ಏಷ್ಯಾ ಕಬಡ್ಡಿಯಲ್ಲಿ ಕನ್ನಡಿಗ ರಕ್ಷಿತ್‌ ಹೊಳಪು ಪ್ರೊ ಕಬಡ್ಡಿ ಲೀಗ್‌ನ ಜನಪ್ರಿಯತೆಯಿಂದ ಭಾರತದಲ್ಲಿ ಈಚೆಗೆ ಕಬಡ್ಡಿ ನಗರ ಪ್ರದೇಶಗಳಲ್ಲಿಯೂ ಜನಜನಿತವಾಗಿವೆ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಈ ಕ್ರೀಡೆಯ ಬಗ್ಗೆ ಹಿಂದೆಂದಿಗಿಂತಲೂ ಈಗ ಹೆಚ್ಚು ಅರಿವು ಕಂಡು ಬರುತ್ತಿದೆ. ಕಬಡ್ಡಿ ಆಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕರ್ನಾಟಕವೂ ಇದರಿಂದ ಹೊರತಲ್ಲ. ಹೋದ ವಾರ ಟೆಹರಾನ್‌ನಲ್ಲಿ ನಡೆದಿದ್ದ ಏಷ್ಯನ್‌ ಜೂನಿಯರ್‌ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಪ್ರಶಸ್ತಿ ಗೆದ್ದಿತು. ಆ ತಂಡದಲ್ಲಿ ಕನ್ನಡಿಗ ಎಸ್‌.ರಕ್ಷಿತ್‌ ಇದ್ದರು. ಇವರು ಕಿರಿಯರ ಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬಂದ ಪರಿ ‘ಪ್ರೊ ಕಬಡ್ಡಿ’ ಪರಂಪರೆಯ ದ್ಯೋತಕದಂತಿದೆ. ಏಪ್ರಿಲ್‌ ಮೂರನೇ ವಾರ ಇರಾನ್‌ ದೇಶದ ಟೆಹರಾನ್‌ನಲ್ಲಿ ನಡೆದ ನಾಲ್ಕನೇ ಏಷ್ಯನ್‌ ಜೂನಿಯರ್‌ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಅತ್ಯುತ್ತಮ ಸಾಮರ್ಥ್ಯ ತೋರಿತು. ಲೀಗ್‌ನಲ್ಲಿ ಇರಾಕ್‌ ವಿರುದ್ಧ 21 ಪಾಯಿಂಟ್‌ಗಳ ಅಂತರದಿಂದ, ಇರಾನ್‌ ವಿರುದ್ಧ 9 ಪಾಯಿಂಟ್‌ಗಳಿಂದ, ಶ್ರೀಲಂಕಾ ಎದುರು 30 ರಿಂದ, ತುರ್ಕಮನಿಸ್ತಾನದ ಎದುರು 43 ರಿಂದ, ಸೆಮಿಫೈನಲ್‌ನಲ್ಲಿ ಇರಾಕ್‌ ವಿರುದ್ಧ 34 ಪಾಯಿಂಟ್‌ಗಳಿಂದ ಗೆದ್ದ ಭಾರತದ ಆಟಗಾರರು ಫೈನಲ್‌ನಲ್ಲಿ ಇರಾನ್‌ ವಿರುದ್ಧ 32 ಪಾಯಿಂಟ್‌ಗಳ ಅಂತರದಿಂದ ಗೆಲುವು ಗಳಿಸಿದರು. ಭಾರತದ ಮಟ್ಟಿಗೆ ಇದೊಂದು ಅನನ್ಯ ಸಾಧನೆ. ಈ ತಂಡದಲ್ಲಿ ಕರ್ನಾಟಕದ ಎಸ್‌.ರಕ್ಷಿತ್‌ ಸ್ಥಾನ ಪಡೆದಿದ್ದರು. ರಕ್ಷಿತ್‌ ತಂದೆ ಶಂಕರ ಪೂಜಾರಿಯವರು ಮೂಲತಃ ಹೆಬ್ರಿಯವರು. ಆದರೆ ಬಹುಕಾಲದಿಂದ ಇವರು ಮೈಸೂರಿನಲ್ಲೇ ನೆಲೆಸಿ ಹೋಟೆಲ್‌ ನಡೆಸುತ್ತಿದ್ದಾರೆ. ರಕ್ಷಿತ್‌ ಹುಟ್ಟಿ ಬೆಳೆದಿದ್ದು ಮೈಸೂರಲ್ಲಿಯೇ. ರಕ್ಷಿತ್‌ ಹೇಳುವ ಪ್ರಕಾರ ‘ಮೈಸೂರಿನ ವಿಜಯನಗರ ಮೂರನೇ ಸ್ಟೇಜ್‌ನಲ್ಲಿರುವ ಕೆ.ಪಿ. ಕಾನ್ವೆಂಟ್‌ನಲ್ಲಿ ನಾನು ಮೊದಲಿಗೆ ಕಬಡ್ಡಿ ಆಡುತ್ತಿದ್ದೆ. ಮನೆಯಲ್ಲಿ ತಂದೆಯ ಪ್ರೋತ್ಸಾಹ ಬಹಳಷ್ಟಿತ್ತು. ಪ್ರೊ ಕಬಡ್ಡಿ ಲೀಗ್‌ ಜನಪ್ರಿಯತೆ ಹೆಚ್ಚಾದಾಗ, ನಾನು ಕಬಡ್ಡಿ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಲು ಯತ್ನಿಸಿದೆ. ಆಗ ಮೂಡುಬಿದಿರೆಯ ಆಳ್ವಾಸ್‌ನಲ್ಲಿ ಈ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಇದೆ ಎಂದು ಗೊತ್ತಾಗಿ ಅಲ್ಲಿಗೆ ಸೇರಿದೆ. ಈ ನನ್ನ ನಿರ್ಧಾರ ಸರಿ ಎಂಬುದು ಈಗ ಸಾಬೀತಾಗಿದೆ’ . ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಎರಡು ದಶಕಗಳಿಂದಲೂ ಕಬಡ್ಡಿಗೆ ಅಪಾರ ಪ್ರೋತ್ಸಾಹ ಸಿಗುತ್ತಿದೆ. ಈವರೆಗೆ ಈ ಸಂಸ್ಥೆಯ ನೂರಾರು ಮಂದಿ ರಾಜ್ಯ, ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ್ದಾರೆ. ಚಿತ್ರದುರ್ಗದ ಸತೀಶ್‌ ನಾಯಕ ಅವರು ಹಿಂದೆ ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ಪದವಿ ಪಡೆಯುವ ಕಾಲದಲ್ಲೇ ಆ ವಿ.ವಿ. ತಂಡವನ್ನು ಪ್ರತಿನಿಧಿಸಿದ್ದರು. ಕರ್ನಾಟಕ ಕಿರಿಯರ ರಾಜ್ಯ ತಂಡದ ಪರವಾಗಿಯೂ ಇವರು ಆಡಿದ್ದರು. ಪಟಿಯಾಲದಲ್ಲಿ ಕಬಡ್ಡಿಯಲ್ಲಿಯೇ ಎನ್‌ಐಎಸ್‌ ತರಬೇತಿ ಪಡೆದಿದ್ದಾರೆ. ಕಳೆದ ಮೂರು ವರ್ಷಗಳಿಂದ ಇವರು ಆಳ್ವಾಸ್‌ನಲ್ಲಿ ಕಬಡ್ಡಿ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಬಡ್ಡಿಯಲ್ಲಿ ಆಳ್ವಾಸ್‌ನ ಸಾಧನೆಗಳ ಬಗ್ಗೆ ಸತೀಶ್‌ ಹೆಮ್ಮೆಯಿಂದ ಮಾತನಾಡುತ್ತಾರೆ. ‘ಆಳ್ವಾಸ್‌ನಲ್ಲಿರುವ ಕಬಡ್ಡಿ ಸಂಸ್ಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ರಕ್ಷಿತ್‌ನಂತಹ ಆಟಗಾರರು ಎದ್ದು ನಿಂತಿರುವುದರಲ್ಲಿ ಅಚ್ಚರಿ ಏನಿಲ್ಲ. ಮಂಗಳೂರು ವಿ.ವಿ. ಅಂತರ ಕಾಲೇಜು ಕಬಡ್ಡಿಯಲ್ಲಿ ಸತತ ಮೂರು ವರ್ಷಗಳಿಂದ ನಮ್ಮ ಸಂಸ್ಥೆಯೇ ಚಾಂಪಿಯನ್‌. ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕಬಡ್ಡಿಯಲ್ಲಿ ಈ ಸಲ ನಮ್ಮ ಸಂಸ್ಥೆಯೇ ಚಾಂಪಿಯನ್‌. ದಕ್ಷಿಣ ವಲಯ ಅಂತರ ವಿ.ವಿ. ಕಬಡ್ಡಿಯಲ್ಲಿ ಮಂಗಳೂರು ವಿ.