ಭಾರತದ ಭವಿಷ್ಯದ ಕ್ರಿಕೆಟಿಗರ ಶಕ್ತಿ, ಯುಕ್ತಿ... ಭವಿಷ್ಯದ ಕ್ರಿಕೆಟಿಗರು ಎಂದೇ ಹೇಳಲಾಗುವ 16 ವರ್ಷದೊಳಗಿನವರ ಆಟಗಾರರ ಅಂತರ ವಲಯ ಪಂದ್ಯಗಳು ಹುಬ್ಬಳ್ಳಿ ಮತ್ತು ಬೆಳಗಾವಿಯ ಕೆ.ಎಸ್‌.ಸಿ.ಎ ಮೈದಾನದಲ್ಲಿ ಎರಡು ವಾರ ನಡೆದವು. ಈ ಭಾಗದಲ್ಲಿ ಮೊದಲ ಬಾರಿ ನಡೆದ ಈ ಮಟ್ಟದ ಪಂದ್ಯಗಳಲ್ಲಿ ಎಳೆಯ ಕ್ರಿಕೆಟಿಗರ ಪ್ರತಿಭೆ ಅನಾವರಣಗೊಂಡಿತು. ಇದರ ಬಗ್ಗೆ ವಿಕ್ರಂ ಕಾಂತಿಕೆರೆ ಬರೆದಿದ್ದಾರೆ ‘ಒಟ್ಟು 30 ಆಟಗಾರರ ಪಟ್ಟಿಯಿಂದ ಅಂತಿಮ 15 ಮಂದಿಯನ್ನು ಆಯ್ಕೆ ಮಾಡುವುದು ದೊಡ್ಡ ಸವಾಲಾಗಿ ಕಾಡಿತು. ಈ ಆಯ್ಕೆಗಾಗಿ ಸಾಕಷ್ಟು ಕಸರತ್ತು ನಡೆಸಬೇಕಾಯಿತು...’ ಫೆಬ್ರುವರಿಯಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಹೊರಡುವ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದ ಮಾತು ಇದು. ಭಾರಿ ಸ್ಪರ್ಧೆಯ ಜೊತೆಯಲ್ಲಿ ಆಟಗಾರರು ಮೈಗೂಡಿಸಿಕೊಂಡಿರುವ ಕೌಶಲಗಳು ಕ್ರಿಕೆಟ್ ತಂಡಗಳ ಆಯ್ಕೆ ಪ್ರಕ್ರಿಯೆಯನ್ನು ಕಠಿಣಗೊಳಿಸಿದೆ. ಕಿರಿಯರನ್ನು ತಂಡಗಳಿಗೆ ಅಥವಾ ಉನ್ನತ ತರಬೇತಿಗೆ ಆಯ್ಕೆ ಮಾಡುವುದಕ್ಕಂತೂ ಆಯ್ಕೆ ಮಂಡಳಿಯವರು ಭಾರಿ ಸಾಹಸಪಡಬೇಕಾಗುತ್ತದೆ. ಹೀಗಾಗಿ ಆಯ್ಕೆ ಸಮಿತಿಯವರು ಮತ್ತು ಕೋಚ್‌ಗಳಿಂದ ಇಂಥ ಮಾತುಗಳು ಕೇಳಿಬರುವುದು ಸಹಜ. ಕಳೆದ ವಾರ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಮುಕ್ತಾಯಗೊಂಡ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ (ಎನ್‌.ಸಿ.ಎ) ಅಂತರ ವಲಯ ಕ್ರಿಕೆಟ್‌ ಪಂದ್ಯಗಳಲ್ಲೂ ಆಯ್ಕೆ ಮಂಡಳಿ ಸದಸ್ಯರಲ್ಲಿ ಈ ಚಡಪಡಿಕೆ ಕಂಡುಬಂತು. ಭವಿಷ್ಯದ ಕ್ರಿಕೆಟಿಗರು ಎಂಬ ವಿಶೇಷಣದೊಂದಿಗೆ ಗುರುತಿಸಲಾಗುವ ಕಿರಿಯ ಕ್ರಿಕೆಟಿಗರು ಕ್ರಿಕೆಟ್‌ ಕ್ಷೇತ್ರದಲ್ಲಿ ಆಗಿರುವ ಎಲ್ಲ ಬದಲಾವಣೆಗಳ ನೇರ ಫಲಾನುಭವಿಗಳು. ಆದ್ದರಿಂದಲೇ ಅವರ ಪೈಕಿ ಅತ್ಯಂತ ಅರ್ಹರನ್ನು ಆರಿಸುವುದು ದೊಡ್ಡ ಸವಾಲಾಗುತ್ತದೆ. ಹುಬ್ಬಳ್ಳಿ–ಬೆಳಗಾವಿಯಲ್ಲಿ ನಡೆದ ಪಂದ್ಯಗಳಲ್ಲಿ ದೇಶದ ಐದು ವಲಯಗಳಿಂದ ಬಂದ ಆಟಗಾರರು ತೋರಿದ ಪ್ರದರ್ಶನದಲ್ಲೂ ‘ಹೊಸತನದ ಸ್ಪರ್ಶ’ ಎದ್ದು ಕಾಣುತ್ತಿತ್ತು. ಕ್ಷೇತ್ರ ರಕ್ಷಣೆಯಲ್ಲಿ ಕಂಡ ಚುರುಕುತನ, ತಾಸುಗಟ್ಟಲೆ ಕ್ರೀಸ್‌ನಲ್ಲಿ ತಳವೂರಿ ಆಡುವ ತಾಕತ್ತು, ಚೆಂಡು ಹಾಕಿದ ನಂತರದ ಫಾಲೊ ಥ್ರೂ, ಕ್ಯಾಚಿಂಗ್‌ ಸಾಮರ್ಥ್ಯ ಇತ್ಯಾದಿ ಎಲ್ಲದರಲ್ಲೂ ಸ್ಪಷ್ಟತೆ ಮತ್ತು ನಿಖರತೆ ಕಂಡು ಬಂದದ್ದು ಆಯ್ಕೆ ಮಂಡಳಿ ಸದಸ್ಯರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ‘ಚುಟುಕು ಕ್ರಿಕೆಟ್‌ನ ಅಬ್ಬರದ ನಡುವೆಯೂ ದೀರ್ಘ ಇನಿಂಗ್ಸ್‌ನಲ್ಲಿ ಎಳೆಯ ಕ್ರಿಕೆಟಿಗರು ತೋರಿಸುತ್ತಿರುವ ಪ್ರದರ್ಶನ ಭರವಸೆ ಮೂಡಿಸಿದೆ’ ಎಂದು ಆಯ್ಕೆಗಾರರು ಹೇಳಿದ್ದು ಅವರಲ್ಲಿನ ಸಂತೃಪ್ತ ಭಾವವನ್ನು ಎತ್ತಿ ತೋರಿಸುತ್ತಿತ್ತು. ಉತ್ತರ ವಲಯದ ಪ್ರಭು ಸಿಮ್ರಾನ್‌ ಸಿಂಗ್‌, ಕಮ್ರಾನ್‌ ಇಕ್ಬಾಲ್‌, ಸಚಿನ್‌ ಚೌಧರಿ, ಆಯುಷ್ ಬದೋನಿ, ಋಷಭ್‌ ಡ್ರಾಲ್‌, ಕೇಂದ್ರ ವಲಯದ ಆರ್ಯನ್‌ ಶರ್ಮಾ, ಪ್ರಭನೂರ್ ಸಿಂಗ್‌, ಚಂಚಲ್‌ ರಾಥೋಡ್‌, ದಕ್ಷಿಣ ವಲಯದ ದೇವದತ್ತ ಪಡಿಕ್ಕಲ್‌, ವೈ.ಸಂದೀಪ, ಪೂರ್ವ ವಲಯದ ದೇವಜ್ಯೋತಿ, ಪಶ್ಚಿಮ ವಲಯದ ದಿವ್ಯಾಂಶು ಸಕ್ಸೇನಾ, ಓಂ ಭೋಸಲೆ ಮುಂತಾದವರು ಬ್ಯಾಟಿಂಗ್‌ನಲ್ಲೂ ಉತ್ತರ ವಲಯದ ಅಶೋಕ ಸಂಧು, ದಕ್ಷಿಣ ವಲಯದ ಸ್ಪಿನ್‌ ಜೋಡಿ ಶುಭಾಂಗ ಹೆಗಡೆ ಮತ್ತು ಕಿಶನ್‌ ಕುಮಾರ್‌, ಪೂರ್ವ ವಲಯದ ಮಧ್ಯಮ ವೇಗಿ ದೇವಜ್ಯೋತಿ, ತ್ರಿಬಿತ್‌ ರಾಯ್‌ ಮುಂತಾದವರು ಬೌಲಿಂಗ್‌ನಲ್ಲೂ ಗಮನ ಸೆಳೆದಿದ್ದಾರೆ. ಪಶ್ಚಿಮ ವಲಯದ ಪರ ಆಡುತ್ತಿರುವ ಬ್ಯಾಟಿಂಗ್ ಮಾಂತ್ರಿಕ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ ತೆಂಡೂಲ್ಕರ್‌ ಅವರನ್ನು ನೋಡಲು ಮೈದಾನದ ಕಡೆಗೆ ಬಂದ ಅತ್ಯಲ್ಪ ಪ್ರೇಕ್ಷಕರಿಗೆ ಅರ್ಜುನ್ ನಿರಾಸೆ ಮೂಡಿಸಿದರೂ ಇತರ ಆಟಗಾರರು ರಂಜನೆ ನೀಡಿದ್ದರು. ಎನ್‌.ಸಿ.ಎದಲ್ಲಿ ತರಬೇತಿ ಹದಿಹರೆಯದ ಪ್ರತಿಭೆಗಳನ್ನು ಹುಡುಕಿ ಅವರಿಗೆ ಎನ್‌.ಸಿ.