ಕುಂಬ್ಳೆ ಮುಂದೆ ವಿಂಡೀಸ್‌ ‘ಟೆಸ್ಟ್‌’... ಮುಂದಿನ ವಾರ ಭಾರತ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ನಡುವೆ ನಾಲ್ಕು ಪಂದ್ಯಗಳ ಕ್ರಿಕೆಟ್‌ ಸರಣಿ ಆರಂಭವಾಗಲಿದೆ. ವಿಂಡೀಸ್‌ ವಿರುದ್ಧದ ಸರಣಿ ನಾಯಕ ವಿರಾಟ್‌ ಕೊಹ್ಲಿ, ಕೋಚ್‌ ಅನಿಲ್‌ ಕುಂಬ್ಳೆ ಅವರಿಗೆ ಹೊಸ ಸವಾಲು. ಈ ‘ಟೆಸ್ಟ್‌’ನಲ್ಲಿ ಇವರಿಬ್ಬರೂ ಪಾಸಾಗುವುರೇ? ಇದರ ಬಗ್ಗೆ ಪ್ರಮೋದ ಜಿ.ಕೆ. ವಿಶ್ಲೇಷಿಸಿದ್ದಾರೆ. ಒಂದು ವಾರದಿಂದ ಭಾರತದ ಕ್ರಿಕೆಟ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿ ನೋಡಿ. ಮುಖ್ಯ ಕೋಚ್‌ ಆಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಸಲಹಾ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಸೌರವ್‌ ಗಂಗೂಲಿ ಮತ್ತು ಭಾರತ ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ನಡುವೆ ಜಟಾಪಟಿ ನಡೆಯುತ್ತಿದೆ. ಕೋಚ್‌ ಹುದ್ದೆಗೆ ಕುಂಬ್ಳೆ ಸರಿಯಾದ ವ್ಯಕ್ತಿ ಎಂದು ಈಗಾಗಲೇ ಸಲಹಾ ಸಮಿತಿ ನಿರ್ಧರಿಸಿದೆ. ಆದರೆ ಶಾಸ್ತ್ರಿ ‘ನಾನೇ ಕೋಚ್‌ ಆಗಬೇಕಿತ್ತು’ ಎಂದು ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲವಾದರೂ ಅವರು ಕೋಚ್‌ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು ಎನ್ನುವುದಂತೂ ಸುಳ್ಳಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಟೀಕೆ, ಪ್ರತಿಟೀಕೆಗಳು ನಡೆಯುತ್ತಿವೆ. ಆದ್ದರಿಂದ ಸಾಮಾಜಿಕ ತಾಣಗಳಲ್ಲಿ ಕ್ರಿಕೆಟ್‌ ಪ್ರೇಮಿಗಳು ‘ತಂಡದ ಪ್ರದರ್ಶನಕ್ಕಿಂತ ಕೋಚ್‌ ಆಯ್ಕೆ ವಿಷಯವೇ ಮುಖ್ಯವಾಯಿತೇ’ ಎಂದು ಕುಟುಕಿದ್ದಾರೆ. ಆದರೆ ಒಂದು ವಾರದ ಹಿಂದೆಯಷ್ಟೇ ಭಾರತ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಂಡಿರುವ ಕನ್ನಡಿಗ ಅನಿಲ್‌ ಕುಂಬ್ಳೆ ಅವರು ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ಕೋಚ್ ಆಗಿ ಆಯ್ಕೆಯಾದ ಮೊದಲ ದಿನದಿಂದಲೂ ಅವರು ‘ಕೋಚ್‌ ಯಾರು ಎಂಬುದು ಮುಖ್ಯವಲ್ಲ. ಭಾರತ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವುದಷ್ಟೇ ಎಲ್ಲರ ಗುರಿಯಾಗಬೇಕು. ನಾನೇನು ಇಲ್ಲಿ ಕಾಯಂ ಆಗಿ ಇರುವುದಿಲ್ಲ. ನನಗಿರುವುದು 12 ತಿಂಗಳುಗಳಷ್ಟೇ’ ಎಂದು ಹೇಳಿ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಇದು ಲೆಗ್‌ ಸ್ಪಿನ್ನರ್‌ ಕುಂಬ್ಳೆ ಅವರ ಕರ್ತವ್ಯ ಪ್ರಜ್ಞೆಗೆ ಸಾಕ್ಷಿ. ಐಪಿಎಲ್‌. ಚಾಂಪಿಯನ್ಸ್‌ ಮತ್ತು ಸತತ ಟ್ವೆಂಟಿ–20 ಮಾದರಿಯ ಪಂದ್ಯಗಳು ನಡೆಯುತ್ತಿರುವ ಈ ಕಾಲದಲ್ಲಿ ಟೆಸ್ಟ್ ಸೊಬಗೇ ಹಾಳಾಗಿ ಹೋಗಿದೆ. ಕೋಟಿಗಟ್ಟಲೇ ಹಣ ಲಭಿಸುವ ಐಪಿಎಲ್‌ಗೆ ಯುವ ಆಟಗಾರರು ಸೀಮಿತರಾಗಿ ಬಿಟ್ಟಿದ್ದಾರೆ. ಆದ್ದರಿಂದ ಟೆಸ್ಟ್‌ಗೆ ಮೊದಲಿದ್ದಷ್ಟು ಪ್ರಾಮುಖ್ಯತೆ ಈಗಿಲ್ಲ ಎಂದು ಕ್ರಿಕೆಟ್‌ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಕುಂಬ್ಳೆ ಮುಂದೆ ಈಗ ಸವಾಲಿನ ಹಾದಿಯಿದೆ. ಈ ಕಾರಣದಿಂದಲೇ ಕೋಚ್‌ ಆದ ಮೊದಲ ದಿನದಿಂದಲೇ ಕುಂಬ್ಳೆ ಭಾರತ ತಂಡಕ್ಕೆ ಚುರುಕಿನ ತರಬೇತಿ ನೀಡುತ್ತಿದ್ದಾರೆ. ಕ್ರಿಕೆಟ್‌ ಬದುಕಿನಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿರುವ ಅವರಿಗೆ ಈಗ ಹೊಸದೊಂದು ‘ಟೆಸ್ಟ್‌’ ಎದುರಾಗಿದೆ. 12 ತಿಂಗಳ ಅವಧಿಯಲ್ಲಿ 17 ಟೆಸ್ಟ್‌ಗಳಿಗೆ ಭಾರತ ತಂಡವನ್ನು ಅವರು ತರಬೇತುಗೊಳಿಸಬೇಕಿದೆ. ಮೊದಲ ಸರಣಿ ಜುಲೈ 9ರಂದು ವೆಸ್ಟ್‌ ಇಂಡೀಸ್‌ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. ಕುಂಬ್ಳೆ ಕೋಚ್‌ ಆದ ಬಳಿಕ ಭಾರತ ತಂಡ ಆಡಲಿರುವ ಮೊದಲ ಸರಣಿಯಿದು. ಪಂದ್ಯಗಳು ಆ್ಯಂಟಿಗಾ, ಜಮೈಕಾ, ಸೇಂಟ್‌ ಲೂಸಿಯಾ ಮತ್ತು ಟ್ರಿನಿಡಾಡ್‌ ಅಂಡ್ ಟೊಬೊಗೊದಲ್ಲಿ ಆಯೋಜನೆಯಾಗಿವೆ. ಹೆಚ್ಚು ಸ್ಪರ್ಧಾತ್ಮಕವಾಗಿರುವ ಕೆರಿಬಿಯನ್‌ ನಾಡಿನ ಪಿಚ್‌ಗಳು ಕುಂಬ್ಳೆ ಅವರಿಗೆ ಅಪರಿಚಿತವೇನಲ್ಲ. 2006ರಲ್ಲಿ ಭಾರತ ತಂಡ ವಿಂಡೀಸ್‌ ನೆಲದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆಡಿತ್ತು. ರಾಹುಲ್‌ ದ್ರಾವಿಡ್‌ ನಾಯಕತ್ವದ ಆಗಿನ ತಂಡದಲ್ಲಿ ಕುಂಬ್ಳೆ ಕೂಡ ಇದ್ದರು. ಅಷ್ಟೇ ಅಲ್ಲ, ಆ ಸರಣಿಯಲ್ಲಿ ಅವರು ಹೆಚ್ಚು ವಿಕೆಟ್‌ (23) ಕಬಳಿಸಿದ ಗೌರವಕ್ಕೂ ಪಾತ್ರರಾಗಿದ್ದರು. ಆದ್ದರಿಂದಲೇ ಈಗಲೂ ಕುಂಬ್ಳೆ ‘ಬೌಲಿಂಗ್‌ ವಿಭಾಗಕ್ಕೆ ಒತ್ತು ಕೊಡಬೇಕು. ಬೌಲರ್‌ಗಳು ತಮ್ಮಲ್ಲಿನ ನಾಯಕತ್ವ ಗುಣ ಹೆಚ್ಚಿಸಿಕೊಳ್ಳಬೇಕು’ ಎಂದಿದ್ದಾರೆ. ವಿಂಡೀಸ್‌ ವಿರುದ್ಧದ ಸರಣಿ ಕೋಚ್‌ ಕುಂಬ್ಳೆ ಅವರಿಗಷ್ಟೇ ಹೊಸದಲ್ಲ. ಟೆಸ್ಟ್‌ ತಂಡದ ನಾಯಕರಾದ ಬಳಿಕ ವಿರಾಟ್‌ ಕೊಹ್ಲಿ ವಿಂಡೀಸ್‌ ಎದುರು ಆಡಲಿರುವ ಮೊದಲ ಟೆಸ್ಟ್‌ ಸರಣಿಯಿದು. ಬ್ಯಾಟಿಂಗ್‌ನಲ್ಲಿ ಅಮೋಘ ಲಯದಲ್ಲಿರುವ ಕೊಹ್ಲಿ 2014ರ ಡಿಸೆಂಬರ್‌ನಲ್ಲಿ ಭಾರತ ಟೆಸ್ಟ್‌ ತಂಡದ ಚುಕ್ಕಾಣಿ ಹಿಡಿದಿದ್ದರು. ಇವರ ನಾಯಕತ್ವದಲ್ಲಿ ಭಾರತ ತಂಡ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿ ಆಡಿದೆ. ಹೋದ ವರ್ಷ ಭಾರತದಲ್ಲಿ ಹರಿಣಗಳ ನಾಡಿನ ವಿರುದ್ಧ ನಡೆದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ 3–0ರಲ್ಲಿಜಯ ಪಡೆದಿತ್ತು. ನಾಯಕರಾದ ಬಳಿಕ ಅವರು ವಿಂಡೀಸ್‌ ವಿರುದ್ಧ ಒಂದೂ ಪಂದ್ಯವಾಡಿಲ್ಲ. ವಿಂಡೀಸ್‌ ಒಡಕು, ಭಾರತಕ್ಕೆ ಲಾಭವಾದೀತೇ? ಒಂದು ಕಾಲದ ಕ್ರಿಕೆಟ್ ದೈತ್ಯರೆನಿಸಿದ್ದ ವಿಂಡೀಸ್‌ ತಂಡ ಮೊದಲಿನಷ್ಟು ಈಗ ಬಲಿಷ್ಠವಾಗಿಲ್ಲ. ಈ ದೇಶದ ಕ್ರಿಕೆಟ್‌ ಕಲಿಗಳ ದೈಹಿಕ ಸಾಮರ್ಥ್ಯದ ಬಗ್ಗೆ ಮೊದಲೆಲ್ಲಾ ಅಚ್ಚರಿಯಿಂದ ಮಾತನಾಡಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಆಟಗಾರರ ನಡುವೆ ಒಡಕು, ಮಂಡಳಿ ಜೊತೆ ಕಿತ್ತಾಟ ಆಟಗಾರರನ್ನು ಹೈರಾಣ ಮಾಡಿದೆ. ಇದೇ ವರ್ಷ ಭಾರತದಲ್ಲಿ ನಡೆದ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ವಿಂಡೀಸ್‌ ಪುರುಷರ ಮತ್ತು ಮಹಿಳಾ ತಂಡಗಳು ಚಾಂಪಿಯನ್‌ ಆದವು. ಇದೇ ದೇಶದ ತಂಡ ಜೂನಿಯರ್‌ ವಿಶ್ವಕಪ್‌ನಲ್ಲಿ ಪ್ರಾಬಲ್ಯ ಮೆರೆಯಿತು. ಆಗ ಆಟಗಾರರ ಮತ್ತು ಕ್ರಿಕೆಟ್‌ ಮಂಡಳಿ ಕಚ್ಚಾಟ ಬಹಿರಂಗವಾಗಿತ್ತು. ಅದೇನೆ ಇರಲಿ, ವಿಂಡೀಸ್‌ ಪುರುಷರ ತಂಡದವರು ವಿಶ್ವ ಟೂರ್ನಿಯಲ್ಲಿ ಆಡಲು ಬರುವ ಮೊದಲು ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡಿದ್ದರು.