ಮನೀಷ್‌ಗೆ ಕಾಯಂ ಕನಸು ಹೋದ ವರ್ಷ ಮತ್ತು ಈ ಬಾರಿ ನಡೆದ ‘ಎ’ ತಂಡಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಬೆಂಗಳೂರಿನ ಮನೀಷ್‌ ಪಾಂಡೆ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಕಾಂಗರೂಗಳ ನಾಡಿನಲ್ಲಿ ನಡೆದ ಚತುಷ್ಕೋನ ಸರಣಿಯಲ್ಲಿ ಮನೀಷ್‌ ಭಾರತ ‘ಎ’ ತಂಡವನ್ನು ಮುನ್ನಡೆಸಿದ್ದರು. ಇವರ ನಾಯಕತ್ವದ ತಂಡ ಪ್ರಶಸ್ತಿ ಜಯಿಸಿದೆ. ದೇಶಿ ಟೂರ್ನಿ ಮತ್ತು ಐಪಿಎಲ್‌ನಲ್ಲಿ ಹಿರಿಯ ಆಟಗಾರರ ಜೊತೆ ಆಡಿದ ಅನುಭವ ಹೊಂದಿರುವ ಮನೀಷ್‌ ತಾವು ತಂಡ ಮುನ್ನಡೆಸಲು ಸಮರ್ಥರು ಎನ್ನುವುದನ್ನು ಈ ಮೂಲಕ ಸಾಬೀತು ಮಾಡಿದ್ದಾರೆ. ಈ ಎಲ್ಲಾ ಸಾಮರ್ಥ್ಯ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಕಾಯಂ ಸ್ಥಾನ ತಂದುಕೊಡುವುದೇ ಎನ್ನುವುದು ಈಗಿನ ಪ್ರಶ್ನೆ. ಏಕೆಂದರೆ ಮನೀಷ್ ವೇಗವಾಗಿ ರನ್ ಕಲೆ ಹಾಕುವ ಆಟಕ್ಕೆ ಹೆಸರುವಾಸಿ. ಎಲ್ಲಕ್ಕಿಂತ ಹೆಚ್ಚಾಗಿ ತಂಡ ಸಂಕಷ್ಟದಲ್ಲಿದ್ದಾಗ ತಂಡಕ್ಕೆ ಗಟ್ಟಿನೆಲೆ ಒದಗಿಸಬಲ್ಲ ಚಾಣಾಕ್ಷ ಬ್ಯಾಟಿಂಗ್ ಶೈಲಿ ಅವರಲ್ಲಿದೆ. ಇದಕ್ಕೆ 2012–13ರ ರಣಜಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್ ಪಂದ್ಯ ಸಾಕ್ಷಿ. ರಾಜ್‌ಕೋಟ್‌ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಇನಿಂಗ್ಸ್‌ ಮುನ್ನಡೆ ಗಳಿಸಿ ಸೆಮಿಫೈನಲ್‌ ಮುನ್ನಡೆಯಿತು. ಆದರೆ ಸಂಕಷ್ಟದ ಸಂದರ್ಭದಲ್ಲಿ ಮನೀಷ್ ಏಕಾಂಗಿ ಹೋರಾಟ ಮಾಡಿದ್ದರು. ಜೊತೆಗಿದ್ದ ಬ್ಯಾಟ್ಸ್‌ಮನ್‌ಗಳು ಔಟಾಗುತ್ತಿದ್ದರೂ ಅವರು ಐದೂವರೆ ಗಂಟೆ ಕ್ರೀಸ್‌ನಲ್ಲಿದ್ದು ಕಟ್ಟಿದ್ದ ಅಮೋಘ ಇನಿಂಗ್ಸ್‌ ಎಂದಿಗೂ ಮರೆಯುಂತಿಲ್ಲ. 2014ರ ಐಪಿಎಲ್‌ ಟೂರ್ನಿಯ ಫೈನಲ್‌ ಪಂದ್ಯವದು. ಬೆಂಗಳೂರಿನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್ ತಂಡ ಮೊದಲು ಬ್ಯಾಟ್‌ ಮಾಡಿ 199 ರನ್ ಕಲೆ ಹಾಕಿತು. ಆಗ ಎದುರಾಳಿ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಬಹುತೇಕರು ಭಾವಿಸಿದ್ದರು. ರೈಡರ್ಸ್ ತಂಡದಲ್ಲಿದ್ದ ಮನೀಷ್‌ ಕೇವಲ 50 ಎಸೆತಗಳಲ್ಲಿ 94 ರನ್ ಕಲೆ ಹೊಡೆದಿದ್ದರಿಂದ ರೈಡರ್ಸ್‌ ಆ ವರ್ಷ ಐಪಿಎಲ್ ಚಾಂಪಿಯನ್ ಆಯಿತು. ಇದರಿಂದ ಮನೀಷ್ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಹೀರೊ ಆಗಿದ್ದರು. ಹೀಗೆ ಅನೇಕ ಸ್ಮರಣೀಯ ಇನಿಂಗ್ಸ್‌ಗಳನ್ನು ಮನೀಷ್‌ ಕಟ್ಟಿದ್ದಾರೆ. 2008ರಲ್ಲಿ ಭಾರತ ತಂಡ 19 ವರ್ಷದ ಒಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಆಗ ತಂಡದ ನಾಯಕರಾಗಿದ್ದ ವಿರಾಟ್‌ ಕೊಹ್ಲಿ ಈಗ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌. ಆಗ ತಂಡದಲ್ಲಿದ್ದ ರವೀಂದ್ರ ಜಡೇಜ ಈಗ ಭಾರತ ತಂಡದ ಕಾಯಂ ಆಟಗಾರ. ಆದರೆ ಬಲಗೈ ಬ್ಯಾಟ್ಸ್‌ಮನ್‌ ಮನೀಷ್‌ಗೆ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಕಾಯಂ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಎಂಟು ವರ್ಷಗಳ ಹಿಂದೆ ಪ್ರಥಮ ದರ್ಜೆ ಮಾದರಿಗೆ ಪದಾರ್ಪಣೆ ಮಾಡಿದ ಮನೀಷ್‌ ಕರ್ನಾಟಕ ತಂಡ ಎರಡು ಸಲ ರಣಜಿ, ಇರಾನಿ ಮತ್ತು ವಿಜಯ್‌ ಹಜಾರೆ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ರಾಷ್ಟ್ರೀಯ ತಂಡದಲ್ಲಿ ಅವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಹೋದ ವರ್ಷ ಜಿಂಬಾಬ್ವೆ ವಿರುದ್ಧ ನಡೆದ ಸರಣಿಯಲ್ಲಿ ಆಡುವ ಮೂಲಕ ಮನೀಷ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ವರ್ಷ ನಡೆದ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿಯೂ ಆಡಿದ್ದರು. ಅವಕಾಶ ಸಿಕ್ಕಾಗಲೆಲ್ಲಾ ಮನೀಷ್‌ ಸಾಮರ್ಥ್ಯ ತೋರಿಸುತ್ತಲೇ ಬಂದಿದ್ದಾರೆ. ಈ ಎಲ್ಲಾ ಸಾಧನೆಗಳು ಅವರಿಗೆ ರಾಷ್ಟ್ರೀಯ ತಂಡದಲ್ಲಿ ಕಾಯಂ ಸ್ಥಾನ ತಂದುಕೊಡಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.