ಹೊಸ ಪೈಪೋಟಿಗೆ ಕಿರಿಯರ ಸವಾಲು... ನಾಲ್ಕು ವರ್ಷಗಳಲ್ಲಿ ನಾಲ್ಕು ಏಕದಿನ ಸರಣಿ. 19 ವರ್ಷದ ಒಳಗಿನವರ ವಿಶ್ವಕಪ್‌ನಲ್ಲಿ ರನ್ನರ್ಸ್‌ ಅಪ್‌... ಇತ್ತೀಚಿನ ವರ್ಷಗಳಲ್ಲಿ ಭಾರತ ಜೂನಿಯರ್‌ ಕ್ರಿಕೆಟ್‌ ತಂಡಗಳ ಸಾಧನೆಯಿದು. ಜೂನಿಯರ್‌ ಕ್ರಿಕೆಟ್‌ನಲ್ಲಿ ಭಾರತ ತಂಡ ಮೊದಲಿನಿಂದಲೂ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದೆ. ಅದರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಭಾರತ ನಡೆದಿದ್ದೇ ದಾರಿ ಎನ್ನುವಂತೆ ಆಗಿದೆ. ಹೊಸ ತಲೆಮಾರಿನ ಆಟಗಾರರು ಕ್ರಿಕೆಟ್‌ನಲ್ಲಿ ಬದುಕು ಕಟ್ಟಿಕೊಳ್ಳುವ ಆಸೆ ಹೊತ್ತು ಬರುತ್ತಿದ್ದಾರೆ. ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿವಿಧ ವಯೋಮಿತಿಯೊಳಗಿನ ಟೂರ್ನಿಗಳು ವೇದಿಕೆಯಾಗುತ್ತಿವೆ. ಏಳು ವರ್ಷಗಳ ಹಿಂದೆಯಷ್ಟೇ 19 ವರ್ಷಗಳ ಒಳಗಿನವರ ತಂಡದಲ್ಲಿದ್ದ ವಿರಾಟ್‌ ಕೊಹ್ಲಿ ಈಗ ಟೆಸ್ಟ್ ತಂಡದ ನಾಯಕ. ಅವರು ಮಾರುಕಟ್ಟೆ ಮೌಲ್ಯ ಮತ್ತು ಜಾಹೀರಾತು ಆದಾಯದಿಂದಲೇ ಕೋಟಿ ಕೋಟಿ ಹಣ ದುಡಿಯುತ್ತಿದ್ದಾರೆ. ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ವಿರಾಟ್‌ ಕೊಹ್ಲಿ ನೀಡಿದ ಪ್ರದರ್ಶನ ಇದಕ್ಕೆ ಕಾರಣ. ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ. ಯುವರಾಜ್‌ ಸಿಂಗ್, ಸುರೇಶ್ ರೈನಾ, ಕೆ.ಎಲ್‌. ರಾಹುಲ್‌ ಅವರಂಥ ಪ್ರತಿಭೆಗಳು ಉದಯವಾಗಿದ್ದೇ ಜೂನಿಯರ್‌ ಕ್ರಿಕೆಟ್‌ನ ಗಟ್ಟಿ ತಳಹದಿಯಿಂದ. ಕಿರಿಯರ ಕ್ರಿಕೆಟ್‌ನಲ್ಲಿ ಭಾರತದ ಹಿರಿಯರು ಆರಂಭದಲ್ಲಿ ಹಾಕಿಕೊಟ್ಟ ಗಟ್ಟಿ ಬುನಾದಿ ಮೇಲೆ ಈಗ ಸರಣಿ ಗೆಲುವುಗಳ ಸೌಧಗಳೇ ನಿರ್ಮಾಣವಾಗುತ್ತಿವೆ. 2012–13ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವಿನ ಸರಣಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಆಗ ತಂಡದಲ್ಲಿದ್ದ ಚೇತೇಶ್ವರ ಪೂಜಾರ, ಶಿಖರ್‌ ಧವನ್‌, ಅಜಿಂಕ್ಯ ರಹಾನೆ, ರೈನಾ, ವೃದ್ಧಿಮಾನ್‌ ಸಹಾ ಅವರೆಲ್ಲರೂ ಈಗ ರಾಷ್ಟ್ರೀಯ ತಂಡದ ಕಾಯಂ ಸದಸ್ಯರು. 