ಅಂಧ ಆಟಗಾರನ ಚೆಂದದ ಸಾಧನೆ ದೃಷ್ಟಿಯ ತೊಂದರೆಯಿರುವ ಚೆಸ್‌ ಆಟಗಾರರಿಗೆ ಸಮಸ್ಯೆಗಳು ಕೆಲವು. ಒಬ್ಬರೇ ಟೂರ್ನಿಗಳಿಗೆ ಹೋಗಿ ಆಡುವಂತಿಲ್ಲ. ಸಹಾಯಕರೊಬ್ಬರನ್ನು ಕರೆದುಕೊಂಡು ಪಂದ್ಯಾವಳಿ ನಡೆಯುವ ಸ್ಥಳಕ್ಕೆ ಹೋಗಬೇಕಾಗುತ್ತದೆ. ಮಧ್ಯಮ ವರ್ಗದ ಆಟಗಾರರಿಗೆ ಇದರಿಂದ ಆರ್ಥಿಕವಾಗಿ ಹೊರೆ ಬೀಳುತ್ತದೆ. ದೈಹಿಕ ಇತಿಮಿತಿಯಿಂದ ದೂರದ ಪ್ರಯಾಣವೂ ಕಷ್ಟ. ಇಂಥದ್ದರಲ್ಲಿಯೂ ಭಾರತದಲ್ಲಿ ದೃಷ್ಟಿದೋಷ ಇರುವ ಆಟಗಾರರಿಗೆ ನಡೆಯುವ ಟೂರ್ನಿಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಆಟಗಾರರು ಸಾಕಷ್ಟಿದ್ದಾರೆ. ದೇಶದಲ್ಲಿ ಇಂಥ ಆಟಗಾರರಿಗೆ ನಡೆಯುವ ಚೆಸ್‌ ಟೂರ್ನಿಗಳಲ್ಲಿ ಉತ್ತಮ ಸಾಧನೆ ತೋರುತ್ತಿರುವವರಲ್ಲಿ ಈಗ ಕರ್ನಾಟಕದ ಕಿಶನ್‌ ಗಂಗೊಳ್ಳಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಅಂಧ ಆಟಗಾರರ ಪಾಲಿಗೆ ಅತ್ಯುನ್ನತ ಟೂರ್ನಿಯಾದ ರಾಷ್ಟ್ರೀಯ ‘ಎ’ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಸತತ ಮೂರು ಬಾರಿ ಚಾಂಪಿಯನ್‌. ಇತ್ತೀಚೆಗೆ ಮುಂಬೈನ ವಸೈ ಎಂಬಲ್ಲಿ ಈ ಚಾಂಪಿಯನ್‌ಷಿಪ್‌ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧನೆ ಪೂರೈಸಿದ್ದಾರೆ. ಶಿವಮೊಗ್ಗದ ಈ ಆಟಗಾರ ಮೂರು ಚಾಂಪಿಯನ್‌ಷಿಪ್‌ಗಳಲ್ಲಿ ಒಂದೂ ಪಂದ್ಯ ಸೋತಿಲ್ಲ ಎನ್ನುವುದು ವಿಶೇಷ. ಅವರ ಸದ್ಯದ ಫಿಡೆ ರೇಟಿಂಗ್‌ 2043. ದೃಷ್ಟಿದೋಷವುಳ್ಳ ಆಟಗಾರರ ರೇಟಿಂಗ್‌ ಯಾದಿಯಲ್ಲಿ 23 ವರ್ಷದ ಕಿಶನ್‌ ಎರಡು ವರ್ಷಗಳಿಂದ ಮುಂಚೂಣಿಯಲ್ಲಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯವರಾದ ಕಿಶನ್‌, ಹುಟ್ಟಿ ಬೆಳೆದಿದ್ದು ಶಿವಮೊಗ್ಗದಲ್ಲಿ. ಅವರಿಗೆ ಜನ್ಮದತ್ತವಾಗಿ ಶೇ 75ರಷ್ಟು ಅಂಧತ್ವವಿತ್ತು. ಅವರಿಗೆ ಚೆಸ್‌ನಲ್ಲಿ ಆಸಕ್ತಿ ಮೂಡಿಸಿದವರು ಸೋದರಮಾವ ಸಂತೋಷ್‌ ಎಂಬುವವರು. ಸಂತೋಷ್‌ ಅವರೇ ಆರನೇ ತರಗತಿ ಓದುತ್ತಿದ್ದ ಕಿಶನ್‌ ಅವರನ್ನು ಶಿವಮೊಗ್ಗದ ನಳಂದ ಚೆಸ್‌ ಅಕಾಡೆಮಿಗೆ ದಾಖಲಿಸಿದ್ದರು. ಈ ಅಕಾಡೆಮಿ ಸ್ಥಾಪಿಸಿದ ಶ್ರೀಕೃಷ್ಣ ಉಡುಪ ಅವರೂ ಕೂಡ ದೃಷ್ಟಿಸಮಸ್ಯೆ ಹೊಂದಿರುವ ಆಟಗಾರರೇ. ಅವರು 2006ರಲ್ಲಿ ಅಂಧರ ರಾಷ್ಟ್ರೀಯ ‘ಎ’ ಚಾಂಪಿಯನ್‌ಷಿಪ್‌ನಲ್ಲಿ ವಿಜೇತರಾಗಿದ್ದರು. ಉಡುಪ, ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಭಾಗವಹಿಸಿದ್ದರು. ಎಸ್ಸೆಸ್ಸೆಲ್ಸಿಯವರೆಗೆ ಅಲ್ಲಿ ತರಬೇತಿ ಪಡೆದ ಕಿಶನ್‌ ನಂತರ ಸ್ವಂತವಾಗಿ ಅಭ್ಯಾಸದಲ್ಲಿ ತೊಡಗಿದರು. ಅವರು ಅಂಧರ ಚೆಸ್‌ ಟೂರ್ನಿಯಲ್ಲಿ ಸಕ್ರಿಯವಾಗಿ ತೊಡಗುವ ಮೊದಲು ರಾಜ್ಯ ಮಟ್ಟದ ಓಪನ್‌ ರ್‍ಯಾಪಿಡ್‌ ಚೆಸ್‌ ಟೂರ್ನಿಗಳಲ್ಲಿ ಆಡುತ್ತಿದ್ದರು. ಅಲ್ಲೂ ಅವರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು ಇದೆ. ಎಸ್‌ಜಿಎಫ್‌ಐ ನಡೆಸುವ ರಾಷ್ಟ್ರೀಯ ಶಾಲೆಗಳ ಚೆಸ್‌ ಟೂರ್ನಿಯಲ್ಲಿ ಎರಡು ಬಾರಿ ರಜತ ಪದಕ ಕೊರಳಿಗೇರಿಸಿಕೊಂಡಿದ್ದರು. ಕುವೆಂಪು ವಿಶ್ವವಿದ್ಯಾಲಯ ಚೆಸ್‌ ತಂಡಕ್ಕೆ ನಾಯಕರೂ ಆಗಿದ್ದರು. ಉತ್ತಮ ಸಾಧನೆ ಕಿಶನ್‌ ದೃಷ್ಟಿದೋಷವುಳ್ಳವರ ಚೆಸ್‌ ಟೂರ್ನಿಯಲ್ಲಿ ಮೊದಲು ಭಾಗವಹಿಸಿದ್ದು 2011ರಲ್ಲಿ. ಆ ವರ್ಷ ನಡೆದ ಓಪನ್‌ ರೇಟಿಂಗ್‌ ಟೂರ್ನಿಯಲ್ಲಿ ಅವರಿಗೆ ಎರಡನೇ ಸ್ಥಾನ. 2011ರಲ್ಲೇ ನಡೆದ ಅಂಧರ ‘ಬಿ’ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ. ಇದರ ಬೆನ್ನಿಗೇ ನಡೆದ ರಾಷ್ಟ್ರೀಯ ‘ಎ’ ಚಾಂಪಿಯನ್‌ಷಿಪ್‌ನಲ್ಲೂ ರನ್ನರ್‌ ಅಪ್‌ ಸ್ಥಾನ. ನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. 2013, 2014 ಮತ್ತು ಈ ವರ್ಷ ಅವರೇ ಚಾಂಪಿಯನ್‌ ಪಟ್ಟಕ್ಕೆ ಏರಿದ್ದಾರೆ. ಇದರ ಮಧ್ಯ ಅಂತರರಾಷ್ಟ್ರೀಯ ಟೂರ್ನಿಗಳಲ್ಲೂ ಆಡಿದ್ದಾರೆ. 