ರಾಹುಲ್ ಮೊದಲ ಮೈಲುಗಲ್ಲು ಜಿ.ಆರ್. ವಿಶ್ವನಾಥ್, ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪ ಅವರಂತಹ ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ದೇಶಕ್ಕೆ ಕೊಡುಗೆ ನೀಡಿದ ಹೆಗ್ಗಳಿಕೆ ಕರ್ನಾಟಕದ್ದು. ಬ್ಯಾಟಿಂಗ್‌ನಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಪರಿಚಯಿಸಿರುವ ಹೆಗ್ಗಳಿಕೆ ಇವರದ್ದು. ಇವರ ಸಾಲಿಗೆ ಕೆ.ಎಲ್. ರಾಹುಲ್ ಸೇರುವರೆ ಎಂಬ ಕುತೂಹಲ ಈಗ ಮೂಡಿದೆ. ಈ ಕುರಿತು ಗಿರೀಶ ದೊಡ್ಡಮನಿ ವಿಶ್ಲೇಷಿಸಿದ್ದಾರೆ. ಭಾರತ ಕ್ರಿಕೆಟ್ ತಂಡವು ಮೊಟ್ಟಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯ ಆಡಿ ನಾಲ್ಕು ದಶಕಗಳು ಸರಿದು ಹೋದವು. ಈ ಅವಧಿಯಲ್ಲಿ ಭಾರತ ಕ್ರಿಕೆಟ್‌ ಲೋಕದ ಸಾಮ್ರಾಟನಾಗಿ ಮೆರೆದಿದೆ. ಅಪ್ರತಿಮ ಕ್ರಿಕೆಟಿಗರನ್ನು ಕೊಡುಗೆಯಾಗಿ ನೀಡಿದೆ. ಆದರೆ, ಕಳೆದ 42 ವರ್ಷಗಳಲ್ಲಿ ದೇಶದ ಯಾವ ದಿಗ್ಗಜರೂ ಮಾಡದ ಸಾಧನೆಯನ್ನು ಕರ್ನಾಟಕದ ಕೆ.ಎಲ್. ರಾಹುಲ್ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲಿಯೇ ಶತಕ ಗಳಿಸಿದ ಭಾರತದ ಮೊಟ್ಟಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಅಲ್ಲದೆ ಚೊಚ್ಚಲ ಸರಣಿಯಲ್ಲಿಯೇ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದರೆ. ಟ್ವೆಂಟಿ–20 ವಿಶ್ವಕಪ್, ಐಪಿಎಲ್‌ನ ಅಬ್ಬರದ ಆಟಕ್ಕೆ ತೆರೆ ಬಿದ್ದ ನಂತರ ಭಾರತ ತಂಡ ಜಿಂಬಾಬ್ವೆಗೆ ಹೊರಟಾಗ ಬಹುತೇಕ ಜನರಿಗೆ ಅದರ ಬಗ್ಗೆ ಆಸಕ್ತಿ ಉಳಿದಿರಲಿಲ್ಲ. ಆದರೆ, ಹರಾರೆಯ ಗಟ್ಟಿ ಪಿಚ್‌ನಲ್ಲಿ ಕಣ್ಣೂರು ಲೋಕೇಶ್ ರಾಹುಲ್ ಯಾವಾಗ ದಾಖಲೆಯ ಶತಕ ಬಾರಿಸಿದರೋ ಎಲ್ಲರ ಚಿತ್ತ ಅತ್ತ ಹರಿಯಿತು. ತಜ್ಞರು ಇತಿಹಾಸದ ಪುಟಗಳನ್ನು ಪಟಪಟನೆ ತಿರುವಿ ಹಾಕಿದರು. 24 ವರ್ಷದ ಯುವಕನ ಹೆಸರಿನಲ್ಲಿ ಹೊಸದೊಂದು ಪುಟವನ್ನು ದಾಖಲೆ ಪುಸ್ತಕಕ್ಕೆ ಸೇರಿಸಿದರು. ಅದರ ಎಷ್ಟು ಭಾಗವನ್ನು ರಾಹುಲ್ ತಮ್ಮ ಸಾಧನೆಯ ಅಕ್ಷರಗಳ ಮೂಲಕ ತುಂಬುತ್ತಾರೆ ಎಂಬುದನ್ನು ಕಾದು ನೋಡಬೇಕು. ಆದರೆ, ಇನ್ನಷ್ಟು ಸಾಧನೆಗಳನ್ನು ದಾಖಲಿಸುವ ಸಾಮರ್ಥ್ಯ ರಾಹುಲ್‌ಗೆ ಇದೆ ಎನ್ನುವ ವಿಶ್ವಾಸವಂತೂ ಈಗ ಕ್ರಿಕೆಟ್ ವಲಯದಲ್ಲಿ ಮೂಡಿದೆ. ಮಂಗಳೂರಿನಿಂದ ಹರಾರೆಯವರೆಗೆ.. ಕರ್ನಾಟಕದ ಕ್ರಿಕೆಟ್ ತಂಡದ ಪಟ್ಟಿಯ ಮೇಲೆ ಒಮ್ಮೆ ಕಣ್ಣಾಡಿಸಿದರೆ, ಬೆಂಗಳೂರಿನಿಂದ ಹೊರಗಿನ ಊರುಗಳಿಂದ ಇರುವ ಹುಡುಗರ ದೊಡ್ಡ ದಂಡು ಗಮನ ಸೆಳೆಯುತ್ತದೆ. ಎರಡು ಬಾರಿ ರಣಜಿ ಟ್ರೋಫಿ ಗೆದ್ದ ತಂಡದ ನಾಯಕ ಆರ್. ವಿನಯಕುಮಾರ್ ದಾವಣಗೆರೆಯವರು. ಮಧ್ಯಮವೇಗಿ ಎಚ್‌.ಎಸ್. ಶರತ್ ಮಂಡ್ಯದವರು. ಅದೇ ರೀತಿ ರಾಹುಲ್ ಕಡಲತಡಿಯ ಮಂಗಳೂರಿನ ಪ್ರತಿಭೆ. ಅವರು ಡಾ. ಲೋಕೇಶ್‌ ಮತ್ತು ರಾಜೇಶ್ವರಿ ಅವರ ಮಗ. ಹೆಚ್ಚು ಸೌಲಭ್ಯಗಳಿಲ್ಲದಿದ್ದರೂ ಆತ್ಮವಿಶ್ವಾಸ ಮತ್ತು ಶ್ರದ್ಧೆಯ ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ‘19 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ನಂತರವೇ ನಾನು ಹೆಚ್ಚು ಗಂಭೀರವಾಗಿ ಆಡತೊಡಗಿದೆ. ನನ್ನ ಕೋಚ್ ಉತ್ತಮ ಮಾರ್ಗದರ್ಶನ ನೀಡಿದರು. ಬೆಂಗಳೂರಿಗೆ ಬಂದ ಮೇಲೆ ನನ್ನ ಆಟ ಇನ್ನಷ್ಟು ಸುಧಾರಿಸಿತು. ನನ್ನ ಲೋಪಗಳನ್ನು ತಿದ್ದಿಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಅದರ ಫಲ ಇವತ್ತು ಸಿಗುತ್ತಿದೆ’ ಎಂದು ರಾಹುಲ್ ಹರಾರೆಯಲ್ಲಿ ಸರಣಿಶ್ರೇಷ್ಠ ಗೌರವ ಪಡೆದ ನಂತರ ಟಿವಿ ಸಂದರ್ಶನದಲ್ಲಿ ಹೇಳಿದ್ದರು. ಜೂನಿಯರ್ ಕ್ರಿಕೆಟ್‌ನಲ್ಲಿ ಅವರು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮಾಡಿದ ಸಾಧನೆಯಿಂದಾಗಿ 2010ರಲ್ಲಿ ರಣಜಿ ತಂಡದಲ್ಲಿ ಸ್ಥಾನ ಲಭಿಸಿತು. ಮೊಹಾಲಿಯಲ್ಲಿ ಪಂಜಾಬ್ ಎದುರಿನ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದರು. ಅದೇ ವರ್ಷ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸಿತ್ತು. ಆದರೆ, ಅವರ ಆಟ ರಂಗೇರಿದ್ದು ಮಾತ್ರ 2013–14ರ ರಣಜಿ ಋತುವಿನಲ್ಲಿ ಬರೋಬ್ಬರಿ 1033 ರನ್‌ಗಳನ್ನು ಪೇರಿಸಿದ ಅವರು ತಮ್ಮ ತೋಳ್ಬಲವನ್ನು ಪ್ರದರ್ಶಿಸಿದ್ದರು. ಫೈನಲ್‌ ಪಂದ್ಯದಲ್ಲಿ ಅವರ ಶತಕ (131)ದ ನೆರವಿನಿಂದ ಕರ್ನಾಟಕ ಜಯಿಸಿತ್ತು. ಅವರು ಪಂದ್ಯಶ್ರೇಷ್ಠ ಟ್ರೋಫಿಗೆ ಮುತ್ತಿಕ್ಕಿದ್ದರು. ಕ್ರಿಕೆಟ್ ಜಗತ್ತಿನ ಗೋಡೆ ಎಂದೇ ಖ್ಯಾತರಾದ ಕರ್ನಾಟಕದ ರಾಹುಲ್ ದ್ರಾವಿಡ್ ಅವರ ಕಲಾತ್ಮಕ ಬ್ಯಾಟಿಂಗ್ ಶೈಲಿಯನ್ನು ನೆನಪಿಸುವಂತಹ ಆಟವನ್ನು ಕೆ.ಎಲ್. ರಾಹುಲ್ ಆಡಿದ್ದರು. ಇದು ಟೆಸ್ಟ್‌ ಕ್ರಿಕೆಟ್‌ ಆಯ್ಕೆದಾರರ ಗಮನ ಸೆಳೆಯಿತು. 2014ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಮೆಲ್ಬರ್ನ್‌ನಲ್ಲಿ ನಡೆದಿದ್ದ ‘ಬಾಕ್ಸಿಂಗ್‌ ಡೆ’ ಟೆಸ್ಟ್‌ನಲ್ಲಿ ಪದಾರ್ಪಣೆಯ ಅವಕಾಶ ಸಿಕ್ಕಿತ್ತು. ಆ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ, 2015ರ ಜನವರಿಯಲ್ಲಿ ಸಿಡ್ನಿಯಲ್ಲಿ ಅವರಿಗೆ ಲಭಿಸಿದ ಅವಕಾಶವನ್ನು ಅವರು ಬಿಡಲಿಲ್ಲ. ಕಾಂಗರೂ ನೆಲದ ವೇಗಿಗಳ ಎಸೆತಗಳಿಗೆ ದಿಟ್ಟ ಉತ್ತರ ನೀಡಿದರು. ಅಲ್ಲಿ ಅವರ ಬ್ಯಾಟ್‌ನಿಂದ ಸುಂದರ ಶತಕ ಅರಳಿದಾಗ ಬೆಂಗಳೂರಿನಲ್ಲಿ ಸಂಭ್ರಮ ಗರಿಗೆದರಿತ್ತು. ‘ಮತ್ತೊಬ್ಬ ರಾಹುಲ್’ ಉದಯಿಸಿದ ಎಂಬ ಮಾತುಗಳು ಕೇಳಿಬಂದಿದ್ದವು. ಅವರ ಬ್ಯಾಕ್‌ಫುಟ್‌ ಪಂಚ್‌ಗಳು, ಲೇಟ್ ಕಟ್‌ ಮತ್ತು ಡ್ರೈವ್‌ಗಳು ಅತ್ಯಂತ ನವಿರಾಗಿ ಪ್ರದರ್ಶನಗೊಂಡಿದ್ದವು. ಸ್ಪಿನ್ನರ್‌ಗಳಿಗೆ ಅವರ ತಾಳ್ಮೆಯುತ ಸ್ವೀಪ್ ಮತ್ತು ಪೆಡಲ್‌ ಸ್ವೀಪ್‌ಗಳ ಉತ್ತರ ಹೊಸ ಭರವಸೆ ಮೂಡಿಸಿದ್ದವು. ಅಲ್ಲಿಂದ ಮರಳಿ ಬಂದು ತವರಿನ ಅಂಗಳದಲ್ಲಿ ಉತ್ತರ ಪ್ರದೇಶ ಎದುರು ರಣಜಿ ಪಂದ್ಯ ಆಡಿದ್ದ ರಾಹುಲ್ ಬ್ಯಾಟ್‌ನಿಂದ ತ್ರಿಶತಕ (337) ಹರಿದು ಬಂದಿತ್ತು. ಈ ಸಾಧನೆ ಮಾಡಿದ ಕರ್ನಾಟಕದ ಮೊಟ್ಟಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಅದಾಗಲೇ ಅವರು ಟೆಸ್ಟ್ ಕ್ರಿಕೆಟ್‌ಗೆ ಅತ್ಯಂತ ಸೂಕ್ತ ಎಂಬ ಅಭಿಪ್ರಾಯಗಳು ಜೀವ ಪಡೆದುಕೊಂಡಿದ್ದವು. ಚೇತೇಶ್ವರ್ ಪೂಜಾರ, ಮುರಳಿ ವಿಜಯ್, ಅವರ ನಂತರ ರಾಹುಲ್ ಎಂಬ ಮಾತುಗಳು ಕೇಳಿಬಂದವು. ಆದರೆ, ದಕ್ಷಿಣ ಆಫ್ರಿಕಾ ಎದುರು ಭಾರತದಲ್ಲಿಯೇ ನಡೆದಿದ್ದ ಸರಣಿಯಲ್ಲಿ ಅವರು 12ನೇ ಆಟಗಾರನಾಗಿಯೇ ತಂಡದಲ್ಲಿ ಉಳಿದಿದ್ದರು. ಅದರಿಂದ ಅವರು ನಿರಾಸೆಗೊಳ್ಳಲಿಲ್ಲ. ತಮ್ಮ ಕೌಶಲ್ಯ ಮತ್ತು ಪ್ರತಿಭೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡರು. ಚುಟುಕು ಮತ್ತು ಏಕದಿನ ಕ್ರಿಕೆಟ್ ಮಾದರಿಯ ಬ್ಯಾಟಿಂಗ್‌ಗೂ ಸಿದ್ಧರಾದರು. ಇತ್ತೀಚೆಗೆ ಮುಗಿದ ಐಪಿಎಲ್ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಆಡಿದ ಅವರ ಆಟವನ್ನು ನೋಡಿದವರು ತಮ್ಮ ಅಭಿಪ್ರಾಯ ಬದಲಿಸಿಕೊಂಡರು. ಸನ್‌ರೈಸರ್ಸ್‌ ತಂಡದಲ್ಲಿ ಆಡುತ್ತಿದ್ದ ಅವರು ಈ ವರ್ಷ ಆರ್‌ಸಿಬಿಗೆ ಬಂದಿದ್ದರು. ವಿರಾಟ್ ಕೊಹ್ಲಿ ನಾಯಕತ್ವದ ತಂಡದ ವಿಕೆಟ್‌ ಕೀಪರ್ ಆಗಿಯೂ ಮಹತ್ವದ ಕಾಣಿಕೆ ನೀಡಿದರು. ‘ಎಲ್ಲ ಪಂದ್ಯಗಳಲ್ಲಿಯೂ ಕ್ರಿಸ್ ಗೇಲ್ ಅವರ ಮೇಲೆ ಅವಲಂಬಿತರಾಗಿರುವುದು ಸರಿಯಲ್ಲ’ ಎಂದು ಅವರು ಹೇಳಿಕೆ ನೀಡಿದ್ದರು. ಅದಕ್ಕೆ ತಕ್ಕಂತೆ ಗೇಲ್ ಜಾಗವನ್ನು ತಕ್ಕಮಟ್ಟಿಗೆ ತುಂಬಿದ್ದರು. ಕೊಹ್ಲಿ ಮತ್ತು ಎ.ಬಿ. ಡಿವಿಲಿಯರ್ಸ್‌ ಅವರೊಂದಿಗೆ ಜೊತೆಯಾಟದ ಮೂಲಕ ಆರ್‌ಸಿಬಿಗೆ ಗೆಲುವಿನ ಹಾದಿ ತೋರಿದ್ದರು. 14 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳಿದ್ದ 387 ರನ್‌ಗಳನ್ನು ಪೇರಿಸಿದ್ದರು. ಅದರೊಂದಿಗೆ ತಾವು ಬರೀ ಟೆಸ್ಟ್‌ಗೆ ಮಾತ್ರ ಲಾಯಕ್ಕು ಎಂಬ ಹಣೆಪಟ್ಟಿಯನ್ನು ಕಿತ್ತುಹಾಕಿದರು. ಹರಾರೆಯಲ್ಲಿ ಏಕದಿನ ಕ್ರಿಕೆಟ್‌ನಲ್ಲಿಯೂ ಮಿಂಚುವ ಮೂಲಕ ಆಧುನಿಕ ಕ್ರಿಕೆಟ್‌ನ ಮೂರು ಮಾದರಿಗಳಿಗೂ ತಾನು ಸಿದ್ಧ ಎಂಬ ಸಂದೇಶ ನೀಡಿದ್ದಾರೆ. ಹರಾರೆಯಲ್ಲಿ ನಡೆಯಲಿರುವ ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯ ನಂತರ ವೆಸ್ಟ್‌ ಇಂಡೀಸ್‌ಗೆ ಟೆಸ್ಟ್ ಸರಣಿ ಆಡಲು ತೆರಳಲಿದ್ದಾರೆ. ರಾಹುಲ್‌ ಕರ್ನಾಟಕದ ಕ್ರಿಕೆಟ್‌ ಪರಂಪರೆಯ ಭವಿಷ್ಯದ ಕೊಂಡಿಯಾಗುವ ನಿರೀಕ್ಷೆ ಮೂಡಿಸಿದ್ದಾರೆ. ಟ್ವೀಟ್ ರಾಹುಲ್ ಬಹಳ ವಿಶಿಷ್ಟವಾದ ಸಾಧನೆಯನ್ನು ಮಾಡಿದ್ದಾರೆ. ಅವರ ದಾಖಲೆಯಿಂದ ಭಾರತದ ಕ್ರಿಕೆಟ್‌ ಹೆಮ್ಮೆ ಪಡುವಂತಾಗಿದೆ. ಅವರಿಗೆ ಅಭಿನಂದನೆಗಳು. -ಆರ್. ವಿನಯಕುಮಾರ್, ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಪದಾರ್ಪಣೆ ಟೆಸ್ಟ್‌: ಆಸ್ಟ್ರೇಲಿಯಾ ಎದುರು 2014 (ಸ್ಥಳ: ಅಡಿಲೇಡ್) ಏಕದಿನ: ಜಿಂಬಾಬ್ವೆ ಎದುರು 2016 (ಸ್ಥಳ: ಹರಾರೆ) ** *** ** ನಾವು ಹಿರಿಯರನ್ನು ಗೌರವಿಸಬೇಕು. ಆದರೆ, ಕೆಲವು ಬಾರಿ ಅವರು ನಾವು ಯಾವ ಮಾದರಿಯಲ್ಲಿ ಆಡಬೇಕು ಎಂಬುದನ್ನು ನಿರ್ಧರಿಸಿದಂತೆ ಹೇಳಿ ಬೀಡುತ್ತಾರೆ. ಆ ಸಂದರ್ಭದಲ್ಲಿ ನಮ್ಮ ಸಾಮರ್ಥ್ಯವನ್ನು ನಾವೇ ಅವಲೋಕನ ಮಾಡಿಕೊಳ್ಳಬೇಕು. ನನ್ನನ್ನು ಟೆಸ್ಟ್ ಆಟಗಾರನಾಗಿ ಮಾತ್ರ ನೋಡುತ್ತಿದ್ದವರು ನಿಗದಿಯ ಓವರ್‌ಗಳ ಕ್ರಿಕೆಟ್‌ಗೆ ಸೂಕ್ತ ಅಲ್ಲ ಎಂದೇ ಹಲವು ಬಾರಿ ಹೇಳಿದ್ದರು. ಅವರ ಮಾತಿಗೆ ನಾನು ಕಿವಿಗೊಡಲಿಲ್ಲ. ನನ್ನ ಸಾಮರ್ಥ್ಯ ವಿಸ್ತರಿಸಿಕೊಂಡೆ. ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದೆ. ಹಲವು ಅನುಭವಿ ಕ್ರಿಕೆಟಿಗರ ಮಾರ್ಗದರ್ಶನ ಪಡೆದೆ. ಅದರಿಂದ ಏಕದಿನ ಮತ್ತು ಐಪಿಎಲ್‌ನಲ್ಲಿಯೂ ಉತ್ತಮ ಆಟವಾಡಲು ಸಾಧ್ಯವಾಯಿತು. -ಕೆ.ಎಲ್. ರಾಹುಲ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.