ಎರಡರಲ್ಲಿ ಸೋತು, ಒಂದನ್ನು ಡ್ರಾ ಮಾಡಿಕೊಂಡಿದ್ದರು. ಸ್ಫೋಟಕ ಆಟಕ್ಕೆ ಹೆಸರಾಗಿರುವ ಕ್ರಿಸ್‌ ಗೇಲ್‌, ಕೀರನ್ ಪೊಲಾರ್ಡ್ ಮತ್ತು ಡ್ವೇನ್‌ ಬ್ರಾವೊ ಅವರಂಥ ಘಟಾನುಘಟಿಗಳಿಗೆ ಟೆಸ್ಟ್‌ ಸರಣಿಗೆ ತಂಡದಲ್ಲಿ ಸ್ಥಾನವೇ ಕೊಟ್ಟಿರಲಿಲ್ಲ. ಹೋದ ವಾರ ಮುಗಿದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವಿಂಡೀಸ್‌ ನಡುವಣ ತ್ರಿಕೋನ ಏಕದಿನ ಸರಣಿಗೂ ಇವರಿಗೆ ಸ್ಥಾನ ಲಭಿಸಿರಲಿಲ್ಲ. ಮಂಡಳಿ ಮತ್ತು ಆಟಗಾರರ ನಡುವಿನ ಈ ಒಡಕು ಹೀಗೆಯೇ ಮುಂದುವರಿದರೆ ಭಾರತದ ಎದುರಿಗಿರುವ ಒತ್ತಡ ಕಡಿಮೆಯಾಗುತ್ತದೆ. ಆರ್ಥಿಕ ಲೆಕ್ಕಾಚಾರ ಭಾರತದಲ್ಲಿ ಅರ್ಧದಲ್ಲಿಯೇ ಸರಣಿ ತೊರೆದು ಹೋದ ಮೇಲೆ ಹದಗಟ್ಟಿದ್ದ ಬಿಸಿಸಿಐ ಮತ್ತು ವಿಂಡೀಸ್‌ ಮಂಡಳಿಯ ಸಂಬಂಧದ ಬೆಸುಗೆ ಗಟ್ಟಿಯಾಗಲು ಈ ಬಾರಿಯ ಸರಣಿ ವೇದಿಕೆಯಾಗಲಿದೆ ಎನ್ನುವುದೇನೋ ನಿಜ. ಆದರೆ ಇದರ ಹಿಂದೆ ಆರ್ಥಿಕ ಲೆಕ್ಕಾಚಾರವೂ ಇದೆ. ‘ಕ್ರಿಕೆಟ್‌ ಲೋಕದ ದೊಡ್ಡಣ್ಣ’ ಭಾರತ ಎಲ್ಲಿಯೇ ಹೋಗಿ ಪಂದ್ಯ ಆಡಿದರೂ ಅಭಿಮಾನಿಗಳು ಸಿಗುತ್ತಾರೆ. ಇದರಿಂದ ವಿಂಡೀಸ್‌ ಮಂಡಳಿಗೂ ಕೊಂಚ ಲಾಭವಾಗುತ್ತದೆ. ಟಿ.ವಿ ಪ್ರಸಾರದ ಹಕ್ಕು, ಜಾಹೀರಾತಿನಲ್ಲಿ ಪಾಲೂ ಸಿಗುತ್ತದೆ. 5 ವರ್ಷಗಳ ಬಳಿಕ ವಿಂಡೀಸ್‌ ನೆಲದಲ್ಲಿ ಉಭಯ ತಂಡಗಳ ನಡುವೆ ಐದು ವರ್ಷಗಳ ಬಳಿಕ ವಿಂಡೀಸ್‌ನಲ್ಲಿ ಟೆಸ್ಟ್‌ ಸರಣಿ ಆಯೋಜನೆಯಾಗಿದೆ. 2011ರಲ್ಲಿ ಮೂರು ಪಂದ್ಯಗಳ ಸರಣಿ ಆಡಲು ಭಾರತ ಅಲ್ಲಿಗೆ ತೆರಳಿತ್ತು. ಸರಣಿಯನ್ನು 1–0ರಲ್ಲಿ ಭಾರತ ಗೆದ್ದುಕೊಂಡಿತ್ತು.ಇದಾದ ಬಳಿಕ ವಿಂಡೀಸ್‌ ತಂಡ 2013ರಲ್ಲಿ ಭಾರತದಲ್ಲಿ ಸರಣಿ ಆಡಿತ್ತು. ಆದರೆ, ಆಗ ಏಕದಿನ ಸರಣಿ ಪೂರ್ಣಗೊಳ್ಳುವ ಮೊದಲೇ ತಮ್ಮ ದೇಶದ ಕ್ರಿಕೆಟ್‌ ಮಂಡಳಿ ಜೊತೆಗಿನ ಮನಸ್ತಾಪದಿಂದಾಗಿ ಸ್ವದೇಶಕ್ಕೆ ಹೊರಟು ಹೋಗಿದ್ದರು. ಆದ್ದರಿಂದ ಏಕದಿನ ಸರಣಿ ರದ್ದಾಗಿತ್ತು. ಇದು