2011ರಲ್ಲಿ ಗ್ರೀಸ್‌ನಲ್ಲಿ ನಡೆದ ವಿಶ್ವ ಜೂನಿಯರ್‌ ಅಂಧರ ಚಾಂಪಿಯನ್‌ಷಿಪ್‌ನಲ್ಲಿ 6ನೇ ಸ್ಥಾನ. 2012ರಲ್ಲಿ ಚೆನ್ನೈನಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ. ಆ ಕೂಟದಲ್ಲಿ 30 ರಾಷ್ಟ್ರಗಳ ಆಟಗಾರರು ಭಾಗವಹಿಸಿದ್ದರು. 2015ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 15ನೇ ಸ್ಥಾನ. ‘ಇದು ವಿಶ್ವದ ಪ್ರತಿಷ್ಠಿತ ಅಂಧರ ಚೆಸ್ ಪಂದ್ಯಾವಳಿಯಲ್ಲಿ ಭಾರತೀಯ ಆಟಗಾರನೊಬ್ಬನ ಶ್ರೇಷ್ಠ ಸಾಧನೆ’ ಎನ್ನುತ್ತಾರೆ ಅವರು ಹೆಮ್ಮೆಯಿಂದ. ‘ನನ್ನ ತಾಯಿ ಗೀತಾ ಶಿವಮೊಗ್ಗದಲ್ಲಿ ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದು ಅವರೇ ನನಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಶಿವಮೊಗ್ಗದವರೇ ಆದ ಚೆಸ್‌ ಆರ್ಬಿಟರ್‌ ಮಂಜುನಾಥ ಅವರ ಬೆಂಬಲ ಮರೆಯುವಂತಿಲ್ಲ.ಸಾಕಷ್ಟು ಟೂರ್ನಿಗಳಿಗೆ ನನ್ನನ್ನು ಕರೆದುಕೊಂಡು ಹೋಗಿದ್ದಾರೆ’ ಎನ್ನುತ್ತಾರೆ ಕಿಶನ್‌. ಇತ್ತೀಚೆಗಷ್ಟೇ ಕುವೆಂಪು ವಿಶ್ವವಿದ್ಯಾಲಯ ಎಂ.ಎ. ಅರ್ಥಶಾಸ್ತ್ರ ವ್ಯಾಸಂಗವನ್ನು ಪೂರೈಸಿರುವ 24 ವರ್ಷದ ಕಿಶನ್‌ಗೆ ಚೆಸ್‌ನಲ್ಲಿ ಇನ್ನಷ್ಟು ಸಾಧಿಸುವ ಕನಸೂ ಇದೆ. ‘ಮ್ಯಾಸಿಡೋನಿಯಾದಲ್ಲಿ ಮುಂದಿನ ವರ್ಷ ಒಲಿಂಪಿಯಾಡ್‌ ನಿಗದಿಯಾಗಿದೆ. ಈ ಟೂರ್ನಿಗೆ ಆಯ್ಕೆಯಾಗಿದ್ದು, ಅದರಲ್ಲಿ ಉತ್ತಮ ಸಾಧನೆ ತೋರುವುದು ನನ್ನ ಗುರಿ. ಅದಕ್ಕೂ ಮೊದಲು ಏಷ್ಯನ್‌ ಚಾಂಪಿಯನ್‌ಷಿಪ್‌ ನಡೆಯಲಿದ್ದು, ಆ ಟೂರ್ನಿಗೂ ಸಿದ್ಧತೆ ನಡೆಸುತ್ತಿದ್ದೇನೆ’ ಎನ್ನುತ್ತಾರೆ ಅವರು ವಿಶ್ವಾಸದಿಂದ. ಈ ಚಾಂಪಿಯನ್‌ಷಿಪ್‌ ಮಣಿಪಾಲದಲ್ಲಿ ನಡೆಯುವ ಸಾಧ್ಯತೆ ಇದೆ. ದೃಷ್ಟಿಯ ತೊಂದರೆ ಇರುವ ಆಟಗಾರರು ಸಾಮಾನ್ಯವಾಗಿ ಅಭ್ಯಾಸ ನಡೆಸುವುದು ‘ಜಾಸ್‌’ ಎಂಬ ಸಾಫ್ಟ್‌ವೇರ್‌ ಬಳಸಿ. ಈ ತಂತ್ರಾಂಶ ಪದಗಳನ್ನು ಓದಿ ಹೇಳುತ್ತದೆ ಎನ್ನುತ್ತಾರೆ ಅವರು. ಆರ್ಬಿಟರ್‌ ಅನಿಸಿಕೆ... ಚೆಸ್‌ನಲ್ಲಿ ತೀರ್ಪುಗಾರ ಅಥವಾ ರೆಫ್ರಿ ಸ್ಥಾನ ನಿರ್ವಹಿಸುವವರಿಗೆ ಆರ್ಬಿಟರ್ ಎಂಬ ಪದ ಬಳಸಲಾಗುತ್ತದೆ. ಅಂಧ ಆಟಗಾರರ ಚೆಸ್‌ ಟೂರ್ನಿಗಳಿಗೆ ಸಕ್ರಿಯವಾಗಿ ಆರ್ಬಿಟರ್‌ ಆಗಿರುವವರಲ್ಲಿ ಶಿವಮೊಗ್ಗದ ಮಂಜುನಾಥ್ ಎಂ. ಒಬ್ಬರು. ಇವರು ಐಬಿಸಿಎ (ಇಂಟರ್‌ನ್ಯಾಷನಲ್‌ ಬ್ರೇಲಿ ಚೆಸ್‌ ಅಸೋಸಿಯೇಷನ್‌)ನಿಂದ ಮಾನ್ಯತೆ ಪಡೆದ ದೇಶದ ಇಬ್ಬರು ಆರ್ಬಿಟರ್‌ಗಳಲ್ಲಿ ಒಬ್ಬರು. ಅಂಧ ಆಟಗಾರರ ನ್ಯಾಷನಲ್‌ ‘ಎ’, ನ್ಯಾಷನಲ್‌ ‘ಬಿ’, ಫಿಡೆ ಟೂರ್ನಿ ಸೇರಿದಂತೆ ಸುಮಾರು 20 ಟೂರ್ನಿಗಳಲ್ಲಿ ಆರ್ಬಿಟರ್‌ ಆಗಿ ಅವರು ಕಾರ್ಯನಿರ್ವಹಿಸಿದ್ದಾರೆ. ‘ಅಂಧ ಆಟಗಾರರಿಗಾಗಿ ರೂಪಿಸುವ ಬೋರ್ಡ್‌ನ ಕಪ್ಪು ಚೌಕಗಳು ಮಾತ್ರ ಸ್ವಲ್ಪ ಉಬ್ಬಿದಂತಿರುತ್ತವೆ. ಕಾಯಿಗಳಲ್ಲಿ ಮೇಲ್ಭಾಗದಲ್ಲಿ ಚುಕ್ಕೆಯಂಥ ರಚನೆ ಇರುತ್ತದೆ. ಇಲ್ಲಿ ಇರುವ ರಿಯಾಯಿತಿ ಎಂದರೆ ಚೆಸ್‌ ಕಾಯಿಯೊಂದನ್ನು ಮುಟ್ಟಿದರೆ (ಟಚ್‌ ಪೀಸ್‌) ಅದನ್ನೇ ನಡೆಸಬೇಕೆಂಬ ಕಡ್ಡಾಯ ಇಲ್ಲ. ಆದರೆ ಕಾಯಿಯನ್ನು ಎತ್ತಿದರೆ (ಲಿಫ್ಟ್‌ ಪೀಸ್‌) ಮಾತ್ರ ಆ ಕಾಯಿಯನ್ನೇ ನಡೆಸಬೇಕಾಗುತ್ತದೆ. ನಡೆಗಳನ್ನು (ನೊಟೇಷನ್‌) ದಾಖಲಿಸಲು ಮಾಮೂಲಿಗಿಂತ ದಪ್ಪ ಗೆರೆಯ ದೊಡ್ಡ ಬಾಕ್ಸ್‌ವುಳ್ಳ ಸ್ಕೋರ್‌ಷೀಟ್‌ ನೀಡಲಾಗುತ್ತದೆ. ಪ್ರಮುಖ ಟೂರ್ನಿಗಳಲ್ಲಿ ನಡೆಗಳನ್ನು ದಾಖಲಿಸುವುದು ಕಡ್ಡಾಯ’ ಎನ್ನುತ್ತಾರೆ ಮಂಜುನಾಥ್‌. ಶೇ 40ಕ್ಕಿಂತ ಹೆಚ್ಚು ದೃಷ್ಟಿ ಸಮಸ್ಯೆಯಿರುವವರು ಮಾತ್ರ ಅಂಧರ ಚೆಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಎನ್ನುತ್ತಾರೆ ಅವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.