ಒಲಿಂಪಿಕ್ಸ್‌ ಪದಕ ಗಗನ ಕುಸುಮ... ಈ ಬಾರಿಯಾದರೂ ಈಜುಪಟುಗಳು ಪದಕ ಗೆಲ್ಲುವರೇ? ಪ್ರತಿ ಸಲವೂ ಒಲಿಂಪಿಕ್ಸ್‌ ಕ್ರೀಡಾಕೂಟ ಶುರುವಾದಾಗ ಭಾರತದ ಈಜು ಪ್ರಿಯರಲ್ಲಿ ಈ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಒಲಿಂಪಿಕ್ಸ್‌ನಲ್ಲಿ ನಮ್ಮ ಈಜುಪಟುಗಳಿಗೆ ಪದಕ ಕೈಗೆಟುಕದಾ ಗಿದೆ. ಬ್ರೆಜಿಲ್‌ನ ರಿಯೊ ಡಿ ಜನೈರೊ ದಲ್ಲಾದರೂ ಈ ಕನಸು ಸಾಕಾರಗೊಳ್ಳ ಬಹುದೆ ಎಂಬ ನಿರೀಕ್ಷೆ ಇಟ್ಟುಕೊಂಡರೆ ಮತ್ತೆ ನಿರಾಸೆ ಕಾಡಬಹುದೇನೊ. ಏಕೆಂದರೆ ರಿಯೊ ಒಲಿಂಪಿಕ್ಸ್‌ ಆರಂಭಕ್ಕೆ ಉಳಿದಿರುವುದು ಕೆಲವೇ ವಾರ ಗಳು ಮಾತ್ರ. ಆದರೆ ನಮ್ಮವರು ಯಾರೂ ಇನ್ನೂ ರಿಯೊಗೆ ರಹದಾರಿ ಪಡೆದಿಲ್ಲ. ಸಂದೀಪ್‌ ಸೆಜ್ವಾಲ್‌, ವೀರಧವಳ್‌ ಖಾಡೆ, ಸಾಜನ್‌ ಪ್ರಕಾಶ್‌ ಮತ್ತು ಸುಪ್ರಿಯೊ ಮಂಡಲ್‌ ಅವರು ‘ಬಿ’ ಅರ್ಹತೆಯ ಹಾದಿಯಲ್ಲಿದ್ದಾರಾದರೂ ಅದು ಇನ್ನೂ ಖಚಿತವಾಗಿಲ್ಲ. ಅದಕ್ಕಾಗಿ ಜುಲೈ 4ರವರೆಗೆ ಕಾಯಬೇಕು. ಹಕಿಮುದ್ದೀನ್‌ ಹಬಿಬುಲ್ಲಾ, ನಿಶಾ ಮಿಲ್ಲೆಟ್‌, ವೀರಧವಳ್‌ ಖಾಡೆ, ಸಂಷೇರ್‌ಖಾನ್‌, ರೆಹಾನ್‌ ಪೊಂಚ, ಅಂಕುರ್‌ ಪೊಸೆರಿಯಾ, ಸಂದೀಪ್‌ ಸೆಜ್ವಾಲ್‌, ಶಿಖಾ ಟಂಡನ್‌, ಎ.ಪಿ.ಗಗನ್‌ ಉಲ್ಲಾಳಮಠ ಮತ್ತು ಸೆಬಾಸ್ಟಿಯನ್‌ ಕ್ಸೇವಿಯರ್‌ ಅವರು ಈಜು ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಭಾರತದ ಘಟಾನುಘಟಿ ಗಳೆನಿಸಿರುವ ಇವರಿಗೆ ಒಲಿಂಪಿಕ್ಸ್‌ ಪದಕ ಗಗನ ಕುಸುಮವಾಗಿದೆ. ಏಷ್ಯನ್‌ ಕ್ರೀಡಾಕೂಟದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. 1986ರ ಸಿಯೊಲ್‌ ಕ್ರೀಡಾಕೂಟದಲ್ಲಿ ಕಾಜನ್‌ ಸಿಂಗ್‌ ಬೆಳ್ಳಿ ಗೆದ್ದಿದ್ದರು. ಅವರ ನಂತರ ಈ ಕೂಟದಲ್ಲಿ ಭಾರತಕ್ಕೆ ಪದಕದ ಖಾತೆ ತೆರೆಯಲು ಸುಮಾರು 25 ವರ್ಷಗಳೇ ಬೇಕಾಯಿತು. ಅಂತರರಾಷ್ಟ್ರೀಯ ಕೂಟಗಳಲ್ಲಿ ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್‌, ಚೀನಾ, ಜಪಾನ್‌ ಮತ್ತು ಕೊರಿಯಾ ರಾಷ್ಟ್ರಗಳ ಸ್ಪರ್ಧಿಗಳಿಗೆ ಸರಿಸಾಟಿಯಾಗಿ ನಿಲ್ಲಲು ಭಾರತದ ಈಜುಪಟುಗಳಿಗೆ ಸಾಧ್ಯವಾಗುತ್ತಿಲ್ಲ. ಇದರ ಹಿಂದಿನ ಕಾರಣ ಏನು? ಭಾರತದಲ್ಲಿ ಈಜು ಕ್ರೀಡೆಗೆ ಅಗತ್ಯ ವಿರುವ ಮೂಲಭೂತ ಸೌಕರ್ಯಗಳಿಲ್ಲ. ಜತೆಗೆ ಸರ್ಕಾರಗಳಿಂದಲೂ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್‌, ರಷ್ಯಾದಲ್ಲಿ ಅತ್ಯುನ್ನತ ಗುಣಮಟ್ಟದ ಮೂಲಭೂತ ಸೌಕರ್ಯಗಳಿವೆ. ತಾಂತ್ರಿಕ ವಾಗಿಯೂ ಈ ರಾಷ್ಟ್ರಗಳು ಮುಂದಿವೆ. ಅಲ್ಲಿ ಪ್ರತಿಯೊಂದು ರಾಜ್ಯದಲ್ಲಿಯೂ ಕನಿಷ್ಠ 50ರಿಂದ 80 ಸಾವಿರ ಮಂದಿ ಈಜು ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸುತ್ತಾರೆ. ಹೀಗಾಗಿಯೇ ಆ ದೇಶಗಳು ಈ ಕ್ರೀಡೆಯಲ್ಲಿ ಪ್ರಭುತ್ವ ಸಾಧಿಸುತ್ತಿವೆ. ‘ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಏನೇನೂ ಅಲ್ಲ. ನಮ್ಮಲ್ಲಿ ಈಜು ಕ್ರೀಡೆಗೆ ಬೇಕಾದ ಕನಿಷ್ಠ ಸೌಲಭ್ಯಗಳೂ ಇಲ್ಲ. ಪರಿಸ್ಥಿತಿ ಹೀಗಿರುವಾಗ ಒಲಿಂಪಿಕ್ಸ್‌ ಪದಕದ ಕನಸು ಕಾಣುವುದಾದರೂ ಹೇಗೆ’ ಎಂದು ಕರ್ನಾಟಕ ಈಜು ತಂಡದ ಕೋಚ್‌ ಮಧು ಕುಮಾರ್‌ ಪ್ರಶ್ನಿಸುತ್ತಾರೆ. ‘ನಮ್ಮ ದೇಶದಲ್ಲಿ ಈಜು ಕೇಂದ್ರಗಳಿಗೇನೂ ಕೊರತೆ ಇಲ್ಲ. ಆದರೆ ಅವೆಲ್ಲಾ ಖಾಸಗಿಯವು. ಆರ್ಥಿಕವಾಗಿ ಸಬಲರಾಗಿರುವ ಮಕ್ಕಳು ಮಾತ್ರ ಈ ಕೇಂದ್ರಗಳಿಗೆ ದಾಖಲಾಗುತ್ತಾರೆ. ಕೆಲವರು ಬೇಸಿಗೆ ಶಿಬಿರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಹೆಕ್ಕಿ ತೆಗೆಯಲು ಕೋಚ್‌ಗಳಿಗೆ ಸಾಧ್ಯವಾಗುತ್ತಿಲ್ಲ’ ಎಂದೂ ಅವರು ಅಭಿಪ್ರಾಯ ಪಡುತ್ತಾರೆ. ‘ಎಳವೆಯಿಂದಲೇ ಮಕ್ಕಳಲ್ಲಿ ಈಜು ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವ ಪರಿಪಾಠ ಬೆಳೆಯಬೇಕು. ಹೀಗಾದಲ್ಲಿ ಮಾತ್ರ ಈ ಕ್ರೀಡೆ ಅಭಿವೃದ್ಧಿ ಹೊಂದಲು ಸಾಧ್ಯ. ಇದಕ್ಕೆ ಮುಖ್ಯವಾಗಿ ಸರ್ಕಾರದ ನೆರವು ಬೇಕು’ ಎಂದು ಅವರು ಹೇಳುತ್ತಾರೆ. ‘ನಮ್ಮಲ್ಲಿ ಪ್ರತಿಭಾನ್ವಿತರಿಗೇನೂ ಕೊರತೆ ಇಲ್ಲ. ಆದರೆ ಬಹುತೇಕರು ಮಾಸಿಕ ಶುಲ್ಕ ಕಟ್ಟಿ ಖಾಸಗಿ ಈಜು ಕೇಂದ್ರಗಳಲ್ಲಿ ಕಲಿಯುವಷ್ಟು ಶಕ್ತರಾಗಿಲ್ಲ. ಸರ್ಕಾರ ಆಯಾ ತಾಲೂಕು ಕೇಂದ್ರಗಳಲ್ಲಿ ಈಜು ಕೇಂದ್ರಗಳನ್ನು ಸ್ಥಾಪಿಸಿ ಉಚಿತ ಪ್ರವೇಶ ನೀಡಬೇಕು. ಈ ಮೂಲಕ ಈಜು ಕ್ರೀಡೆಯತ್ತ ಯುವ ಸಮುದಾಯವನ್ನು ಸೆಳೆಯುವ ಕೆಲಸಕ್ಕೆ ಕೈ ಹಾಕಬೇಕು’ ಎಂದಿದ್ದಾರೆ. ವೃತ್ತಿಪರವಾಗಿ ಸ್ವೀಕರಿಸುವವರು ವಿರಳ ಭಾರತದಲ್ಲಿ ಈಜು ತರಬೇತಿಗಾಗಿ ಈಜುಕೇಂದ್ರಗಳಿಗೆ ದಾಖಲಾಗುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಆದರೆ ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕ ರಿಸಿ ಇದರಲ್ಲೇ ಎತ್ತರದ ಸಾಧನೆ ಮಾಡುವ ಪಣ ತೊಟ್ಟವರು ಬೆರಳೆಣಿಕೆ ಮಂದಿ ಮಾತ್ರ. ಕೆಲ ಮಕ್ಕಳು ಬೇಸಿಗೆ ಶಿಬಿರಕ್ಕೆ ಮಾತ್ರ ಸೀಮಿತವಾದರೆ, ಇನ್ನು ಕೆಲವರು ಫಿಟ್ನೆಸ್‌ ಗಮನದಲ್ಲಿಟ್ಟುಕೊಂಡು ತರಬೇತಿ ಪಡೆಯುತ್ತಾರೆ. ರಾಜ್ಯ ಮತ್ತು ರಾಷ್ಟ್ರೀಯ ಟೂರ್ನಿಗಳಲ್ಲಿ ಪದಕದ ಸಾಧನೆ ಮಾಡಿದ ಅನೇಕರೂ ಈ ಕ್ರೀಡೆಯಲ್ಲಿ ಭವಿಷ್ಯವಿಲ್ಲ ಎಂಬ ಕಾರಣ ನೀಡಿ ಅರ್ಧದಲ್ಲಿಯೇ ತಮ್ಮ ಕ್ರೀಡಾ ಬದುಕಿಗೆ ತೀಲಾಂಜಲಿ ಇಟ್ಟ ಉದಾಹರಣೆಗಳೂ ಸಾಕಷ್ಟಿವೆ. ಅಭಿವೃದ್ಧಿಯ ಪಥದಲ್ಲಿ ಆರಂಭದ ದಿನಗಳಿಗೆ ಹೋಲಿಸಿದರೆ ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಭಾರತ ಕ್ರೀಡಾ ಪ್ರಾಧಿಕಾರ ಈಜು ಕೇಂದ್ರಗಳನ್ನು ತೆರೆದು ಅಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣದ ಜತೆಗೆ ತರಬೇತಿ ನೀಡುವ ಕಾರ್ಯಕ್ಕೆ ಮುಂದಾಗಿದೆ. ಹೀಗಾಗಿ ರಾಷ್ಟ್ರೀಯ ಸಬ್‌ ಜೂನಿಯರ್‌, ಜೂನಿಯರ್‌, ಸೀನಿಯರ್‌ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಯೂ ಗಣನೀಯವಾಗಿ ಏರಿದೆ. ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಈಜು ಪಟುವಾಗಿ ರೂಪಿಸಲು ಮನಸ್ಸು ಮಾಡಿರುವುದು ಮಹತ್ವದ ಬೆಳವಣಿಗೆ. ‘ಈಗೀಗ ಪಾಲಕರು ತಮ್ಮ ಮಕ್ಕಳಿಗೆ ಈಜು ತರಬೇತಿ ಕೊಡಿಸಲು ಮುಂದೆ ಬರುತ್ತಿದ್ದಾರೆ. ಹೀಗಾಗಿಯೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಚಾಂಪಿಯನ್‌ ಷಿಪ್‌ಗಳಲ್ಲಿ ಭಾಗವಹಿಸುವ ಸ್ಪರ್ಧಿಗಳ ಸಂಖ್ಯೆ ಹೆಚ್ಚುತ್ತಿದೆ . ಹಿಂದೆಲ್ಲಾ ಒಂದು ದಾಖಲೆ ಪತನವಾಗಲು ಹಲವು ವರ್ಷಗಳೇ ಬೇಕಿತ್ತು. ಆದರೆ ಈಗ ಹಾಗಲ್ಲ. ಈ ವರ್ಷ ಒಬ್ಬರು ದಾಖಲೆ ಬರೆದರೆ, ಮರು ವರ್ಷವೇ ಮತ್ತೊಬ್ಬ ಸ್ಪರ್ಧಿ ಅದನ್ನು ಮೀರಿ ನಿಲ್ಲುತ್ತಾನೆ’ ಎಂದೂ ಮಧುಕುಮಾರ್ ಹೇಳುತ್ತಾರೆ. ಈ ಬಾರಿ ಯಾರ್‍ಯಾರಿಗೆ ಅವಕಾಶ 100 ಮತ್ತು 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಸಂದೀಪ್‌ ಸೆಜ್ವಾಲ್‌, 200 ಮೀಟರ್ಸ್‌ ಬಟರ್‌ಫ್ಲೈ ಮತ್ತು 400 ಹಾಗೂ 1500 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಸಾಜನ್‌ ಪ್ರಕಾಶ್‌ , 50 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ವೀರಧವಳ್‌ ಖಾಡೆ ಹಾಗೂ 200 ಮೀಟರ್ಸ್‌ ಬಟರ್‌ಫ್ಲೈ ವಿಭಾಗದಲ್ಲಿ ಸುಪ್ರಿಯೊ ಮಂಡಲ್‌ ಅವರ ಒಲಿಂಪಿಕ್ಸ್‌ ಅರ್ಹತೆಯ ಕನಸು ಇನ್ನೂ ಜೀವಂತವಾಗಿದೆ. ಇವರೆಲ್ಲಾ ಜುಲೈ ಮೊದಲ ವಾರ ಹಾಂಕಾಂಗ್‌ನಲ್ಲಿ ನಿಗದಿಯಾಗಿದ್ದ ಹಾಂಕಾಂಗ್‌ ಆಹ್ವಾನಿತ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು. ಒಂದು ವೇಳೆ ಈ ಚಾಂಪಿಯನ್‌ಷಿಪ್‌ನಲ್ಲಿ ‘ಎ’ ಅರ್ಹತೆ ಗಳಿಸಲು ಆಗ ದಿದ್ದರೆ ‘ಬಿ’ ಅರ್ಹತೆಗಾಗಿ ಕಾಯಬೇಕಾಗುತ್ತದೆ. ಈ ಈಜುಪಟುಗಳು ಹೊಂದಿ ರುವ ಪಾಯಿಂಟ್ಸ್‌ ಸೇರಿದಂತೆ ಇತರ ಮಾನದಂಡಗಳ ಆಧಾರದಲ್ಲಿ ಈ ಅರ್ಹತೆ ಸಿಗಲಿದೆ. ಜುಲೈ 4ರಂದು ಫಿನಾ ಈ ಸಂಬಂಧ ಅಂತಿಮ ಪಟ್ಟಿ ಬಿಡುಗಡೆ ಮಾಡಲಿದೆ. ಕೋಚ್‌ಗಳ ಕೊರತೆ ಕ್ರೀಡಾಪಟುವಿನ ವೃತ್ತಿ ಬದುಕನ್ನು ರೂಪಿಸುವಲ್ಲಿ ಕೋಚ್‌ ಪಾತ್ರ ಬಹಳ ಮುಖ್ಯ. ಅಂತಹ ನುರಿತ ತರಬೇತುದಾರರ ಕೊರತೆ ನಮ್ಮಲ್ಲಿದೆ. ಭಾರತದಲ್ಲಿ ಈಜು ಕ್ರೀಡೆಯ ಅಭಿವೃದ್ಧಿಗೆ ಇದು ಕೂಡಾ ಹಿನ್ನಡೆಯಾಗಿ ಪರಿಣಮಿಸಿದೆ. ‘ಕೋಚ್‌ಗಳಿಗೆ ಸರ್ಕಾರದಿಂದ ಸರಿಯಾದ ಪ್ರೋತ್ಸಾಹ ಮತ್ತು ಬೆಂಬಲ ಸಿಗುತ್ತಿಲ್ಲ. ಹೀಗಾಗಿ ಯಾರೂ ಈ ವೃತ್ತಿಯಲ್ಲಿ ಮುಂದುವರಿಯಲು ಇಷ್ಟ ಪಡುತ್ತಿಲ್ಲ’ ಎಂದು ಭಾರತ ತಂಡದ ಕೋಚ್‌ ಪ್ರದೀಪ್‌ ಕುಮಾರ್‌ ಅಭಿಪ್ರಾಯಪಡುತ್ತಾರೆ. ‘ಒಲಿಂಪಿಕ್ಸ್‌ನಲ್ಲಿ ವಿವಿಧ ರಾಷ್ಟ್ರಗಳ 900ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಾರೆ. ಅಲ್ಲಿ ಪ್ರತಿ ಹಂತದಲ್ಲಿಯೂ ಸ್ಪರ್ಧೆ ಕಠಿಣವಾಗಿರುತ್ತದೆ. ಅಮೆರಿಕ, ಆಸ್ಟ್ರೇಲಿಯಾದ ಸ್ಪರ್ಧಿಗಳಂತೂ ಮಿಂಚಿನ ವೇಗದಲ್ಲಿ ಸಾಗಿ ಕ್ಷಣಾರ್ಧದಲ್ಲಿ ಗುರಿ ಮುಟ್ಟುತ್ತಾರೆ. ಅವರ ಸವಾಲನ್ನು ಮೀರಿ ನಿಂತು ಪದಕ ಗೆಲ್ಲುವುದು ಭಾರತದ ಈಜುಪಟುಗಳ ಪಾಲಿಗೆ ಸುಲಭವಂತೂ ಅಲ್ಲ’ ಎಂದೂ ಪ್ರದೀಪ್‌ ಹೇಳುತ್ತಾರೆ. ‘ಅಮೆರಿಕ ಮತ್ತು ಆಸ್ಟ್ರೇಲಿಯಾದ ಫೆಡರೇಷನ್‌ಗಳು ಒಂದು ತಿಂಗಳು ಮುಂಚಿತವಾಗಿಯೇ ವಿಶಿಷ್ಠ ತರಬೇತಿ ಶಿಬಿರಗಳನ್ನು ಆಯೋಜಿಸುತ್ತವೆ. ಜತೆಗೆ ಆ ರಾಷ್ಟ್ರಗಳ ಸ್ಪರ್ಧಿಗಳು ಒಲಿಂಪಿಕ್ಸ್‌ ನಡೆಯುವ ದೇಶಕ್ಕೆ ಮುಂಚಿತವಾಗಿಯೇ ತೆರಳಿ ಸತತ ಅಭ್ಯಾಸ ನಡೆಸುತ್ತಾರೆ. ಆದರೆ ನಮ್ಮ ಸ್ಪರ್ಧಿಗಳು ಅರ್ಹತೆ ಗಳಿಸುತ್ತಾರೊ, ಇಲ್ಲವೊ ಎಂಬುದು ತಿಳಿಯುವುದೇ ಕೊನೆ ಕ್ಷಣದಲ್ಲಿ. ಅದಾಗಲೇ ಸಮಯ ಮೀರಿರುತ್ತದೆ. ಹೀಗಾಗಿಯೇ ಸರಿಯಾದ ಸಿದ್ಧತೆ ಮಾಡಿಕೊಂಡು ಕಣಕ್ಕಿಳಿಯಲು ಆಗುವುದಿಲ್ಲ. ಹಾಗಂತ ನಾನು ಈಜುಪಟುಗಳನ್ನು ದೂರುತ್ತಿಲ್ಲ’ ಎಂದು ಪ್ರದೀಪ್‌ ಬೇಸರ ವ್ಯಕ್ತಪಡಿಸುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.