ಮಾನವತೆಯ ಸಂದೇಶದ ಮಹಾ ಪ್ರವಾಹ... ಬದುಕಿನ ಏಳು ಬೀಳುಗಳ ಹಾಗೆ ಅನೇಕ ಎಡರು ತೊಡರುಗಳನ್ನು ದಾಟಿಕೊಂಡು ಬಂದಿರುವ ಒಲಿಂಪಿಕ್ಸ್‌ ನಾವೆಲ್ಲರೂ ಒಂದು ಎನ್ನುವ ಸಂದೇಶ ಸಾರುತ್ತದೆ ಈ ಕುರಿತು ಪ್ರಮೋದ ಜಿ.ಕೆ. ವಿಶ್ಲೇಷಿಸಿದ್ದಾರೆ. ಪ್ರತಿ ಕ್ರೀಡೆಯಲ್ಲಿ ಒಬ್ಬರು ಸೋಲಲೇಬೇಕು, ಮತ್ತೊಬ್ಬರು ಗೆಲ್ಲಲೇಬೇಕು. ಇದು ಸಹಜ ನಿಯಮ. ಸೋತವರು ಗೆಲ್ಲುವುದಕ್ಕೆ ಮತ್ತೊಂದು ಅವಕಾಶ ಸಿಗುತ್ತದೆ. ಅದೇ ರೀತಿ ಬಿದ್ದವರು ಏಳುವುದಕ್ಕೆ, ಮತ್ತಷ್ಟು ಸಾಧನೆಗೆ ಅಣಿಯಾಗುವುದಕ್ಕೆ ಇನ್ನೊಂದು ವೇದಿಕೆ ಲಭಿಸುತ್ತದೆ. ಒಬ್ಬ ವ್ಯಕ್ತಿ ಬದುಕಿನಲ್ಲಿ ಎದುರಿಸುವ ಸೋಲು, ಅನುಭವಗಳಿಂದ ಕಲಿಯುವ ಪಾಠದಿಂದ ಗಟ್ಟಿಯಾ ಗುತ್ತಾ ಹೊಸ ವಿಚಾರಗಳಿಗೆ ಮುಕ್ತನಾಗುವಂತೆ ಕ್ರೀಡೆಯೂ ಪ್ರತಿ ಮನುಷ್ಯನ ಜೊತೆ ನಂಟು ಹೊಂದಿದೆ. ಒಲಿಂಪಿಕ್ಸ್‌ ಕೂಡ ಇದೇ ಸಂದೇಶವನ್ನು ಸಾರುತ್ತದೆ. ಆಧುನಿಕ ಒಲಿಂಪಿಕ್ಸ್‌ನ ಪ್ರವರ್ತಕ ಎನಿಸಿರುವ ಬ್ಯಾರನ್‌ ಡಿ ಕೂಬರ್ತಿ, ‘ಜೀವನದಲ್ಲಿ ಹೋರಾಡು ವುದು ಮುಖ್ಯವೇ ಹೊರತು ಜಯಿಸುವುದಲ್ಲ, ಅದೇ ರೀತಿ ಒಲಿಂಪಿಕ್ಸ್‌ನ ಮುಖ್ಯ ಗುರಿ ಪಾಲ್ಗೊಳ್ಳುವುದು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಉತ್ತಮವಾಗಿ ಹೋರಾಡುವುದು’ ಎನ್ನುವ ಅವರ ಅಭಿಪ್ರಾಯಕ್ಕೆ ಇಂದಿಗೂ ಸಹಮತವಿದೆ. ಆದ್ದರಿಂದ ಯಾವುದೇ ಕ್ರೀಡಾಪಟುವನ್ನು ನಿನ್ನ ಬದುಕಿನ ಆಸೆಯೇನು ಎಂದು ಪ್ರಶ್ನಿಸಿ ನೋಡಿ ‘ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು’ ಎನ್ನುವ ಉತ್ತರ ನೀಡುತ್ತಾನೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಹಣ ನೀಡುವು ದಿಲ್ಲ. ಪದಕವನ್ನು ಬಿಟ್ಟರೆ ಬೇರೆ ಏನನ್ನೂ ಕೊಡುವು ದಿಲ್ಲ. ಆದರೆ ಈ ಕೂಟದಲ್ಲಿ ಪದಕ ಗೆದ್ದವರನ್ನು ದೇಶ ಅತ್ಯಂತ ಪ್ರೀತಿ ಮತ್ತು ಅಭಿಮಾನದಿಂದ ಕಾಣುತ್ತದೆ. ಇಷ್ಟೇ ಆಗಿದ್ದರೆ ಒಲಿಂಪಿಕ್ಸ್‌ಗೆ ಮಹತ್ವ ಕೊಡುವ ಅಗತ್ಯವಿರಲಿಲ್ಲವೇನೋ. ಆದರೆ, ಒಲಿಂಪಿಕ್ಸ್‌ ಮಾನವ ಬದುಕಿನ ವಿಕಸನದ ಜೊತೆ ನಂಟು ಹೊಂದಿದೆ. ಮಾನವತೆಯ ಸಂದೇಶದ ಮಹಾ ಪ್ರವಾಹವವನ್ನೇ ಹರಿಸುತ್ತದೆ. ಧರ್ಮ, ಭಾಷೆ, ಗಡಿ ಎನ್ನುವ ಭೇದವಿಲ್ಲದೇ ನಾವೆಲ್ಲರೂ ಒಂದು ಎನ್ನುವ ಸಂದೇಶ ಸಾರುತ್ತದೆ. ಆದ್ದರಿಂದ ಪ್ರತಿ ಒಲಿಂಪಿಕ್ಸ್‌ ಬಂದಾಗಲು ಹೊಸ ದೊಂದು ಧ್ಯೇಯವಾಕ್ಯ ಸಿದ್ಧಪಡಿಸಲಾಗಿರುತ್ತದೆ. ರಿಯೊ ಒಲಿಂಪಿಕ್ಸ್‌ ಕೂಡ ಇದರಿಂದ ಹೊರತಲ್ಲ. ‘ಹೊಸ ಜಗತ್ತು’ ಎನ್ನುವ ಧ್ಯೇಯದೊಂದಿಗೆ ಕೂಟ ಆರಂಭವಾಗಿದೆ. ಇನ್ನೊಂದು ವಿಶೇಷವೆಂದರೆ ಈ ಬಾರಿ ನಿರಾಶ್ರಿತರ ನೋವುಗಳಿಗೆ ಸಾಂತ್ವನ ನೀಡುವ ಸಲುವಾಗಿ ಸಂಘಟಕರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಯುದ್ಧ ಮತ್ತು ಇನ್ನಿತರ ಕಾರಣಗಳಿಂದ ತಾಯ್ನಾಡನ್ನು ತೊರೆದು ವಲಸೆ ಹೋದ ಕ್ರೀಡಾ ಪಟುಗಳ ತಂಡ ರಿಯೊದಲ್ಲಿ ಪಾಲ್ಗೊಳ್ಳುತ್ತಿರುವುದು ಒಲಿಂಪಿಕ್ಸ್‌ನ ಘನತೆ ಹೆಚ್ಚಿಸಿದೆ. ಒಲಿಂಪಿಕ್ಸ್‌ ಆರಂಭವಾದಾಗಿನಿಂದಲೂ ಆನೆ ನಡೆದದ್ದೇ ದಾರಿ ಎಂದುಕೊಂಡು ಸಾಗಿ ಬಂದದ್ದಲ್ಲ. ಈ ಕೂಟವೂ ಅನೇಕ ಏಳುಬೀಳುಗಳನ್ನು ದಾಟಿಕೊಂಡೇ ಬಂದಿದೆ. ಗ್ರೀಕ್‌ನಲ್ಲಿ ರೋಮನ್ನರ ಪ್ರಾಬಲ್ಯ ಬಂದ ಬಳಿಕ ಪ್ರಾಚೀನ ಒಲಿಂಪಿಕ್ಸ್‌ ಮೂಲೆಗುಂಪಾಗ ತೊಡಗಿತು. ಹೀಗೆ ಮುಗಿದ ‘ಮಾನವತೆಯ ಸೆಲೆಯ ಒಲಿಂಪಿಕ್ಸ್‌’ಗೆ ಆಧುನಿಕ ಕಾಲದಲ್ಲಿ 1894ರಲ್ಲಿ ಮರುಜನ್ಮ ನೀಡುವ ಕಾರ್ಯ ನಡೆಯಿತು. ಮುಂದೆ ನಡೆದ ಒಲಿಂಪಿಕ್ಸ್‌ ಕೂಡ ಮಾನವತೆಯ ಸಂದೇಶವನ್ನೇ ಸಾರಿದೆ. ಫುಟ್‌ಬಾಲ್‌ ನಾಡಿನಲ್ಲಿ ಸಂಭ್ರಮ... ಸಾಂಬಾ ನಾಡು ಬ್ರೆಜಿಲ್‌ ಎಂದಾಕ್ಷಣ ಮೊದಲು ಕಣ್ಣ ಮುಂದೆ ಬರುವುದೇ ಫುಟ್‌ಬಾಲ್‌. ಜತೆಗೆ ಕಾಲ್ಚಳಕದ ಘಟಾನುಘಟಿ ಮೋಡಿಗಾರರು ನೆನಪಾಗುತ್ತಾರೆ. ಆದರೆ ಈಗ 15 ದಿವಸ ಫುಟ್‌ಬಾಲ್‌ ನಾಡಿನಲ್ಲಿ ಒಲಿಂಪಿಕ್ಸ್‌ ಸಂಭ್ರಮ ನಡೆಯುತ್ತಿದೆ. ವಿಶೇಷವೆಂದರೆ ವಿಶ್ವದ ದೊಡ್ಡ ಕೂಟಕ್ಕೆ ಆತಿಥ್ಯ ವಹಿಸಿರುವ ದಕ್ಷಿಣ ಆಮೆರಿಕದ ಮೊದಲ ದೇಶ ಎನ್ನುವ ಹೆಗ್ಗಳಿಕೆ ಬ್ರೆಜಿಲ್‌ ಪಾಲಾಗಿದೆ. ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವುದು ಈಗ ಪ್ರತಿಷ್ಠೆ ಎನಿಸಿದೆ. ಈ ವಿಷಯದಲ್ಲಿ ಯುರೋಪ್‌, ಉತ್ತರ ಅಮೆರಿಕದ್ದೇ ಪ್ರಾಬಲ್ಯ. ಲಂಡನ್‌ನಲ್ಲಿ ಮೂರು ಸಲ ಒಲಿಂಪಿಕ್ಸ್‌ ನಡೆದಿತ್ತು. ಅಥೆನ್ಸ್, ಪ್ಯಾರಿಸ್‌, ಲಾಸ್‌ ಏಂಜಲೀಸ್ ತಲಾ ಎರಡು ಸಲ ಒಲಿಂಪಿಕ್ಸ್ ಸಂಘಟಿಸಿದ್ದವು. ಏಷ್ಯಾದ ಯಾವ ರಾಷ್ಟ್ರ ಕೂಡ ಇದುವರೆಗೂ ಎರಡು ಬಾರಿ ಈ ಕೂಟದ ಆತಿಥ್ಯ ಪಡೆದಿಲ್ಲ. ಚೀನಾ ಒಂದು ಸಲವಷ್ಟೇ ಈ ಕೂಟವನ್ನು ಸಂಘಟಿಸಿದೆ. ಚೀನಾ ಒಲಿಂಪಿಕ್ಸ್‌ ಸಂಘಟಿಸುವ ಮೊದಲು ಟೋಕಿಯೊ 1964ರಲ್ಲಿಯೇ ಕೂಟ ಆಯೋಜಿಸಿತ್ತು. 2020ರಲ್ಲಿಯೂ ಆತಿಥ್ಯದ ಅವಕಾಶ ಜಪಾನ್‌ಗೆ ಲಭಿಸಿದೆ. ಸವಾಲು, ಸಂಭ್ರಮ ಷಿಕಾಗೊ (ಅಮೆರಿಕ), ಮ್ಯಾಡ್ರಿಡ್‌ (ಸ್ಪೇನ್‌), ಮತ್ತು ಟೊಕಿಯೊ (ಜಪಾನ್‌) ಜೊತೆ ಒಲಿಂಪಿಕ್ಸ್ ಆತಿಥ್ಯದ ಅವಕಾಶ ಪಡೆಯಲು ಪೈಪೋಟಿ ನಡೆಸಿದ್ದ ರಿಯೊ ಡಿ ಜನೈರೊ 2007ರಲ್ಲಿ ಇದರಲ್ಲಿ ಯಶಸ್ಸು ಕಂಡಿತು. ಆಗ ಬ್ರೆಜಿಲ್‌ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಒಲಿಂಪಿಕ್ಸ್‌ ಹತ್ತಿರ ಬಂದಂತೆಲ್ಲಾ ಸಾಂಬಾ ನಾಡಿನ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು, ಒಲಿಂಪಿಕ್ಸ್‌ ಆಯೋಜನೆಯನ್ನು ವಿರೋಧಿಸುವವರ ಚಟುವಟಿಕೆ, ಜೈಕಾ ವೈರಸ್‌ನ ಭೀತಿ ಹೆಚ್ಚುತ್ತಲೇ ಹೋಯಿತು. ಜೈಕಾ ಹರಡುವ ಶಂಕೆಯಿಂದ ಕೆಲ ಪ್ರಮುಖ ಕ್ರೀಡಾಪಟುಗಳು ಕೂಟದಲ್ಲಿ ಪಾಲ್ಗೊಳ್ಳು ವುದಿಲ್ಲ ಎಂದು ಹೇಳಿದರು. ಬ್ರೆಜಿಲ್‌ನಲ್ಲಿ ಒಲಿಂಪಿಕ್ಸ್‌ ನಡೆಸುವುದರಿಂದ ಕ್ರೀಡಾಪಟುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹತ್ತು ಸಾವಿರ ವೈದ್ಯರ ತಂಡ ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಗೆ ಪತ್ರ ಬರೆದಿತ್ತಲ್ಲದೇ, ಕೂಟ ವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿತ್ತು. ಈ ಎಲ್ಲಾ ಸವಾಲುಗಳ ನಡುವೆಯೂ ಬ್ರೆಜಿಲ್‌ ಒಲಿಂಪಿಕ್ಸ್‌ ಕೂಟವನ್ನು ಸಮರ್ಥವಾಗಿ ಸಂಘಟಿಸಿದೆ. ಅಷ್ಟೇ ಅಲ್ಲ ನಿರಾಶ್ರಿತರಿಗೆ ಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಟ್ಟು ಆತಿಥ್ಯ ರಾಷ್ಟ್ರ ಮತ್ತು ಐಒಸಿ ಒಲಿಂಪಿಕ್ಸ್‌ ಘನತೆಯನ್ನು ಎತ್ತಿ ಹಿಡಿದಿವೆ. ದೊಡ್ಡ ಕ್ರೀಡಾಕೂಟಗಳನ್ನು ಸಂಘಟಿಸುವುದು ಸಾಂಬಾ ನಾಡಿಗೆ ಹೊಸ ವಿಷಯವೇನಲ್ಲ. ಈ ದೇಶ 2011ರಲ್ಲಿ ವಿಶ್ವ ಮಿಲಿಟರಿ ಗೇಮ್ಸ್‌, 2013ರಲ್ಲಿ ಫಿಫಾ ಕಾನ್ಫೆಡರೇಷನ್‌ ಕಪ್‌, 2007ರಲ್ಲಿ ಪಾನ್‌ ಅಮೆರಿಕ ಕ್ರೀಡಾಕೂಟ ಮತ್ತು 2014ರಲ್ಲಿ ಫಿಫಾ ವಿಶ್ವಕಪ್ ಟೂರ್ನಿಗಳನ್ನು ಆಯೋಜಿಸಿತ್ತು. ಏಷ್ಯಾದ ಪ್ರಾಬಲ್ಯ ಏಕಿಲ್ಲ? ಮೊದಲ ಆಧುನಿಕ ಒಲಿಂಪಿಕ್ಸ್‌ನಲ್ಲಿ ಅಮೆರಿಕ, ಗ್ರೀಸ್‌, ಜರ್ಮನಿ, ಫ್ರಾನ್ಸ್‌, ಬ್ರಿಟನ್‌, ಆಸ್ಟ್ರೇಲಿಯಾ ರಾಷ್ಟ್ರಗಳೇ ಪದಕ ಗೆಲ್ಲುವಲ್ಲಿ ಮುಂಚೂಣಿಯಲ್ಲಿವೆ. 1960ರ ರೋಮ್‌ ಒಲಿಂಪಿಕ್ಸ್‌ನಲ್ಲಿಯೂ ರಷ್ಯಾ, ಅಮೆರಿಕ, ಜರ್ಮನಿ ದೇಶಗಳೇ ಮುಂದಿದ್ದವು. ಏಷ್ಯಾದ ಕ್ರೀಡಾ ಶಕ್ತಿಕೇಂದ್ರ ಎನಿಸಿರುವ ಚೀನಾ 1984ರ ಒಲಿಂಪಿಕ್ಸ್‌ ನಲ್ಲಿ ಪೂರ್ಣ ತಂಡವನ್ನು ಕಳುಹಿಸಲು ಆರಂಭಿಸಿತು. ಲಾಸ್‌ ಏಂಜಲೀಸ್‌ನಲ್ಲಿ ನಡೆದ ಕೂಟದಲ್ಲಿ 216 ಕ್ರೀಡಾಪಟುಗಳು ಪಾಲ್ಗೊಂಡು 32 ಪದಕಗಳನ್ನು ಜಯಿಸಿದರು. 1992 ಒಲಿಂಪಿಕ್ಸ್‌ನಲ್ಲಿ 54 ಪದಕಗಳನ್ನು ಚೀನಾ ಗೆದ್ದುಕೊಂಡಿತು. ಹೀಗೆ ಹಂತ ಹಂತವಾಗಿ ಚೀನಾ ಒಲಿಂಪಿಕ್ಸ್‌ನಲ್ಲಿ ತನ್ನ ಪ್ರಾಬಲ್ಯ ವಿಸ್ತರಿಸಿ ಕೊಳ್ಳುತ್ತಾ ಸಾಗಿತು. 2008ರ ಕೂಟಕ್ಕೆ ಆತಿಥ್ಯ ವಹಿಸಿದ್ದಾಗ ಈ ದೇಶ ನೂರು ಪದಕಗಳನ್ನು ಜಯಿಸಿತು. ಲಂಡನ್‌ನಲ್ಲಿ 88 ಪದಕಗಳನ್ನು ಗೆದ್ದಿತ್ತು. 1912ರಿಂದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಜಪಾನ್‌, 1948ರಲ್ಲಿ ಮೊದಲ ಬಾರಿಗೆ ಭಾಗಿಯಾಗಿದ್ದ ಪಾಕಿಸ್ತಾನಕ್ಕೆ ಪ್ರಾಬಲ್ಯ ಮೆರೆಯಲು ಇನ್ನೂ ಸಾಧ್ಯವಾಗಿಲ್ಲ. ಭಾರತ ಕೂಡ 23 ಸಲ ಒಲಿಂಪಿಕ್ಸ್‌ನಲ್ಲಿ ಪೈಪೋಟಿ ನಡೆಸಿದ್ದು, 26 ಪದಕಗಳನ್ನಷ್ಟೇ ಜಯಿಸಿದೆ. ಆದ್ದರಿಂದ ಈ ಕೂಟದಲ್ಲಿ ಏಷ್ಯಾದ ರಾಷ್ಟ್ರಗಳು ಗಟ್ಟಿನೆಲೆ ಕಂಡುಕೊಳ್ಳಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.