ಬಾಲ್‌ಬ್ಯಾಡ್ಮಿಂಟನ್‌ ‘ರತ್ನ’ ಎಂ.ಆರ್‌.ಕಾವ್ಯಾ ರಾಜ್ಯ ಬಾಲ್‌ಬ್ಯಾಡ್ಮಿಂಟನ್‌ ರಂಗಕ್ಕೆ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಕೊಡುಗೆ ಅನನ್ಯ. ಇದೇ ಸಂಸ್ಥೆಯ ಎಂ.ಆರ್‌.ಕಾವ್ಯಾ ಅವರು 6 ಸಲ ‘ಸ್ಟಾರ್‌ ಆಫ್‌ ಇಂಡಿಯ’ ಪ್ರಶಸ್ತಿ ಪಡೆದಿದ್ದಾರೆ. ಇದು ಬಾಲ್‌ಬ್ಯಾಡ್ಮಿಂಟನ್‌ ರಂಗದಲ್ಲಿ ಸಿಗುವ ಉನ್ನತ ಪ್ರಶಸ್ತಿ. ಇದೀಗ ರಾಜ್ಯ ಸರ್ಕಾರ ಇವರಿಗೆ ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಹಾಸನ ಜಿಲ್ಲೆಯ ಅರಕಲಗೂಡಿಗೆ ಸಮೀಪದ ದೊಡ್ಡಮಗ್ಗೆಯ ಕಾವ್ಯಾ ಅವರನ್ನು ಗೋವಿಂದರಾಜ ಜವಳಿ ಸಂದರ್ಶಿಸಿದ್ದಾರೆ. ಮೂಡುಬಿದಿರೆಯಲ್ಲಿ ಒಂದೂವರೆ ದಶಕದಿಂದ ಬಾಲ್‌ಬ್ಯಾಡ್ಮಿಂಟನ್‌ ಚಟುವಟಿಕೆ ಎಡೆಬಿಡದೆ ನಡೆಯುತ್ತಿದೆ. ಮೂಡುಬಿದರೆಯ ಆಟಗಾರರು ಮತ್ತು ಆಟಗಾರ್ತಿಯರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಗೆಲ್ಲದೇ ಉಳಿದಿರುವ ಬಾಲ್‌ಬ್ಯಾಡ್ಮಿಂಟನ್‌ ಪ್ರಶಸ್ತಿಗಳೇ ಇಲ್ಲ. ಇಂತಹದ್ದೊಂದು ಅದ್ಭುತ ಪರಂಪರೆಯ ಮುಂದುವರಿದ ಭಾಗವಾಗಿ ಎಂ.ಆರ್‌.ಕಾವ್ಯಾ ಸಾಧನೆ ಹೊಳೆಯುತ್ತಿದೆ. ಒಲಿಂಪಿಕೇತರ ಕ್ರೀಡೆಗಳಲ್ಲಿ ಶ್ರೇಷ್ಠ ಸಾಮರ್ಥ್ಯ ನೀಡಿದವರಿಗಾಗಿ ನೀಡುವ ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ಈ ಸಲ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಎಂ.ಆರ್‌.ಕಾವ್ಯಾ ಅವರಿಗೆ ಸಿಕ್ಕಿದೆ. ಕಾವ್ಯ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ. * ಬಾಲ್‌ಬ್ಯಾಡ್ಮಿಂಟನ್‌ ಆಟದ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ ? ನನ್ನೂರು ದೊಡ್ಡಮಗ್ಗೆಯ ಶಾಲೆಯಲ್ಲಿ ಮೇಷ್ಟ್ರು ಕೇಶವೇಗೌಡರು ತರಬೇತು ನೀಡುತ್ತಿದ್ದುದನ್ನು ನೋಡಿಯೇ ಈ ಕ್ರೀಡೆಯಲ್ಲಿ ಆಸಕ್ತಿ ಬೆಳೆಯಿತು. ನಾನೂ ಅಭ್ಯಾಸದಲ್ಲಿ ತೊಡಗಿದೆ. ಜಿಲ್ಲಾ ಮಟ್ಟದ ಶಾಲಾ ತಂಡಕ್ಕೂ ಆಯ್ಕೆಯಾಗಿದೆ. ನಂತರ ರಾಷ್ಟ್ರೀಯ ಶಾಲಾ ಕೂಟದಲ್ಲಿ ರಾಜ್ಯ ತಂಡದಲ್ಲಿಯೂ ಆಡಿದೆ. * ಈ ಕ್ರೀಡೆಗೆ ಸಂಬಂಧಿಸಿದಂತೆ ನಿಮ್ಮ ಬದುಕಲ್ಲಿ ಹೊಸ ತಿರುವು ಸಿಕ್ಕಿದ್ದು ? ಶಾಲಾ ಮಟ್ಟದ ಕೂಟಗಳಲ್ಲಿ ನನ್ನ ಸಾಮರ್ಥ್ಯವನ್ನು ಗಮನಿಸಿದ ಆಳ್ವಾಸ್‌ ಸಂಸ್ಥೆಯವರು ಕ್ರೀಡಾಪಟುಗಳಿಗೆ ನೀಡುವ ಉಚಿತ ಶಿಕ್ಷಣ ಮತ್ತು ತರಬೇತಿಯ ಯೋಜನೆಯ ಅಡಿ ನನ್ನನ್ನು ಆಯ್ಕೆ ಮಾಡಿದರು. ಮೂಡುಬಿದಿರೆಗೆ ಕಾಲಿಟ್ಟ ಮೇಲೆ ಕ್ರೀಡೆ ಮತ್ತು ಶೈಕ್ಷಣಿಕ ರಂಗಗಳೆರಡರಲ್ಲಿಯೂ ನಾನು ದಾಪುಗಾಲು ಇಡತೊಡಗಿದೆ. * ಮೂಡುಬಿದಿರೆಯಲ್ಲಿ ಬಾಲ್‌ಬ್ಯಾಡ್ಮಿಂಟನ್‌ ವಾತಾವರಣ ಹೇಗಿದೆ ? ಈ ಕ್ರೀಡಾಭಿವೃದ್ಧಿಗೆ ಬೇಕಾದ ಮೂಲಭೂತ ಸೌಕರ್ಯಗಳು ರಾಜ್ಯದ ಇನ್ನೆಲ್ಲಿಯೂ ಇಲ್ಲ. ನಿತ್ಯವೂ ಮುಂಜಾನೆ ಮತ್ತು ಸಂಜೆ ಸುಮಾರು 50ಕ್ಕೂ ಹೆಚ್ಚು ಮಂದಿ ಅಭ್ಯಾಸ ನಡೆಸುತ್ತೇವೆ. ಪೂರ್ಣಾವಧಿ ತರಬೇತುದಾರರಾಗಿ ರಷ್ಮಿ ಮೇಡಮ್‌ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ಯಾವುದೇ ರಾಜ್ಯದ ತಂಡ ಹೊಸ ತಂತ್ರವೊಂದನ್ನು ಅಳವಡಿಸಿಕೊಂಡಿದೆ ಎಂದರೆ ತಕ್ಷಣ ಅದರ ಮಾಹಿತಿ ನಮಗೆ ಸಿಗುತ್ತದೆ. ನಾವೂ ಅಂತಹ ತಂತ್ರದಲ್ಲಿಯೂ ಪರಿಣತರಾಗಿಬಿಡುತ್ತೇವೆ. ಸಂಸ್ಥೆಯ ಮುಖ್ಯಸ್ಥರಾದ ಡಾ.ಮೋಹನ್‌ ಆಳ್ವಾ ಅವರು ಪ್ರತಿಯೊಬ್ಬ ಆಟಗಾರನ ಸಾಧನೆ, ಸಾಮರ್ಥ್ಯವನ್ನು ಗಮನಿಸುತ್ತಲೇ ಇರುತ್ತಾರೆ. ನಾನು ಇದೇ ಸಂಸ್ಥೆಯಲ್ಲಿ ಏಳು ವರ್ಷಗಳಿಂದ ಇದ್ದೇನೆ. ನನ್ನ ತರಬೇತಿ, ಶಿಕ್ಷಣ, ವಸತಿ, ಊಟ ಎಲ್ಲವೂ ಉಚಿತ. ಈ ತೆರನಾಗಿ ಪ್ರತಿ ವರ್ಷವೂ ಸುಮಾರು 600ಕ್ಕೂ ಹೆಚ್ಚು ಮಂದಿ ಇಲ್ಲಿ ಕ್ರೀಡಾಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ವರ್ಷವೇ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌, ಫೆಡರೇಷನ್‌ ಕಪ್‌ ಗೆದ್ದ ಕರ್ನಾಟಕ ತಂಡ, ಅಖಿಲ ಭಾರತ ಅಂತರ ವಾರ್ಸಿಟಿ ಟೂರ್ನಿಗಳಲ್ಲಿ ಗೆದ್ದ ಮಂಗಳೂರು ವಾರ್ಸಿಟಿ ತಂಡಗಳಲ್ಲಿ ಬಹುತೇಕ ಆಟಗಾರ್ತಿಯರು ಆಳ್ವಾಸ್‌ ಶಿಕ್ಷಣ ಸಂಸ್ಥೆಯವರೇ ಆಗಿದ್ದಾರೆ. * ಮನೆಯಲ್ಲಿ ಪ್ರೋತ್ಸಾಹ ಹೇಗಿದೆ ? ಅದಾಗಲೇ ದೊಡ್ಡ ಮಗ್ಗೆಯ ಸವಿತಾ ಸೇರಿದಂತೆ ಹಲವು ಆಟಗಾರ್ತಿಯರು ಈ ಕ್ರೀಡೆಯ ಹಾದಿಯಲ್ಲಿ ಯಶಸ್ವಿ ಹೆಜ್ಜೆಗಳನ್ನು ಇಟ್ಟವರು. ಹೀಗಾಗಿ ನನ್ನ ಪೋಷಕರಾದ ರಂಗೇಗೌಡ ಮತ್ತು ಸುಮಿತ್ರಾ ಅವರು ನನಗೆ ಸಂಪೂರ್ಣ ಬೆಂಬಲವಾಗಿ ನಿಂತರು. ನನ್ನ ತಮ್ಮ ನಂದೀಶ ಕೂಡಾ ಇದೀಗ ರಾಜ್ಯ ತಂಡದ ಆಟಗಾರ. ನನಗೆ ಕರ್ನಾಟಕ ರಾಜ್ಯ ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆ, ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದವರೂ ಪ್ರೋತ್ಸಾಹ ನೀಡಿದ್ದಾರೆ. * ಕ್ರೀಡಾ ಚಟುವಟಿಕೆ ಓದಿಗೆ ಅಡ್ಡಿಯಾಗಿಲ್ಲವೆ ? ಇಲ್ಲ, ಆಳ್ವಾಸ್‌ನಲ್ಲಿರುವ ಬಾಲ್‌ಬ್ಯಾಡ್ಮಿಂಟನ್‌ ಆಟಗಾರ್ತಿಯರಾದ ಶನಿವಾರಸಂತೆಯ ಪಲ್ಲವಿ, ಬಂಟ್ವಾಳದ ಜಯಲಕ್ಷ್ಮಿ ಇದೀಗ ಪಿಯೂಸಿಯಲ್ಲಿ ಶೇಕಡ 95ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ್ದಾರೆ. ನಾನು ಕೆಮೆಸ್ಟ್ರಿಯಲ್ಲಿ ಎಂ.ಎಸ್‌.ಸಿ ಮುಗಿಸುವವರೆಗೂ ಉನ್ನತ ಶ್ರೇಣಿಯಲ್ಲೇ ಪಾಸಾಗುತ್ತಾ ಬಂದಿದ್ದೇನೆ. ನಾವು ಕ್ರೀಡೆಯಲ್ಲಿ ಅದೆಷ್ಟೇ ಉತ್ತಮ ಸಾಧನೆ ಮಾಡಿದರೂ, ಶೈಕ್ಷಣಿಕ ರಂಗದಲ್ಲಿ ಹಿಂದೆ ಬಿದ್ದರೆ ಸಂಸ್ಥೆಯ ಚೇರ್ಮನ್‌ ಸರ್‌ ತೀವ್ರವಾಗಿ ಅಸಮಾಧಾನಗೊಳ್ಳುತ್ತಾರೆ. ಹೀಗಾಗಿ ಕ್ರೀಡಾಪಟುಗಳೆಲ್ಲರೂ ತಮ್ಮ ಶಕ್ತಿಮೀರಿ ಓದುತ್ತಾರೆ. * ಬಾಲ್‌ಬ್ಯಾಡ್ಮಿಂಟನ್‌ ಕ್ರೀಡೆಯಲ್ಲಿ ಅತಿ ಮುಖ್ಯವಾಗಿ ಬೇಕಿರುವುದು ಏನು? ಫಿಟ್‌ನೆಸ್‌ ಬೇಕು ನಿಜ, ಆದರೆ ಏಕಾಗ್ರತೆಯನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯ. * ದೊಡ್ಡ ಮಗ್ಗೆಯಂತಹ ಕುಗ್ರಾಮದಿಂದ ಬಂದು ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ರಾಷ್ಟ್ರೀಯ ಎತ್ತರಕ್ಕೆ ಏರಿದ್ದೀರಿ, ಏನನ್ನಿಸುತ್ತದೆ ? ಮೂಡುಬಿದಿರೆಯ ನೆಲದಲ್ಲಿ ಹಿಂದೆ ತರಬೇತು ಪಡೆದ ದಾವಣಗೆರೆಯ ಪೂರ್ಣಿಮ, ತುಮಕೂರಿನ ಸ್ಫೂರ್ತಿ, ಕುಣಿಗಲ್‌ನ ಶೃತಿ ಸೇರಿದಂತೆ ಅನೇಕ ಘಟಾನುಘಟಿ ಆಟಗಾರ್ತಿಯರು ರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸಿದ್ದಾರೆ. ನಾನು ಅವರು ನಡೆದ ಹಾದಿಯಲ್ಲಿ ಪುಟ್ಟ ಹೆಜ್ಜೆಗಳನ್ನಿಟ್ಟಿದ್ದೀನಷ್ಟೆ. ಸಾಧನೆಯ ಹಾದಿ... ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಬಾಲ್‌ಬ್ಯಾಡ್ಮಿಂಟನ್‌ ತಂಡವೆಂದರೆ ಅಲ್ಲಿ ಬಹುತೇಕ ಎಲ್ಲರೂ ಮೂಡುಬಿದಿರೆಯ ಆಟಗಾರ್ತಿಯರೇ. ಕಾವ್ಯಾ 2011ರಿಂದ 2016ರವರೆಗೆ ಐದು ವರ್ಷಗಳ ಕಾಲ ಮಂಗಳೂರು ವಿವಿ ತಂಡವನ್ನು ಅಖಿಲ ಭಾರತ ಅಂತರ ವಾರ್ಸಿಟಿ ಟೂರ್ನಿಯಲ್ಲಿ ಪ್ರತಿನಿಧಿಸಿದ್ದರು. ಆಗ ಮಂಗಳೂರು ವಿವಿ 3 ಸಲ ಪ್ರಶಸ್ತಿ ಗೆದ್ದರೆ, 2 ಸಲ ರನ್ನರ್‌ಅಪ್‌ ಸ್ಥಾನ ಪಡೆದಿದೆ. ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಇವರು 4 ಸಲ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಆಗ ಕರ್ನಾಟಕ ಒಂದು ಸಲ ಪ್ರಶಸ್ತಿ ಗೆದ್ದಿದ್ದು, ಮೂರು ಸಲ ರನ್ನರ್‌ಅಪ್‌ ಸ್ಥಾನ ಗಳಿಸಿದೆ.ಇದಕ್ಕೂ ಮೊದಲು ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿಯೂ ಕರ್ನಾಟಕ ತಂಡದ ಪರ ಗಮನಾರ್ಹ ಸಾಮರ್ಥ್ಯ ತೋರಿದ್ದಾರೆ. ಹೀಗಾಗಿ ಕಾವ್ಯಾ ಅವರಿಗೆ ಜೂನಿಯರ್‌ ವಿಭಾಗದಲ್ಲಿ ಮತ್ತು ಸೀನಿಯರ್‌ ವಿಭಾಗದಲ್ಲಿ ಒಟ್ಟು ಆರು ಸಲ ಪ್ರತಿಷ್ಠಿತ ‘ಸ್ಟಾರ್‌ ಆಫ್‌ ಇಂಡಿಯ’ ಪ್ರಶಸ್ತಿ ಬಂದಿದೆ. ಅಖಿಲ ಭಾರತ ಫೆಡರೇಷನ್‌ ಕಪ್‌ ಟೂರ್ನಿಯಲ್ಲಿಯೂ ಇವರು ಮೂರು