ಯುರೊ ಫುಟ್‌ಬಾಲ್‌ ಫಿಫಾ ವಿಶ್ವಕಪ್‌ನಲ್ಲಿ ಭಾರತ ತಂಡ ಆಡದಿದ್ದರೂ ಇಲ್ಲಿಯ ಅಭಿಮಾನಿಗಳು ರಾತ್ರಿ ನಿದ್ದೆಗೆಟ್ಟು ಪಂದ್ಯಗಳನ್ನು ಟಿವಿಗಳಲ್ಲಿ ವೀಕ್ಷಿಸುವುದು ಹೊಸದೇನಲ್ಲ. ಇದೀಗ ಯುರೋಪ್ ರಾಷ್ಟ್ರಗಳು ಆಡುವ ಯುರೊ ಕಪ್ ಟೂರ್ನಿಯೂ ಇಲ್ಲಿಯ ಜನಮನವನ್ನು ಗೆದ್ದಿದೆ. ಈ ಟೂರ್ನಿಯ ಆಕರ್ಷಣೆಯ ಬಗ್ಗೆ ಗಿರೀಶ ದೊಡ್ಡಮನಿ ವಿಶ್ಲೇಷಿಸಿದ್ದಾರೆ. ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ಗೂ, ಕರ್ನಾಟಕದ ಬೆಂಗಳೂರಿಗೂ ಸಾವಿರಾರು ಮೈಲಿಗಳ ಅಂತರ ಇದೆ. ಆದರೆ, ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ನೂರಾರು ಫುಟ್‌ಬಾಲ್ ಪ್ರೇಮಿಗಳ ಚಿತ್ತ ಪ್ಯಾರಿಸ್‌ ಮೇಲೆಯೇ ನೆಟ್ಟಿತ್ತು. ಅದಕ್ಕೆ ಕಾರಣ ಯುರೊ ಕಪ್ ಫುಟ್‌ಬಾಲ್ ಟೂರ್ನಿ. ಫ್ರಾನ್ಸ್ ದೇಶದ ಅಂಗಳದಲ್ಲಿ ಉರುಳಿದ ಚೆಂಡು ಭೂಮಿಯ ಮೇಲಿರುವ ಬಹುತೇಕ ದೇಶಗಳ ಫುಟ್‌ಬಾಲ್‌ ಪ್ರೀತಿಗೆ ‘ಕಿಕ್’ ನೀಡಿರುವುದಂತೂ ಸುಳ್ಳಲ್ಲ. ಅದಕ್ಕೆ ಬೆಂಗಳೂರು ಹೊರತಲ್ಲ. ಜರ್ಮನಿ ಮತ್ತು ಫ್ರಾನ್ಸ್ ನಡುವಣ ಸೆಮಿಫೈನಲ್ ಪಂದ್ಯ ನೋಡಲು ಇಲ್ಲಿಯ ಕೆಲವು ಹೋಟೆಲ್‌ಗಳಲ್ಲಿ ದೊಡ್ಡ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ದೇಶ, ವಿದೇಶಗಳ ಫುಟ್‌ಬಾಲ್ ಪ್ರೇಮಿಗಳು ಮಧ್ಯರಾತ್ರಿ ಅಲ್ಲಿ ಜಮಾಯಿಸಿ ಪಂದ್ಯ ವೀಕ್ಷಿಸಿದ್ದರು. ದೇಶದ ಇನ್ನಿತರ ನಗರಗಳಲ್ಲಿಯೂ ಯುರೊ ಕಪ್ ಪಂದ್ಯಗಳನ್ನು ಟಿವಿಯಲ್ಲಿ ಮಧ್ಯರಾತ್ರಿಯಲ್ಲಿ ನಿದ್ದೆಗೆಟ್ಟು ನೋಡಿರುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕ್ರಿಕೆಟ್‌ ಆಟದ ಆರಾಧಕರೆ ತುಂಬಿರುವ ಭಾರತದ ಯುವಕ, ಯುವತಿಯರೂ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ, ಲಯೋನೆಲ್ ಮೆಸ್ಸಿ ಆಟದ ಬಗ್ಗೆ ಗಂಟೆಗಟ್ಟಲೆ ಚರ್ಚೆ ಮಾಡುತ್ತಾರೆ. ವೇಲ್ಸ್ ತಂಡದ ಗರೆತ್ ಬೇಲ್ ತರಹದ ಕೇಶವಿನ್ಯಾಸ ಮಾಡಿಕೊಂಡು ಓಡಾಡಿದವರೂ ಇದ್ದಾರೆ. ಪುಟ್ಟ ರಾಷ್ಟ್ರ ಐಸ್‌ಲ್ಯಾಂಡ್‌ನ ದಿಟ್ಟ ಹೋರಾಟದ ಕುರಿತು ಅಚ್ಚರಿ ಯಿಂದ ಮಾತನಾಡಿದವರು ಹಲವರು. ಇಂತಹ ಹತ್ತು ಹಲವು ವೈಶಿಷ್ಟ್ಯಗಳ ರಸದೌತಣವನ್ನು ಉಣಬಡಿಸಿದ ಯುರೊ ಕಪ್ ಟೂರ್ನಿ ಭಾನುವಾರ ರಾತ್ರಿ ಮುಕ್ತಾಯವಾಗಿದೆ. ಆತಿಥೇಯ ಫ್ರಾನ್ಸ್ ಮತ್ತು ಪೋರ್ಚುಗಲ್ ತಂಡಗಳ ನಡುವಣ ಫೈನಲ್ ಪಂದ್ಯದ ರೋಚಕತೆ ನೋಡಿದವರ ಮನದಲ್ಲಿ ಅಚ್ಚೊತ್ತಿದೆ. ಗ್ರಿಜ್ಮನ್ ಎಂಬ ನವತಾರೆ ಈ ಟೂರ್ನಿಯಲ್ಲಿ ಆತಿಥೇಯ ಫ್ರಾನ್ಸ್ ತಂಡವು ಫೈನಲ್‌ಗೆ ತಲುಪಲು ಕಾರಣವಾದ ಪ್ರಮುಖ ಆಟಗಾರ ಅಂಟೋನ್ ಗ್ರಿಜ್ಮನ್. ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು (6) ಗಳಿಸಿದ ಫಾರ್ವಡ್ ಆಟಗಾರ ಎಂಬ ಶ್ರೇಯ ಅವರದ್ದು. ಸೆಮಿಫೈನಲ್‌ನಲ್ಲಿ ಜರ್ಮನಿಯ ವಿರುದ್ಧ ಫ್ರಾನ್ಸ್‌ ಗೆಲ್ಲಲ್ಲು 25 ವರ್ಷದ ಗ್ರಿಜ್ಮನ್ ಅವರ ಎರಡು ಗೋಲುಗಳು ಕಾರಣವಾಗಿದ್ದವು. ಅವರ ಮಿಂಚಿನ ವೇಗದ ಡ್ರಿಬಲ್ ಮತ್ತು ಗೋಲ್‌ ಕೀಪರ್ ಏಕಾಗ್ರತೆಯನ್ನು ಭಂಗ ಮಾಡಿ ಗೋಲು ಗಳಿಸುವ ಶೈಲಿ ಗಮನ ಸೆಳೆಯುವಂತದ್ದು. ಅವರ ಬಗ್ಗೆ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಫ್ರಾನ್ಸ್‌ನ ಒಲಿವಿಯ ಜಿರೂದ್, ವೇಲ್ಸ್ ತಂಡದ ನಾಯಕ ಗರೆತ್ ಬೇಲ್ ಕೂಡ ತಮ್ಮ ಕಾಲ್ಚಳಕದ ಮೂಲಕ ಮಿಂಚಿನ ಸಂಚಲನ ಹರಿಸಿದ ಪ್ರಮುಖರು. ಗೋಲ್‌ ಕೀಪಿಂಗ್‌ನಲ್ಲಿ ಬೆಲ್ಜಿಯಮ್‌ನ ತಿಬಾಟ್ ಕೋರಶ್, ಪೊಲೆಂಡ್‌ನ ಲೂಕಾಸ್ ಫ್ಯಾಬಿಯಸ್ಕಿ, ಹಂಗೆರಿಯ ಗ್ಯಾಬೋರ್ ಕಿರ್ಲಿ, ಉತ್ತರ ಐರ್ಲೆಂಡ್‌ನ ಮೈಕೆಲ್ ಮೆಕ್‌ಗವರ್ನ್ ಮಿಂಚಿದ ಪ್ರಮುಖರಾಗಿದ್ದಾರೆ. ಪುಟ್ಟ ದೇಶದ ದಿಟ್ಟ ಹೋರಾಟ ಹೋದ ಸೋಮವಾರ ಕರ್ನಾಟಕಕ್ಕಿಂತಲೂ ಪುಟ್ಟದಾಗಿರುವ ದೇಶ ಐಸ್‌ಲ್ಯಾಂಡ್‌ ಫುಟ್‌ಬಾಲ್ ತಂಡವು ರಾತ್ರಿ ಬೆಳಗಾಗುವುದರಲ್ಲಿ ಮನೆಮಾತಾಗಿತ್ತು. ಇದೇ ಮೊದಲ ಬಾರಿಗೆ ಯುರೊ ಕಪ್ ಟೂರ್ನಿಯಲ್ಲಿ ಪ್ರವೇಶ ಗಿಟ್ಟಿಸಿದ್ದ ತಂಡವು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಹಾಕಿದ್ದು ಸಣ್ಣ ಸಾಧನೆಯೇನಲ್ಲ. ಎಂಟರ ಘಟ್ಟದಲ್ಲಿ 2–5 ಗೋಲುಗಳಿಂದ ಫ್ರಾನ್ಸ್ ಎದುರು ಸೋತ ತಂಡವು ತವರಿಗೆ ಮರಳಿದಾಗ ಭವ್ಯ ಸ್ವಾಗತ ದೊರೆತಿತ್ತು. ಸಾವಿರಾರು ಅಭಿಮಾನಿಗಳು ಆಟಗಾರರನ್ನು ತೆರೆದ ಬಸ್‌ನಲ್ಲಿ ರಾಜಧಾನಿ ರೈಕ್‌ಜಾವಿಕ್‌ನ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಉಳಿಸಿದ ಗೋಲ್‌ಕೀಪರ್ ಐಸ್‌ಲ್ಯಾಂಡ್‌ನ ಹ್ಯಾನಸ್ ಹಾಲ್ಡರ್ಸನ್ (27 ಗೋಲು) ತಮ್ಮ ತವರಿನ ಅಭಿಮಾನಿಗಳ ಕಣ್ಮಣಿಯಾಗಿದ್ದರು.ಟೂರ್ನಿಯಲ್ಲಿ ಭಾಗವಹಿಸಿದ್ದ ಅತ್ಯಂತ ಚಿಕ್ಕ ದೇಶದ ತಂಡ ಇದಾಗಿತ್ತು. ಪ್ರತಿ ಬಾರಿ 16 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸುತ್ತಿದ್ದವು. ಈ ಬಾರಿ ತಂಡಗಳ ಸಂಖ್ಯೆಯನ್ನು 24ಕ್ಕೆ ಏರಿಸಲಾಗಿತ್ತು. ಕಜಕಸ್ತಾನವನ್ನು ಅರ್ಹತಾ ಸುತ್ತಿನಲ್ಲಿ ಸೋಲಿಸಿದ್ದ ಐಸ್‌ಲ್ಯಾಂಡ್ ಪ್ರಮುಖ ಸುತ್ತಿಗೆ ಪ್ರವೇಶ ಗಿಟ್ಟಿಸಿತ್ತು. ಎಫ್ ಗುಂಪಿನಲ್ಲಿ ಆಡಿದ್ದ ತಂಡವು ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದ ಪೋರ್ಚುಗಲ್ ವಿರುದ್ಧ ಡ್ರಾ, ಹಂಗೇರಿ ವಿರುದ್ಧ ಡ್ರಾ, ಆಸ್ಟ್ರೀಯಾ ಮತ್ತು ಇಂಗ್ಲೆಂಡ್ ವಿರುದ್ಧ ಗೆದ್ದು ಎಂಟರ ಘಟ್ಟಕ್ಕೆ ಪ್ರವೇಶಿಸಿತ್ತು. ಆತಿಥ್ಯ: ಫ್ರಾನ್ಸ್ * ಟೂರ್ನಿ ನಡೆದಿದ್ದು: ಜೂನ್ 10ರಿಂದ ಜುಲೈ 10 * ಸ್ಪರ್ಧಿಸಿದ ಒಟ್ಟು ತಂಡಗಳು: 24 * ಆಡಿದ ಪಂದ್ಯಗಳು: 50 * ದಾಖಲಾದ ಗೋಲುಗಳು: 107 (ಫೈನಲ್ ಹೊರತುಪಡಿಸಿ) * ಆಡಿದ ಕ್ರೀಡಾಂಗಣಗಳು: 10 * ಒಟ್ಟು ಪ್ರೇಕ್ಷಕರು: 23.5 ಲಕ್ಷ (ಫೈನಲ್ ಹೊರತುಪಡಿಸಿ) ಎಂಟು ಹೊಸ ತಂಡಗಳು 2012ರಲ್ಲಿ ನಡೆದ ಟೂರ್ನಿಯಲ್ಲಿ 16 ತಂಡಗಳು ಸ್ಪರ್ಧಿಸಿದ್ದವು. ಈ ಬಾರಿ ಎಂಟು ಹೊಸ ತಂಡಗಳಿಗೆ ಅವಕಾಶ ಲಭಿಸಿತು. ಅಲ್ಬೇನಿಯಾ, ಐಸ್‌ಲ್ಯಾಂಡ್, ಉತ್ತರ ಐರ್ಲೆಂಡ್, ಸ್ಲೊವಾಕಿಯಾ, ವೇಲ್ಸ್,ಆಸ್ಟ್ರಿಯಾ, ಹಂಗೆರಿ, ರೊಮೇನಿಯಾ ಫ್ರೆಂಚ್ ಪೊಲೀಸರ ಹರಸಾಹಸ! ಪ್ರತಿ ಬಾರಿ ಯುರೊ ಕಪ್ ಟೂರ್ನಿ ನಡೆದಾಗಲೂ ಸ್ಪರ್ಧಿಸಿದ ದೇಶಗಳ ನೂರಾರು ಕ್ರೀಡಾಭಿಮಾನಿಗಳು ಬರುವುದು ರೂಢಿಯಲ್ಲಿದೆ. ಈ ಬಾರಿಯೂ ಸಾವಿರಕ್ಕೂ ಹೆಚ್ಚು ಸಂಖ್ಯೆ ಅಭಿಮಾನಿಗಳು ಟೂರ್ನಿ ವೀಕ್ಷಿಸಲು ಬಂದಿದ್ದರು. ಬೇರೆಲ್ಲ ಕ್ರೀಡೆಗಳಿಗೆ ಹೋಲಿಸಿದರೆ ಫುಟ್‌ಬಾಲ್‌ನಲ್ಲಿ ಅಭಿಮಾನಿಗಳ ದಾಂಧಲೆಯ ಪ್ರಕರಣ ಗಳೂ ಹೆಚ್ಚು. ಇಂತಹ ಅಭಿಮಾನಿಗಳ ಅತಿರೇಕ ವನ್ನು ನಿಯಂತ್ರಿಸಲು ಆತಿಥೇಯ ದೇಶಗಳ ಪೊಲೀಸ್‌ ಮತ್ತು ಭದ್ರತಾ ಪಡೆಗಳು ಹರಸಾಹಸ ಪಡಬೇಕು. ಸ್ವಲ್ಪ ಹೆಚ್ಚುಕಮ್ಮಿಯಾದರೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ವಿವಾದವಾಗುವುದು ಖಚಿತ. ಈ ಬಾರಿಯ ಯುರೋ ಲೀಗ್ ಕೂಡ ಇಂತಹ ಗಲಾಟೆಗಳಿಂದ ಹೊರ ತಾಗಿರಲಿಲ್ಲ. ಐಸ್‌ಲೆಂಡ್ ಎದುರು ಇಂಗ್ಲೆಂಡ್ ಸೋತಾಗ ಬ್ರಿಟಿಷ್ ಅಭಿ ಮಾನಿಗಳು ಪರಸ್ಪರ ಹೊಡೆದಾಡಿ ಕೊಂಡಿದ್ದರು. ಟೂರ್ನಿಯ ಆರಂಭದ ಸುತ್ತಿನಲ್ಲಿ ಕ್ರೊವೆಷ್ಯಾ, ಜೆಕ್ ಗಣರಾಜ್ಯದ ಅಭಿಮಾನಿಗಳ ಮಾರಾಮಾರಿಯು ದೊಡ್ಡ ಸುದ್ದಿ ಮಾಡಿತ್ತು.