ಸಂಸ್ಕೃತಿ ಹೊಳಪಿನ ದಸರಾ ಕ್ರೀಡೆ ದಸರಾ ಬಂತೆಂದರೆ ಎಲ್ಲರಿಗೂ ನೆನಪಾಗುವುದು ಮೈಸೂರು, ಇಲ್ಲಿನ ಅರಮನೆ, ಚಿನ್ನದ ಅಂಬಾರಿ, ವೈಭವದ ಜಂಬೂ ಸವಾರಿ, ನಾಡಕುಸ್ತಿ ಹಾಗೂ ಕ್ರೀಡಾಕೂಟ. ಗತಕಾಲದ ರಾಜವೈಭವವೇ ಕಣ್ಮುಂದೆ ಹಾದು ಹೋಗುತ್ತದೆ. ಈ ಸಂದರ್ಭದಲ್ಲಿ ನಡೆಯುವ ಹಲವು ವೈಶಿಷ್ಟ್ಯಗಳಲ್ಲಿ ಕ್ರೀಡಾಕೂಟಕ್ಕೆ ವಿಶೇಷ ಸ್ಥಾನಮಾನ. ದಸರಾ ಉತ್ಸವವೆಂದರೆ ಕ್ರೀಡೆಗಳ ಹಬ್ಬ ಕೂಡ. ದಸರಾ ಕ್ರೀಡಾಕೂಟವು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಹೆಚ್ಚಿನ ಕ್ರೀಡಾಪಟುಗಳ ಪಾಲಿನ ಚಿಮ್ಮು ಹಲಗೆ ಆಗಿರುವುದು ಗೊತ್ತೇ ಇರುವ ವಿಚಾರ. ಗ್ರಾಮೀಣ ಪ್ರತಿಭೆಗಳ ಪಾಲಿಗೆ ಅವಕಾಶಗಳ ವೇದಿಕೆ, ಸ್ಫೂರ್ತಿಯ ತಾಣ. ಒಂಥರಾ ಮಿನಿ ಒಲಿಂಪಿಕ್ಸ್‌ ಇದ್ದಂತೆ! ವಿಶೇಷವೆಂದರೆ 20ರಿಂದ 30 ವರ್ಷಗಳ ಹಿಂದೆ ದಸರಾ ಕೂಟದಲ್ಲಿ ನಿರ್ಮಾಣವಾದ ಕೆಲ ದಾಖಲೆಗಳನ್ನು ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ. ‘ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದೇ ಒಂದು ಹೆಮ್ಮೆಯ ವಿಚಾರ’ ಎಂದು ಹಿರಿಯ ಕ್ರೀಡಾಪಟುಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. ಈ ಬಾರಿಯೂ ಕ್ರೀಡಾಕೂಟಕ್ಕೆ ಸಿದ್ಧತೆಗಳು ಆರಂಭವಾಗಿವೆ. ಜಿಲ್ಲಾಮಟ್ಟದ ಕ್ರೀಡಾಕೂಟ ಮುಗಿದಿದ್ದು ವಿಭಾಗೀಯಮಟ್ಟದ ಕೂಟ ಆಯೋಜನೆಗೆ ದಿನಾಂಕ ನಿಗದಿಪಡಿಸಲಾಗಿದೆ. ಅಕ್ಟೋಬರ್‌ 1ರಿಂದ 4ರವರೆಗೆ ಮೈಸೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಲಿದ್ದು, 32ಕ್ಕೂ ಹೆಚ್ಚು ವಿಭಾಗಗಳಲ್ಲಿ 1,500ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೈಸೂರು, ಬೆಂಗಳೂರು ನಗರ, ಗ್ರಾಮಾಂತರ, ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗೀಯಮಟ್ಟದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆಯುವ ಕ್ರೀಡಾಪಟುಗಳು ಹಾಗೂ ಗುಂಪು ಸ್ಪರ್ಧೆಗಳಲ್ಲಿ ತಲಾ ಒಂದು ತಂಡದವರಿಗೆ ಅವಕಾಶ ಸಿಗಲಿದೆ. ಹಾಫ್ ಮ್ಯಾರಥಾನ್, ಸೈಕ್ಲೋಥಾನ್, ಸೈಕಲ್ ಪೋಲೊ, ಕರಾಟೆ, ಚೆಸ್, ಅಂಧರ ಚೆಸ್, ದೇಹಧಾರ್ಢ್ಯ(ಎತ್ತರ ಮತ್ತು ತೂಕ), ಪಂಜಕುಸ್ತಿ ಸ್ಪರ್ಧೆಗಳನ್ನು ದಸರಾ ಕ್ರೀಡಾ ಉಪಸಮಿತಿ ವತಿಯಿಂದ ನೇರವಾಗಿ ರಾಜ್ಯಮಟ್ಟದಲ್ಲಿ ಸಂಘಟಿಸಲಾಗುತ್ತದೆ. ರಾಷ್ಟ್ರಮಟ್ಟದ ಕಬಡ್ಡಿ, ಕೊಕ್ಕೊ, ಬ್ಯಾಡ್ಮಿಂಟನ್‌, ವಾಲಿಬಾಲ್‌ ಟೂರ್ನಿಗಳನ್ನು ಆಯೋಜಿಸಲಾಗುತ್ತದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆ ಇರಲಿದೆ. ದಸರಾ ಕುಮಾರ, ದಸರಾ ಕಂಠೀರವ, ದಸರಾ ಕೇಸರಿ ಪ್ರಶಸ್ತಿಗಳಿಗಾಗಿ ಸ್ಪರ್ಧೆಗಳು ನಡೆಯಲಿವೆ. ಕಾವೇರಿ ನದಿ ನೀರಿನ ವಿವಾದ ಹೊಗೆಯಾಡುತ್ತಿರುವುದರಿಂದ ತಮಿಳುನಾಡಿನ ಸ್ಪರ್ಧಿಗಳು ಬರುವುದು ಅನುಮಾನ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರನ್ನು ಕ್ರೀಡಾಕೂಟದ ಉದ್ಘಾಟನೆಗೆ ಕರೆತರಲು ಮಾತುಕತೆ ನಡೆಯುತ್ತಿದೆ. ಕಳೆದ ಬಾರಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಎಲ್ಲಾ ಸ್ಪರ್ಧೆಗಳನ್ನು ರದ್ದುಗೊಳಿಸಿ ಜಿಲ್ಲಾಮಟ್ಟದಲ್ಲಿ ಮಾತ್ರ ಕ್ರೀಡಾಕೂಟ ಆಯೋಜಿಸಲಾಗಿತ್ತು. ಅಷ್ಟೇ ಅಲ್ಲ; ಹಿಂದೆ ನೀಡುತ್ತಿದ್ದ 2 ಕೋಟಿ ಅನುದಾನಕ್ಕೆ ಬದಲಾಗಿ ಮೀಸಲಿಟ್ಟಿದ್ದು ಕೇವಲ 22 ಲಕ್ಷ ರೂಪಾಯಿ. ‘ಬರಗಾಲ, ರೈತರ ಆತ್ಮಹತ್ಯೆ, ಕಾವೇರಿ ವಿವಾದದ ಕಾರಣಗಳಿಂದ ದಸರಾ ಮಹೋತ್ಸವ ಎಷ್ಟೇ ಸರಳವಾಗಿರಲಿ ಕ್ರೀಡೆಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು. ಏಕೆಂದರೆ, ಇದು ಪ್ರತಿಭೆಯ ಅನಾವರಣದ ವೇದಿಕೆ. ಹೀಗಾಗಿ, ದಸರಾ ಕ್ರೀಡಾಕೂಟ ಈ ಬಾರಿಯೂ ಅದ್ಧೂರಿಯಾಗಿಯೇ ನಡೆಯಬೇಕು’ ಎನ್ನುತ್ತಾರೆ ಹಿರಿಯ ಕ್ರೀಡಾಪಟುಗಳು ಹಾಗೂ ಕೋಚ್‌ಗಳು. ನಾಡಕುಸ್ತಿ: ದಸರಾ ಮಹೋತ್ಸವದ ವಿಶೇಷ ಆಕರ್ಷಣೆ ಎನಿಸಿರುವ ದಸರಾ ಕುಸ್ತಿ ಸ್ಪರ್ಧೆಗಳ ಆಯೋಜನೆಗೂ ವೇದಿಕೆ ಸಿದ್ಧವಾಗುತ್ತಿದೆ. ಡಿ.ದೇವರಾಜ ಅರಸು ವಿವಿಧೋದ್ದೇಶ ಕುಸ್ತಿ ಅಖಾಡದಲ್ಲಿ ಅ.2 ಹಾಗೂ 3ರಂದು 34ನೇ ರಾಜ್ಯಮಟ್ಟದ ಪುರುಷರ ಕುಸ್ತಿ ಸ್ಪರ್ಧೆಗಳು ನಡೆಯಲಿವೆ. 