ಶಾಲಾ ಕ್ರೀಡಾಕೂಟ: ಸೈಕ್ಲಿಂಗ್ ಮೇಲೆ ಕಣ್ಣು ರೋಡ್‌ ಸೈಕ್ಲಿಂಗ್‌ನಲ್ಲಿ ಹರಿಯಾಣ, ದೆಹಲಿಯಂಥ ರಾಜ್ಯಗಳಿಗೆ ಸದಾ ಸಿಂಹಸ್ವಪ್ನವಾಗಿರುವ ಕರ್ನಾಟಕ; ಸ್ಪರ್ಧಾತ್ಮಕ ಸೈಕ್ಲಿಂಗ್‌ಗೆ ಇತ್ತೀಚೆಗಷ್ಟೇ ಪದಾರ್ಪಣೆ ಮಾಡಿದ್ದರೂ ಅಮೋಘ ಪ್ರದರ್ಶನ ನೀಡುತ್ತಿರುವ ಕೇರಳ... ಮುಕ್ತ ಹಾಗೂ ಫೆಡರೇಷನ್ ಹಮ್ಮಿಕೊಳ್ಳುವ ಚಾಂಪಿಯನ್‌ಷಿಪ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಎರಡು ರಾಜ್ಯಗಳಂತೆ ಇನ್ನೂ ಕೆಲವು ರಾಜ್ಯಗಳ ಸೈಕ್ಲಿಂಗ್ ಸಂಸ್ಥೆಗಳು ಶಾಲಾ ಕ್ರೀಡಾಕೂಟದಲ್ಲಿ ತಮ್ಮ ರಾಜ್ಯದ ಸೈಕ್ಲಿಸ್ಟ್‌ಗಳನ್ನು ಪಾಲ್ಗೊಳ್ಳುವಂತೆ ಮಾಡಲು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಕೆಲವು ವರ್ಷಗಳಿಂದ ಈ ಆಸೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿರುವ ಸಂಸ್ಥೆಗಳು ಈಗ ಮತ್ತೊಮ್ಮೆ ಭರವಸೆಯಿಂದ ರಾಜ್ಯ ಶಿಕ್ಷಣ ಇಲಾಖೆಯ ಬಾಗಿಲು ಬಡಿಯಲು ತೊಡಗಿದ್ದಾರೆ. ಯಾಕೆಂದರೆ ಈ ಬಾರಿಯ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಇನ್ನು ಹೆಚ್ಚು ಸಮಯವಿಲ್ಲ. ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಶಾಲಾ ಕ್ರೀಡಾಕೂಟದ ಸೈಕ್ಲಿಂಗ್‌ನ ಪ್ರೌಢಶಾಲಾ ವಿಭಾಗದಲ್ಲಿ ಸದ್ಯ ಮಹಾರಾಷ್ಟ್ರ, ಪಂಜಾಬ್‌, ದೆಹಲಿ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ರಾಜ್ಯಗಳು ಪಾಲ್ಗೊಳ್ಳುತ್ತಿವೆ. ಸೈಕ್ಲಿಂಗ್‌ ಉಚ್ಛ್ರಾಯ ಸ್ಥಿತಿಯಲ್ಲಿರುವ ಕರ್ನಾಟಕದಿಂದ ಪಿಯು ವಿಭಾಗದ ವಿದ್ಯಾರ್ಥಿಗಳನ್ನು (19 ವರ್ಷದೊಳಗಿ ನವರು) ಕಳುಹಿಸಲಾಗುತ್ತಿದೆ. ಆದರೆ 17 ವರ್ಷದೊಳ ಗಿನವರನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂ ದರೆ ಜಿಲ್ಲೆ ಮತ್ತು ರಾಜ್ಯಮಟ್ಟದ ಶಾಲಾ ಕ್ರೀಡಾ ಕೂಟಗಳಲ್ಲಿ ಸೈಕ್ಲಿಂಗ್ ಸ್ಪರ್ಧೆ ಇಲ್ಲ. ಈ ವಿಭಾಗದಲ್ಲಿ ಅವಕಾಶ ನೀಡಿದರೆ ರಾಷ್ಟ್ರೀಯ ಕ್ರೀಡಾಕೂಟದ ಪದಕಗಳ ಪಟ್ಟಿಯ ಮೇಲೆ ಮಾತ್ರವಲ್ಲ, ರಾಜ್ಯದ ಸೈಕ್ಲಿಂಗ್ ಮೇಲೆಯೂ ಪೂರಕ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಸದ್ಯ ಶಾಲಾ ವಿದ್ಯಾರ್ಥಿಗಳ ರಾಷ್ಟ್ರೀಯ ಕ್ರೀಡಾಕೂಟದ ಸೈಕ್ಲಿಂಗ್‌ನಲ್ಲಿ ಮಹಾರಾಷ್ಟ್ರದ ಸೈಕ್ಲಿಸ್ಟ್‌ಗಳು ಪ್ರಾಬಲ್ಯ ಮೆರೆಯುತ್ತಿದ್ದಾರೆ. ‘ಸರ್ಕಾರ ಸೈಕ್ಲಿಸ್ಟ್‌ಗಳಿಗೆ ಉತ್ತಮ ಸೌಲಭ್ಯ ನೀಡುತ್ತಿದೆ. ಶಾಲಾ ಕ್ರೀಡಾಕೂಟಗಳಲ್ಲೂ ಸೈಕ್ಲಿಂಗ್ ಸೇರ್ಪಡೆಗೊಳಿಸಲಾಗಿದೆ. ಆದ್ದರಿಂದ ರಾಷ್ಟ್ರೀಯ ಕೂಟದಲ್ಲಿ ಉತ್ತಮ ಸಾಧನೆಯಾಗುತ್ತಿದೆ. 350ರಷ್ಟು ರಾಷ್ಟ್ರೀಯ ಸೈಕ್ಲಿಸ್ಟ್‌ಗಳು ರಾಜ್ಯದಲ್ಲಿ ಇದ್ದಾರೆ. ಶಾಲಾ ಹಂತದಲ್ಲಿ ಸಾಕಷ್ಟು ಪ್ರೋತ್ಸಾಹ ಸಿಗುತ್ತಿರುವುದೇ ಇದಕ್ಕೆ ಕಾರಣ’ ಎಂದು ಮಹಾರಾಷ್ಟ್ರ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಕಾರ್ಯದರ್ಶಿ ಪ್ರತಾಪ ಜಾಧವ ಅಭಿಪ್ರಾಯಪಟ್ಟರು. ‘ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಸೈಕ್ಲಿಸ್ಟ್‌ಗಳಿಗೆ ಶೇಕಡಾ 5 ಮೀಸಲಾತಿ ಇದೆ. ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದ ಆರು ಮಂದಿ ಈಗ ಪಿಎಸ್‌ಐಗಳಾಗಿದ್ದಾರೆ. ಇತರ ಪೊಲೀಸ್‌ ಸಿಬ್ಬಂದಿ ಪೈಕಿ 25 ಜನರು ಸೈಕ್ಲಿಸ್ಟ್‌ಗಳಿದ್ದಾರೆ. ಅರಣ್ಯ ಇಲಾಖೆಯ ಎರಡು ಉನ್ನತ ಹುದ್ದೆಯಲ್ಲಿರುವವರು ಸೈಕ್ಲಿಸ್ಟ್‌ಗಳು’ ಎಂದು ಲೆಕ್ಕ ಮುಂದಿಟ್ಟ ಜಾಧವ ಅವರು ಶಾಲಾ ಕ್ರೀಡಾಕೂಟದಲ್ಲಿ ಕರ್ನಾಟಕ ಸ್ಪರ್ಧಿಸಬೇಕು ಎಂಬ ಅಭಿಲಾಷೆಯನ್ನೂ ವ್ಯಕ್ತಪಡಿಸಿದರು. ‘ಸೈಕ್ಲಿಂಗ್‌ ನಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದೆ. ಶಾಲಾ ಕ್ರೀಡಾಕೂಟದಲ್ಲಿ ಆ ರಾಜ್ಯದವರು ಪಾಲ್ಗೊಂಡರೆ ಸ್ಪರ್ಧೆಯ ರೋಚಕತೆ ಹೆಚ್ಚಲಿದೆ’ ಎಂದು ಅವರು ನುಡಿದರು. ರಾಜ್ಯ ಶಾಲಾ ಕ್ರೀಡಾಕೂಟದಲ್ಲಿ ಸೈಕ್ಲಿಂಗ್ ಸೇರ್ಪಡೆಗೊಳಿಸಲು