ತೇಜಸ್ವಿನಿಬಾಯಿ ಆತ್ಮವಿಶ್ವಾಸ ವನಿತೆಯರ ಕಬಡ್ಡಿಗೂ ಜನಪ್ರಿಯತೆ ಖಚಿತ ಕರ್ನಾಟಕದ ತೇಜಸ್ವಿನಿಬಾಯಿ ಅವರು ಭಾರತದ ವನಿತೆಯರ ಕಬಡ್ಡಿ ತಂಡದ ನಾಯಕಿಯಾಗಿದ್ದವರು. ಅವರ ನಾಯಕತ್ವದಲ್ಲಿ ಭಾರತ ತಂಡವು 2014ರ ಇಂಚೆನ್‌ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿತ್ತು. ಇದೀಗ ವನಿತೆಯರ ಚಾಲೆಂಜರ್ಸ್ ಕಬಡ್ಡಿ ಟೂರ್ನಿಯಲ್ಲಿ ಆಡುತ್ತಿರುವ ಸ್ಟಾರ್ಮ್ ಕ್ವೀನ್ಸ್‌ ತಂಡದ ನಾಯಕಿಯಾಗಿದ್ದಾರೆ. ಅವರನ್ನು ಗಿರೀಶ ದೊಡ್ಡಮನಿ ಸಂದರ್ಶಿಸಿದ್ದಾರೆ. ‘ವನಿತೆಯರ ಪ್ರೊ ಕಬಡ್ಡಿ ಆರಂಭವಾದರೆ, ಪುರುಷರ ಟೂರ್ನಿಗೆ ಸಿಕ್ಕಷ್ಟೇ ಜನಪ್ರಿಯತೆ ಮತ್ತು ಪ್ರಾಯೋಜಕತ್ವ ಸಿಗುವುದು ಖಚಿತ’– ಭಾರತ ಮಹಿಳಾ ಕಬಡ್ಡಿ ತಂಡದ ನಾಯಕಿ ಮತ್ತು ಚಾಲೆಂಜರ್ಸ್ ಕಬಡ್ಡಿ ಟೂರ್ನಿಯ ಸ್ಟಾರ್ಮ್ ಕ್ವೀನ್ಸ್ ತಂಡದ ನಾಯಕಿ ತೇಜಸ್ವಿನಿ ಬಾಯಿ ಅವರ ವಿಶ್ವಾಸದ ನುಡಿಗಳಿವು. ಸುಮಾರು 15 ವರ್ಷಗಳಿಂದ ಕಬಡ್ಡಿ ಕಣದಲ್ಲಿಸಾಧನೆ ಮಾಡುತ್ತಿರುವ ತೇಜಸ್ವಿನಿ ಅವರು ‘ಪ್ರಜಾವಾಣಿ’ಯೊಂದಿಗೆ ನೀಡಿದ ಸಂದರ್ಶನ ಇಲ್ಲಿದೆ. * ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಕಬಡ್ಡಿ ಆಡಿರುವ ಅಟಗಾರ್ತಿಯಾಗಿರುವ ನಿಮಗೆ ಇಲ್ಲಿಯ ಕಾರ್ಪೋರೆಟ್ ಮಾದರಿಯ ಟೂರ್ನಿ ಬಗ್ಗೆ ಏನು ಅನಿಸುತ್ತಿದೆ? ತುಂಬಾ ಖುಷಿಯಾಗಿದೆ. ಮಹಿಳಾ ಕಬಡ್ಡಿ ಆಟಗಾರರಿಗೆ ಆಡಲು ಒಂದು ಉತ್ತಮ ವೇದಿಕೆ ದೊರೆತಂತಾಗಿದೆ. ಒಳ್ಳೆಯ ಅವಕಾಶ ಮತ್ತು ವಾತಾವರಣ ಇದೆ. * ಪ್ರೊ ಕಬಡ್ಡಿಯ ಮೊದಲ ಋತುವಿನಿಂದಲೂ ಮಹಿಳೆಯರ ವಿಭಾಗದ ಟೂರ್ನಿ ಆರಂಭವಾಗಬೇಕು ಎಂಬ ಒತ್ತಾಯ ಇತ್ತು. ಈ ಬಾರಿ ಕೇವಲ ಮೂರು ತಂಡಗಳಿಂದ ಆರಂಭಿಸಲಾಗಿದೆ. ಆದರೆ ಪೂರ್ಣಪ್ರಮಾಣದಲ್ಲಿ ಆಗದೇ ಇರುವುದಕ್ಕೆ ನಿಮಗೆ ಬೇಸರವಿದೆಯೇ? ಬೇಸರ ಇಲ್ಲ. ಈ ಟೂರ್ನಿಗಾಗಿ ನಾವು ಬಹಳ ದಿನಗಳಿಂದ ಕಾಯುತ್ತಿದ್ದೆವು. ಪುರುಷ ವಿಭಾಗದಲ್ಲಿ ಮೊದಲಿಗೆ ಎಂಟು ತಂಡಗಳಿಂದ ಆರಂಭವಾಗಿತ್ತು. ನಮಗೆ ಈಗ ಮೂರು ತಂಡಗಳ ಚಾಲೆಂಜರ್ಸ್ ಟೂರ್ನಿ ಆರಂಭಿಸಿದ್ದಾರೆ. ಅದಕ್ಕೆ ತಕ್ಕಂತೆ ಈಗ ಟೂರ್ನಿ ನಡೆಯುತ್ತಿದೆ. ಇದು ಯಶಸ್ವಿಯಾದರೆ ಮು ಂದಿನ ವರ್ಷ ಆಟಗಾರರ ಆಯ್ಕೆ, ಎಂಟು ತಂಡಗಳು ಇರುವ ವನಿತಾ ಪ್ರೊ ಕಬಡ್ಡಿ ಆರಂಭವಾಗುತ್ತದೆ. * ಮುಂದಿನ ವರ್ಷ ಪ್ರೊ ಕಬಡ್ಡಿಯಲ್ಲಿ ವನಿತೆಯರ ಟೂರ್ನಿ ಆರಂಭವಾದರೆ ಪುರುಷರ ಕಬಡ್ಡಿಯಷ್ಟೇ ಜನಪ್ರಿಯತೆ ಪಡೆಯಬಹುದೇ? ಜನರು ವನಿತೆಯರ ಕಬಡ್ಡಿಯನ್ನು ಪ್ರೋತ್ಸಾಹಿಸುವ ಭರವಸೆ ಇದೆ. ತುಂಬಾ ಸೆಲೆಬ್ರಿಟಿಗಳು ವನಿತೆಯರ ತಂಡಗಳನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಇದೇ ಟೂರ್ನಿಯ ಮೊದಲ ಪಂದ್ಯ ಮುಂಬೈನಲ್ಲಿ ನಡೆದಿತ್ತು. ಆದರೆ ಅದು ಏಕಪಕ್ಷೀಯ ಫಲಿತಾಂಶ ಬಂದಿತ್ತು. ಪ್ರೇಕ್ಷಕರು ಹೆಚ್ಚು ಉತ್ಸಾಹ ತೋರದೇ ಮೌನವಾಗಿದ್ದರು. ಆದರೆ ಜೂನ್ 30ರಂದು ನಡೆದ ಪಂದ್ಯದಲ್ಲಿ ಜೈಪುರದ ಅಭಿಮಾನಿಗಳು ನಮ್ಮನ್ನು ಬಹಳಷ್ಟು ಪ್ರೋತ್ಸಾಹಿಸಿದರು. ಪೈಪೋಟಿ ಇದ್ದ ಪಂದ್ಯವಾಗಿದ್ದರಿಂದ ಜನರೂ ಕೂಡ ಆಸಕ್ತಿಯಿಂದ ಹುರಿದುಂಬಿಸಿದ್ದರು. ನಾವು ಈ ಪಂದ್ಯದಲ್ಲಿ ಸೋತಿದ್ದೇವೆ. ಆದರೆ, ವನಿತೆಯರ ಕಬಡ್ಡಿಗೂ ಜನಪ್ರಿಯತೆ ಸಿಗುವ ಭರವಸೆ ಮೂಡಿದೆ. * ಇಷ್ಟು ವರ್ಷ ನೀವು ಆಡಿರುವ ಸ್ಪರ್ಧಾತ್ಮಕ ಕಬಡ್ಡಿ ಮತ್ತು ಈ ಟೂರ್ನಿಯ ಸಿದ್ಧತೆಗೆ ಏನು ವ್ಯತ್ಯಾಸ ಇದೆ? ನಾನು 2004ರಿಂದಲೇ ಮ್ಯಾಟ್ ಮೇಲೆ ಆಡುತ್ತಿದ್ದೇನೆ. ಆದ್ದರಿಂದ ಆಟದಲ್ಲಿ ಹೆಚ್ಚು ವ್ಯತ್ಯಾಸ ಕಂಡಿಲ್ಲ. ಆದರೆ, ಇಲ್ಲಿ ಪ್ರೇಕ್ಷಕರ ಹುರಿದುಂಬಿಸುವಿಕೆ, ಟಿವಿ ಕ್ಯಾಮೆರಾ ಮುಂದೆ ಜುಂಬಾ ಡ್ಯಾನ್ಸ್ ಮತ್ತು ಮೇಕಪ್‌ಗಳಿಗೆ ನಾವು ಹೊಸದಾಗಿ ಸಿದ್ಧವಾಗಿದ್ದೇವೆ. ಕೇವಲ ಒಂದು ತಿಂಗಳಲ್ಲಿ ಡ್ಯಾನ್ಸ್ ಮತ್ತಿತರ ಚಟುವಟಿಕೆಗಳಿಗೆ ಈಗ ಹೊಂದಿಕೊಂಡಿದ್ದೇವೆ. * ಜುಂಬಾ ಡ್ಯಾನ್ಸ್‌ ಬಗ್ಗೆ ಹೇಳಿ. ಕಬಡ್ಡಿಯಲ್ಲಿ ಇರುವ ಕೆಲವು ವ್ಯಾಯಾಮಗಳು ಅಡಕವಾಗಿರುವ ಚಲನೆಗಳು ಜುಂಬಾ ಡ್ಯಾನ್ಸ್‌ನಲ್ಲಿ ಇವೆ. ಉತ್ತಮ ನೃತ್ಯ ನಿರ್ದೇಶಕರು ಇರುವುದರಿಂದ ನಾವು ಬೇಗ ಕಲಿಯಲು ಸಾಧ್ಯವಾಯಿತು. ಟಿವಿ ಪ್ರೊಮೊಗೆ ಜುಂಬಾ ಡ್ಯಾನ್ಸ್‌ ಮುಖ್ಯವಾಗಿತ್ತು. ಆರಂಭದಲ್ಲಿ ಮೇಕಪ್ ಮಾಡಿಕೊಂಡು ಇದರಲ್ಲಿ ಭಾಗವಹಿಸುವುದು ಸ್ವಲ್ಪ ಕಷ್ಟವಾಗಿತ್ತು. ಆದರೆ, ಕಳೆದ ಒಂದೇ ತಿಂಗಳಲ್ಲಿ ಹೊಂದಿಕೊಂಡಿದ್ದೇವೆ. * ಪ್ರೊ ಕಬಡ್ಡಿ ಆಡಳಿತದಿಂದ ನಿಮಗೆ ಏನು ನಿರೀಕ್ಷೆ ಇದೆ? ಮುಂದಿನ ಋತುವಿನಲ್ಲಿ ವನಿತೆಯರ ಪ್ರೊ ಕಬಡ್ಡಿ ಆರಂಭಿಸುವ ನಿರೀಕ್ಷೆ ಇದೆ. ಈ ಟೂರ್ನಿ ಆರಂಭವಾಗುವುದರಿಂದ ದೇಶದ ಮಹಿಳಾ ಕಬಡ್ಡಿಪಟುಗಳಿಗೆ ವೇದಿಕೆ ಸಿಗಲಿದೆ. * ಈ ಮಾದರಿಯಿಂದ ದೇಶದ ವನಿತೆಯರ ಕಬಡ್ಡಿ ಬೆಳವಣಿಗೆಗೆ ಏನು ಲಾಭವಾಗುತ್ತದೆ? ಆಟದ ತರಬೇತಿಯಲ್ಲಿಯೂ ನೂತನ ತಂತ್ರಜ್ಞಾನದ ಬಳಕೆ, ವೈಜ್ಞಾನಿಕ ರೀತಿಯಲ್ಲಿ ಪೌಷ್ಟಿಕಾಂಶ ಸೇವನೆಯ ಕುರಿತ ತರಬೇತಿ ಬಹಳಷ್ಟು ನೆರವಾಗುತ್ತಿದೆ. ಉದಯೋನ್ಮುಖ ಆಟಗಾರ್ತಿಯರಿಗೆ ಬೆಳೆಯಲು