ಭಾರತ ಫುಟ್‌ಬಾಲ್‌ಗೆ ಚೆಟ್ರಿ ಹೊಳಪು... ಭಾರತದ ಪರ ಅತ್ಯಧಿಕ ಗೋಲು ಗಳಿಸಿದ ದಾಖಲೆ ಸುನಿಲ್‌ ಚೆಟ್ರಿ ಹೆಸರಿನಲ್ಲಿದೆ. ಚೆಟ್ರಿ, ಕೇವಲ ಆಟಗಾರನಾಗಿ ಮಾತ್ರವಲ್ಲದೆ, ನಾಯಕತ್ವದ ಜವಾಬ್ದಾರಿ ಹೊತ್ತು ರಾಷ್ಟ್ರೀಯ ಮತ್ತು ಬಿಎಫ್‌ಸಿ ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸಿದವರು. ಅವರನ್ನು ಜಿ. ಶಿವಕುಮಾರ ಸಂದರ್ಶಿಸಿದ್ದಾರೆ. ಭಾರತದ ಫುಟ್‌ಬಾಲ್‌ ಲೋಕದಲ್ಲಿ ಎತ್ತರದ ಸಾಧನೆ ಮಾಡಿರುವ ಪ್ರತಿಭಾನ್ವಿತ ಆಟಗಾರ ಸುನಿಲ್‌ ಚೆಟ್ರಿ. ತಮ್ಮ ಕಾಲ್ಚಳಕದ ಮೂಲಕ ಎದುರಾಳಿ ತಂಡದ ರಕ್ಷಣಾಕೋಟೆಯನ್ನು ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಚೆಟ್ರಿ ಅವರಿಗೆ ಕರಗತವಾಗಿದೆ. ಪಾದರಸದಂತಹ ಚಲನೆ ಮತ್ತು ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣದೊಳಗೆ ಲೀಲಾಜಾಲವಾಗಿ ನುಗ್ಗಿ ಚೆಂಡನ್ನು ಗುರಿ ಮುಟ್ಟಿಸುವಲ್ಲೂ ಚೆಟ್ರಿ ನಿಪುಣರು. ಅವರ ಸೊಬಗಿನ ಆಟಕ್ಕೆ ಮನಸೋಲದ ಫುಟ್‌ಬಾಲ್‌ ಪ್ರೇಮಿಗಳಿಲ್ಲ. 2002ರಲ್ಲಿ ಮೋಹನ್‌ ಬಾಗನ್‌ ಕ್ಲಬ್‌ ಪರ ಆಡುವ ಮೂಲಕ ಫುಟ್‌ಬಾಲ್‌ ವಲಯಕ್ಕೆ ಪರಿಚಿತರಾದ ಚೆಟ್ರಿ, 2007, 2009 ಮತ್ತು 2012ರ ನೆಹರೂ ಕಪ್‌ ಟೂರ್ನಿಗಳಲ್ಲಿ ಭಾರತ ತಂಡ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2008ರ ಎಎಫ್‌ಸಿ ಚಾಲೆಂಜ್‌ ಕಪ್‌ನಲ್ಲಿ ಅಮೋಘ ಆಟ ಆಡಿದ್ದ ಚೆಟ್ರಿ ಭಾರತ ತಂಡ ಪ್ರಶಸ್ತಿ ಜಯಿಸಿ 27 ವರ್ಷಗಳ ಬಳಿಕ ಎಎಫ್‌ಸಿ ಏಷ್ಯಾ ಕಪ್‌ಗೆ ಅರ್ಹತೆ ಗಳಿಸಲು ಕಾರಣರಾಗಿದ್ದರು. ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡ ಎರಡು ಬಾರಿ ಐ ಲೀಗ್‌, ಒಮ್ಮೆ ಫೆಡರೇಷನ್‌ ಕಪ್‌ ಗೆಲ್ಲುವಲ್ಲಿ ಚೆಟ್ರಿ ಪಾತ್ರ ಮಹತ್ತರವಾದುದು. ಅವರ ಸಾರಥ್ಯದಲ್ಲಿ ಬಿಎಫ್‌ಸಿ ತಂಡ ಎಎಫ್‌ಸಿ ಕಪ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಾಧನೆಯನ್ನೂ ಮಾಡಿದೆ. ಚೆಟ್ರಿ ಅವರು ಬೆಂಗಳೂರಿನ ತಂಡದ ಜತೆಗಿನ ಒಡನಾಟ, ಬಿಎಫ್‌ಸಿ ಯಶಸ್ಸಿನ ಮಂತ್ರ ಸೇರಿದಂತೆ ಹಲವು ವಿಷಯಗಳ ಬಗ್ಗೆ ‘ಪ್ರಜಾವಾಣಿ’ ಜತೆಗೆ ಮನಬಿಚ್ಚಿ ಮಾತನಾಡಿದ್ದಾರೆ. *ಫುಟ್‌ಬಾಲ್‌ ಆಟದೆಡೆಗೆ ಆಸಕ್ತಿ ಬೆಳೆದಿದ್ದು ಹೇಗೆ? ನನ್ನ ತಂದೆ ಮತ್ತು ತಾಯಿ ಇಬ್ಬರೂ ಫುಟ್‌ಬಾಲ್‌ ಆಟಗಾರರಾಗಿದ್ದರು. ಹೀಗಾಗಿ ಮನೆಯಲ್ಲಿ ಸಹಜವಾಗಿಯೇ ಕ್ರೀಡಾ ವಾತಾವರಣ ನೆಲೆಯೂರಿತ್ತು. ಅಪ್ಪ ಮತ್ತು ಅಮ್ಮ ಅಭ್ಯಾಸ ನಡೆಸುವಾಗ ನನ್ನನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಆಟವನ್ನು ನೋಡುತ್ತಾ ಬೆಳೆದ ನಾನು ಕ್ರಮೇಣ ಈ ಕ್ರೀಡೆಯತ್ತ ಆಕರ್ಷಿತನಾದೆ. *ಫುಟ್‌ಬಾಲ್‌ ಅನ್ನು ವೃತ್ತಿಪರ ಆಟವನ್ನಾಗಿ ಆಯ್ದುಕೊಂಡಿದ್ದರ ಹಿಂದಿನ ಉದ್ದೇಶ? ನಾನು ವೃತ್ತಿಪರ ಫುಟ್‌ಬಾಲ್‌ ಆಟಗಾರನಾಗುತ್ತೇನೆ ಎಂದು ಕನಸಿನ ಲ್ಲಿಯೂ ಅಂದುಕೊಂಡಿರಲಿಲ್ಲ. ಕಾಲೇಜು ದಿನಗಳಲ್ಲಿದ್ದಾಗ ದೆಹಲಿಯ ಸಿಟಿ ಎಫ್‌ಸಿ ಕ್ಲಬ್‌ ಪರವಾಗಿ ಡ್ಯುರಾಂಡ್‌ ಕಪ್‌ನಲ್ಲಿ ಆಡಿದ್ದೆ. ಆ ಟೂರ್ನಿಯಲ್ಲಿ ನನ್ನಿಂದ ಮೂಡಿಬಂದ ಸಾಮರ್ಥ್ಯವನ್ನು ಗಮನಿಸಿ ಮೋಹನ್‌ ಬಾಗನ್‌ ತನ್ನ ಅಕಾಡೆಮಿಗೆ ಸೇರುವಂತೆ ಆಹ್ವಾನ ನೀಡಿತು. ಬಳಿಕ ಕ್ಲಬ್‌ ನನ್ನೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿತು. ಅದನ್ನು ಸದುಪ ಯೋಗಪಡಿಸಿಕೊಂಡು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದೇನೆ. *ಬೆಂಗಳೂರು ಎಫ್‌ಸಿ ಜತೆಗಿನ ಒಡನಾಟದ ಬಗ್ಗೆ ಹೇಳಿ? ಮೂರು ವರ್ಷಗಳ ಹಿಂದೆ ಕ್ಲಬ್‌ ಶುರು ವಾದಾಗ ನಾವೆಲ್ಲಾ ಅಪರಿಚಿತರಾ ಗಿದ್ದೆವು. ಕ್ಲಬ್‌ಗೆ ಸೇರಿದ ಮೊದಲ ದಿನದಿಂದ ಇದುವೆರೆಗೂ ತಂಡದೊಂದಿಗೆ ಕಳೆದ ದಿನ ಗಳು ಸದಾ ನೆನಪಿನಲ್ಲಿ ಉಳಿಯುವಂತಹದ್ದು. ಈಗ ತಂಡದಲ್ಲಿರುವ ಎಲ್ಲರೂ ಒಂದು ಕುಟುಂಬದಂತಿದ್ದೇವೆ. *ಆಡಳಿತ ಮಂಡಳಿ ನಿಮ್ಮ ಒಪ್ಪಂದವನ್ನು ನವೀಕರಿಸಿದರೆ, ತಂಡದಲ್ಲಿ ಮುಂದುವರಿಯಲು ಇಚ್ಛಿಸುವಿರಾ? ಖಂಡಿತವಾಗಿಯೂ. ಮೂರು ವರ್ಷದಿಂದ ಬಿಎಫ್‌ಸಿ ತಂಡದ ಸದಸ್ಯನಾಗಿದ್ದೇನೆ ಎಂಬುದಕ್ಕೆ ಹೆಮ್ಮೆ ಇದೆ. ಒಪ್ಪಂದ ನವೀಕರಿಸುವ ಕುರಿತು ಮಾತುಕತೆ ಪ್ರಗತಿಯಲ್ಲಿದೆ. *ಬೆಂಗಳೂರಿನ ಬಗ್ಗೆ ಹೇಳಿ? ಇಲ್ಲಿನ ವಾತಾವರಣ, ಜನ, ಹಸಿರು ಎಲ್ಲವೂ ತುಂಬಾ ಹಿಡಿಸಿದೆ. ಮೂರು ವರ್ಷಗಳಿಂದ ಇಲ್ಲಿಯೇ ನೆಲೆಸಿರುವ ಕಾರಣ ಒಂದು ರೀತಿಯಲ್ಲಿ ಬೆಂಗಳೂರು ನನ್ನ ತವರು ಆಗಿಬಿಟ್ಟಿದೆ. *ಉದ್ಯಾನ ನಗರಿಯ ಅಭಿಮಾನಿಗಳ ಬೆಂಬಲದ ಕುರಿತು ಏನು ಹೇಳುತ್ತೀರಿ? ನಾವು ಆಡಲು ಶುರುಮಾಡಿದ ದಿನದಿಂದ ಇಂದಿನವರೆಗೂ ಇಲ್ಲಿನ ಅಭಿಮಾನಿಗಳು ತೋರಿದ ಪ್ರೀತಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನಮ್ಮ ಯಶಸ್ಸಿಗೆ ಅವರ ಪ್ರೋತ್ಸಾಹವೂ ಕಾರಣ ಎಂದು ಹೇಳಿದರೆ ತಪ್ಪಾಗಲಾರದು. *ಬಿಎಫ್‌ಸಿ ಯಶಸ್ಸಿನ ಬಗ್ಗೆ ಹೇಳಿ? 2013ರಲ್ಲಿ ಐ ಲೀಗ್‌ಗೆ ಕಾಲಿಟ್ಟಾಗ ನಮ್ಮ ಮೇಲೆ ಯಾವ ಒತ್ತಡವೂ ಇರಲಿಲ್ಲ. ಚೊಚ್ಚಲ ಟೂರ್ನಿಯಲ್ಲೇ ಪ್ರಶಸ್ತಿ ಜಯಿಸಿದ ಬಳಿಕ ನಿರೀಕ್ಷೆಗಳು ಹೆಚ್ಚಾದವು. 2014ರಲ್ಲಿ ನಾವು ‘ರನ್ನರ್ಸ್‌ ಅಪ್‌’ ಆದೆವು. ಈ ಋತುವಿನಲ್ಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂಬ ಹಣೆಪಟ್ಟಿ ಹೊತ್ತು ಐ ಲೀಗ್‌ನಲ್ಲಿ ಅಭಿಯಾನ ಆರಂಭಿಸಿದ್ದೆವು. ಎದುರಾಳಿಗಳ ಸವಾಲಿನ ಜತೆಗೆ ಪ್ರತಿ ಪಂದ್ಯದಲ್ಲಿಯೂ ಒತ್ತಡವನ್ನು ಮೀರಿ ನಿಂತು ಆಡಿದರ ಫಲವಾಗಿ ಪ್ರಶಸ್ತಿ ಒಲಿದಿದೆ. ಇದಕ್ಕಾಗಿ ತುಂಬಾ ಹೆಮ್ಮೆ ಅನಿಸುತ್ತಿದೆ. *ತಂಡದ ಯಶಸ್ಸಿನ ಮಂತ್ರ ಏನು? ಮೊದಲನೆಯದಾಗಿ ಅಭಿಮಾನಿಗಳು. ಕ್ಲಬ್‌ನ ಮಾಲೀಕರು, ಕೋಚ್‌ ಮತ್ತು ಆಟಗಾರರ ಪರಿಶ್ರಮ ಎಲ್ಲವೂ ಇದರ ಹಿಂದೆ ಅಡಗಿವೆ. *ಬಿಎಫ್‌ಸಿ ಈಗಾಗಲೇ ಎಎಫ್‌ಸಿ ಕಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಗಳಿಸಿದೆ. ಇದಕ್ಕೆ ತಯಾರಿ ಹೇಗೆ ನಡೆಯುತ್ತಿದೆ? ಎದುರಾಳಿ ಯಾರು ಎಂಬುದು ಇನ್ನೂ ತಿಳಿದಿಲ್ಲ. ಸೆಪ್ಟೆಂಬರ್‌ನಲ್ಲಿ ಪಂದ್ಯ ಇರುವುದರಿಂದ ಸಾಕಷ್ಟು ಸಮಯ ಇದೆ. ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದೇವೆ. *ಐಎಸ್‌ಎಲ್‌ನಲ್ಲಿ ಆಡಿದ ಅನುಭವ ಹೇಗಿತ್ತು? ಅದೊಂದು ಸ್ಮರಣೀಯ ಅನುಭವ. ಟೂರ್ನಿಯಲ್ಲಿ ಸಾಕಷ್ಟು ಮಂದಿ ವಿದೇಶಿ ಆಟಗಾರರು ಆಡುತ್ತಾರೆ. ಅವರ ತಂತ್ರಗಾರಿಕೆ ಮತ್ತು ಯೋಜನೆಗಳನ್ನು ಅರಿತುಕೊಳ್ಳಲು ಈ ಟೂರ್ನಿ ಭಾರತದ ಆಟಗಾರರಿಗೆ ಉತ್ತಮ ವೇದಿಕೆ ಎಂದರೆ ತಪ್ಪಾಗಲಾರದು. *ಬೆಂಗಳೂರಿನಲ್ಲಿ ಫುಟ್‌ಬಾಲ್‌ ಕ್ರೀಡೆಯ ಅಭಿವೃದ್ಧಿಗೆ ಬೇಕಾದ ಮೂಲಭೂತ ಸೌಕರ್ಯಗಳಿವೆಯೇ? ಬೇರೆ ನಗರಗಳಿಗೆ ಹೋಲಿಸಿದರೆ ಇಲ್ಲಿ ಸಾಕಷ್ಟು ಸೌಕರ್ಯಗಳಿವೆ. ಶಾಲಾ ಮತ್ತು ಕ್ಲಬ್‌ ಮಟ್ಟಗಳಲ್ಲಿ ವಿವಿಧ ಡಿವಿಷನ್‌ ಲೀಗ್‌ಗಳು ನಡೆಯುತ್ತಿವೆ. ಇದರಿಂದ ಎಳವೆಯಲ್ಲಿಯೇ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೆಕ್ಕಿ ತೆಗೆಯಬಹುದು. *ಭಾರತ ತಂಡ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲವಲ್ಲ ? ದಯವಿಟ್ಟು ಈ ಬಗ್ಗೆ ಹೆಚ್ಚೇನನ್ನೂ ಕೇಳಬೇಡಿ. ಇದಕ್ಕೆ ನನ್ನ ಬಳಿ ಉತ್ತರ ಇಲ್ಲ ಅಂತಲ್ಲ. ಆದರೆ ಈ ಸಂದರ್ಭದಲ್ಲಿ ಅದನ್ನು ಪ್ರಸ್ತಾಪಿಸಲು ಇಷ್ಟಪಡುವುದಿಲ್ಲ. *ಐಎಸ್‌ಎಲ್‌ ಟೂರ್ನಿಯನ್ನು ಐ ಲೀಗ್‌ ಜತೆಗೆ ವಿಲೀನ ಮಾಡಬೇಕೆಂಬ ಮಾತುಗಳು ಕೇಳಿ ಬರುತ್ತಿವೆಯಲ್ಲ. ಈ ಬಗ್ಗೆ ನೀವೇನಂತೀರಾ? ನನ್ನ ಪ್ರಕಾರ ಇದು ಸರಿಯಲ್ಲ. ಐಎಸ್‌ಎಲ್‌ ಮತ್ತು ಐ ಲೀಗ್‌ಗೆ ಅದರದ್ದೇ ಆದ ಮಹತ್ವವಿದೆ. ಇವೆರಡನ್ನೂ ಒಟ್ಟಿಗೆ ಸೇರಿಸುವುರಿಂದ ಭಾರತದ ಫುಟ್‌ಬಾಲ್‌ನಲ್ಲಿ ದೊಡ್ಡ ಕ್ರಾಂತಿ ಆಗಲಿದೆ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. *ನಿಮ್ಮ ಫಿಟ್‌ನೆಸ್‌ ಗುಟ್ಟೇನು? ನಿತ್ಯ ಮೂರು ಬಾರಿ ಜಿಮ್‌ನಲ್ಲಿ ಬೆವರು ಹರಿಸುತ್ತೇನೆ. ಜತೆಗೆ ಅಂಗಳದಲ್ಲಿ ಕಠಿಣ ತಾಲೀಮು ನಡೆಸುತ್ತೇನೆ. ಬಹುಮುಖ್ಯವಾಗಿ ಸರಿಯಾದ ಸಮಯಕ್ಕೆ ಊಟ, ನಿದ್ರೆ ಮತ್ತು ಆದಷ್ಟು ಹೆಚ್ಚು ನೀರು ಸೇವಿಸುತ್ತೇನೆ. *ನೆಚ್ಚಿನ ಆಟಗಾರ? ತಂದೆಯೇ ನನ್ನ ಇಷ್ಟದ ಆಟಗಾರ. ಚೆಟ್ರಿ ಪರಿಚಯ.. *ಜನನ : ಆಗಸ್ಟ್‌ 3, 1984 *ಸ್ಥಳ : ಸಿಕಂದರಾಬಾದ್‌ *ಆಡುವ ವಿಭಾಗ : ಸ್ಟ್ರೈಕರ್‌ *ಪೋಷಕರು : ಕೆ.ಬಿ. ಚೆಟ್ರಿ ಮತ್ತು ಸುಶೀಲಾ ಚೆಟ್ರಿ *ಸಹೋದರಿಯರು : ಸಶಾ ಮತ್ತು ಸುನಂದಾ ಎಲ್ಲರೂ ಫುಟ್‌ಬಾಲ್‌ ಆಟಗಾರರೇ.. ಸುನಿಲ್‌ ಚೆಟ್ರಿ ಅವರ ಕುಟುಂಬದ ಎಲ್ಲರೂ ಫುಟ್‌ಬಾಲ್‌ ಆಟಗಾರರೇ ಎಂಬುದು ವಿಶೇಷ. ಸುನಿಲ್‌ ಅವರ ತಂದೆ, ಭಾರತೀಯ ಸೇನಾ ತಂಡದಲ್ಲಿ ಆಡಿದ್ದರೆ, ತಾಯಿ ಮತ್ತು ಸಹೋದರಿಯರು ನೇಪಾಳ ರಾಷ್ಟ್ರೀಯ ಮಹಿಳಾ ತಂಡದ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.