ಕಲಬುರ್ಗಿಯ ಮಲ್ಲೇಶಿ ಮಿಂಚು ಭಾರತದ ಮಟ್ಟಿಗೆ ಅಷ್ಟೇನೂ ಚಿರಪರಿಚಿತವಲ್ಲದ ಸುಮೊ ಕುಸ್ತಿಯಲ್ಲಿ ಇದೀಗ ಕಲಬುರ್ಗಿಯ ಅಶೋಕ ಮಲ್ಲೇಶಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಭಾರತದಲ್ಲಿ ಸುಮೊ ಕುಸ್ತಿಗೆ ಸಂಬಂಧಿಸಿದಂತೆ ತಮ್ಮ ಅನುಭವಗಳನ್ನು ಅವರು ಸುದೇಶ ದೊಡ್ಡಪಾಳ್ಯ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಕಲಬುರ್ಗಿ ನಗರದ ಅಶೋಕ ಮಲ್ಲೇಶಿ ಸುಮೊ ಕುಸ್ತಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಮೇ ತಿಂಗಳ ಕೊನೆಯ ವಾರ ಅಮೆರಿಕಾದಲ್ಲಿ ನಡೆದ 16 ನೇ ವಾರ್ಷಿಕ ಯುಎಸ್‌ ಓಪನ್‌ ಸುಮೊ ಚಾಂಪಿಯನ್‌ಷಿಪ್‌ನಲ್ಲಿ 8ನೇ ಸ್ಥಾನ ಪಡೆದಿದ್ದಾರೆ. ಜುಲೈ 30 ರಂದು ಮಂಗೋ ಲಿಯಾದಲ್ಲಿ ನಡೆಯುವ ವಿಶ್ವ ಸುಮೊ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ. *ನಿಮಗೆ ಸುಮೊ ಮೇಲೆ ಆಸಕ್ತಿ ಹೇಗೆ ಬಂತು? ನಾನು ಮೂಲತಃ ಜೂಡೊ ಪಟು. ರಾಜ್ಯಮಟ್ಟದಲ್ಲಿ ಹನ್ನೆರಡು ಬಾರಿ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ನಾಲ್ಕು ಸಲ ಚಿನ್ನದ ಪದಕಗಳನ್ನು ಗೆದ್ದಿದ್ದೇನೆ. ಜೂಡೊ ಮತ್ತು ಸುಮೊಗೆ ತುಂಬಾ ವ್ಯತ್ಯಾಸವೇನೂ ಇಲ್ಲ. ಒಮ್ಮೆ ಟಿವಿಯಲ್ಲಿ ಸುಮೊ ಕುಸ್ತಿಯನ್ನು ನೋಡಿದೆ. ಇಷ್ಟವಾಯಿತು. *ಚಾಂಪಿಯನ್‌ಷಿಪ್‌ ಸ್ಪರ್ಧೆಗೆ ತಯಾರಿ ಹೇಗಿತ್ತು? ಪ್ರತಿನಿತ್ಯ ಜಿಮ್‌ಗೆ ಹೋಗುತ್ತಿದ್ದೆ. ಇದರಿಂದ ಫಿಟ್‌ನೆಸ್‌ ಸಾಧ್ಯವಾಯಿತು. ಪೋಷಕಾಂಶ ಉಳ್ಳ ಆಹಾರವನ್ನು ತೆಗೆದುಕೊಳ್ಳುತ್ತಿದ್ದೆ. ಇದಕ್ಕಾಗಿಯೇ ತಿಂಗಳಿಗೆ ಎಂಟು ಸಾವಿರ ರೂಪಾಯಿ ಖರ್ಚಾಗುತ್ತಿತ್ತು. ಸುಮೊ ಸ್ಪರ್ಧೆಯಲ್ಲಿ ನಾಲ್ಕು ವಿಭಾಗಗಳಿವೆ. ಅದರಲ್ಲಿ ನಾನು –85 ಕೆ.ಜಿ. (ಲೈಟ್‌ವೇಟ್‌) ವಿಭಾಗದಲ್ಲಿ ಭಾಗವಹಿಸಬೇಕಿತ್ತು. ನನ್ನ ತೂಕ ಕೇವಲ 60 ಕೆ.ಜಿ. ಇತ್ತು. ಮೂರು ತಿಂಗಳಲ್ಲಿ ಹದಿನೈದು ಕೆ.ಜಿ. ತೂಕವನ್ನು ಹೆಚ್ಚಿಸಿಕೊಂಡೆ. ನನ್ನ ಗುರಿ ಪದಕ ಗೆಲ್ಲುವುದೇ ಆಗಿತ್ತು. ಆದರೆ ಸಾಧ್ಯವಾಗಿಲ್ಲ. *ಏಕೆ ಸಾಧ್ಯವಾಗಲಿಲ್ಲ? ನನ್ನದು ಬಡ ಕುಟುಂಬ. ತಂದೆ ಗಾರೆ ಕೆಲಸ ಮಾಡುತ್ತಾರೆ. ಅದರಿಂದ ಬರುವ ಆದಾಯದಲ್ಲಿ ಸಂಸಾರ ಸಾಗಿಸಬೇಕು. ನಾನು ಖಾಸಗಿ ಕಾಲೇಜೊಂದರಲ್ಲಿ ತಾತ್ಕಾಲಿಕ ದೈಹಿಕ ಶಿಕ್ಷಣ ಶಿಕ್ಷಕನಾಗಿದ್ದೇನೆ. ಸಂಬಳವನ್ನು ನನ್ನ ಆಹಾರ ಮತ್ತು ತರಬೇತಿಗೆ ಬಳಸಿಕೊಂಡೆ. ಅಮೆರಿಕಾಗೆ ಹೋಗಲು ₹1.70 ಲಕ್ಷ ರೂಪಾಯಿ ಬೇಕಿತ್ತು. ನನ್ನ ಬಳಿ ಕೇವಲ ₹50 ಸಾವಿರವಿತ್ತು. ಉಳಿದ ಹಣವನ್ನು ಹೊಂದಿಸಲು ಸಚಿವರು, ಶಾಸಕರು, ಹಣವಂತರ ಮನೆಗಳ ಬಾಗಿಲು ಕಾಯ್ದೆ. ಯಾರೂ ಸಹಾಯ ಮಾಡಲಿಲ್ಲ. ಕೋಚ್‌ ಶಿವಂ ಜೋಶಿ ಅವರು ಪ್ರಾಯೋಜಕರಿಂದ ₹1 ಲಕ್ಷ ರೂಪಾಯಿ ಕೊಡಿಸಿದರು. ₹50ಸಾವಿರವನ್ನು ಹಣಕಾಸು ಸಂಸ್ಥೆಯಿಂದ ಸಾಲ ಪಡೆದೆ. ಹಣ ಹೊಂದಿಸುವುದೇ ದೊಡ್ಡ ಸಮಸ್ಯೆ ಆಯಿತು. ಮಾನಸಿಕ ನೆಮ್ಮದಿ ಇಲ್ಲದಾಯಿತು. ತರಬೇತಿ ಮತ್ತು ಕಸರತ್ತು ಕಡಿಮೆ ಆಯಿತು. *ಕಲಬುರ್ಗಿಯಂಥ ನಗರದಲ್ಲಿ ಸುಮೊ ತರಬೇತಿ ಹೇಗೆ ಸಿಕ್ಕಿತು ? ಸುಮೊ ಕಲಿಯುವ ಹಂಬಲದಿಂದ ತರಬೇತುದಾರರನ್ನು ಹುಡುಕುತ್ತಿದ್ದೆ. ಆಗ ಕಲಬುರ್ಗಿಯವರೇ ಆದ ಶಿವಂ ಜೋಶಿ ಸಿಕ್ಕರು. ಅವರು ಅಂತರರಾಷ್ಟ್ರೀಯ ಮಟ್ಟದ ಜೂಡೊ ಪಟು ಮತ್ತು ಸುಮೊ ಕುಸ್ತಿಪಟು. ನನ್ನ ಆಸಕ್ತಿಯನ್ನು ಮೆಚ್ಚಿ ತರಬೇತಿ ನೀಡಿದರು. *ಭಾರತ ತಂಡಕ್ಕೆ ಆಯ್ಕೆ ಹೇಗೆ? ರಾಷ್ಟ್ರ ಮಟ್ಟದ ಜೂಡೊ ಕುಸ್ತಿಯಲ್ಲಿ ಉತ್ತಮ ಸಾಧನೆ ಮಾಡಿರುವವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಾನು ಮತ್ತು ಉತ್ತರ ಭಾರತದ ಇನ್ನಿಬ್ಬರು ತಂಡದಲ್ಲಿದ್ದೆವು. ನಾನು ಉಕ್ರೇನ್‌ ಮತ್ತು ಮಂಗೋಲಿಯಾದ ಪಟುಗಳನ್ನು ಸೋಲಿಸಿದೆ. ರಷ್ಯಾದ ಸ್ಪರ್ಧಿಯ ವಿರುದ್ಧ ಕೊನೆ ಕ್ಷಣದಲ್ಲಿ ಸೋತು 8 ನೇ ಸ್ಥಾನಕ್ಕೆ ಹೋದೆ. *ಭಾರತದಲ್ಲಿ ಸುಮೊಗೆ ಭವಿಷ್ಯ ಇದೆಯಾ? ಹೌದು, ಏಕೆಂದರೆ ನಮ್ಮಲ್ಲಿ ಕುಸ್ತಿ ಪ್ರಸಿದ್ಧವಾಗಿದೆ. ಜೂಡೊ ಮತ್ತು ಕುಸ್ತಿಪಟುಗಳು ಸುಮೊಗೆ ಹೆಚ್ಚು ಒಲಿಯುತ್ತಾರೆ. *ಸುಮೊ ಭಾರತದಲ್ಲಿ ಜನಪ್ರಿಯತೆ ಪಡೆಯುವ ಲಕ್ಷಣಗಳಿವೆಯೇ? ಸುಮೊ ಜಪಾನ್‌ ಕುಸ್ತಿ ಕಲೆ. ಈಗ ವಿಶ್ವದ ಐವತ್ತು ದೇಶಗಳಲ್ಲಿ ಜನಪ್ರಿಯವಾಗಿದೆ. ಮಂಗೋಲಿಯಾ, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾದ ದೇಶಗಳಲ್ಲಿ ಪ್ರಸಿದ್ಧವಾಗಿದೆ. ಪ್ರೋತ್ಸಾಹ ಸಿಕ್ಕರೆ ನಮ್ಮಲ್ಲೂ ಸಾಧ್ಯ. *ಬಡತನದ ನಡುವೆಯೇ ಸಾಧನೆ ಮಾಡುವ ಹಂಬಲ ಹಾಗೇ ಉಳಿದಿದೆಯೇ? ಖಂಡಿತ. ಕ್ರೀಡಾಪಟು ಕೊನೆ ಕ್ಷಣದವರೆಗೂ ಸೋಲೊಪ್ಪಿಕೊಳ್ಳುವುದಿಲ್ಲ. ನಾನೂ ಅಷ್ಟೆ, ಸುಮೊದಲ್ಲಿ ಚಾಂಪಿಯನ್‌ ಆಗುವವರೆಗೂ ಹೋರಾಡುತ್ತೇನೆ. ನಾನು ಈಗ ನಿರಾಳವಾಗಿದ್ದೇನೆ. ಏಕೆಂದರೆ, ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯು ಮಂಗೋಲಿಯಾಗೆ ಹೋಗಿ ಬರುವ ವೆಚ್ಚವನ್ನು ಭರಿಸಲು ಮುಂದಾಗಿದೆ. ಹೇತಲ್‌ ದವೆ ಸಾಧನೆ... ಭಾರತದಲ್ಲಿ ಏನೇನೂ ಜನಪ್ರಿಯತೆ ಇಲ್ಲದ ಸುಮೊ ಕುಸ್ತಿಯಲ್ಲಿ ಮುಂಬೈನ ಹೇತಲ್‌ ದವೆ ಎಂಬ ಯುವತಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇವರು ಭಾರತದ ಮೊದಲ ಮಹಿಳಾ ಸುಮೊ ಪೈಲ್ವಾನ್‌. ಇವರು ಪೋಲೆಂಡ್‌, ಫಿನ್‌ಲೆಂಡ್‌, ತೈವಾನ್‌ಗಳಲ್ಲಿ ನಡೆದ ಸುಮೊ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2009ರ ವಿಶ್ವ ಸುಮೊಕೂಟದಲ್ಲಿ ಇವರು ಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದ್ದರು. ಜಪಾನ್‌ನ ಸುಮೊ ಸುಮೊ ಕುಸ್ತಿ ಜಪಾನ್‌ನಲ್ಲಿ ಬಲು ಜನಪ್ರಿಯ. ಇದು ಆ ದೇಶದಲ್ಲೇ ಹುಟ್ಟು ಪಡೆದ ಕ್ರೀಡೆ. ಸುಮಾರು ಐದು ಶತಮಾನಗಳ ಹಿಂದೆಯೇ ಈ ಕ್ರೀಡೆ ಅಲ್ಲಿ ಪ್ರಚಲಿತದಲ್ಲಿತ್ತು. 14.9 ಅಡಿ ವ್ಯಾಸ ಮತ್ತು 175 ಚದರ ಅಡಿ ಅಗಲದ ಅಂಗಣದಲ್ಲಿ ಇಬ್ಬರ ನಡುವೆ ಸುಮೊ ಕುಸ್ತಿ ನಡೆಯುತ್ತದೆ. ಮಣ್ಣು ಮತ್ತು ಮರಳು ಮಿಶ್ರಣದಿಂದ ಮಾಡಿದ ಈ ಗಟ್ಟಿ ಅಂಗಣಕ್ಕೆ ‘ದೋಯೊ’ ಎನ್ನುತ್ತಾರೆ. ಜಪಾನ್‌, ಮಲೇಷ್ಯಾ, ಚೀನಾ, ಕೊರಿಯಾಗಳ ಹಲವು ಸಮರ ಕಲೆಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯ. ಆದರೆ ಸುಮೊ ಮಾತ್ರ ಈ ದೇಶದಲ್ಲಿ ಅಷ್ಟೇನೂ ಜನಜನಿತವಾಗಿಲ್ಲ. ಜೂಡೊ ಕ್ರೀಡೆಯಲ್ಲಿ ಸಾಕಷ್ಟು ಕಸರತ್ತು ನಡೆಸಿರುವ ಕೆಲವರು ಸುಮೊ ಕುಸ್ತಿಯಲ್ಲಿಯೂ ಪರಿಶ್ರಮ ಪಡುತ್ತಿರುವುದು ಈಚೆಗಿನ ಬೆಳವಣಿಗೆ. ಮುಂಬೈನಲ್ಲಿರುವ ಜೂಡೊ ಸಾಧಕ ಕವಾಸ್‌ ಬಲಿಮೊರಿಯ ಅವರು ಸುಮೊ ಕ್ರೀಡೆಯಲ್ಲಿಯೂ ಸಾಕಷ್ಟು ಪರಿಣತಿ ಸಾಧಿಸಿದರು. ಇವರ ತರಬೇತಿಯಲ್ಲಿ ಪಳಗಿದ ಮುಂಬೈನ ಹೇತಲ್‌ ದವೆ ಎಂಬ ಯುವತಿ ಕೆಲವು ಅಂತರರಾಷ್ಟ್ರೀಯ ಸುಮೊ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.