ಏಪ್ರಿಲ್‌ ಎರಡನೇ ವಾರದಲ್ಲಿ ನಡೆದ ಮಾರುತಿ ಸುಜುಕಿ ಡೆಸರ್ಟ್‌ ಸ್ಟಾರ್ಮ್‌ ರ‍್ಯಾಲಿ, ನಿತ್ಯವೂ ಇಂತಹ ಹತ್ತು ಹಲವು ರೋಮಾಂಚಕಾರಿ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ರ‍್ಯಾಲಿಯಲ್ಲಿ ಭಾಗವಹಿಸುವುದಕ್ಕೆ ಒಂದರ್ಥದಲ್ಲಿ ಗಂಡೆದೆ ಬೇಕು. ಏಕೆಂದರೆ ಇಲ್ಲಿ ಯಾವ ಕ್ಷಣದಲ್ಲಾದರೂ ಅಪಾಯ ಬಂದೆರಗಬಹುದು. ಹೀಗಾಗಿ ಟ್ರ್ಯಾಕ್‌ನಲ್ಲಿ ವಾಹನ ಚಲಾಯಿಸುವಾಗ ಸ್ಪರ್ಧಿಗಳ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲಿ ಸಣ್ಣ ತಪ್ಪು ಮಾಡಿದರು ಜೀವಕ್ಕೆ ಸಂಚಕಾರ. ಇದನ್ನೆಲ್ಲಾ ಅರಿತೇ ಈ ಬಾರಿಯ ರ‍್ಯಾಲಿಯಲ್ಲಿ ಮೋಟೊ ಕ್ವಾಡ್‌, ಎಕ್ಸ್‌ಟ್ರೀಮ್‌, ಎನ್‌ಡ್ಯೂರ್‌ ಮತ್ತು ಎಕ್ಸ್‌ಪ್ಲೋರ್‌ ಕಾರ್ಸ್‌ ವಿಭಾಗಗಳು ಸೇರಿದಂತೆ 100ಕ್ಕೂ ಹೆಚ್ಚು ರ‍್ಯಾಲಿಪಟುಗಳು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಕಣಕ್ಕಿಳಿದಿದ್ದರು. ಈ ಪೈಕಿ ಕೆಲವರು ನಿಗದಿತ ಸಮಯದಲ್ಲಿ ಗುರಿ ಮುಟ್ಟಲಾಗದೆ ಮೊದಲ ದಿನವೇ ಹೊರಬಿದ್ದರೆ ಇನ್ನು ಕೆಲವರು ಎರಡು ಮತ್ತು ಮೂರನೇ ದಿನದ ವೇಳೆಗೆ ಸಾಕು ಸಾಕಾಗಿ ಹೋದರು. ಸತತವಾಗಿ ಏಳು ದಿನಗಳ ಕಾಲವೂ ಎಳ್ಳಷ್ಟೂ ಅಂಜದೆ ಹೆಜ್ಜೆ ಹೆಜ್ಜೆಗೂ ಬಂದೆರಗುತ್ತಿದ್ದ ಸವಾಲನ್ನು ಮೆಟ್ಟಿ ನಿಂತು ಸ್ಪರ್ಧೆ ಕೊನೆಗೊಳಿಸಿದವರು ಬೆರಳೆಣಿಕೆ ಮಂದಿ ಮಾತ್ರ. ಇಲ್ಲಿ ಪ್ರಶಸ್ತಿ ಗೆಲ್ಲುವುದು ಒತ್ತಟ್ಟಿಗಿರಲಿ 2100 ಕಿಲೋ ಮೀಟರ್ಸ್ ದೂರದ ಗುರಿಯನ್ನು ನಿಗದಿತ ಸಮಯದಲ್ಲಿ ಪೂರೈಸುವುದೇ ಒಂದು