ಎದಲ್ಲಿ ತರಬೇತಿ ನೀಡುವುದಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಪಂದ್ಯಗಳನ್ನು ಆಯೋಜಿಸಿತ್ತು. ಐದು ವಲಯಗಳಲ್ಲಿ ಒಂದೊಂದು ತಿಂಗಳು ನಡೆದ ವಿಶೇಷ ಶಿಬಿರಗಳಲ್ಲಿ ತಲಾ 25 ಆಟಗಾರರನ್ನು ಆರಿಸಿ ಪಂದ್ಯಗಳನ್ನು ನಡೆಸಲಾಗಿತ್ತು. ಪಂದ್ಯಗಳನ್ನು ಆಡಿದ ಒಟ್ಟು 75 ಮಂದಿಯಿಂದ 25 ಮಂದಿಯನ್ನು ಅಂತಿಮವಾಗಿ ಆರಿಸಲಾಗುತ್ತದೆ. ಅವರಿಗೆ ಎನ್‌.ಸಿ.ಎದಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ. ‘ಇಲ್ಲಿ ಗಳಿಸಿದ ಮೊತ್ತ ಅಥವಾ ಪಡೆದ ವಿಕೆಟ್‌ಗಳಿಗೆ ಹೆಚ್ಚು ಮೌಲ್ಯವಿಲ್ಲ. ಪರಿಪೂರ್ಣ ಆಟ ಪ್ರದರ್ಶಿಸಬಲ್ಲವರ ಕಡೆಗೆ ನಮ್ಮ ಗಮನ. ಪ್ರತಿಯೊಬ್ಬ ಆಟಗಾರನ ಪ್ರತಿ ಚಲನವಲನಗಳನ್ನು ಗಮನಿಸುತ್ತಿದ್ದೇವೆ. ಒತ್ತಡ ನಿಭಾಯಿಸುವ ಸಾಮರ್ಥ್ಯ, ಸಹಿಷ್ಣುತೆ ಇತ್ಯಾದಿಗಳ ಮೇಲೆಯೂ ನಿಗಾ ಇಡಲಾಗುತ್ತಿದೆ. ಭವಿಷ್ಯದ ಭಾರತಕ್ಕೆ ಎಲ್ಲ ರೀತಿಯಲ್ಲೂ ಸಮರ್ಥನಾದ ಕ್ರಿಕೆಟಿಗ ಸಿಗಬೇಕು ಎಂಬುದು ನಮ್ಮ ಆಶಯ’ ಎಂದು ಆಯ್ಕೆ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಕೋಲ್ಕತ್ತಾದ ಆರೂಪ್‌ ಭಟ್ಟಾಚಾರ್‌ಜಿ ಹೇಳಿದರು. ‘ಕ್ರಿಕೆಟ್‌ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೊಸ ಆವಿಷ್ಕಾರಕ್ಕೆ ತಕ್ಕಂತೆ ಆಟಗಾರರ ಕೌಶಲವೂ ಬದಲಾಗುತ್ತಿದೆ. ಪ್ರತಿದಿನವೂ ಈ ಕ್ಷೇತ್ರದಲ್ಲಿ ಹೊಸತನ ಎದ್ದು ಕಾಣುತ್ತಿದೆ. ಇದು ಉತ್ತಮ ಸೂಚನೆ ಸರಿ; ಆದರೆ ಆಯ್ಕೆಗಾರರಿಗೆ ಸವಾಲು ಕೂಡ ಹೌದು’ ಎಂದು ಅವರು ಹೇಳುತ್ತಾರೆ. * ಹೇಳಿ ಕೊಟ್ಟದ್ದನ್ನು ಸಮರ್ಥವಾಗಿ ಅರಗಿಸಿಕೊಂಡು ಅಳವಡಿಸಿಕೊಳ್ಳಬಲ್ಲ ವಯಸ್ಸು 16 ಮತ್ತು ಅದರ ಆಸುಪಾಸು. ಆದ್ದರಿಂದ ಈ ಸಂದರ್ಭದಲ್ಲಿ ತರಬೇತಿ ನೀಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಅವರ ತಲೆಯಲ್ಲಿ ಸಿದ್ಧಾಂತಗಳನ್ನು ತುಂಬುವುದಕ್ಕಿಂತ ದೇಹದಲ್ಲಿ ಪ್ರಯೋಗಗಳನ್ನು ಮಾಡಲು ಮುಂದಾಗಬೇಕು. ಅದನ್ನು ನಾವು ಮಾಡುತ್ತಿದ್ದೇವೆ. ಆ ಮೂಲಕ ಅವರ ಶೈಲಿಯನ್ನು ಉತ್ತಮಪಡಿಸಲಾಗುತ್ತದೆ; ಶಕ್ತಿಯನ್ನುಹೆಚ್ಚಿಸಲಾಗುತ್ತದೆ. –ಯೋಗೇಂದ್ರ ಪುರಿ, ಉತ್ತರ ವಲಯದ ಮುಖ್ಯ ಕೋಚ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.