ಸಲ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಆಗ ರಾಜ್ಯ 2ಸಲ ಪ್ರಶಸ್ತಿ ಗೆದ್ದರೆ, ಒಂದು ಸಲ ರನ್ನರ್‌ ಅಪ್‌ ಸ್ಥಾನ ಗಳಿಸಿದೆ. ದೊಡ್ಡಮಗ್ಗೆ ಎಂಬ ಬಾಲ್‌ಬ್ಯಾಡ್ಮಿಂಟನ್‌ ಊರು ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ದೊಡ್ಡಮಗ್ಗೆ ಎಂಬ ಗ್ರಾಮವನ್ನು ಬಾಲ್‌ಬ್ಯಾಡ್ಮಿಂಟನ್‌ ನಿಂದಲೇ ಗುರುತಿಸಲಾಗುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ಅಲ್ಲಿರುವ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೇಶವಗೌಡ ಎಂಬುವವರು ಸೇರಿದರು. ಅವರಿಗೆ ಬಾಲ್‌ಬ್ಯಾಡ್ಮಿಂಟನ್‌ ಕ್ರೀಡೆ ಎಂದರೆ ಇನ್ನಿಲ್ಲದ ಪ್ರೀತಿ. ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಆಸಕ್ತ ವಿದ್ಯಾರ್ಥಿಗಳಿಗೆ ಈ ಆಟದ ತರಬೇತಿ ನೀಡಿದರು. ಕೇಶವಗೌಡರ ಶ್ರಮದ ಫಲವಾಗಿಯೇ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟಗಳ ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ದೊಡ್ಡ ಮಗ್ಗೆಯ ಮಕ್ಕಳು ಹೆಚ್ಚಾಗಿ ಕಂಡು ಬಂದರು. ಇಲ್ಲಿನ ಅನೇಕ ಮಕ್ಕಳು ನಂತರದ ದಿನಗಳಲ್ಲಿ ವಿವಿಧ ವಿಶ್ವವಿದ್ಯಾಲಯ ತಂಡಗಳಲ್ಲಿಯೂ ಎದ್ದು ಕಂಡರು. ಇದೇ ಊರಿನ ಎಂ.ಕೆ.ಸವಿತಾ, ರಂಜಿತಾ, ನಿವೇದಿತಾ, ಸಂಧ್ಯಾ, ಎಂ.ಎಂ.ಕಾವ್ಯಾ, ವರುಣ್‌, ನಂದೀಶ್‌ ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿ ಬಾಲ್‌ಬ್ಯಾಡ್ಮಿಂಟನ್‌ನ ವಿವಿಧ ವಿಭಾಗಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಈಗ ಆ ಶಾಲೆ ಇಲ್ಲ. ಮುಚ್ಚಲಾಗಿದೆ. ಕೇಶವ ಗೌಡರೂ ಆ ಊರಲ್ಲಿ ಇಲ್ಲ. ಆದರೆ ದೊಡ್ಡ ಮಗ್ಗೆ ನೆನಪಾದಾಗ, ಬಾಲ್‌ಬ್ಯಾಡ್ಮಿಂಟನ್‌ ನೆನಪಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.