ಮದ್ದಿಗೆ ಹೋದ ಮಾನ... ಭಾರತದ ಕ್ರೀಡಾಪಟುಗಳು ರಿಯೊ ಒಲಿಂಪಿಕ್ಸ್‌ನಲ್ಲಿ ಎಷ್ಟು ಪದಕಗಳನ್ನು ಗೆದ್ದು ಬರಲಿದ್ದಾರೆ? ಲಂಡನ್ ಒಲಿಂಪಿಕ್ಸ್‌ಗಿಂತಲೂ ಉತ್ತಮ ಸಾಧನೆಯನ್ನು ನಮ್ಮ ಅಥ್ಲೀಟ್‌ಗಳು ಈಗ ಮಾಡಲಿದ್ದಾರೆಯೇ? ಎಂಬ ಲೆಕ್ಕಾಚಾರಗಳು ಕ್ರೀಡಾಪ್ರೇಮಿಗಳ ಹರಟೆಕಟ್ಟೆಯಲ್ಲಿ ಚರ್ಚೆ ವಸ್ಸುಗಳಾಗಿದ್ದಾಗಲೇ ಉದ್ದೀಪನಾ ಮದ್ದು ಸೇವನೆಯ ಪ್ರಕರಣಗಳು ಬರಸಿಡಿಲಿನಂತೆ ಅಪ್ಪಳಿಸಿವೆ. ಪದಕ ಗೆಲ್ಲುವ ನೆಚ್ಚಿನ ಕುಸ್ತಿಪಟು ನರಸಿಂಗ್ ಯಾದವ್ ಮತ್ತು ಶಾಟ್‌ಪಟ್ ಅಥ್ಲೀಟ್ ಇಂದರ್‌ಜೀತ್ ಸಿಂಗ್ ಅವರು ಉದ್ದೀಪನಾ ಮದ್ದು ಸೇವನೆ ಪ್ರಕರಣ ವಿವಾದದಲ್ಲಿ ಸಿಲುಕಿರುವುದು ಆತಂಕ ಮೂಡಿಸಿದೆ. ‘ನನ್ನನ್ನು ಸಿಕ್ಕಿಹಾಕಿಸಲು ಪಿತೂರಿ ನಡೆದಿದೆ’ ಎಂದು ನರಸಿಂಗ್ ಯಾದವ್ ಹೇಳಿದ್ದಾರೆ. ಅಲ್ಲದೇ ವಸತಿ ನಿಲಯದಲ್ಲಿದ್ದ ಇಬ್ಬರು ಕುಸ್ತಿಪಟುಗಳ ವಿರುದ್ಧ ದೂರು ಕೂಡ ನೀಡಿದ್ದಾರೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು (ನಾಡಾ) ವಿಚಾರಣೆ ನಡೆಸುತ್ತಿದೆ. ಇಂದರ್‌ಜೀತ್ ಅವರ ಎ ಮಾದರಿಯ ಪರೀಕ್ಷೆಯಲ್ಲಿ ಮದ್ದು ಸೇವಿಸಿದ್ದು ದೃಢಪಟ್ಟಿತ್ತು. ಆದರೆ, ಬಿ ಮಾದರಿಯಲ್ಲಿ ಮದ್ದಿನ ಅಂಶಗಳು ಪತ್ತೆಯಾಗಿರಲಿಲ್ಲ. ಇದರಿಂದಾಗಿ ಅವರು ರಿಯೊದಲ್ಲಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ಭಾರತದ ಕ್ರೀಡಾಕ್ಷೇತ್ರಕ್ಕೆ ಉದ್ದೀಪನಾ ಮದ್ದು ಆಘಾತ ನೀಡುತ್ತಿರುವುದು ಇದೇ ಮೊದಲೇನಲ್ಲ. ಏಷ್ಯಾ ಖಂಡದ ಚೀನಾ, ಜಪಾನ್, ಥಾಯ್ಲೆಂಡ್ ದೇಶಗಳಿಗೆ ಹೋಲಿಸಿದರೆ ನಮ್ಮ ಕ್ರೀಡೆ ಮತ್ತು ಕ್ರೀಡಾಪಟುಗಳು ಇನ್ನೂ ಬಹಳಷ್ಟು ಹಿಂದುಳಿದಿದ್ದೇವೆ. ಇದೀಗ ಸ್ವಲ್ಪ ಬೆಳವಣಿಗೆಯತ್ತ ಸಾಗುತ್ತಿದ್ದೇವೆ. ಆದರೆ ಈ ಹಂತದಲ್ಲಿಯೇ ನಾವು ವಾಮಮಾರ್ಗದ ಕಳಂಕ ಹೊತ್ತರೆ ಎಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ? 