ಐಪಿಎಲ್‌ನಲ್ಲಿ ಕರ್ನಾಟಕದ ಹೆಜ್ಜೆಗುರುತು ಐಪಿಎಲ್‌ ಆರಂಭವಾಗಿ ಒಂಬತ್ತು ವರ್ಷಗಳು ಕಳೆದಿವೆ. ಪ್ರತಿ ಆವೃತ್ತಿ ಯಲ್ಲೂ ಕರ್ನಾಟಕದ ಆಟಗಾರರು ಮಿಂಚಿದ್ದಾರೆ. ಭಾನುವಾರ ಮುಗಿದ ಒಂಬತ್ತನೇ ಆವೃತ್ತಿಯಲ್ಲಿಯೂ ಗಮನಾರ್ಹ ಸಾಧನೆ ತೋರಿದ್ದಾರೆ. ಇದುವರೆಗಿನ ಆವೃತ್ತಿಗಳಲ್ಲಿ ಒಟ್ಟು ಹನ್ನೊಂದು ತಂಡಗಳು ಐಪಿಎಲ್ ಆಡಿವೆ. ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್, ಡೆಕ್ಕನ್ ಚಾರ್ಜರ್ಸ್ (ಈಗಿನ ಸನ್ ರೈಸರ್ಸ್ ಹೈದರಾಬಾದ್), ಡೆಲ್ಲಿ ಡೇರ್ ಡೆವಿಲ್ಸ್, ಗುಜರಾತ್ ಲಯನ್ಸ್, ರಾಜಸ್ತಾನ ರಾಯಲ್ಸ್, ಕೋಲ್ಕತ್ತ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಪುಣೆ ವಾರಿಯರ್ಸ್ (ಈಗಿನ ರೈಸಿಂಗ್ ಪುಣೆ ಸೂಪರ್‌ ಜೈಂಟ್ಸ್‌) ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಮುಂಬೈ ಇಂಡಿಯನ್ಸ್ ಆಡಿವೆ. ಲಯನ್ಸ್ ಮತ್ತು ಪುಣೆ ಎರಡು ಇದೇ ವರ್ಷ ಚೊಚ್ಚಲ ಟೂರ್ನಿ ಆಡಿದವು. ಎಲ್ಲಾ ಆವೃತ್ತಿಗಳಲ್ಲಿ ಕರ್ನಾಟಕದ 25 ಆಟಗಾರರು ಪಾಲ್ಗೊಂಡಿದ್ದಾರೆ. ಮನೀಷ್ ಪಾಂಡೆ, ರಾಬಿನ್ ಉತ್ತಪ್ಪ ಮತ್ತು ಆರ್‌. ವಿನಯ್ ಕುಮಾರ್ ಒಂಬತ್ತೂ ಆವೃತ್ತಿ ಗಳಲ್ಲಿ ಆಡಿದ ಹೆಗ್ಗಳಿಕೆ ಹೊಂದಿದ್ದಾರೆ. ಮನೀಷ್ ತಮ್ಮ ಮೊದಲ ಐಪಿಎಲ್ ಪಂದ್ಯ ವನ್ನು 2008ರಲ್ಲಿ ಮುಂಬೈ ಪರ ಆಡಿದ್ದರು. ನಂತರ 2009 ಹಾಗೂ 2010ರಲ್ಲಿ ಆರ್‌ಸಿಬಿ, 2011ರಿಂದ 13ರ ವರೆಗೆ ಪುಣೆ ವಾರಿಯರ್ಸ್‌ ತಂಡಗಳನ್ನು ಪ್ರತಿನಿಧಿಸಿದ್ದಾರೆ. 2014ರಿಂದ ನೈಟ್‌ ರೈಡರ್ಸ್ ತಂಡದಲ್ಲಿದ್ದಾರೆ. ಸ್ಫೋಟಕ ಆಟಕ್ಕೆ ಹೆಸರಾಗಿರುವ ರಾಬಿನ್ ಮುಂಬೈ ತಂಡದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರಾದರೂ, ನಂತರದ ಮೂರು ಆವೃತ್ತಿಗಳಲ್ಲಿ ಪುಣೆ ವಾರಿಯರ್ಸ್‌ ಸೇರಿಕೊಂಡರು. 