ಸವಾಲು. ಹಾಗೆ ಗುರಿ ಮುಟ್ಟಿದವರೇ ನಿಜವಾದ ಚಾಂಪಿಯನ್ನರು. ರಾತ್ರಿಯ ಲೆಗ್‌ನಲ್ಲಿ ನಡೆದ ಸ್ಪರ್ಧೆ ರ‍್ಯಾಲಿಯ ವಿಶೇಷತೆಗಳಲ್ಲೊಂದು. ಕನ್ನಡಿಗರ ಮೋಡಿ.. ಮೋಟೊ ಕ್ವಾಡ್‌ ವಿಭಾಗದಲ್ಲಿ ಕರ್ನಾಟಕದ ಬೈಕ್‌ ಸಾಹಸಿಗಳಿಗೆ ಯಾರೂ ಸಾಟಿಯಾಗಲಾರರು. ಪ್ರಸಿದ್ಧ ಡಕಾರ್‌ ರ‍್ಯಾಲಿಯಲ್ಲಿ ಭಾಗವಹಿಸಿದ ಭಾರತದ ಮೊದಲ ಸ್ಪರ್ಧಿ ಎಂಬ ಹಿರಿಮೆ ಹೊಂದಿರುವ ಸಿ.ಎಸ್‌. ಸಂತೋಷ್‌, ರಾಷ್ಟ್ರೀಯ ಚಾಂಪಿಯನ್‌ ಕೆ.ಪಿ. ಅರವಿಂದ್‌, ಬೈಕ್‌ ಸಾಹಸಿಗಳಾದ ಆರ್‌. ನಟರಾಜ್‌ ಮತ್ತು ಸಂಜಯ್‌ ಕುಮಾರ್‌ ಅವರು ಹನುಮಾನಗಡ, ಬಿಕಾನೇರ್‌, ಜೈಸಲ್ಮೇರ್‌ ನಗರಗಳ ಹೊರಹೊಲಯದ ಟ್ರ್ಯಾಕ್‌ಗಳಲ್ಲಿ ಅಕ್ಷರಶಃ ಮಿಂಚಿನ ಸಂಚಲನ ಸೃಷ್ಟಿ ಮಾಡಿದರು. ರೈಡ್‌ ಡೇರ್‌ ಹಿಮಾಲಯ, ದಕ್ಷಿಣ್‌ ಡೇರ್‌ ರ‍್ಯಾಲಿಗಳಲ್ಲಿ ಭಾಗವಹಿಸಿದ ಅನುಭವ ಹೊಂದಿರುವ ಸಂತೋಷ್‌ ಮತ್ತು ಉಡುಪಿಯ ಅರವಿಂದ್‌ ಈ ಬಾರಿಯ ರ‍್ಯಾಲಿಯಲ್ಲಿ ಎಲ್ಲರ ಆಕರ್ಷಣೆ ಎನಿಸಿದ್ದರು. ಇವರಿಬ್ಬರ ಬೈಕ್‌ ಸಾಹಸವನ್ನು ಕಣ್ತುಂಬಿಕೊಳ್ಳಲು ಸ್ಥಳೀಯರು ನಿತ್ಯ ತುದಿಗಾಲಿನಲ್ಲಿ ನಿಂತಿರುತ್ತಿದ್ದರು. ಇನ್ನು ನಟರಾಜ್‌ ಮತ್ತು ಸಂಜಯ್‌ ಅವರ ಅಬ್ಬರವೇನೂ ಕಡಿಮೆ ಇರಲಿಲ್ಲ. ಬೆಂಗಳೂರಿನ ಸಂಜಯ್‌ ಅವರು ಬೈಕ್‌ ಚಲಾಯಿಸುತ್ತಿದ್ದ ರೀತಿಗೆ ಸ್ವತಃ ಅರವಿಂದ್‌ ಅವರೇ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಐದನೇ ದಿನದ ಅಂತ್ಯಕ್ಕೆ ಮೂರನೇ ಸ್ಥಾನದಲ್ಲಿದ್ದ ಸಂಜಯ್‌ಗೆ ಅದೃಷ್ಟ ಕೈಕೊಟ್ಟಿತು. ಟ್ರ್ಯಾಕ್‌ನಲ್ಲಿ ಆಯತಪ್ಪಿ ಬಿದ್ದು ಗಾಯಮಾಡಿಕೊಂಡ ಅವರಿಗೆ ಸ್ಪರ್ಧೆ ಕೊನೆಗೊಳಿಸಲಾಗಲಿಲ್ಲ. ಆದರೆ ನಟರಾಜ್‌ ಮೂರನೇ ಸ್ಥಾನ ಗಳಿಸಿದರು. ಎಂಡ್ಯೂರ್‌ ಕಾರ್‍್ಸ ವಿಭಾಗದಲ್ಲಿ ರಾಜ್ಯದ ನೇವಿಗೇಟರ್‌ ಆದಿತ್ಯ ಅಂತೋಣಿ ಮತ್ತು ಚಾಲಕ ವಿಷ್ಣು ಸಿಂಗ್‌ ರನ್ನರ್ಸ್‌ ಅಪ್‌ ಸ್ಥಾನ ಗಳಿಸಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ಮಿಂಚು ಹರಿಸಿದ ‘ಮನಾಮಿ ಮ್ಯಾನ್‌’ ‘ನಿಧಾನವೇ ಪ್ರಧಾನ’ ಎಂಬ ಸೂತ್ರವನ್ನು ಚಾಚು ತಪ್ಪದೆ ಪಾಲಿಸಿದ ‘ಮನಾಲಿ ಮ್ಯಾನ್‌’ ಖ್ಯಾತಿಯ ಸುರೇಶ್‌ ರಾಣಾ ಮತ್ತು ಅವರ ನೇವಿಗೇಟರ್‌ ಅಶ್ವಿನ್‌ ನಾಯಕ್‌ ನಿರೀಕ್ಷೆಯಂತೆಯೇ ಎಕ್ಸ್‌ಟ್ರೀಮ್‌ ಕಾರ್ಸ್‌ ವಿಭಾಗದಲ್ಲಿ ಟ್ರೋಫಿ ಎತ್ತಿಹಿಡಿದರು. ಮೊದಲ ಮೂರು ದಿನಗಳ ಸ್ಪರ್ಧೆ ಕೊನೆಗೊಂಡಾಗ 20 ಕ್ಕೂ ಹೆಚ್ಚು ನಿಮಿಷಗಳ ಅಂತರದಿಂದ ಹಿಂದಿ ಬಿದ್ದಿದ್ದ ರಾಣಾ ಮತ್ತು ಅಶ್ವಿನ್‌ ಅಂತಿಮ ಲೆಗ್‌ಗಳಲ್ಲಿ ಅಮೋಘ ಚಾಲನಾ ಕೌಶಲ ಮೆರೆದರು. ಗಮನ ಸೆಳೆದ ಸಾರಾ ಥಾರ್‌ ಮರುಭೂಮಿಯ ಎತ್ತರದ ಮರಳು ದಿಣ್ಣೆಗಳಲ್ಲಿ ಒಂದಿನಿತು ವೇಗ ತಗ್ಗಿಸದೆ ಬೈಕ್‌ ಚಲಾಯಿಸುವುದು ಪುರುಷ ಸ್ಪರ್ಧಿಗಳಿಗೇ ಕಷ್ಟ. ಅಂತಹದರಲ್ಲಿ ಈ ಬಾರಿಯ ರ‍್ಯಾಲಿಯಲ್ಲಿ ಪುರುಷರಿಗೆ ಸೆಡ್ಡು ಹೊಡೆದು ನಿಂತವರು ಸಾರಾ ಕಶ್ಯಪ್‌. ಪ್ರಸ್ತುತ ಚೆನ್ನೈನಲ್ಲಿ ನೆಲೆಸಿರುವ ಸಾರಾ ಅತ್ಯಂತ ಕ್ಲಿಷ್ಟಕರ ರ‍್ಯಾಲಿಗಳಲ್ಲಿ ಒಂದೆನಿಸಿರುವ ರೇಡ್‌ ಡೇರ್‌ ಹಿಮಾಲಯದಲ್ಲಿ ಸ್ಪರ್ಧೆ ಕೊನೆಗೊಳಿಸಿ ಮೋಟಾರು ಲೋಕವನ್ನು ನಿಬ್ಬೆರಗಾಗಿಸಿದ್ದವರು. ಮೋಟೊ ಕ್ವಾಡ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಏಕೈಕ ಮಹಿಳಾ ಸ್ಪರ್ಧಿ ಎನಿಸಿದ್ದ ಸಾರಾ ಡೆಸರ್ಟ್‌ ಸ್ಟಾರ್ಮ್‌ ರ‍್ಯಾಲಿಯ ಆರಂಭಿಕ ಮೂರು ಲೆಗ್‌ಗಳಲ್ಲಿ ದಿಟ್ಟ ಸಾಮರ್ಥ್ಯ ತೋರಿದರಾದರು. ನಾಲ್ಕನೇ ಲೆಗ್‌ನಲ್ಲಿ ನಿಗದಿತ ಸಮಯದಲ್ಲಿ ಗುರಿ ಮುಟ್ಟಲಾಗದೆ ನಿರಾಸೆ ಕಂಡರು. ಅತಿವೇಗ ತಂದ ಆಪತ್ತು ಈ ಬಾರಿಯ ರ‍್ಯಾಲಿ ಅವಘಡಗಳಿಂದ ಹೊರತಾಗಿರಲಿಲ್ಲ. ಸ್ಪರ್ಧೆಯ ಎರಡನೇ ದಿನವಾದ ಮಂಗಳವಾರ ಬಿಕಾನೇರ್‌ ನಗರದ ಹೊರವಲಯದಲ್ಲಿರುವ ಟ್ರ್ಯಾಕ್‌ನಲ್ಲಿ ನುರಿತ ಚಾಲಕ ಲ್ಯಾಕ್‌ಪಾ ಅವರಿದ್ದ ಪೊಲಾರಿಸ್‌ ಕಾರು ಹೊತ್ತಿ ಉರಿದಿತ್ತು. ಅದೃಷ್ಟವಶಾತ್‌ ಚಾಲಕ ಮತ್ತು ನೇವಿಗೇಟರ್‌ ಅಪಾಯದಿಂದ ಪಾರಾದರು. ಈ ನೆನಪು ಮಾಸುವ ಹೊತ್ತಿಗೆ. ಜೈಪುರದ ಚಾಲಕ ಅಭಿಷೇಕ್‌ ಮಿಶ್ರಾ ಮತ್ತು ಶ್ರೀನಿವಾಸ ಮೂರ್ತಿ ಅವರಿದ್ದ ಕಾರು ಟ್ರ್ಯಾಕ್‌ನಲ್ಲಿ ಪಲ್ಟಿಯಾದ ಸುದ್ದಿ ಬಂತು. ಪರಿಣಾಮ ಇಬ್ಬರ ಕೈಗಳಿಗೆ ಗಂಭೀರ ಗಾಯಗಳಾಗಿ ಸ್ಪರ್ಧೆಯಿಂದ ಹೊರಬಿದ್ದರು. ದುರದೃಷ್ಟವೆಂದರೆ ಎಕ್ಸ್‌ಟ್ರೀಮ್‌ ಕಾರ್‍್ಸ್‌ ವಿಭಾಗದಲ್ಲಿ ಇವರು ನಾಲ್ಕನೇ ದಿನದವರೆಗೆ ಅಗ್ರಸ್ಥಾನದಲ್ಲಿದ್ದರು. ಮಾನವೀಯತೆ ಮೆರೆದ ರ‍್ಯಾಲಿಪಟುಗಳು ಪ್ರಶಸ್ತಿ ಗೆಲ್ಲುವ ಸ್ವಾರ್ಥದಲ್ಲಿ ಹಲವು ಬಾರಿ ಸ್ಪರ್ಧಿಗಳು ಮಾನವಿಯತೆ ಮರೆತು ಬಿಡುತ್ತಾರೆ. ಆದರೆ ಈ ರ‍್ಯಾಲಿಯಲ್ಲಿ ಭಾಗವಹಿಸಿದ ಕೆಲ ರ‍್ಯಾಲಿಪಟುಗಳು ಮಾನವೀಯತೆ ಮೆರೆದು ಇತರರಿಗೆ ಮಾದರಿಯಾದರು. ಇದಕ್ಕೆ ಎರಡು ಉದಾಹರಣೆಗಳನ್ನು ನೀಡಬಹುದು. ಒಂದು ಜೈಪುರದ ಜೆಸ್‌ ಡೇವಿಡ್‌ ಮತ್ತು ಮನಾಲಿಯ ಸುರೇಶ್‌ ರಾಣಾ ಹಾಗೂ ಶ್ರೀನಿವಾಸ್‌. ರ‍್ಯಾಲಿಪಟುಗಳ ಪಾಲಿಗೆ ಅಗ್ನಿ ಪರೀಕ್ಷೆ ಎನಿಸಿದ್ದ ‘ರಾತ್ರಿ ಲೆಗ್‌’ನ ವೇಳೆ ಕರ್ನಾಟಕದ ಸಂಜಯ್‌ ಟ್ರ್ಯಾಕ್‌ನಲ್ಲಿ ಬಿದ್ದು ಗಾಯಗೊಂಡಿದ್ದರು. ಇದರಿಂದ ಚೇತರಿಸಿಕೊಂಡು ಹಿಂದೆ ಬರುತ್ತಿದ್ದ ಡೇವಿಡ್‌ ಅವರನ್ನು ನಿಲ್ಲಿಸಿದ ಸಂಜಯ್‌ ‘ನೀನು ಮುಂದೆ ಹೋದರೆ ಗಾಡಿಯ ವೇಗದ ರಭಸಕ್ಕೆ ಹಿಂದೆ ಏಳುವ ಧೂಳಿನಲ್ಲಿ ನನಗೆ ಬೈಕ್‌ ಚಲಾಯಿಸಲು ಕಷ್ಟವಾಗುತ್ತದೆ. ದಯಮಾಡಿ ನನಗೆ ಮುಂದೆ ಹೋಗಲು ಬಿಟ್ಟು ನೀನು ಹಿಂದೆ ಬಾ ಎಂದು ಕೇಳಿಕೊಂಡರಂತೆ. ಆಗ ಡೇವಿಡ್‌ ಅರೆ ಕ್ಷಣವೂ ಯೋಚಿಸದೆ ಸಂಜಯ್‌ಗೆ ಮುಂದೆ ಹೋಗಲು ಅನುವು ಮಾಡಿಕೊಟ್ಟರಂತೆ. ಈ ವಿಷಯವನ್ನು ಮಾರನೇ ದಿನ ಹೋಟೆಲ್‌ನಲ್ಲಿ ಮಾತಿಗೆ ಸಿಕ್ಕ ಸಂಜಯ್‌ ಹೇಳುವಾಗ ಅವರ ಮೊಗದಲ್ಲಿ ಡೇವಿಡ್‌ ಬಗೆಗಿನ ಧನ್ಯತಾ ಭಾವ ಎದ್ದು ಕಾಣುತ್ತಿತ್ತು. ರಾಣಾ ಮತ್ತು ಅಶ್ವಿನ್‌ ಅವರೂ ಅಷ್ಟೇ. ತಮಗಿಂತ ಮುಂದಿದ್ದ ಅಭಿಷೇಕ್‌ ಮತ್ತು ಶ್ರೀನಿವಾಸ್‌ ಅವರಿದ್ದ ಕಾರು ಟ್ರ್ಯಾಕ್‌ನ ತಿರುವಿನಲ್ಲಿ ಮಗುಚಿ ಬಿದ್ದು ಇಬ್ಬರು ಕೆಳಗೆ ಸಿಲುಕಿದ್ದರು. ಹಿಂದಿನಿಂದ ಬಂದ ರಾಣಾ ಮತ್ತು ಅಶ್ವಿನ್‌ ಇದನ್ನು ಕಂಡು ಕೂಡಲೇ ಕಾರು ನಿಲ್ಲಿಸಿ ಅವರಿಬ್ಬರತ್ತ ಧಾವಿಸಿದ್ದಾರೆ. ಬಳಿಕ ಇಬ್ಬರನ್ನೂ ಕಾರಿನಿಂದ ಹೊರಗೆಳೆದು ವಾಕಿಟಾಕಿಯ ಮೂಲಕ ಮಾರ್ಷಲ್‌ಗಳಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ರವಾನಿಸಲು ನೆರವಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.