ಏಷ್ಯಾ ಎತ್ತರದಲ್ಲಿ ಕರಾವಳಿಯ ದೀಕ್ಷಾ... ಮಧ್ಯಪ್ರದೇಶದ ಇಂದೋರ್‌ನಲ್ಲಿ ಈಚೆಗೆ ನಡೆದ ಏಷ್ಯಾ ಕೊಕ್ಕೊ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದು ಕೊಂಡಿತು. ದಕ್ಷಿಣ ಕನ್ನಡದ ದೀಕ್ಷಾ ವಿಜೇತ ತಂಡದ ಬಹುತೇಕ ಪಂದ್ಯಗಳಲ್ಲಿ ಗಮನಾರ್ಹ ಸಾಮರ್ಥ್ಯ ತೋರಿದ್ದರು. ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ಏಕೈಕ ಆಟಗಾರ್ತಿ ಇವರು. ಏಷ್ಯನ್‌ ಕೊಕ್ಕೊ ಫೆಡರೇಷನ್‌, ಭಾರತ ಕೊಕ್ಕೊ ಫೆಡರೇಷನ್‌ ಮತ್ತು ಇಂದೋರ್‌ನ ಹ್ಯಾಪಿ ವಾಂಡರರ್ಸ್‌ ಕ್ಲಬ್‌ ವತಿಯಿಂದ ನಡೆದ ಈ ಏಷ್ಯಾ ಕೂಟದಲ್ಲಿ ಆಡಿದ ಭಾರತದ ವನಿತೆಯರು ಅಂತಿಮ ಪಂದ್ಯದಲ್ಲಿ ಬಾಂಗ್ಲಾ ದೇಶ ತಂಡದ ವಿರುದ್ಧ 26–16ರಿಂದ ಗೆಲುವು ಪಡೆದಿ ದ್ದರು. ಈ ಪಂದ್ಯದ ನಿರ್ಣಾಯಕ ಕ್ಷಣ ಗಳಲ್ಲಿ ದೀಕ್ಷಾ ಎರಡು ಪಾಯಿಂಟ್ಸ್‌ ಗಳಿಸಿದ್ದರು. ಮೂರು ದಿನಗಳ ಈ ಟೂರ್ನಿಯಲ್ಲಿ ದೀಕ್ಷಾ ಅವರು ಬಾಂಗ್ಲಾದೇಶ, ನೇಪಾಳ, ದಕ್ಷಿಣ ಕೊರಿಯ, ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರು. ರಾಷ್ಟ್ರೀಯ ಜೂನಿಯರ್‌ ಮತ್ತು ಸೀನಿಯರ್‌ ಕೊಕ್ಕೊ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕ ತಂಡದ ಪರ ಆಡಿ ಆನುಭವ ಗಳಿಸಿರುವ ದೀಕ್ಷಾ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು ಅಚ್ಚರಿ ಏನಲ್ಲ. ಏಳನೇ ತರಗತಿಯಲ್ಲಿ ಓದುತ್ತಿರುವಾಗಲೇ ಕೊಕ್ಕೊ ಕ್ರೀಡೆಯಲ್ಲಿ ಅಪಾರ ಪರಿಶ್ರಮ ಪಟ್ಟಿದ್ದ ದೀಕ್ಷಾ ಶಾಲಾ ಮಟ್ಟದ ರಾಜ್ಯ ಕೂಟಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದರು. ನಂತರ ಪ್ರೌಢಶಾಲಾ ಮಟ್ಟದ, ಪದವಿ ಪೂರ್ವ ಕಾಲೇಜುಗಳ ಮಟ್ಟದ ರಾಜ್ಯ ಹಾಗೂ ರಾಷ್ಟ್ರೀಯ ಸ್ವರ್ಧಾ ಕೂಟಗಳಲ್ಲಿ ಭಾಗವಹಿಸಿ ಗಮನ ಸೆಳೆದರು. ಇದೇ ವರ್ಷ ನಡೆದ ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ್ದರಿಂದ ರಾಷ್ಟ್ರೀಯ ಸಂಭವನೀಯರ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾದರು. ದೆಹಲಿಯಲ್ಲಿ ನಡೆದ ತರಬೇತಿ ಶಿಬಿರದ ಕೊನೆಯಲ್ಲಿ ಇವರು ಭಾರತ ತಂಡದಲ್ಲಿ ಸ್ಥಾನ ಗಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕಾಣಿಯೂರು ಎಂಬ ಹಳ್ಳಿಯ ದೀಕ್ಷಾ, ತನ್ನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದರು. ನಂತರ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಹೈಸ್ಕೂಲು, ಪಿಯೂಸಿ ಪೂರೈಸಿ, ಇದೀಗ ಅಂತಿಮ ವರ್ಷದ ಪದವಿ ತರಗತಿಯಲ್ಲಿ ಓದುತ್ತಿದ್ದಾರೆ. ಇವರು ಆಟದಲ್ಲಿ ಉತ್ಕೃಷ್ಠತೆ ಸಾಧಿಸಿರುವಂತೆ, ಪಾಠದಲ್ಲಿಯೂ ಎತ್ತರದ ಸಾಧನೆ ಮಾಡಿದ್ದಾರೆ. ಪದವಿಯ ಪ್ರತಿ ಸೆಮಿಸ್ಟರ್‌ನಲ್ಲಿಯೂ ಶೇಕಡ 75ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ‘ಮೋಹನ್‌ ಆಳ್ವಾ ಅವರ ಪ್ರೋತ್ಸಾಹ, ಕೋಚ್‌ ಪ್ರೀತಿ ಶರತ್‌ ಅವರ ತರಬೇತಿ ನನ್ನನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ’ ಎನ್ನುವ ದೀಕ್ಷಾ ಮುಂದಿನ ದಿನಗಳಲ್ಲಿ ತಾವೊಬ್ಬ ಉತ್ತಮ ಕೊಕ್ಕೊ ಕೋಚ್‌ ಆಗಬೇಕೆಂಬ ಮಹದಾಸೆ ಹೊಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.