ಕರ್ನಾಟಕ ವಿ.ವಿ.ಯಲ್ಲಿ ಹೊಸ ಹೆಜ್ಜೆ ಉತ್ತರ ಕರ್ನಾಟಕದ ಕುಸ್ತಿಯ ಬೆಳವಣಿಗೆಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪಾತ್ರ ಮಹತ್ವದ್ದು. ಅಖಿಲ ಭಾರತ ಅಂತರ ವಿವಿ ಚಾಂಪಿಯನ್‌ಷಿಪ್‌ಗಳಲ್ಲಿ ವಿವಿ ಪೈಲ್ವಾನರು ಪದಕಗಳ ಬೇಟೆಯಾಡುತ್ತಿದ್ದಾರೆ. ಈಗ ಇಲ್ಲಿ ಗ್ರೀಕೊ ರೋಮನ್‌ ಶೈಲಿಯನ್ನು ಅಳವಡಿಸುವ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ವಿಕ್ರಂ ಕಾಂತಿಕೆರೆ ಬರೆದಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಧಾರವಾಡದ ಕರ್ನಾಟಕ ವಿವಿ ಹತ್ತನೇ ಸ್ಥಾನ ಗಳಿಸಿತ್ತು. ವಿಶ್ವವಿದ್ಯಾಲಯದ ಕುಸ್ತಿಪಟುಗಳು ಮುಧೋಳದ ಸತೀಶ ಫಡತರೆ ತಂದುಕೊಟ್ಟ ಚಿನ್ನದ ಬೆಂಬಲದಿಂದ ಒಟ್ಟು 21 ಪಾಯಿಂಟ್ ಕಲೆ ಹಾಕಿದ್ದರು. ಉತ್ತರ ಕರ್ನಾಟಕದ ಕುಸ್ತಿಪಟುಗಳಿಗೆ ಕಾಲೇಜು ಹಂತದಲ್ಲಿ ಹೊಸ ಪಟ್ಟುಗಳನ್ನು ಹೇಳಿಕೊಡುವ ವಿಶ್ವವಿದ್ಯಾಲಯದ ಪದಕಗಳ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇತ್ತು. ಅಂತರ ವಾರ್ಸಿಟಿ ಚಾಂಪಿಯನ್‌ಷಿಪ್‌ನಲ್ಲಿ ಇದೇ ಮೊದಲ ಬಾರಿ ಗ್ರೀಕೊ ರೋಮನ್ ಶೈಲಿಯನ್ನು ಜಾರಿಗೆ ತಂದಿರುವುದರಿಂದ ಕರ್ನಾಟಕ ವಿವಿಗೆ ನಿರೀಕ್ಷಿತ ಪಾಯಿಂಟ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ ಎಂಬುದು ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರ ಅನಿಸಿಕೆ. ಫ್ರೀ ಸ್ಟೈಲ್‌ ಕುಸ್ತಿಯಿಂದ ಒಂದು ಹೆಜ್ಜೆ ಮುಂದೆ ಹೋಗುವ, ಅಂದರೆ ಗ್ರೀಕೊ ರೋಮನ್‌ ಶೈಲಿಯನ್ನು ಅಳವಡಿಸಿಕೊಳ್ಳುವ ಪ್ರಯತ್ನ ಈಗ ಎಲ್ಲ ಕಡೆ ನಡೆಯುತ್ತಿದೆ. ಹಿರಿಯರ ರಾಷ್ಟ್ರೀಯ ಚಾಂಪಿಯನ್‌ ಷಿಪ್‌ಗಳಲ್ಲಿ ಈಗಾಗಲೇ ಅಳವಡಿಕೆಯಾಗಿರುವ ಈ ಶೈಲಿ ಕರ್ನಾಟಕದ ಪದವಿಪೂರ್ವ ಶಿಕ್ಷಣ ವಿಭಾಗದಲ್ಲಿ ಈ ವರ್ಷ ಜಾರಿಗೆ ಬಂದಿದೆ. ಅಂತರ ವಿವಿ ಚಾಂಪಿಯನ್‌ಷಿಪ್‌ನಲ್ಲೂ ಈಗ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿವಿ ಕೂಡ ಈ ಶೈಲಿಯಲ್ಲಿ ತರಬೇತಿ ನೀಡಲು ಆಸಕ್ತಿ ವಹಿಸಿದೆ. ಕುಸ್ತಿ ಅಂಗಣ ಇದಕ್ಕೆ ಸಜ್ಜಾಗಿದ್ದು ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಸಿಕ್ಕಿದರೆ ಮುಂದಿನ ವರ್ಷದಿಂದ ಸ್ಪರ್ಧೆಗೆ ವಿದ್ಯಾರ್ಥಿಗಳು ಸಜ್ಜಾಗಲಿದ್ದಾರೆ. ‘ಫ್ರೀ ಸ್ಟೈಲ್ ಮತ್ತು ಗ್ರೀಕೊ ರೋಮನ್‌ ಶೈಲಿಯಲ್ಲಿ ಭಾರಿ ವ್ಯತ್ಯಾಸವೇನೂ ಇಲ್ಲ. ಸೊಂಟದ ಕೆಳಗಿನ ಭಾಗ, ವಿಶೇಷವಾಗಿ ಕಾಲುಗಳನ್ನು ಹಿಡಿದು ಎದುರಾಳಿಯನ್ನು ಉರುಳಿಸುವುದು ಫ್ರೀಸ್ಟೈಲ್‌ನ ಪ್ರಮುಖ ಪಟ್ಟು. ಗ್ರೀಕೊ ರೋಮನ್‌ ಶೈಲಿಯಲ್ಲಿ ಸೊಂಟದ ಮೇಲಿನ ಭಾಗವನ್ನು ಹಿಡಿದು ಎದುರಾಳಿಯನ್ನು ಮಣಿಸಲಾಗುತ್ತದೆ. ಆದ್ದರಿಂದ ಈ ಶೈಲಿಯನ್ನು ಅಳವಡಿಸುವುದಕ್ಕೆ ವಿಶೇಷ ಸಿದ್ಧತೆಗಳೇನೂ ಅಗತ್ಯವಿಲ್ಲ’ ಎನ್ನುತ್ತಾರೆ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ಕುಸ್ತಿ ಕೋಚ್‌ ಬಿ.ಎಂ.ಪಾಟೀಲ. ಉತ್ತರ ಕರ್ನಾಟಕದ ಭರವಸೆ: ಉತ್ತರ ಕರ್ನಾಟಕದ ಕುಸ್ತಿ ಕ್ಷೇತ್ರದ ಭರವಸೆ ಕರ್ನಾಟಕ ವಿ.ವಿ. ಈ ಭಾಗದ ಕುಸ್ತಿಯ ಪ್ರಮುಖ ಪ್ರದೇಶಗಳಾದ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳು ರಾಣಿ ಚನ್ನಮ್ಮ ವಿವಿ ಪಾಲಾದ ನಂತರವೂ ಉತ್ತರ ಕನ್ನಡ ಜಿಲ್ಲೆಯ ಪೈಲ್ವಾನರಿಗೆ ತರಬೇತಿ ನೀಡಿ ಕರ್ನಾಟಕ ವಿವಿ ಸಾಧನೆ ಮಾಡುತ್ತಿದೆ. ಎರಡು ವರ್ಷಗಳ ಹಿಂದೆ ವಿವಿಗೆ ನಾಗರಾಜ ಚಿನ್ನ ತಂದುಕೊಟ್ಟು ನಾಲ್ಕು ದಶಕಗಳ ಬಂಗಾರದ ಬರ ನೀಗಿಸಿದ್ದರು. ಈ ವರ್ಷ ಮೈಸೂರಿನಲ್ಲಿ ಸಚಿನ್ ಫಡತರೆ ಮತ್ತೆ ಬಂಗಾರಕ್ಕೆ ಮುತ್ತು ನೀಡುವುದರೊಂದಿಗೆ ಆರು ದಶಕಗಳಲ್ಲಿ ವಿವಿಯ ಚಿನ್ನದ ಪದಕ ಬೇಟೆಯ ಸಂಖ್ಯೆಯನ್ನು ಐದಕ್ಕೆ ಏರಿಸಿದ್ದಾರೆ. ಇದರ ನಡುವೆ ಬಂದಿರುವ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ದೈಹಿಕ ಶಿಕ್ಷಣ ವಿಭಾಗ ಲೆಕ್ಕ ಇರಿಸಿಕೊಂಡಿಲ್ಲ! ವಿವಿಗೆ ಕುಸ್ತಿಯಲ್ಲಿ ಮೊದಲ ಚಿನ್ನ ಬಂದದ್ದು 1951ರಲ್ಲಿ. ಕೃಷ್ಣ ಮೆಣಸೆ ತಂದುಕೊಟ್ಟ ಪದಕದ ನಂತರ ಮತ್ತೊಮ್ಮೆ ಚಿನ್ನದ ಸಾಧನೆ ಮಾಡಲು ಹತ್ತು ವರ್ಷ ಕಾಯಬೇಕಾಯಿತು. 1961ರಲ್ಲಿ ಎನ್‌.ಎಸ್.ಕುಂಬಾರ ಅವರು ಪದಕದ ‘ಬರ’ ನೀಗಿಸಿದರು. 1965ರಲ್ಲಿ ಸಿದ್ದರಾಮ ಕಲಾಲ ಮೂರನೇ ಬಂಗಾರ ತಂದು ಕೊಟ್ಟಿದ್ದರು. ಅಂತರ ವಿವಿ ಟೂರ್ನಿಗಳಲ್ಲಿ ಕರ್ನಾಟಕ ವಿ.ವಿ.ಯಿಂದ ಅತ್ಯುತ್ತಮ ಸಾಧನೆ ಮೂಡಿಬಂದದ್ದು 2005–06ರ ಸಾಲಿನಲ್ಲಿ; ಕೊಲ್ಲಾಪುರದಲ್ಲಿ. ಅಂದು ಎರಡನೇ ರನ್ನರ್ ಅಪ್‌ ಸ್ಥಾನ ಗಳಿಸಿತ್ತು. ಕರ್ನಾಟಕ ವಿವಿಯಲ್ಲಿ ಕುಸ್ತಿ ‘ಅಭ್ಯಾಸ’ ಮಾಡಿದವರು ನಾನಾ ಇಲಾಖೆಗಳಲ್ಲಿ ಉದ್ಯೋಗದಲ್ಲಿದ್ದಾರೆ. ಕೆಲವರು ಕುಸ್ತಿ ಕ್ಷೇತ್ರದಲ್ಲೇ ಸಾಧನೆ ಮಾಡುತ್ತಿದ್ದಾರೆ. ಶ್ಯಾಮ್‌ ಬುಡಕಿ ರಾಷ್ಟ್ರೀಯ ಮಟ್ಟದ ತರಬೇತುದಾರರಾಗಿದ್ದಾರೆ. ಒಲಿಂಪಿಯನ್‌ ಎಂ.ಆರ್. ಪಾಟೀಲ, ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಪದಕ ವಿಜೇತ ವಿನಾಯಕ ದಳವಾಯಿ, ಮೈಸೂರಿನಲ್ಲಿ ಅಂತರ ವಿವಿ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಗೆದ್ದ ಶ್ರವಣ ಸಾವಂತ್‌, ಕಳೆದ ಬಾರಿ ಅಂತರ ವಿವಿ ಚಾಂಪಿಯನ್‌ ಷಿಪ್‌ನಲ್ಲಿ ಮಿಂಚಿದ ಸಂದೀಪ ಕಾಟೆ ಮುಂತಾದವರು ವಿಶ್ವವಿದ್ಯಾಲಯದ ಹೆಸರು ಬೆಳಗಿದ್ದಾರೆ. ‘ವಿಶ್ವವಿದ್ಯಾಲಯ ತರಬೇತಿಗೆ ಆದ್ಯತೆ ನೀಡುತ್ತದೆ. ದೈಹಿಕ ವ್ಯಾಯಾಮದೊಂದಿಗೆ ಮಾನಸಿಕ ಸಮತೋಲನದ ಕಡೆಗೂ ಗಮನ ಕೊಡಲಾಗುತ್ತದೆ. ಹೀಗಾಗಿ ಪೈಲ್ವಾನರು ದೈಹಿಕವಾಗಿಯೂ ಮಾನಸಿಕವಾಗಿಯೂ ಬಲಿಷ್ಠರಾಗಿದ್ದಾರೆ’ ಎನ್ನುತ್ತಾರೆ ಬಿ.ಎಂ.ಪಾಟೀಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.