ರಷ್ಯಾ ಮತ್ತು ಇಂಗ್ಲೆಂಡ್ ಅಭಿಮಾನಿಗಳ ನಡುವಣ ಜಟಾಪಟಿ ಕೂಡ ಸಣ್ಣಮಟ್ಟದ್ದಾಗಿರಲಿಲ್ಲ. ಪೊಲೀಸ ರಿಗೂ ದುಷ್ಕರ್ಮಿಗಳ ಕಲ್ಲೇಟಿನ ಪೆಟ್ಟು ಬಿದ್ದ ಘಟನೆಯೂ ನಡೆದಿತ್ತು. ಯುರೊ ಲೀಗ್ ಆರಂಭವಾಗಿದ್ದು ಹೀಗೆ ಯುರೋಪಿಯನ್ ಲೀಗ್ ಆರಂಭವಾಗಲು ಫ್ರಾನ್ಸ್‌ ದೇಶವೇ ಪ್ರಮುಖ ಕಾರಣ. 1927ರಲ್ಲಿ ಫ್ರೆಂಚ್ ಫುಟ್‌ಬಾಲ್ ಫೆಡರೇಷನ್ ಮಹಾಪ್ರಧಾನಕಾರ್ಯದರ್ಶಿಯಾಗಿದ್ದ ಹೆನ್ರಿ ಡೆಲಾನೆ ಅವರು ಯುರೋಪ್ ಫುಟ್‌ಬಾಲ್ ಟೂರ್ನಿ ಆಯೋಜನೆಯ ಪ್ರಸ್ತಾವ ಸಲ್ಲಿಸಿದ್ದರು. ಆದರೆ, 1958ರವರೆಗೂ ಅದು ಕಾರ್ಯಗತಗೊಳ್ಳಲಿಲ್ಲ. ಅದೇ ವರ್ಷ ನಿಧನರಾದ ಹೆನ್ರಿ ಅವರ ಹೆಸರಿನಲ್ಲಿ ಒಂದು ಟೂರ್ನಿ ಆಯೋಜಿಸಲಾಯಿತು. 1960ರಲ್ಲಿ ಮೊಟ್ಟಮೊದಲ ಯುರೊ ಕಪ್ ಟೂರ್ನಿ ಫ್ರಾನ್ಸ್‌ ಆತಿಥ್ಯದಲ್ಲಿ ನಡೆಯಿತು.ಅದರಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದವು. ಸೋವಿಯತ್ ಒಕ್ಕೂಟವು ಫೈನಲ್‌ನಲ್ಲಿ ಯುಗೊಸ್ಲಾವಿಯ ಎದುರು 2–1 ಗೋಲು ಗಳಿಂದ ಗೆದ್ದಿತ್ತು. ಸ್ಪೇನ್ ತಂಡವು ಕ್ವಾರ್ಟರ್‌ಫೈನಲ್‌ ಹಂತದಲ್ಲಿಯೇ ಟೂರ್ನಿಯನ್ನು ಬಹಿಷ್ಕರಿಸಿ ಹೊರನಡೆದಿತ್ತು. ಸೋವಿಯತ್ ಒಕ್ಕೂಟದ ವಿರುದ್ಧ ರಾಜಕೀಯ ಹೋರಾಟವೇ ಸ್ಪೇನ್ ಹಿಂದೆ ಸರಿಯಲು ಕಾರಣವಾಗಿತ್ತು. 1964ರಲ್ಲಿ ಸ್ಪೇನ್ ಟೂರ್ನಿಯ ಆತಿಥ್ಯ ವಹಿಸಿತ್ತು. ಅರ್ಹತಾ ಸುತ್ತಿನಲ್ಲಿ 29 ತಂಡಗಳು ಆಡಿದ್ದವು. ಟೂರ್ನಿಯಿಂದ ಟೂರ್ನಿಗೆ ಹೊಸ ಸಾಧನೆ ಮಾಡುತ್ತಲೇ ಯುರೊ ಲೀಗ್ ಬೆಳೆಯುತ್ತಿದೆ. ಕೊಪಾ ಅಮೆರಿಕ ಟೂರ್ನಿಗಿಂತಲೂ ಹೆಚ್ಚು ಜನಪ್ರಿಯವಾಗಿದೆ. ನಾಲ್ಕು ವರ್ಷಗಳಿಗೊಮ್ಮೆ ಟೂರ್ನಿ ನಡೆಯುತ್ತಿದೆ. ಈ ಬಾರಿ ಮೊದಲ ಬಾರಿಗೆ 24 ತಂಡಗಳು ಸ್ಪರ್ಧಿಸಿದವು. ಹೋದ ವರ್ಷ 16 ತಂಡಗಳು ಮಾತ್ರ ಟೂರ್ನಿಯಲ್ಲಿ ಆಡಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.