ಮತ್ತು ಜನಪ್ರಿಯರಾಗಲು ಇದೊಂದು ಉತ್ತಮ ವೇದಿಕೆಯಾಗಿದೆ. * ಮುಂದಿನ ಪಂದ್ಯದಲ್ಲಿ ನಿಮ್ಮ ಸ್ನೇಹಿತೆ ಮಮತಾ ಪೂಜಾರಿ ಅವರ ಬಳಗವನ್ನು ಎದುರಿಸಲು ಏನು ಸಿದ್ದತೆ ಮಾಡಿಕೊಂಡಿದ್ದೀರಿ? ಒಂದೇ ತಂಡದಲ್ಲಿ ಸಹ ಆಟಗಾರ್ತಿಯರಾಗಿ ಆಡಿದ್ದೇವೆ. ಆಟದಂಕಣದ ಹೊರಗೆ ಒಳ್ಳೆಯ ಸ್ನೇಹಿತೆಯರೂ ಹೌದು. ಆದರೆ, ಎದುರಾಳಿಗಳಾಗಿ ಇಳಿದಾಗ ಕಠಿಣ ಸ್ಪರ್ಧೆಯೊಡ್ಡುವುದು ಖಚಿತ. ನಮ್ಮ ತಂಡಗಳಲ್ಲಿರುವ ಕಿರಿಯ ಆಟಗಾರ್ತಿಯರೊಂದಿಗೆ ನಮ್ಮ ಅನುಭವ ಹಂಚಿಕೊಳ್ಳುತ್ತೇವೆ. * ಒಂದೇ ವರ್ಷದಲ್ಲಿ ಎರಡು ಬಾರಿ ಪ್ರೊ ಕಬಡ್ಡಿ ಟೂರ್ನಿ ನಡೆಸುತ್ತಿರುವುದಕ್ಕೆ ಕೆಲವರು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ನಿಮ್ಮ ಅಭಿಪ್ರಾಯವೇನು? ಭಿನ್ನಾಭಿಪ್ರಾಯಗಳ ಬಗ್ಗೆ ನನಗೆ ಗೊತ್ತಿಲ್ಲ. ಜನಪ್ರಿಯತೆ ಲಭಿಸಿದ್ದರಿಂದ ಎರಡು ವರ್ಷದಲ್ಲಿ ನಾಲ್ಕು ಟೂರ್ನಿಗಳು ನಡೆದಿವೆ. ಆದರೆ ಒಬ್ಬ ಆಟಗಾರ್ತಿಯಾಗಿ ಹೇಳುವುದಾದರೆ, ಆಟಗಾರರಿಗೆ ವಿಶ್ರಾಂತಿ ಅವಶ್ಯಕ. ಅದಕ್ಕಾಗಿ ಸ್ವಲ್ಪ ಸಮಯಾವಕಾಶವೂ ಬೇಕು. * ಕಬಡ್ಡಿ ಆಡಲು ಆಸಕ್ತಿ ಇರುವ ಮಕ್ಕಳಿಗೆ ನಿಮ್ಮ ಸಲಹೆ ಕಬಡ್ಡಿ ಕ್ರೀಡೆಯಲ್ಲಿ ಉತ್ತಮ ಭವಿಷ್ಯ ಇದೆ. ಆಧುನಿಕ ಸೌಲಭ್ಯಗಳು, ಪ್ರೊ ಕಬಡ್ಡಿ ಮತ್ತಿತರ ಟೂರ್ನಿಗಳು ಇವೆ. ಸಾಕಷ್ಟು ಸ್ಪರ್ಧೆ ಇರುವುದರಿಂದ ಅದಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಅವಶ್ಯಕ. ಫಿಟ್‌ನೆಸ್್ ಬಗ್ಗೆ ಹೆಚ್ಚು ಗಮನ ಕೊಡಿ, ಸತತ ಪರಿಶ್ರಮದಿಂದ ಆಟವನ್ನು ರೂಢಿಸಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.