2009ರಿಂದ ಇಲ್ಲಿಯವರೆಗೆ ಭಾರತದ 689 ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವನೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಮಹತ್ವದ ಟೂರ್ನಿಗಳಲ್ಲಿ ಸಿಕ್ಕಿಬಿದ್ದು ತಮ್ಮ ಭವಿಷ್ಯವನ್ನೂ ಹಾಳು ಮಾಡಿಕೊಂಡಿದ್ದಾರೆ. ತಾವು ಪ್ರತಿನಿಧಿಸಿದ ದೇಶ, ಸಂಸ್ಥೆಗಳಿಗೂ ಕಳಂಕ ಮೆತ್ತಿದ್ದಾರೆ. 2015ರಲ್ಲಿ ಅತಿ ಹೆಚ್ಚು ನಿಷೇಧಿತ ಮದ್ದು ಬಳಕೆ ಮಾಡುವ ದೇಶಗಳ ಪಟ್ಟಿಯನ್ನು ವಾಡಾ ಬಿಡುಗಡೆ ಮಾಡಿತ್ತು. ಅದರಲ್ಲಿ ಭಾರತ ಮೂರನೇ ಸ್ಥಾನ ಪಡೆದಿತ್ತು. ರಷ್ಯಾ ಮತ್ತು ಇಟಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದವು. ಈ ಸಮಸ್ಯೆಯು ಪೆಡಂಭೂತದಂತೆ ಬೆಳೆಯಲು ಹಲವು ಕಾರಣಗಳಿವೆ. ಯಶಸ್ಸಿನ ಹಪಾಹಪಿ ಭಾರತದಲ್ಲಿ ಎರಡು ದಶಕಗಳಿಂದಲೂ ಕ್ರೀಡಾಪಟುಗಳು ಮದ್ದು ಸೇವನೆಯ ಜಾಲದಲ್ಲಿ ಸಿಕ್ಕಿಬಿದ್ದ ಹತ್ತಾರು ಉದಾಹರಣೆಗಳು ಇವೆ. ವೇಟ್‌ಲಿಫ್ಟರ್‌ ಕುಂಜುರಾಣಿದೇವಿ, ಸನಮಾಚಾ ಚಾನು, ಸತೀಶ್ ರೈ, ಅಥ್ಲೀಟ್ ಅಶ್ವಿನ ಅಕ್ಕುಂಜಿ, ಸೀಮಾ ಪೂನಿಯಾ ಅಂಟಿಲ್, ಆಕಾಶ್ ಅಂಟಿಲ್, ಸಿನಿ ಜೋಸ್, ಮನದೀಪ್ ಕೌರ್, ಅನಿಲ್ ಕುಮಾರ್ ಅವರು ತಾವು ಗೆದ್ದ ಪದಕ ಕಳೆದುಕೊಂಡಿದ್ದರು. ಆದರೂ ಹೊಸ ಪೀಳಿಗೆಯ ಅಥ್ಲೀಟ್‌ಗಳು ಇತಿಹಾಸದಿಂದ ಪಾಠ ಕಲಿತಿಲ್ಲ. ಪದಕ ಗೆದ್ದವರು ಮಾಧ್ಯಮಗಳ ಮೂಲಕ ಇಡೀ ಕಣ್ಮಣಿ ಯಾಗುತ್ತಾರೆ. ಹಣ, ಉನ್ನತ ಹುದ್ದೆಗಳು ಒಲಿಯುತ್ತವೆ. ಭಾರತದ ಸಾಮಾಜಿಕ, ಆರ್ಥಿಕ ಸ್ಥಿತಿಯಲ್ಲಿ ಇವೆಲ್ಲವೂ ಜೀವ ಮಾನದ ಕನಸುಗಳೇ ಅಲ್ಲವೇ? ಅದಕ್ಕಾಗಿ ಈ ವಾಮ ಮಾರ್ಗ ಹಿಡಿಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ರಷ್ಯಾ ದೇಶ ವಾಡಾದ (ವಿಶ್ವ ಉದ್ದೀಪನಾ ಮದ್ದು ತಡೆ ಘಟಕ) ಕೆಂಗಣ್ಣಿಗೆ ಗುರಿಯಾಗಿದೆ. ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಂತೆ ರಷ್ಯಾ ತಂಡವನ್ನು ನಿಷೇಧಿಸಲಾಗಿದೆ. ರಷ್ಯಾ, ಉಕ್ರೇನ್, ಉಜ್ಬೇಕಿಸ್ತಾನ್, ಕಜಕಸ್ತಾನ್ ದೇಶಗಳು ಉದ್ದೀಪನ ಮದ್ದು ನೀಡುವಲ್ಲಿ ಕುಖ್ಯಾತಿ ಗಳಿಸಿವೆ. ಆದರೆ, ನಮ್ಮ ದೇಶದ ಫೆಡರೇಷನ್‌ಗಳು ಕ್ರೀಡಾಪಟುಗಳನ್ನು ‘ವಿಶೇಷ ತರಬೇತಿ’ಗಾಗಿ ಅದೇ ದೇಶಗಳಿಗೆ ಕಳುಹಿಸುತ್ತವೆ. ಕಳೆದ ವಾರ ಡಿಸ್ಕಸ್ ಥ್ರೋ ಅಥ್ಲೀಟ್ ಸೀಮಾ ಪೂನಿಯಾ ಅವರು ರಷ್ಯಾಗೆ ತೆರಳಿದ್ದರು. ಅವರು ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ಮತ್ತು ಐಎಎಎಫ್‌ನಿಂದ ಅನುಮತಿಯನ್ನು ಪಡೆಯದೇ ರಷ್ಯಾಕ್ಕೆ ತೆರಳಿದ್ದು ಯಾಕೆಂಬುದು ಗುಟ್ಟೇನಲ್ಲ. 2000 ನೇ ವರ್ಷದಲ್ಲಿ ಸೀಮಾ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಆದರೆ, ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಪದಕ ಕಳೆದುಕೊಂಡಿದ್ದರು. ಎರಡು ವರ್ಷದ ನಿಷೇಧದ ನಂತರ ಕ್ರೀಡೆಗೆ ಮರಳಿದ್ದರು. ಈಗ ಒಲಿಂಪಿಕ್ಸ್‌ ತಂಡದಲ್ಲಿ ಅವರು ಅರ್ಹತೆ ಪಡೆದಿದ್ದಾರೆ. ವೃತ್ತಿಪರತೆಯ ಕೊರತೆ ಆದರೆ ಕ್ರೀಡಾಕ್ಷೇತ್ರದಲ್ಲಿ ಇನ್ನೂ ವೃತ್ತಿಪರತೆ ಬಂದಿಲ್ಲ. ಅದೇ ಕಾರಣಕ್ಕಾಗಿ ವೈಜ್ಞಾನಿಕ ಪದ್ಧತಿಯ ಅರಿವು ಕೂಡ ಮೂಡಿಲ್ಲ. ಮುಖ್ಯವಾಗಿ ತಂಡದ ಕೋಚ್‌, ಮ್ಯಾನೇಜರ್ ಮತ್ತು ಕ್ರೀಡಾಪಟುಗಳಿಗೆ ನಿಷೇಧಿತ ಮದ್ದುಗಳ ಅರಿವು ಇರಬೇಕು. ಅದಕ್ಕಾಗಿ ನಾಡಾ ತನ್ನ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಪಟ್ಟಿಯನ್ನೇ ಹಾಕಿದೆ. ಕ್ರೀಡಾ ವಸತಿ ನಿಲಯಗಳಲ್ಲಿ, ಶಿಬಿರಗಳಲ್ಲಿ ಜಾಗೃತಿ ಮೂಡಿಸಲು ಉಪನ್ಯಾಸ, ಪ್ರಚಾರ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ. ಆದರೆ, ನಾಡಾದಲ್ಲಿಯೇ ತಜ್ಞ ವೈದ್ಯರ ಕೊರತೆ ಇದೆ. ಇದು ‘ಸಭ್ಯ ಆಟ’ದ ( ) ಆಶಯಕ್ಕೆ ಹಿನ್ನಡೆಯುಂಟು ಮಾಡಿದೆ. ಆರಂಭಿಕ ಹಂತದ ಕ್ರೀಡಾಕೂಟಗಳಿಂದಲೇ (ಜೂನಿಯರ್ ರಾಷ್ಟ್ರೀಯ, ರಾಜ್ಯ ಮಟ್ಟದ ಕೂಟಗಳು) ಮದ್ದು ಸೇವನೆ ಪರೀಕ್ಷೆಗಳ ವ್ಯವಸ್ಥೆ ಮಾಡುವಲ್ಲಿ ಕೂಡ ಹಿನ್ನಡೆ ಉಂಟಾಗಿದೆ. ಪರೀಕ್ಷೆಯ ವೆಚ್ಚವು ದುಬಾರಿಯಾಗಿರುವುದೇ (ಒಂದು ಟೆಸ್ಟ್‌ಗೆ ಕನಿಷ್ಠ ₹ 15 ಸಾವಿರ ವೆಚ್ಚ ತಗಲುತ್ತದೆ) ಇದಕ್ಕೆ ಕಾರಣ. ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದ್ದ ರಾಷ್ಟ್ರೀಯ ವೇಟ್‌ಲಿಫ್ಟಿಂಗ್, ದೇಹದಾರ್ಢ್ಯ ಸ್ಪರ್ಧೆಗಳ ಸಂದರ್ಭದಲ್ಲಿಯೂ ಕ್ರೀಡಾಂಗಣದ ಹಿಂದೆ ಅಪಾರ ಪ್ರಮಾಣದಲ್ಲಿ ಸಿರಿಂಜ್‌ಗಳು, ಮದ್ದಿನ ಸೀಸೆಗಳು ಪತ್ತೆಯಾಗಿದ್ದವು. ಇವತ್ತು ಇಂಟರ್‌ನೆಟ್, ಸ್ಮಾರ್ಟ್‌ಫೋನ್‌ಗಳ ಮೂಲಕ ಎಲ್ಲ ಮಾಹಿತಿಗಳನ್ನು ಪಡೆಯುವ ಕೌಶಲ್ಯ ಬಹುತೇಕ ಎಲ್ಲ ಕ್ರೀಡಾಪಟುಗಳಿಗೂ ಇದೆ. ಆದ್ದರಿಂದ ಉದ್ದೀಪನಾ ಮದ್ದು ಸೇವನೆಯ ಕಳಂಕದಿಂದ ದೂರ ಉಳಿಯುವುದು ಕಷ್ಟವೇನಲ್ಲ. ಕ್ರೀಡೆಯ ಮೂಲ ಆಶಯವಾದ ‘ಆರೋಗ್ಯ ವೃದ್ಧಿ’ ಮತ್ತು ‘ಮನೋಲ್ಲಾಸ’ದ ಗುರಿ ಸಾಧನೆಯೇ ಪ್ರಮುಖವಾಗಬೇಕು. ಅದಕ್ಕೆ ಬೇಕಾಗಿರುವುದು ನೈತಿಕ ಪ್ರಜ್ಞೆ ಮಾತ್ರ. *** ಯಶಸ್ಸಿಗೆ ಅಡ್ಡದಾರಿ ಇಲ್ಲ ನರಸಿಂಗ್ ಯಾದವ್ ಪ್ರಕರಣದಿಂದ ಬಹಳ ಬೇಸರವಾಗಿದೆ. ಆತನ ವಿರುದ್ಧ ಪಿತೂರಿ ನಡೆದಿರುವ ಸಾಧ್ಯತೆ ಹೆಚ್ಚು. ಒಲಿಂಪಿಕ್ಸ್‌ಗೆ ಈಗಾಗಲೇ ಆಯ್ಕೆಯಾಗಿರುವ ಕ್ರೀಡಾಪಟು ಇಂತಹ ಕೆಟ್ಟ ಸಾಹಸಕ್ಕೆ ಕೈಹಾಕುವುದಿಲ್ಲ ಎಂದು ನನಗನಿಸುತ್ತದೆ. ಅದರ ಅಗತ್ಯವೂ ಇಲ್ಲ. ಇದರಲ್ಲಿ ಸಾಯ್ ಇಲಾಖೆಯ ಬೇಜವಾಬ್ದಾರಿ, ಭದ್ರತೆ ಕೊರತೆ ಎದ್ದು ಕಾಣುತ್ತಿದೆ. ಕ್ರೀಡಾ ವಲಯದಲ್ಲಿ ಈ ಪಿಡುಗು ನಿಯಂತ್ರಿಸಲು ತಂಡದ ವೈದ್ಯರು, ಕೋಚ್‌ಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ಕ್ರೀಡಾಪಟುಗಳೂ ಜಾಗೃತರಾಗಬೇಕು. ಆಮಿಷಗಳಿಗೆ ಬಲಿಯಾಗಬಾರದು. ಯಶಸ್ಸಿಗೆ ಅಡ್ಡಹಾದಿ ಇಲ್ಲ ಎನ್ನುವುದು ಅರಿಯಬೇಕು. –ಎಂ.ಆರ್. ಪಾಟೀಲ. (ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಕುಸ್ತಿಪಟು) *** ದೇಶಭಕ್ತಿಯ ‘ಉದ್ದೀಪನ’ ಮುಖ್ಯ ಇವತ್ತು ಜಗತ್ತಲ್ಲಿ ಬಹಳಷ್ಟು ಮಂದಿ ಡ್ರಗ್ಸ್‌ ತೊಗೊಂಡೇ ಕಣಕ್ಕಿಳಿಯುತ್ತಾರೆ. ನಮಗೂ ಸಿಕ್ಕಿ ಬೀಳದಿರುವ ರೀತಿಯಲ್ಲಿ ಮದ್ದು ಬಳಸುವ ಕ್ರಮ ಹೇಳಿಕೊಡಿ, ನಿಮ್ಮ ಉಪದೇಶಗಳು ಬೇಡ. ನಾವು ಸೇವಿಸಿದ ಮದ್ದು ದೇಹದಿಂದ ಹೊರಹೋಗಲು ಎಷ್ಟು ಸಮಯ ಬೇಕು, ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ಹೇಳಿ ಎಂದು ಕೇಳುವ ಮಟ್ಟಕ್ಕೆ ಕ್ರೀಡಾಪಟುಗಳು ಇವತ್ತು ಬೆಳೆದಿದ್ದಾರೆ. ಇದು ಕಹಿ ಸತ್ಯ. ಉದ್ದೀಪನ ಮದ್ದು ಪಿಡುಗು ತಡೆಯಲು ಶಿಕ್ಷಣ ನೀಡುವುದು ಅಗತ್ಯ. ಆಟಗಾರರಿಗೆ ಚಿಕಿತ್ಸೆ ನೀಡುವ ವೈದ್ಯರು , ಜಿಮ್ನಾಷಿಯಂ ಟ್ರೇನರ್‌ಗಳು, ಕೋಚ್‌ಗಳಿಗೆ ಅರಿವು ಮೂಡಿಸಬೇಕು. ಆದರೆ, ಅದಕ್ಕೂ ಮಿಗಿಲಾಗಿ ಕ್ರೀಡಾಪಟುಗಳಲ್ಲಿ ನೈತಿಕತೆ ಬೆಳೆಯಬೇಕು. ದೇಶಭಕ್ತಿಯ ಪ್ರಜ್ಞೆ ಬೇರೂರಬೇಕು. ಅಂತರರಾಷ್ಟ್ರೀಯ ಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸುವುದೇ ದೊಡ್ಡ ಗೌರವ. – ಡಾ. ಕಿರಣ ಕುಲಕರ್ಣಿ,(ಫಿಫಾ, ಎಎಫ್‌ಸಿ, ಬಿಸಿಸಿಐ ಉದ್ದೀಪನ ಮದ್ದು ತಡೆ ಅಧಿಕಾರಿ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.