ಕರ್ನಾಟಕದಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. ಒಂದು ಕ್ರೀಡಾಶಾಲೆ ಮತ್ತು ಮೂರು ಸೈಕ್ಲಿಂಗ್ ಕ್ರೀಡಾನಿಲಯಗಳು ಇರುವ ರಾಜ್ಯದಿಂದ ಪಿಯುಸಿ ವಿದ್ಯಾರ್ಥಿಗಳು ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಳೆದ ಬಾರಿ ಯಲ್ಲಪ್ಪ ಶಿರಬೂರ, ಬಾಲೇಶ ಸವಣೂರ, ರೇಣುಕಾ ದಂಡಿನ, ಸಾಯಿರಾ ಬಾನು ಮತ್ತು ಸೀಮಾ ಆಡಗಲ್‌ ಪದಕ ತಂದು ಕೊಟ್ಟಿ ದ್ದರೆ, ಅದರ ಹಿಂದಿನ ವರ್ಷ ನಾಗಪ್ಪ ಮರಡಿ, ಶೈಲಾ ಮಟ್ಯಾಳ ಹಾಗೂ ಸಾಯಿರಾ ಬಾನು ಪದಕ ಗೆದ್ದಿದ್ದರು. ‘ಶಾಲಾ ಕ್ರೀಡಾಕೂಟದಲ್ಲಿ ಪದಕ ಗೆದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳು ಸಿಗುತ್ತವೆ. ಇದರಿಂದ ಸೈಕ್ಲಿಸ್ಟ್‌ಗಳಿಗೆ ಅನುಕೂಲ; ಸೈಕ್ಲಿಂಗ್ ಸಂಸ್ಥೆಗೂ ಒಳಿತು. ಈ ದೃಷ್ಟಿಯಿಂದ ಅನೇಕ ವರ್ಷ ಗಳಿಂದ ಪ್ರಯತ್ನ ನಡೆಯುತ್ತಿದೆ. ಆದರೆ ಫಲ ಸಿಕ್ಕಿಲ್ಲ’ ಎಂದು ರಾಜ್ಯ ಅಮೆಚೂರ್‌ ಸೈಕ್ಲಿಂಗ್ ಸಂಸ್ಥೆಯ ಕಾರ್ಯದರ್ಶಿ ಶ್ರೀಶೈಲ ಕುರಣಿ ಹೇಳುತ್ತಾರೆ. ಕ್ರೀಡಾಭಿವೃದ್ಧಿಗೆ ಸಾಕಷ್ಟು ಮೊತ್ತ ತೆಗೆದಿರಿಸುವ ಕೇರಳದಲ್ಲಿ ಶಾಲಾಮಟ್ಟದ ಸೈಕ್ಲಿಂಗ್‌ಗೆ ಹಣವಿಲ್ಲ ಎಂಬ ಕಾರಣ ಹೇಳಿ ಸರ್ಕಾರವೇ ಹಿಂದೇಟು ಹಾಕಿದೆ. ‘ರಾಜ್ಯದಲ್ಲಿ ಶಾಲಾ ಸೈಕ್ಲಿಂಗ್‌ಗೆ ಪ್ರತ್ಯೇಕ ಬಜೆಟ್ ಇಲ್ಲ. ಈ ಬಾರಿ ರಾಜ್ಯ ಕ್ರೀಡಾಕೂಟದಲ್ಲಿ ಸೈಕ್ಲಿಂಗ್‌ ಸೇರ್ಪಡೆಗೊಳಿಸಲು ಶತಾಯಗತಾಯ ಪ್ರಯತ್ನ ನಡೆ ಯುತ್ತಿದೆ. ಸರ್ಕಾರ ಆರ್ಥಿಕ ನೆರವು ನೀಡದಿದ್ದರೆ ಸೈಕ್ಲಿಂಗ್ ಸಂಸ್ಥೆಯೇ ವೆಚ್ಚ ಮಾಡಲು ಸಿದ್ಧವಿದೆ’ ಎಂದು ಕೇರಳ ಅಮೆಚೂರ್ ಸೈಕ್ಲಿಂಗ್‌ ಸಂಸ್ಥೆಯ ಕಾರ್ಯದರ್ಶಿ ಸುದೀಪ್ ತಿಳಿಸಿದರು. ‘ಕ್ರೀಡೆಯಲ್ಲಿ ಶಾಲಾ ಹಂತ ಮಹತ್ವದ್ದು. ಈ ಸಂದರ್ಭದಲ್ಲಿ ಉತ್ತಮ ಸೈಕ್ಲಿಸ್ಟ್‌ಗಳನ್ನು ಬೆಳೆಸಲು ಸಾಧ್ಯವಾದರೆ ರಾಜ್ಯದ ಸೈಕ್ಲಿಂಗ್‌ಗೆ ಉತ್ತಮ ಕೊಡುಗೆ ಸಿಗಲಿದೆ. ಈ ಕಾರಣದಿಂದ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.