4ರಂದು ರಾಜ್ಯಮಟ್ಟದ ಮಹಿಳಾ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 5 ಹಾಗೂ 6ರಂದು 10ನೇ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗಳು ಜರುಗಲಿವೆ. ಇದರಲ್ಲಿ ಪಂಜಾಬ್‌, ಹರಿಯಾಣ, ದೆಹಲಿ ಹಾಗೂ ಮಹಾರಾಷ್ಟ್ರದ ಕುಸ್ತಿಪಟುಗಳು ಪಾಲ್ಗೊಳ್ಳಲಿದ್ದಾರೆ. ‌‘ನಾಡಕುಸ್ತಿಗೆ ಐತಿಹಾಸಿಕ ಹಿನ್ನೆಲೆ ಇದೆ. ರಾಜ ಮಹಾರಾಜರ ಕಾಲದಿಂದಲೂ ಕುಸ್ತಿ ನಡೆಯುತ್ತಿದೆ. ಹಿಂದೆ ಅರಮನೆ ಮುಂಭಾಗದಲ್ಲೇ ಕುಸ್ತಿ ಆಯೋಜಿಸ ಲಾಗುತಿತ್ತು’ ಎನ್ನುತ್ತಾರೆ ಪೈಲ್ವಾನ್‌ ಮಹದೇವ್‌. ಇಷ್ಟಾದರೂ ನಾಡಕುಸ್ತಿಯಲ್ಲಿ ಗೆದ್ದವರಿಗೆ ನೀಡುವ ಅಲ್ಪ ಬಹುಮಾನದ ಬಗ್ಗೆ ಕುಸ್ತಿಪಟುಗಳಲ್ಲಿ ಅಸಮಾಧಾನವಿದೆ ‘ಸಂಘಟಕರು ನೀಡುವ ಬಹುಮಾನ ಒಂದು ದಿನದ ಆಹಾರಕ್ಕೂ ಸಾಕಾಗುವುದಿಲ್ಲ’ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಾರೆ. ನಿಜ, ಒಂದಿಲ್ಲೊಂದು ವಿವಾದಗಳಿಂದ ಇತ್ತೀಚಿನ ದಿನಗಳಲ್ಲಿ ದಸರಾ ಕ್ರೀಡಾಕೂಟ ಹೊಳಪು ಕಳೆದುಕೊಳ್ಳುತ್ತಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಿಂದ ಬರುವ ಕ್ರೀಡಾಪಟುಗಳ ಸಂಖ್ಯೆ ಕುಸಿಯುತ್ತಿದೆ. ಕ್ರೀಡಾಪಟುಗಳ ಹಾಗೂ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಕ್ರೀಡಾಪ್ರೇಮಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ‘ಈಚೆಗಂತೂ ದಸರಾ ಕ್ರೀಡಾಕೂಟಕ್ಕೆ ಅರ್ಥವೇ ಇಲ್ಲದಂತಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಟಾಚಾರಕ್ಕೆ ನಡೆಸಲಾಗುತ್ತಿದೆ’ ಎಂದು ಹೇಳುತ್ತಾರೆ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಸಿ.ಕೃಷ್ಣ. ಅಂಗವಿಕಲರ ಕ್ರೀಡಾಕೂಟ... ದಸರಾ ಉತ್ಸವದಲ್ಲಿ ಮೊದಲ ಬಾರಿ ಅಂಗವಿಕಲರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ವ್ಹೀಲ್‌ಚೇರ್‌ ಓಟ ಸೇರಿದಂತೆ ಹಲವು ಸ್ಪರ್ಧೆಗಳು ಜರುಗಲಿವೆ. ರಾಜ್ಯದ ಸಾಧಕ ಕ್ರೀಡಾಪಟುಗಳಿಗೆ ನೀಡುವ ‘ಏಕಲವ್ಯ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಲಿದೆ. ಅಲ್ಲದೆ, ಚಾಮುಂಡಿ ವಿಹಾರದಲ್ಲಿ ನಿರ್ಮಿಸಲಾಗಿರುವ ಅಂತರರಾಷ್ಟ್ರೀಯ ದರ್ಜೆಯ ಈಜುಕೊಳಕ್ಕೆ ಚಾಲನೆ ಸಿಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.