2014ರಲ್ಲಿ ಆಸ್ಟ್ರೇಲಿಯಾದಲ್ಲಿ ಜರುಗಿದ ಭಾರತ, ದಕ್ಷಿಣ ಆಫ್ರಿಕಾ, ನ್ಯಾಷನಲ್‌ ಪರ್ಫಾಮೆನ್ಸ್‌ ತಂಡ ಮತ್ತು ಆಸ್ಟ್ರೇಲಿಯಾ ‘ಎ’ ತಂಡಗಳ ನಡುವಣದ ಸರಣಿಯಲ್ಲಿಯೂ ಭಾರತವೇ ವಿಜೃಂಭಿಸಿತು. ಹೋದ ವರ್ಷ ಭಾರತದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ, ಭಾರತ ಮತ್ತು ದಕ್ಷಿಣ ಆಫ್ರಿಕಾ ‘ಎ’ ತಂಡಗಳು ಪಾಲ್ಗೊಂಡಿದ್ದವು. ಆಗಲೂ ಪ್ರಶಸ್ತಿ ಜಯಿಸಿದ್ದು ಭಾರತವೇ. ಹೋದ ವರ್ಷ ಚೆನ್ನೈನಲ್ಲಿ ನಡೆದ ಸರಣಿ ಯಲ್ಲಿ ಆಸ್ಟ್ರೇಲಿಯಾ ಬಲಿಷ್ಠ ತಂಡವನ್ನೇ ಕಳುಹಿಸಿತ್ತು. ರಾಷ್ಟ್ರೀಯ ತಂಡದ ಕಾಯಂ ಆಟಗಾರರಾದ ಉಸ್ಮಾನ್ ಕವಾಜಾ, ಮ್ಯಾಥ್ಯೂ ವೇಡ್‌, ಅಸ್ಟಿನ್‌ ಅಗರ್‌, ನಥಾನ್‌ ಕಲ್ಟರ್ ನೈಲ್‌, ಟ್ರಾವಿಸ್‌ ಹೆಡ್‌, ಜೇಮ್ಸ್ ಪ್ಯಾಟಿನ್‌ಸನ್ ಮತ್ತು ಆ್ಯಡಮ್‌ ಜಂಪಾ ಅವರಂಥ ಪ್ರತಿಭಾವಂಥ ಆಟಗಾರರ ದಂಡೇ ಆ ತಂಡದಲ್ಲಿತ್ತು. ಡಿಯಾನ್ ಎಲ್ಗರ್‌ ಮತ್ತು ಕ್ವಿಂಟನ್‌ ಡಿ ಕಾಕ್‌ ಅವರನ್ನು ಒಳಗೊಂಡ ಬಲಿಷ್ಠ ತಂಡವನ್ನು ದಕ್ಷಿಣ ಆಫ್ರಿಕಾ ತ್ರಿಕೋನ ಸರಣಿಗೆ ಕಳುಹಿಸಿತ್ತು. ಅನುಭವಿ ಆಟಗಾರರನ್ನು ಹೊಂದಿರುವ ತಂಡಗಳಿ ದ್ದರೂ ಭಾರತ ‘ಎ’ ತಂಡ ಎಲ್ಲಾ ಸವಾಲುಗಳನ್ನು ಮೀರಿ ಸರಣಿಯಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಿದೆ ಯಲ್ಲದೇ ‘ಎ’ ಮಾದರಿಯ ಸರಣಿಗಳಲ್ಲಿ ತನ್ನ ಪ್ರಾಬಲ್ಯ ವನ್ನು ಮುಂದುವರಿಸಿದೆ. ಕಾಂಗರೂಗಳ ನಾಡಿನಲ್ಲಿ ಹೋದ ತಿಂಗಳು ನಡೆದ ಸರಣಿಯಲ್ಲಿ ಭಾರತ ‘ಎ’ ತಂಡ ಚಾಂಪಿಯನ್‌ ಆಗಿದ್ದು ಇದಕ್ಕೆ ಸಾಕ್ಷಿ. ಈ ಬಾರಿಯ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಭಾರತ ‘ಎ’ ತಂಡ ಆಸ್ಟ್ರೇಲಿಯಾ ವಿರುದ್ಧ ನೀರಸ ಪ್ರದರ್ಶನ ನೀಡಿತ್ತು. ಆದರೆ ಫೈನಲ್‌ನಲ್ಲಿ ಆತಿಥೇಯರ ವಿರುದ್ಧವೇ ಗೆಲುವು ಪಡೆದು ಮನೀಷ್‌ ಪಾಂಡೆ ನಾಯಕತ್ವ ತಂಡ ಪ್ರಶಸ್ತಿ ಎತ್ತಿ ಹಿಡಿದಿತ್ತು. ಮನದೀಪ್‌ ಸಿಂಗ್, ಕರ್ನಾಟಕದ ಕರುಣ್‌ ನಾಯರ್‌, ಶ್ರೇಯಸ್ ಅಯ್ಯರ್‌, ಅಕ್ಷರ್ ಪಟೇಲ್‌, ಹಾರ್ದಿಕ್‌ ಪಾಂಡ್ಯ ಅವರಂಥ ಪ್ರತಿಭೆಗಳನ್ನು ಹೊಂದಿರುವ ತಂಡ ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಮಣಿಸಿದ್ದು