ಇತರೆ ಕ್ರೀಡೆಗಳ ಬಗ್ಗೆ ಕ್ರಿಕೆಟಿಗರ ಪ್ರೀತಿ... ಕಪಿಲ್‌ ದೇವ್‌, ಅಜಿತ್ ಅಗರಕರ್‌, ಸೈಯದ್ ಕಿರ್ಮಾನಿ... ಇವರ ಹೆಸರು ಕೇಳಿದಾಕ್ಷಣ ಮೊದಲು ನೆನಪಾಗುವುದು ಕ್ರಿಕೆಟ್‌. ಕಪಿಲ್ ದೇವ್‌ ಅವರನ್ನು ನೆನಪಿಸಿಕೊಂಡಾಗ 1983ರ ವಿಶ್ವಕಪ್‌ನಲ್ಲಿ ಟ್ರೋಫಿ ಗೆದ್ದ ಭಾರತ ತಂಡದ ನಾಯಕ ಎನ್ನುವ ವಿಷಯವೇ ನೆನಪಾಗುತ್ತದೆ. ವೇಗಿ ಅಗರಕರ್‌ ಹೆಸರು ಬಂದಾಗ ಅವರ ಕರಾರುವಾಕ್ಕಾದ ಬೌಲಿಂಗ್‌ ಕಣ್ಣ ಮುಂದೆ ಕಾಡುತ್ತದೆ. ಆದರೆ ಇವರೂ ಸೇರಿದಂತೆ ಇನ್ನಿತರ ಆಟಗಾರರು ಬೇರೆ ಬೇರೆ ಕ್ರೀಡೆಗಳ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದಾರೆ. ಅದರಲ್ಲಿಯೂ ಗಾಲ್ಫ್‌ ಎಂದರೆ ಇವರಲ್ಲಿ ಬಹಳ ಮಂದಿಗೆ ಪಂಚಪ್ರಾಣ. ಹೋದ ತಿಂಗಳು ಬೆಂಗಳೂರಿನಲ್ಲಿ ಬಿಎಂಆರ್ ವರ್ಲ್ಡ್ ಕಾರ್ಪೊರೇಟ್ ಗಾಲ್ಫ್‌ ಚಾಲೆಂಜ್‌ ಟೂರ್ನಿ ನಡೆದಿತ್ತು. ಆ ಟೂರ್ನಿಯಲ್ಲಿ ಅಗರಕರ್ ಚಾಂಪಿಯನ್ ಆಗಿದ್ದರು. ಶಿಬಿರ್‌ ರಾವ್‌ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದರು. ಹೋದ ವಾರ ನಡೆದ ಲೂಯಿಸ್‌ ಫಿಲಿಪ್‌ ಕಪ್‌ ಗಾಲ್ಫ್‌ ಟೂರ್ನಿಯಲ್ಲಿ ಅಗರಕರ್‌ ಆಡಿದ್ದರು. ಮುಂಬೈನ ಅಗರಕರ್‌ 26 ಟೆಸ್ಟ್‌, 191 ಏಕದಿನ ಮತ್ತು ನಾಲ್ಕು ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ. ಈ ಮೂರೂ ಮಾದರಿಗಳ ಪಂದ್ಯಗಳಲ್ಲಿ ಇವರು ಒಟ್ಟು 349 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಚಿನ್‌ ತೆಂಡೂಲ್ಕರ್ ಅವರಿಗೆ ಸಾಧ್ಯವಾಗದ ಸಾಧನೆ ಯೊಂದನ್ನು ಬೌಲರ್‌ ಅಗರಕರ್‌ ಮಾಡಿದ್ದಾರೆ. ಕ್ರಿಕೆಟ್‌ನಲ್ಲಿ ಸಾವಿರಾರು ರನ್‌ಗಳನ್ನು ಹೊಡೆದಿರುವ ಸಚಿನ್‌ ಅವರಿಗೆ ‘ಕ್ರಿಕೆಟ್‌ ಕಾಶಿ’ ಲಾರ್ಡ್ಸ್‌ ಅಂಗಳದಲ್ಲಿ ಒಂದೂ ಶತಕ ಬಾರಿಸಲು ಸಾಧ್ಯವಾಗಿಲ್ಲ. ಆದರೆ ಅಗರಕರ್‌ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ನಲ್ಲಿ ಅಜೇಯ 109 ರನ್‌ ಗಳಿಸಿ ಗಮನ ಸೆಳೆದಿದ್ದರು. ಆ ಪಂದ್ಯ ಲಾರ್ಡ್ಸ್‌ನಲ್ಲಿಯೇ ನಡೆದಿತ್ತು. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಅಗರಕರ್‌ ಆಗಾಗ್ಗೆ ಗಾಲ್ಫ್‌ ಟೂರ್ನಿಗಳಲ್ಲಿ ಆಡುತ್ತಾರೆ. ಅನೇಕ ಕ್ರಿಕೆಟಿಗರು ಈ ಹವ್ಯಾಸವನ್ನು ಬೆಳಸಿಕೊಂಡಿ ದ್ದಾರೆ. ಇನ್ನು ಕೆಲವರು ಸ್ಪರ್ಧಾತ್ಮಕ ಟೂರ್ನಿಗಳಲ್ಲಿ ಆಡುತ್ತಾರೆ. ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಬಹುತೇಕ ಕ್ರಿಕೆಟಿಗರು ಗಾಲ್ಫ್‌ ಮೊರೆ ಹೋಗುವುದು ಈಗ ಸಹಜವಾಗಿಬಿಟ್ಟಿದೆ. ಭಾರತದ ಟೆಸ್ಟ್ ಆಟಗಾರರಾಗಿದ್ದ ಸುನಿಲ್‌ ಗಾವಸ್ಕರ್‌ ಕ್ರಿಕೆಟ್ ನಂತರ ಗಾಲ್ಫ್ ಕ್ರೀಡೆಗೆ ಮಾರು ಹೋಗಿದ್ದರು. ‘ಕ್ರಿಕೆಟ್‌ ಪಂದ್ಯವಿದ್ದ ದಿನದಂದು ಅಥವಾ ಅದರ ಹಿಂದಿನ ದಿನ ಗಾಲ್ಫ್‌ ಆಡುತ್ತಿದ್ದೆ. ಆಗ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ಸುಲಭವಾಗುತ್ತಿತ್ತು’ ಎಂದು ಅವರು ಅದೊಮ್ಮೆ ಹೇಳಿದ್ದರು. ವೆಸ್ಟ್‌ ಇಂಡೀಸ್‌ನ ಸರ್ ಎವರ್ಟನ್‌ ವೀಕ್ಸ್‌ ಅವರು ಗಾಲ್ಫ್‌ ಕುರಿತಾಗಿ ಹೇಳಿದ ಮಾತುಗಳನ್ನು ಗಾವಸ್ಕರ್‌ ಪದೇ ಪದೇ ನೆನಪಿಸಿಕೊಳ್ಳುತ್ತಾರೆ. ‘ನನಗೀಗ 80 ವರ್ಷ. ಕ್ರಿಕೆಟ್‌ ಆಡಲು ಆರಂಭಿಸಿದ ದಿನಗಳಲ್ಲಿ ನಾನು ಬಾರಿಸಿದ ಚೆಂಡನ್ನು ಹೊಡೆಯಲು ಫೀಲ್ಡರ್‌ಗಳು ಓಡುತ್ತಿದ್ದರು. ಈಗ ಗಾಲ್ಫ್‌ ಆಡಿದರೆ ನಾನು ಹೊಡೆದ ಚೆಂಡನ್ನು ನಾನೇ ತರಬೇಕಾಗುತ್ತದೆ’ ಎಂದು ವೀಕ್ಸ್‌ ಹೇಳಿದ್ದರಂತೆ. ಅವರು ತಮಾಷೆಯಾಗಿ ಈ ಮಾತನ್ನು ಹೇಳಿರಬಹುದಾದರೂ ‘ಗಾಲ್ಫ್‌ ಬಗ್ಗೆ ನಿರಂತರ ಪ್ರೀತಿ ಉಳಿಸಿಕೊಳ್ಳಲು ನನಗೆ ಆಗಲಿಲ್ಲ’ ಎಂದು ಗಾವಸ್ಕರ್‌ ಹೇಳಿದ್ದರು. ದುಬೈನ ಪ್ರಖ್ಯಾತ ದಿ ಎಲ್ಸ್‌ ಗಾಲ್ಫ್‌ ಕ್ಲಬ್‌ ಗಾವಸ್ಕರ್‌ ಅವರಿಗೆ 2014 ರಲ್ಲಿ ಆಜೀವ ಸದಸ್ಯತ್ವ ನೀಡಿದೆ. ಇದಕ್ಕೂ ಮುನ್ನ ದುಬೈನಲ್ಲಿ ಐಪಿಎಲ್‌ ಪಂದ್ಯಗಳನ್ನು ಆಯೋಜಿಸಿದ್ದ ಸಂದರ್ಭದಲ್ಲಿ ಸಚಿನ್‌ ತೆಂಡೂಲ್ಕರ್‌ ಅವರಿಗೂ ಗಾಲ್ಫ್‌ ಕ್ಲಬ್‌ ಸದಸ್ಯತ್ವ ಕೊಟ್ಟಿತ್ತು. ಗಾಲ್ಫ್‌ ಬಗ್ಗೆ ಕಪಿಲ್ ದೇವ್ ಕೂಡ ಆಸಕ್ತಿ ಹೊಂದಿದ್ದಾರೆ. ಹೋದ ವರ್ಷದ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ನಡೆದ ಏಷ್ಯಾ ಪೆಸಿಫಿಕ್ ಸೀನಿಯರ್ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಕಪಿಲ್‌ ಅರ್ಹತೆ ಪಡೆದಿದ್ದರು. ಬೆಂಗಳೂರು ಗಾಲ್ಫ್ ಕ್ಲಬ್‌ನಲ್ಲಿಯೂ ಕಪಿಲ್ ದೇವ್‌ ಆಡಿದ್ದಾರೆ. ಮಾಜಿ ಕ್ರಿಕೆಟಿಗ ಜಿ.ಆರ್‌. ವಿಶ್ವನಾಥ್‌ ಅವರೂ ಗಾಲ್ಫ್‌ ಆಡುತ್ತಾರೆ. ಭಾರತದ ಪರವಾಗಿ ಇತರ ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಭಾಗವಹಿಸಿರುವ ಟೆಸ್ಟ್ ಕ್ರಿಕೆಟ್ ಆಟಗಾರರೆಂದರೆ ಪಟೌಡಿ ಸೀನಿಯರ್, ಎಂ ಜೆ ಗೋಪಾಲನ್ (ಹಾಕಿ) ಮತ್ತು ಸಿ ರಾಮಸ್ವಾಮಿ (ಟೆನಿಸ್). ಗೋಪಾಲನ್ ಅವರು 1936ರಲ್ಲಿ ಬರ್ಲಿನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದರು. ಆ ಸಮಯದಲ್ಲಿ ಅವರು ಕ್ರಿಕೆಟ್ ಅಥವಾ ಹಾಕಿ ಇವುಗಳ ಪೈಕಿ ಒಂದನ್ನು ಆಯ್ಕೆ ಮಾಡಬೇಕಾಗಿ ಬಂದಾಗ ಗೋಪಾಲನ್ ಕ್ರಿಕೆಟ್ ಆರಿಸಿಕೊಂಡು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡರು. ಇಲ್ಲವಾದಲ್ಲಿ ಅವರು ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ಹಾಕಿ ತಂಡದ ಸದಸ್ಯರಾಗಿರುತ್ತಿದ್ದರು. ಎರಡು ಟೆಸ್ಟ್‌ ಮತ್ತು 53 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ರಾಮಸ್ವಾಮಿ 1922ರಲ್ಲಿ ನಡೆದ ಡೇವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಬಾಲಿವುಡ್ ನಟ ಸೈಫ್ ಆಲಿ ಖಾನ್ ಅವರ ತಾತ ಹಾಗೂ ಭಾರತದ ಟೆಸ್ಟ್ ತಂಡದ ನಾಯಕರಾಗಿದ್ದ ಪಟೌಡಿ ಜೂನಿಯರ್‌ ಅವರ ತಂದೆ ಪಟೌಡಿ ಸೀನಿಯರ್ ಬಿಲಿಯರ್ಡ್ಸ್ ಆಟದಲ್ಲಿ ಆಸಕ್ತರಾಗಿದ್ದರು. ಬೆಂಗಳೂರಿನಲ್ಲಿ ಇದೇ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಟೊಯೊಟ ಕರ್ನಾಟಕ ಗಾಲ್ಫ್ ಉತ್ಸವದಲ್ಲಿ ಸೈಯದ್ ಕಿರ್ಮಾನಿ, ಜಿ.