ಕರ್ನಾಟಕದಲ್ಲಿ ಸರ್ಕಾರದ ಬೆಂಬಲವೂ ಬೇಕಿದೆ ... ಕರ್ನಾಟಕದಲ್ಲಿ ಕುಸ್ತಿಗೆ ಭವ್ಯ ಪರಂಪರೆ ಇದೆ. ಪುರುಷರಂತೆ ಮಹಿಳೆಯರೂ ಕೂಡ ಅಖಾಡದಲ್ಲಿ ಎದುರಾಳಿಗಳಿಗೆ ಮಣ್ಣುಮುಕ್ಕಿಸಿ ಸೈ ಎನಿಸಿಕೊಂಡಿದ್ದಾರೆ. ರೀಟಾ ಪ್ರಿಯಾಂಕ, ರಾಣಿ ವೆಂಕಟೇಶ್‌, ಐಶ್ವರ್ಯ ದಳವಿ, ಅನುಶ್ರೀ, ಆತ್ಮಶ್ರೀ, ಪ್ರೇಮ ಹುಚ್ಚಣ್ಣ ಅವರು ಈ ಕ್ರೀಡೆಯಲ್ಲಿ ಹೆಜ್ಜೆ ಗುರುತು ಮೂಡಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ದಸರಾ ಕುಸ್ತಿ ಸ್ಥಳೀಯ ಜಟ್ಟಿಗಳ ತೋಳ್ಬಲ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಹೀಗಿದ್ದರೂ ಕೂಡ ರಾಜ್ಯದಲ್ಲಿ ಮಹಿಳಾ ಕುಸ್ತಿ ಇನ್ನೂ ಪ್ರಗತಿಯ ವೇಗ ಪಡೆದುಕೊಂಡಿಲ್ಲ. ಹರಿಯಾಣ, ಪಂಜಾಬ್‌ ರಾಜ್ಯಗಳ ಪೈಲ್ವಾನರಂತೆ ನಮ್ಮ ಹೆಣ್ಣುಮಕ್ಕಳಿಗೆ ಏಷ್ಯನ್‌, ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕಕ್ಕೆ ಮುತ್ತಿಕ್ಕಲು ಆಗುತ್ತಿಲ್ಲ. ಹಾಗಂತ ನಮ್ಮಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಈ ಕ್ರೀಡೆಯನ್ನೇ ಉಸಿರಾಗಿಸಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಸರಿಯಾದ ಪ್ರೋತ್ಸಾಹ ಸಿಗದೆ ಬಹುತೇಕರು ಬಹುಬೇಗನೆ ಈ ಕ್ರೀಡೆಯಿಂದ ವಿಮುಖವಾಗುತ್ತಿದ್ದಾರೆ. ಬೆಳಗಾವಿ, ದಾವಣಗೆರೆ ಮತ್ತು ಗದಗದಲ್ಲಿ ರಾಜ್ಯ ಸರ್ಕಾರ ಕ್ರೀಡಾಶಾಲೆಗಳನ್ನು ನಿರ್ಮಿಸಿದೆ. ಧಾರವಾಡದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ತಲೆ ಎತ್ತಿದೆ. ಆದರೆ ಇಲ್ಲಿ ಕುಸ್ತಿ ಕಲಿಯುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. ‘ನಮ್ಮ ನಾಡಿನಲ್ಲೂ ಸಾಕಷ್ಟು ಮಂದಿ ಪ್ರತಿಭಾನ್ವಿತ ಹೆಣ್ಣುಮಕ್ಕಳಿದ್ದಾರೆ. ಅವರಿಗೆಲ್ಲಾ ಸರ್ಕಾರದಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ಜೊತೆಗೆ ಬಹಳಷ್ಟು ಪೋಷಕರು ಮಕ್ಕಳಿಗೆ ಕುಸ್ತಿ ಕಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ಕುಸ್ತಿಯ ಪ್ರಗತಿಗೆ ಹಿನ್ನಡೆಯಾಗಿ ಪರಿಣಮಿಸಿದೆ ’ ಎಂದು ಹಿರಿಯ ಕುಸ್ತಿಪಟು ಮಠಪತಿ ‘ಪ್ರಜಾವಾಣಿ’ ಜೊತೆ ಅಸಮಾಧಾನ ತೋಡಿಕೊಂಡರು. ‘ಚೀನಾ, ಜಪಾನ್‌ನಂತಹ ದೇಶಗಳಲ್ಲಿ 6000 ಕ್ಕೂ ಹೆಚ್ಚು ಕುಸ್ತಿ ಅಕಾಡೆಮಿಗಳಿವೆ. ಹರಿಯಾಣವನ್ನೇ ಉದಾಹರಣೆಯಾಗಿ ತೆಗೆದು ಕೊಳ್ಳುವುದಾದರೆ ಅಲ್ಲಿ ಪ್ರತಿ ಮನೆಯಲ್ಲೂ ಎಳವೆಯಿಂದಲೇ ಹೆಣ್ಣು ಮಕ್ಕಳಿಗೆ ಕುಸ್ತಿ ಕಲಿಸುತ್ತಾರೆ. ಸರ್ಕಾರವೂ ಅವರಿಗೆ ಬೆಂಬಲವಾಗಿ ನಿಂತಿದೆ. ಆದರೆ ನಮ್ಮಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ಇದೆ. ಈಗ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕುಸ್ತಿ ಉಸಿರಾಡುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಈ ಕ್ರೀಡೆ ಹೇಳ ಹೆಸರಿಲ್ಲದಂತಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು. ‘ಕೋಚ್‌ಗಳಿಗೆ ಸರ್ಕಾರದಿಂದ ಸರಿಯಾದ ಸಂಬಳ ಸಿಗುತ್ತಿಲ್ಲ. ಹೀಗಾಗಿ ಜೀವನೋಪಾಯಕ್ಕಾಗಿ ಅವರು ಇನ್ನೊಂದು ಕೆಲಸ ಮಾಡಬೇಕಾದ ಸ್ಥಿತಿ ಇದೆ. ಹೀಗಿದ್ದಾಗ ಅವರಿಂದ ಹೇಗೆ ಗುಣಮಟ್ಟದ ತರಬೇತಿ ನಿರೀಕ್ಷಿಸಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು. ‘ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯವರು ಇತರ ಕ್ರೀಡೆಗಳಂತೆ ಕುಸ್ತಿಗೂ ಸಾಕಷ್ಟು ಬೆಂಬಲ ನೀಡುತ್ತಿ ದ್ದಾರೆ. ಅಲ್ಲಿ ಕಲಿತ ಅನುಶ್ರೀ ಮತ್ತು ಆತ್ಮಶ್ರೀ ಅವರು ರಾಜ್ಯ ಮತ್ತು ರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ನೀಡುತ್ತಿದ್ದಾರೆ. ಆಳ್ವಾಸ್‌ ಸಂಸ್ಥೆಯಂತೆ ಇತರ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರ ಮುಂದೆ ಬರಬೇಕು. ಹೀಗಾದಾಗ ಮಾತ್ರ ಮುಂದೊಂದು ದಿನ ನಮ್ಮ ನಾಡಿನ ಹೆಣ್ಣು ಮಕ್ಕಳೂ ಸಾಕ್ಷಿ ಮಲಿಕ್‌ ಅವರಂತೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಡುವುದನ್ನು ನೋಡಬಹುದು’ ಎಂದರು. ಪ್ರೇಮಾ ಬಗ್ಗೆ ಪ್ರೇಮಾ 2012ರಲ್ಲಿ ಕಜಕಸ್ತಾನದಲ್ಲಿ ನಡೆದ ಸಬ್‌ ಜೂನಿಯರ್‌ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನ 38 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಈ ಸಾಧನೆ ಮಾಡಿದ ರಾಜ್ಯದ ಏಕೈಕ ಆಟಗಾರ್ತಿ ಎನಿಸಿದ್ದಾರೆ. ಅದೇ ವರ್ಷ ಅಜರ್‌ಬೈಜಾನ್‌ನ ಬಾಕುವಿನಲ್ಲಿ ಜರುಗಿದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಪಡೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.