ಮಹತ್ವದ ಸಾಧನೆ. ಸಾಣೆ ಹಿಡಿದ ದ್ರಾವಿಡ್‌ 19 ವರ್ಷದ ಒಳಗಿನವರ ವಿಶ್ವಕಪ್‌ನಲ್ಲಿಯೂ ಭಾರತ ರನ್ನರ್ಸ್‌ ಅಪ್‌ ಆಗಿ ಗಮನ ಸೆಳೆಯಿತು. ಜೂನಿಯರ್ ಕ್ರಿಕೆಟ್‌ನ ಈ ಸಾಧನೆಯ ಯಶೋಗಾಥೆಯ ಹಿಂದೆ ರಾಹುಲ್‌ ದ್ರಾವಿಡ್‌ ಅವರ ಅನುಭವ ಕೆಲಸ ಮಾಡಿದೆ. ಕ್ರಿಕೆಟ್‌ನಲ್ಲಿ ಲಾಭದಾಯಕ ಹುದ್ದೆಗಾಗಿ ಸಾಕಷ್ಟು ಲಾಬಿ ಮಾಡುವ ಈ ಕಾಲದಲ್ಲಿ ದ್ರಾವಿಡ್‌ ಎಲ್ಲರಿ ಗಿಂತಲೂ ಭಿನ್ನವಾಗಿ ನಿಲ್ಲುತ್ತಾರೆ. ಏಕೆಂದರೆ ಬಿಸಿಸಿಐ ದ್ರಾವಿಡ್ ಬಳಿ ಮನವಿ ಮಾಡಿಕೊಂಡು ಜೂನಿಯರ್ ತಂಡದ ಕೋಚ್‌ ಆಗುವಂತೆ ಕೇಳಿಕೊಂಡಿತ್ತು. ಆಗ ಬಿಸಿಸಿಐ ಕಾರ್ಯದರ್ಶಿಯಾಗಿ ಅನುರಾಗ್ ಠಾಕೂರ್ ಅವರೇ ಹಿಂದೆ ಈ ವಿಷಯವನ್ನು ಮಾಧ್ಯಮಗಳ ಎದುರು ಬಹಿರಂಗ ಮಾಡಿದ್ದರು. ದ್ರಾವಿಡ್‌ ಕೋಚ್ ಆದಾಗ ಅನೇಕ ಕ್ರಿಕೆಟಿಗರು ಪ್ರತಿಕ್ರಿಯೆ ನೀಡಿದ್ದರು. ಅದರಲ್ಲಿ ಕ್ರಿಸ್‌ ಗೇಲ್‌ ನೀಡಿದ ಹೇಳಿಕೆ ಗಮನ ಸೆಳೆಯುವಂತಿತ್ತು. ‘ದ್ರಾವಿಡ್‌ ನನ್ನಂತೆ ವೇಗವಾಗಿ ಆಡಬಲ್ಲರು. ಆದರೆ ನನಗೆ ಅವರಂತೆ ತಾಳ್ಮೆಯಿಂದ ಆಡಲು ಮತ್ತು ಒಂದು ತಂಡವನ್ನು ಕಟ್ಟಲು ಬರುವುದಿಲ್ಲ’ ಎಂದು ಕ್ರಿಸ್ ಗೇಲ್‌ ಹೇಳಿದ್ದರು. ಜೂನಿಯರ್ ತಂಡದಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರಿಂದಲೇ ಈಗ ಬಹುತೇಕ ಆಟಗಾರರಿಗೆ ದುಲೀಪ್‌ ಟ್ರೋಫಿಯಂಥ ಪ್ರತಿಷ್ಠಿತ ಟೂರ್ನಿಯಲ್ಲಿ ಆಡಲು ಅವಕಾಶ ಸಿಕ್ಕಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಮೂರು ಟೆಸ್ಟ್‌ ಪಂದ್ಯಗಳ ಸರಣಿ ಇದೇ ತಿಂಗಳು ಆರಂಭವಾಗಲಿದೆ. ಮುಂದಿನ ತಿಂಗಳು ಏಕದಿನ ಸರಣಿ ಆಯೋಜನೆಯಾಗಿದೆ. ಇದಾದ ಬಳಿಕ ಇಂಗ್ಲೆಂಡ್‌ ಎದುರು ನಂತರ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಯೋಜನೆಯಾಗಿದೆ. ಹೀಗೆ ಸಾಲು ಸಾಲು ಸರಣಿಗಳನ್ನು ಭಾರತ ಆಡಬೇಕಿದೆ. ಆದ್ದರಿಂದ ಕಿರಿಯ ಆಟಗಾರರಿಗೆ ಹೆಚ್ಚು ಅವಕಾಶ ಸಿಗುತ್ತದೆ. ಈ ಹೊಸ ಸವಾಲನ್ನು ಕಿರಿಯರು ಹೇಗೆ ಸ್ವೀಕರಿಸುತ್ತಾರೋ ನೋಡಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.