ಕೊರತೆಗಳ ನಡುವೆಯೇ ಆರ್ಚರಿ ಶಾಲೆ ಆರಂಭ ಚಾಮರಾಜನಗರ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆ ವಿರಳ. ಸುಸಜ್ಜಿತ ಕ್ರೀಡಾಂಗಣ, ಕ್ರೀಡಾ ವಸತಿ ನಿಲಯವೂ ಇಲ್ಲ. ಇದರಿಂದ ಇಲ್ಲಿನ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಮರೀಚಿಕೆಯಾಗಿದೆ. ಕ್ರೀಡಾ ಉದ್ದೇಶಕ್ಕೆ ನಿರ್ಮಿಸುವ ಕಟ್ಟಡಗಳು ಮತ್ತು ಹಾಸ್ಟೆಲ್‌ಗಳ ಉದ್ಘಾಟನೆ ವಿಳಂಬವಾಗುತ್ತಿದೆ. ಈ ಸಾಲಿಗೆ ರಾಜ್ಯದ ಏಕೈಕ ಆರ್ಚರಿ ಕ್ರೀಡಾ ವಸತಿ ಶಾಲೆಯೂ ಸೇರಿದೆ. ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯಲ್ಲಿ 2013ರ ಫೆಬ್ರುವರಿ 9ರಂದು ಆರ್ಚರಿ ಕ್ರೀಡಾ ಶಾಲೆಗೆ ಶಂಕುಸ್ಥಾಪನೆ ನೆರವೇರಿತು. ಕಟ್ಟಡದ ಕಾಮಗಾರಿ ಪೂರ್ಣಗೊಂಡು 3 ವರ್ಷ ಉರುಳಿವೆ. ಗಿರಿಜನ ಉಪ ಯೋಜನೆಯಡಿ ಈ ಶಾಲೆ ನಿರ್ಮಾಣಗೊಂಡಿದೆ. ಹಾಗಾಗಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರವೇ ಇಲ್ಲಿ ಪ್ರವೇಶಾವಕಾಶ. ಈ ಕ್ರೀಡಾ ಶಾಲೆಯ ಸುತ್ತಲೂ 5.3 ಎಕರೆ ಜಾಗವಿದೆ. ರಾಷ್ಟ್ರೀಯ ಹೆದ್ದಾರಿ 209ಕ್ಕೆ ಹೊಂದಿಕೊಂಡಂತೆ ಶಾಲೆಯನ್ನು ನಿರ್ಮಿಸಲಾಗಿದೆ. ಆರಂಭದಲ್ಲಿ ಕಟ್ಟಡ ನಿರ್ಮಾಣಕ್ಕೆ ₹ 2.48 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಬಳಿಕ ಹೆಚ್ಚುವರಿಯಾಗಿ ₹ 1 ಕೋಟಿ ಅನುದಾನವೂ ಮಂಜೂರಾಗಿತ್ತು. ಒಟ್ಟು ₹ 3.48 ಕೋಟಿ ವೆಚ್ಚದಡಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡದಲ್ಲಿ ಒಟ್ಟು 8 ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗಿದೆ. ಶಾಲೆಯು ವಿಶಾಲ ಅಂಗಳ ಹೊಂದಿದೆ. ಊರಿನ ಹೊರಭಾಗದಲ್ಲಿ ಈ ಕಟ್ಟಡವಿದೆ. ಇಲ್ಲಿನ ಪ್ರಶಾಂತ ವಾತಾವರಣ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಪೂರಕವಾಗಿದೆ.ಹಿಂದಿನ ಶೈಕ್ಷಣಿಕ ಸಾಲಿನಡಿಯೇ ಈ ಶಾಲೆಗೆ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆದರೆ, ಆ ವರ್ಷ ಶಾಲೆ ಮಾತ್ರ ಕಾರ್ಯಾರಂಭ ಮಾಡಲಿಲ್ಲ. ಮೂಲ ಸೌಲಭ್ಯದ ಕೊರತೆಯ ನಡುವೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಶಾಲೆ ಆರಂಭಗೊಂಡಿದೆ. 40 ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶಾತಿಗೆ ಅನುಮತಿ ಸಿಕ್ಕಿದೆ. ಈ ವರ್ಷ 26 ಮಕ್ಕಳಿಗೆ ಪ್ರವೇಶಾತಿ ಕಲ್ಪಿಸಲಾಗಿದ್ದು, ಸದ್ಯಕ್ಕೆ 20 ಮಕ್ಕಳು ದಾಖಲಾಗಿದ್ದಾರೆ.ಚಾಮರಾಜನಗರ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಈ ಶಾಲೆಯ ಪ್ರವೇಶಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇವರಲ್ಲಿ ಮೂವರು ವಿದ್ಯಾರ್ಥಿಗಳು ಮಾತ್ರ ಶಾಲೆಗೆ ದಾಖಲಾಗಿದ್ದಾರೆ. ಶಾಲೆಗೆ ಇನ್ನೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಲ್ಲ. ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಬಾರದೆಂಬ ಉದ್ದೇಶದಿಂದ ಶಾಲೆ ಆರಂಭಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭಾಗದಲ್ಲಿ ಇನ್ನೂ ಕಾಂಪೌಂಡ್‌ ನಿರ್ಮಿಸಿಲ್ಲ. ವಿದ್ಯಾರ್ಥಿಗಳಿಗೆ ಹಾಸಿಗೆಗಳು, ಡೈನಿಂಗ್‌ ಟೇಬಲ್‌ ಸರಬರಾಜಾಗಿಲ್ಲ. ಬಿಸಿ ನೀರಿನ ಸ್ನಾನಕ್ಕೆ ವ್ಯವಸ್ಥೆಯೂ ಇಲ್ಲ. ‘ಆರ್ಚರಿ ಶಾಲೆಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭಾಗದಲ್ಲಿ ಕಾಂಪೌಂಡ್‌ ನಿರ್ಮಾಣಕ್ಕೆ ₹ 21 ಲಕ್ಷ ಮೊತ್ತದ ಅನುದಾನ ಕೋರಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಲಭಿಸಿದ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಚಲುವಯ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.