2014ರಿಂದ ನೈಟ್‌ ರೈಡರ್ಸ್‌ನಲ್ಲಿದ್ದಾರೆ. ಬಲಗೈ ವೇಗಿ ವಿನಯ್ ಕುಮಾರ್ 2011ರಲ್ಲಿ ಕೊಚ್ಚಿ ಟಸ್ಕರ್ಸ್‌ನಲ್ಲಿದ್ದರು. ಇದನ್ನು ಹೊರತುಪಡಿಸಿದರೆ ಉಳಿದ ಆರಂಭದ ಐದು ಆವೃತ್ತಿಗಳಲ್ಲಿ ಆರ್‌ಸಿಬಿಯಲ್ಲಿದ್ದರು. ಈಗ ಮುಂಬೈನಲ್ಲಿದ್ದಾರೆ. ಕರ್ನಾಟಕದ 25 ಆಟಗಾರರಲ್ಲಿ ಕೆ.ಸಿ. ಕಾರಿಯಪ್ಪ (ಮೊದಲು ರೈಡರ್ಸ್‌ ಈಗ ಕಿಂಗ್ಸ್ ಪಂಜಾಬ್‌), ಸಿ.ಎಂ. ಗೌತಮ್‌ ( ಡೆಲ್ಲಿ ಹಾಗೂ ಮುಂಬೈ), ಶ್ರೇಯಸ್ ಗೋಪಾಲ್ (ಮುಂಬೈ ಇಂಡಿಯನ್ಸ್) ಈವರೆಗೆ ಬೆಂಗಳೂರು ತಂಡದ ಪರವಾಗಿ ಆಡದೇ ಇರುವ ಆಟಗಾರರಾಗಿದ್ದಾರೆ. ಉಳಿದ ಆಟಗಾರರು ಬೆಂಗಳೂರಿನ ತಂಡದಲ್ಲಿ ಆಡಿದ್ದರು. ರಾಜ್ಯದ ಆಟಗಾರರು ಟೂರ್ನಿಯಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಒಂದು ಸಾವಿರ ಮತ್ತು ಅದಕ್ಕಿಂತಲೂ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ರಾಬಿನ್‌ (ಒಟ್ಟು 3390 ರನ್‌), ರಾಹುಲ್‌ ದ್ರಾವಿಡ್‌ (2174) ಮತ್ತು ಮನೀಷ್‌ (1819) ಇದ್ದಾರೆ. ಈ ಚುಟುಕು ಟೂರ್ನಿಯಲ್ಲಿ ಒಟ್ಟು ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಉತ್ತಪ್ಪ ಐದನೇ ಸ್ಥಾನದಲ್ಲಿದ್ದಾರೆ. ಇವೆಲ್ಲವೂ ಮೇ 26ರ ಅಂತ್ಯದ ಅಂಕಿಅಂಶಗಳು. ರಾಜ್ಯದ ಆಟಗಾರರ ಪೈಕಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದವರಲ್ಲಿ ಉತ್ತಪ್ಪ ಅವರಿಗೆ ಅಗ್ರಸ್ಥಾನ. ಬಲಗೈ ಬ್ಯಾಟ್ಸ್‌ಮನ್‌ ಉತ್ತಪ್ಪ 17 ಅರ್ಧಶತಕ ಬಾರಿಸಿದ್ದಾರೆ. ಈ ಟೂರ್ನಿಯಲ್ಲಿ ಶತಕ ಬಾರಿಸಿದ ಭಾರತದ ಮೊದಲ ಆಟಗಾರ ಎನ್ನುವ ದಾಖಲೆ ಮನೀಷ್‌ ಹೆಸರಿನಲ್ಲಿದೆ. ಐಪಿಎಲ್‌ನಲ್ಲಿ ನೂರು ವಿಕೆಟ್‌ ಪಡೆದ ಬೌಲರ್‌ಗಳು ಏಳು ಜನ. ಇದರಲ್ಲಿ ‘ದಾವಣಗೆರೆ ಎಕ್ಸ್‌ಪ್ರೆಸ್‌’ ವಿನಯ್‌ ಕೂಡ ಒಬ್ಬರು. 102 ಪಂದ್ಯಗಳಿಂದ 101 ವಿಕೆಟ್‌ ಕಬಳಿಸಿದ್ದಾರೆ. ಐಪಿಎಲ್‌ ಎರಡನೇ ಆವೃತ್ತಿಯಲ್ಲಿ ವೈಯಕ್ತಿಕ ಹೆಚ್ಚು ರನ್ ಮತ್ತು ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಮಾಡಿದ ರಾಜ್ಯದ ಆಟಗಾರರ ಪಟ್ಟಿಯಲ್ಲಿ ಮನೀಷ್‌ ಹಾಗೂ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ. 2009ರ ಟೂರ್ನಿಯಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಮನೀಷ್‌ ಔಟಾಗದೆ 114 ರನ್‌ ಗಳಿಸಿದ್ದರು. ಕುಂಬ್ಳೆ ಐದು ರನ್‌ಗೆ ಐದು ವಿಕೆಟ್‌ ಉರುಳಿಸಿದ್ದರು. ಒಂದೇ ಆವೃತ್ತಿಯಲ್ಲಿ ಒಟ್ಟು ಹೆಚ್ಚು ರನ್ ಗಳಿಸಿದ್ದ ಉತ್ತಪ್ಪ (660) ಆರೇಂಜ್‌ ಕ್ಯಾಪ್‌ ಪಡೆದಿದ್ದರು. 2010ರ ಟೂರ್ನಿಯಲ್ಲಿ ಹೆಚ್ಚು ಸಿಕ್ಸರ್‌ಗಳನ್ನು (27) ಬಾರಿಸಿದ ಕೀರ್ತಿ ಕೂಡ ಸಂಪಾದಿಸಿದ್ದಾರೆ. ತಂಡವನ್ನು ಮುನ್ನಡೆಸುವ ವಿಚಾರದಲ್ಲಿಯೂ ರಾಜ್ಯದ ಆಟಗಾರರು ಹಿಂದೆ ಬಿದ್ದಿಲ್ಲ. ರಾಹುಲ್ ದ್ರಾವಿಡ್ (48) ಮತ್ತು ಕುಂಬ್ಳೆ (26) ನಾಯಕರಾಗಿದ್ದರು. ರಾಜ್ಯದ ಅಭಿಮನ್ಯು ಮಿಥುನ್, ಬಿ. ಅಖಿಲ್, ಕೆ.ಪಿ. ಅಪ್ಪಣ್ಣ, ಜೆ. ಅರುಣ್ ಕುಮಾರ್, ರಾಜು ಭಟ್ಕಳ್‌, ಭರತ್‌ ಚಿಪ್ಲಿ, ಅಬ್ರಾರ್‌ ಖಾಜಿ, ಆರ್ ನಿನನ್, ಡಿ.ಟಿ. ಪಾಟೀಲ್ ಐಪಿಎಲ್‌ನಲ್ಲಿ ಆಡಿದ್ದಾರೆ. ಪ್ರವೀಣ್‌ ದುಬೆ (ಆರ್‌ಸಿಬಿ), ಕಿಶೋರ್ ಕುಮಾರ್‌ (ಮುಂಬೈ), ಶಿವಿಲ್‌ ಕೌಶಿಕ್‌ (ಗುಜರಾತ್‌ ಲಯನ್ಸ್‌) ರಾಜ್ಯದ ಹೊಸ ಪ್ರತಿಭೆಗಳು. ರಾಜ್ಯ ತಂಡ ಹಿಂದಿನ ಎರಡು ಮೂರು ವರ್ಷಗಳಿಂದ ದೇಶಿ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ತೋರಿದೆ. ಕೆಎಸ್‌ಸಿಎ ನಡೆಸುವ ವಿವಿಧ ಲೀಗ್‌ ಗಳಲ್ಲಿ ಯುವ ಆಟಗಾರರೂ ಗಮನ ಸೆಳೆದಿದ್ದಾರೆ. ಆದ್ದರಿಂದ ಐಪಿಎಲ್‌ನಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿವೆ. ರಾಜ್ಯದ ಪ್ರತಿಭೆಗಳ ಬೆಳವಣಿಗೆಗಳ ದೃಷ್ಟಿಯಿಂದ ಇದು ಸಕಾರಾತ್ಮಕ ಹೆಜ್ಜೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.