ಸಾಕಷ್ಟು ವಿವಾದವೂ ಆಗಿ ಈಗ ಪರಿಹಾರಗೊಂಡಿದೆ. ಆಟಗಾರರಿಗೆ ವೇತನ ಕೊಡಲು ಪರದಾಡುತ್ತಿರುವ ವಿಂಡೀಸ್‌ ಮಂಡಳಿಗೆ ಭಾರತ ಎದುರು ಸರಣಿ ಆಯೋಜನೆಯಾಗಿರುವುದರಿಂದ ಬೆಟ್ಟದಷ್ಟು ಖುಷಿಯಾಗಿದೆ. ಎನ್‌ಸಿಎ ಜೊತೆ ನಂಟು... ಮುಂಬೈಯನ್ನು ಹೊರತುಪಡಿಸಿದರೆ ಹೆಚ್ಚು ಕ್ರಿಕೆಟ್‌ ಚಟುವಟಿಕೆಗಳು ನಡೆಯುವುದು ಬೆಂಗಳೂರಿನಲ್ಲಿಯೇ. ಅದರಲ್ಲೂ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ) ಒಂದಲ್ಲಾ ಒಂದು ಚಟುವಟಿಕೆಗಳು ಇದ್ದೇ ಇರುತ್ತವೆ. ಫಿಟ್‌ನೆಸ್‌, ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸಕ್ಕಾಗಿ ಆಟಗಾರರು ಉದ್ಯಾನನಗರಿಯ ಎನ್‌ಸಿಎಗೆ ಬರುತ್ತಾರೆ. ಆದ್ದರಿಂದ ಯಾರೇ ಬಂದರೂ ‘ಬೆಂಗಳೂರು ನನ್ನ ಎರಡನೇ ಮನೆ ಇದ್ದಂತೆ’ ಎಂದು ಪ್ರೀತಿಯಿಂದ ಹೇಳುತ್ತಾರೆ. 2011ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೂ ಮುನ್ನ ಭಾರತ ತಂಡ ಇಲ್ಲಿಯೇ ಅಭ್ಯಾಸ ಶಿಬಿರ ನಡೆಸಿತ್ತು. 2005ರಲ್ಲಿ ಭಾರತ, ವೆಸ್ಟ್ ಇಂಡೀಸ್‌ ಮತ್ತು ಶ್ರೀಲಂಕಾ ನಡುವೆ ಜರುಗಿದ ತ್ರಿಕೋನ ಏಕದಿನ ಸರಣಿಯ ಶಿಬಿರಕ್ಕೂ ಎನ್‌ಸಿಎ ಆತಿಥ್ಯ ವಹಿಸಿತ್ತು. 2009ರಲ್ಲಿ ಲಂಕಾ ಪ್ರವಾಸ ಕೈಗೊಳ್ಳುವುದಕ್ಕೂ ಮೊದಲು ಭಾರತ ತಂಡ ಬೆಂಗಳೂರಿನಲ್ಲಿಯೇ ಅಭ್ಯಾಸ ಶಿಬಿರ ನಡೆದಿತ್ತು. ಇವೆಲ್ಲವೂ ಉದಾಹರಣೆಗಳಷ್ಟೇ. ಯುವರಾಜ್‌ ಸಿಂಗ್‌ ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಬಳಿಕ ಅವರ ಅಭ್ಯಾಸಕ್ಕೆ ವೇದಿಕೆಯಾಗಿದ್ದು ಮತ್ತು ಕ್ರಿಕೆಟ್ ಬದುಕಿಗೆ ಮರುಜೀವ ನೀಡಿದ್ದು ಬೆಂಗಳೂರು. ಈ ವಿಷಯದಲ್ಲಿ ಕುಂಬ್ಳೆ ಅವರದ್ದು ಅದೃಷ್ಟವಿದೆ. ಅವರ ಕ್ರಿಕೆಟ್‌ ಬದುಕಿನಲ್ಲಿ ಸುಂದರ ನೆನಪುಗಳಿರುವ ಬೆಂಗಳೂರಿನಲ್ಲಿಯೇ ಬದುಕಿನ ಎರಡನೇ ಇನಿಂಗ್ಸ್‌ ಆಗಿ ಕೋಚ್‌ ಜವಾಬ್ದಾರಿ ಆರಂಭಿಸಲು ಅವರಿಗೆ ಅವಕಾಶ ಲಭಿಸಿದೆ. ತವರಿನಿಂದಲೇ ಆರಂಭವಾದ ಪಯಣದಲ್ಲಿ ಕುಂಬ್ಳೆಗೆ ಯಶಸ್ಸು ಲಭಿಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.