ಆರ್‌. ವಿಶ್ವನಾಥ್, ಇ.ಎ.ಎಸ್‌. ಪ್ರಸನ್ನ ಮುಂತಾದ ಮಾಜಿ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಅಷ್ಟೇ ಏಕೆ, ಭಾರತ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ಫುಟ್‌ಬಾಲ್‌ ನೆಚ್ಚಿನ ಆಟ. ಬಾಲ್ಯದ ದಿನಗಳಲ್ಲಿ ಗೋಲ್‌ಕೀಪರ್‌ ಆಗಿ ಅನುಭವ ಹೊಂದಿದ್ದ ದೋನಿ ಈಗ ಸುಲಭವಾಗಿ ವಿಕೆಟ್‌ ಕೀಪರ್‌ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಭಾರತದ ಕ್ರಿಕೆಟಿಗರಷ್ಟೇ ಅಲ್ಲದೇ ಇತರ ದೇಶಗಳ ಆಟಗಾರರೂ ಗಾಲ್ಫ್‌ ಮತ್ತು ಇತರ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್‌ನ ವಿವಿಯನ್ ರಿಚರ್ಡ್ಸ್, ಆಸ್ಟ್ರೇಲಿಯಾದ ಮಾರ್ಕ್ ಮತ್ತು ಸ್ಟೀವ್ ವಾ (ಫುಟ್‌ಬಾಲ್‌), ದಕ್ಷಿಣ ಆಫ್ರಿಕಾದ ಕೆಪ್ಲರ್ ವೆಸೆಲ್ಸ್ (ಟೆನಿಸ್), ಇಂಗ್ಲೆಂಡ್‌ನ ಮೈಕ್ ಸ್ಮಿತ್, ಆಸ್ಟ್ರೇಲಿಯಾದ ಮಾರ್ಕ್‌ ಟೇಲರ್‌ (ರಗ್ಬಿ), ಆಸ್ಟ್ರೇಲಿಯಾದ ಬ್ರಯಾನ್ ಬೂತ್, ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ (ಹಾಕಿ) ಇವರೆಲ್ಲರೂ ಬೇರೆ ಬೇರೆ ಕ್ರೀಡೆಗಳಲ್ಲಿ ಆಡಿದ್ದರು. ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಎ.ಬಿ ಡಿವಿಲಿಯರ್ಸ್‌ ಕೂಡ ಅನೇಕ ಕ್ರೀಡೆಗಳಲ್ಲಿ ಆಡಿದ್ದಾರೆ. ಎಬಿಡಿ ಶಾಲಾ ದಿನಗಳಲ್ಲಿ ಹಾಕಿ, ಫುಟ್‌ಬಾಲ್‌ ಮತ್ತು ರಗ್ಬಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. 19 ವರ್ಷದ ಒಳಗಿನವರ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಕಿರಿಯರ ಅಥ್ಲೆಟಿಕ್ಸ್‌ನ 100 ಮೀ. ಓಟದ ಸ್ಪರ್ಧೆಯಲ್ಲಿಯೂ ಪಾಲ್ಗೊಂಡಿ ದ್ದರು. ಜೊತೆಗೆ ಗಾಲ್ಫ್‌ ಬಗ್ಗೆಯೂ ಅಪರಿಮಿತ ಪ್ರೀತಿ ಹೊಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.