ವಿ. ಪ್ರಶಸ್ತಿ ಗೆದ್ದಿದೆ. ಈ ತಂಡದಲ್ಲಿ ಆಳ್ವಾಸ್‌ ಸಂಸ್ಥೆಯ ಎಂಟು ಮಂದಿ ಇದ್ದರು. ನವೆಂಬರ್‌ನಿಂದ ಈವರೆಗೆ 22 ಪ್ರಮುಖ ಮುಕ್ತ ಕಬಡ್ಡಿ ಟೂರ್ನಿಗಳಲ್ಲಿ ಆಡಿರುವ ನಮ್ಮ ತಂಡ 14ರಲ್ಲಿ ಗೆದ್ದಿದೆ. 6ರಲ್ಲಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದಿದೆ’ ಎಂದೂ ಸತೀಶ್‌ ಹೇಳುತ್ತಾರೆ. ‘ಕಳೆದ ಒಂದು ವರ್ಷದಿಂದ ನನ್ನಲ್ಲಿ ತರಬೇತು ಪಡೆಯುತ್ತಿರುವ ರಕ್ಷಿತ್‌, ಉಜ್ಜೈನಿಯಲ್ಲಿ ನಡೆದ ಜೂನಿಯರ್‌ ರಾಷ್ಟ್ರೀಯ ಕೂಟದಲ್ಲಿ ಕರ್ನಾಟಕ ತಂಡದ ಪರ ಅತ್ಯುತ್ತಮ ಸಾಮರ್ಥ್ಯ ತೋರಿದ್ದನು. ಆಗಲೇ ಆತನನ್ನು 40 ಮಂದಿಯ ರಾಷ್ಟ್ರೀಯ ಸಂಭವನೀಯರ ತಂಡಕ್ಕೆ ಆಯ್ಕೆ ಮಾಡಲಾಯಿತು. ಕೊನೆಗೆ ಅಂತಿಮ 12 ಆಟಗಾರರ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿದ. ಈ ರೀತಿ ರಾಷ್ಟ್ರೀಯ ಕಿರಿಯರ ತಂಡದಲ್ಲಿ ಸ್ಥಾನ ಗಿಟ್ಟಿಸಿದ ರಾಜ್ಯದ ಎರಡನೇ ಆಟಗಾರ ಇವರು. ಸುಮಾರು 15 ವರ್ಷಗಳ ಹಿಂದೆ ಬೆಂಗಳೂರಿನ ಹರೀಶ್‌ ಎಂಬುವವರು ರಾಷ್ಟ್ರೀಯ ಜೂನಿಯರ್‌ ತಂಡದಲ್ಲಿ ಆಡಿದ್ದರು ’ ಎನ್ನುತ್ತಾರೆ ಸತೀಶ್‌ ನಾಯಕ. ‘ರೈಡಿಂಗ್‌ನಲ್ಲಿ ವಿಶೇಷ ನೈಪುಣ್ಯ ಹೊಂದಿರುವ ರಕ್ಷಿತ್‌, ಅದಕ್ಕೆ ಅಗತ್ಯವಾದ ಚುರುಕುತನ ಪಡೆದಿದ್ದಾನೆ. 1.83 ಮೀಟರ್‌ ಎತ್ತರ ಇರುವ ಈತ ಎದುರಾಳಿ ಆವರಣದೊಳಗೆ ನುಗ್ಗಿ ಲೀಲಾಜಾಲವಾಗಿ ಪಾಯಿಂಟ್ಸ್‌ ತರುತ್ತಾನೆ’ ಎಂದು ಸತೀಶ್‌ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ. ಟೆಹರಾನ್‌ ಅನುಭವಗಳ ಬಗ್ಗೆ ಮಾತನಾಡಿದ ರಕ್ಷಿತ್‌ ‘ಅಲ್ಲಿ ಅತೀವ ಚಳಿಯ ವಾತಾವರಣ ಇತ್ತು. ಆದರೆ ನಮ್ಮ ತಂಡ ಅದಕ್ಕೆ ಬೇಗನೆ ಹೊಂದಿಕೊಂಡು ಉತ್ತಮವಾಗಿ ಆಡಿತು. ಇರಾನ್‌ನಿಂದ ನಮಗೆ ತೀವ್ರ ಪೈಪೋಟಿ ಎದುರಾಯಿತು. ಮುಂದಿನ ದಿನಗಳಲ್ಲಿ ಆಳ್ವಾಸ್‌ನಲ್ಲಿಯೇ ನನ್ನ ತರಬೇತಿಯನ್ನು ಮುಂದುವರಿಸುತ್ತೇನೆ. ಈಗಾಗಲೇ ತೆಲುಗು ಟೈಟನ್ಸ್‌ ಮತ್ತು ಯೂ ಮುಂಬಾ ತಂಡಗಳಿಂದ ಕರೆ ಬಂದಿದೆ. ಪ್ರೊ ಕಬಡ್ಡಿಯಲ್ಲಿ ಆಡುವ ನನ್ನ ಕನಸು ನನಸಾಗಲಿದೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.