ಜಿಮ್ನಾಸ್ಟಿಕ್ಸ್‌ ಇದು ಮೊದಲ ಹೆಜ್ಜೆ ಕಳೆದ ಕೆಲದಿನಗಳಿಂದ ಭಾರತದ ಕ್ರೀಡಾಪ್ರೇಮಿಗಳು ಜಿಮ್ನಾಸ್ಟಿಕ್ಸ್‌ ಬಗ್ಗೆ ಹೆಚ್ಚೆಚ್ಚು ಮಾಹಿತಿ ಕಲೆಹಾಕುತ್ತಿದ್ದಾರೆ. ‘ಜಿಮ್ನಾಸ್ಟಿಕ್ಸ್‌’ ಎಂದು ಉಚ್ಚರಿಸಲು ಕಷ್ಟಪಡುವಂತಹ ಎಷ್ಟೋ ಮಂದಿ ಇರುವಂತಹ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ.ರಿಯೊ ಡಿ ಜನೈರೊದ ಜಿಮ್ನಾಸ್ಟಿಕ್ಸ್‌ ಸೆಂಟರ್‌ನಲ್ಲಿ ದೀಪಾ ಕರ್ಮಾಕರ್‌ ಹಾಕಿದ ಲಯಬದ್ಧ ಲಾಗ (ಸಮರ್‌ಸಾಲ್ಟ್‌) ಭಾರತ ದಲ್ಲಿ ಈ ಕ್ರೀಡೆಯ ಆಡಳಿತ ನೋಡಿಕೊಳ್ಳುತ್ತಿರುವವರನ್ನು ಬಡಿದೆಬ್ಬಿಸಿದೆ. ಅಮೆರಿಕ, ಬ್ರಿಟನ್‌, ಚೀನಾ, ರುಮೇನಿಯ ಹಾಗೂ ಯುರೋಪಿನ ಇನ್ನೂ ಕೆಲವು ದೇಶಗಳು ಜಿಮ್ನಾಸ್ಟಿಕ್ಸ್‌ನಲ್ಲಿ ಈಗಾಗಲೇ ಬಹಳ ಎತ್ತರಕ್ಕೆ ಏರಿವೆ. ದೀಪಾ ಸಾಧನೆ ಸುದೀರ್ಘ ಹಾದಿಯಲ್ಲಿ ಇಟ್ಟಂತಹ ಪುಟ್ಟ ಹೆಜ್ಜೆ ಮಾತ್ರ. ರಿಯೊದಲ್ಲಿ ಪಾಲ್ಗೊಂಡಿರುವ ಅಮೆರಿಕದ 555 ಕ್ರೀಡಾಪಟುಗಳ ಬೃಹತ್‌ ತಂಡದಲ್ಲಿರುವ ಕುಳ್ಳಗಿನ ವ್ಯಕ್ತಿ ಸಿಮೊನ್‌ ಬಿಲ್ಸ್‌. ಆದರೆ ನಾಲ್ಕು ಅಡಿ ಎಂಟು ಇಂಚು ಮಾತ್ರ ಎತ್ತರವಿರುವ ಈ ಹುಡುಗಿ ಇಂದು ಜಿಮ್ನಾಸ್ಟಿಕ್‌ ಕ್ರೀಡೆಯಲ್ಲಿ ಉತ್ತುಂಗದ ಶಿಖರವೇರಿದ್ದಾರೆ. ಈ ಯಶಸ್ಸಿನ ಹಿಂದೆ ಅಪಾರ ಶ್ರಮ, ಬದ್ಧತೆ ಮತ್ತು ಆಧುನಿಕ ರೀತಿಯ ತರಬೇತಿ ಅಡಗಿದೆ. ಅಮೆರಿಕದ ಮಹಿಳಾ ಜಿಮ್ನಾಸ್ಟ್‌ ತಂಡ ರಿಯೊದಲ್ಲಿ ಚಿನ್ನ ಗೆದ್ದಿದೆ. ತಂಡ ವಿಭಾಗದಲ್ಲಿ ಅಮೆರಿಕದ ಐವರು ಮಹಿಳೆಯರೂ ಅತ್ಯದ್ಭುತ ಕಸರತ್ತು ಪ್ರದರ್ಶಿಸಿದ್ದರು. ಅಮೆರಿಕದಲ್ಲಿ ಜಿಮ್ನಾಸ್ಟ್‌ ಕ್ರೀಡೆಯ ಬೆಳವಣಿಗೆ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ‘ಪದಕದ ಶ್ರೇಯ ತಂಡದ ಈ ಐವರು ಸದಸ್ಯೆಯರಿಗೆ ಮಾತ್ರ ಸೀಮಿತವಾಗಿಲ್ಲ. ಜಿಮ್‌ಗೆ ಕಾಲಿರಿಸಿದ ದಿನದಿಂದ ಅವರಿಗೆ ತರಬೇತಿ ನೀಡುವಂತಹ ವ್ಯವಸ್ಥೆ ಇದೆ. ಈ ವ್ಯವಸ್ಥೆಯಲ್ಲಿರುವ ಎಲ್ಲರಿಗೂ ಇದರ ಶ್ರೇಯ ಸಲ್ಲುತ್ತದೆ’ ಎಂದು ಅಮೆರಿಕ ರಾಷ್ಟ್ರೀಯ ತಂಡದ ಸಂಯೋಜಕಿ ಮಾರ್ಟಾ ಕರೊಲ್‌ಯಿ ಹೇಳುತ್ತಾರೆ. ಹಂಗರಿ– ರುಮೇನಿಯ ಮೂಲದ ಜಿಮ್ನಾಸ್ಟಿಕ್ಸ್‌ ಕೋಚ್‌ ಮಾರ್ಟಾ ಅವರು ಅಮೆರಿಕದ ರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ ತಂಡದ ಸಂಯೋಜಕಿಯಾಗಿ ನೇಮಕಗೊಂಡ ಬಳಿಕ ಈ ಕ್ರೀಡೆಯ ಚಿತ್ರಣವೇ ಬದಲಾಗಿದೆ. ಇತ್ತೀಚೆಗೆ ಅಮೆರಿಕದ ಮಹಿಳಾ ತಂಡ ಮಾರ್ಟಾ ಜತೆ ಚೀನಾಕ್ಕೆ ಪ್ರಯಾಣ ಬೆಳೆಸಿತ್ತು. 16 ತಾಸುಗಳ ಪ್ರಯಾಣದ ಬಳಿಕ ಚೀನಾ ತಲುಪಿದ್ದ ತಂಡವನ್ನು ಅವರು ಕೆಲವೇ ಕ್ಷಣಗಳಲ್ಲಿ ವ್ಯಾಯಾಮ ಶಾಲೆಗೆ ಕರೆದೊಯ್ದಿದ್ದರು. ದೈನಂದಿನ ಕಸರತ್ತು ನಡೆಸುವಂತೆ ತಂಡದ ಸದಸ್ಯೆಯರಿಗೆ ಸೂಚಿಸಿದ್ದಾರೆ. ರಿಯೊದಲ್ಲಿ ಮಿಂಚು ಹರಿಸಿರುವ ಸಿಮೊನ್‌ ಬಿಲ್ಸ್‌ ಕೂಡಾ ಇದ್ದರು. ಬಿಲ್ಸ್‌ ‘ಬಾರ್ಸ್‌’ ಮತ್ತು ‘ಬೀಮ್‌’ ನಲ್ಲಿ ಕೆಲಹೊತ್ತು ಕಸರತ್ತು ನಡೆಸಿ ಆಯಾಸದಿಂದ ಕೆಳಕ್ಕೆ ಬಿದ್ದರು. ಅಭ್ಯಾಸ ನಡೆಸಲು ಆಗದಿದ್ದರೆ ಗಂಟುಮೂಟೆ ಕಟ್ಟಿಕೊಂಡು ಮನೆಗೆ ಹೊರಡು ಎಂದು ಮಾರ್ಟಾ ಅವರು ಬಿಲ್ಸ್‌ಗೆ ಎಚ್ಚರಿಸಿದ್ದರು. ‘ಇದನ್ನು ಕೇಳಿ ನಾನು ಅತ್ತಿದ್ದೆ’ ಎಂದು ಬಿಲ್ಸ್‌ ಹೇಳಿದ್ದಾರೆ. ಅಮೆರಿಕದಲ್ಲಿ ಈ ಕ್ರೀಡೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ ಮಾತ್ರ. ಮೂಲಸೌಕರ್ಯದ ಕೊರತೆ ಅಮೆರಿಕ, ರಷ್ಯಾ, ಚೀನಾ ಮತ್ತು ರುಮೇನಿಯ ಮುಂತಾದ ರಾಷ್ಟ್ರಗಳಲ್ಲಿ ದೊರೆಯುವ ಸೌಲಭ್ಯಗಳು ಭಾರತದಲ್ಲಿ ಇಲ್ಲ. ಆದರೆ ದೀಪಾ ಮತ್ತು ಆಶೀಶ್‌ ಕುಮಾರ್‌ ಅವರಂತಹ ಛಲವಂತರು ಪ್ರವಾಹದ ವಿರುದ್ಧ ದಿಕ್ಕಿಗೆ ಈಜಿ ಸಾಧನೆ ಮಾಡಿದ್ದಾರೆ. ರಿಯೊದಲ್ಲಿ ತಮ್ಮೊಂದಿಗೆ ಸ್ಪರ್ಧಿಸಿದ್ದ ವಿದೇಶಿ ಜಿಮ್ನಾಸ್ಟ್‌ಗಳಿಗೆ ದೊರೆತಿದ್ದ ಸೌಲಭ್ಯಗಳು ದೀಪಾಗೆ ದೊರೆತಿಲ್ಲ. ಅಗರ್ತಲಾದಲ್ಲಿ ಹುಟ್ಟಿ ಬೆಳೆದ ದೀಪಾ ಮೊದಲು ಮೆತ್ತಗಿನ ಹಾಸು ಅಥವಾ ಮ್ಯಾಟ್‌ ಇಲ್ಲದೆ ಗಟ್ಟಿ ನೆಲದಲ್ಲೇ ಅಭ್ಯಾಸ ನಡೆಸಿದ್ದರು. ಅವರು ಆರಂಭದ ದಿನಗಳಲ್ಲಿ ಅಭ್ಯಾಸಕ್ಕಾಗಿ ತೆರಳುತ್ತಿದ್ದ ವ್ಯಾಯಾಮ ಶಾಲೆಯಲ್ಲಿ ಉತ್ತಮ ಸೌಲಭ್ಯ ಇರಲಿಲ್ಲ. ಮಳೆ ಬಂದಾಗ ಚಾವಣಿಯಿಂದ ನೀರು ಸೋರುತ್ತಿತ್ತು. ‘ವಿಶ್ವದ ಪ್ರಮುಖ ಜಿಮ್ನಾಸ್ಟ್‌ಗಳು ದಶಕಗಳ ಹಿಂದೆ ಸ್ಥಾಪಿಸಿದ್ದಂತಹ ವೈಜ್ಞಾನಿಕ ವ್ಯವಸ್ಥೆಯನ್ನು ಅವಲಂಬಿಸಿ, ಅದಕ್ಕೆ ತಕ್ಕಂತ ಸಿದ್ಧತೆ ನಡೆಸುತ್ತಾರೆ’ ಎಂದು ದೀಪಾ ಅವರ ಕೋಚ್‌ ವಿಶ್ವೇಶ್ವರ್‌ ನಂದಿ ಹೇಳುತ್ತಾರೆ. ‘ಭಾರತದಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವುದು ಕಷ್ಟ’ ಎಂಬುದು ಅವರ ಅನುಭವದ ಮಾತು. 2010ರ ಕಾಮನ್‌ವೆಲ್ತ್‌ ಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ಆಶೀಶ್‌ ಕುಮಾರ್‌ ಅವರೂ ಸೂಕ್ತ ಸೌಲಭ್ಯ ಇಲ್ಲದೆ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರು. 2010ರ ಕಾಮನ್‌ವೆಲ್ತ್‌ ಕೂಟ ನವದೆಹಲಿಯಲ್ಲಿ ಅಕ್ಟೋಬರ್‌ ತಿಂಗಳಲ್ಲಿ ನಡೆದಿತ್ತು. ಆಶೀಶ್‌ ಆ ವರ್ಷ ಫೆಬ್ರುವರಿವರೆಗೆ ಬರಿ ನೆಲದಲ್ಲೇ (ಮ್ಯಾಟ್‌ ಇರಲಿಲ್ಲ) ಅಭ್ಯಾಸ ನಡೆಸಿದ್ದರು. ಫೆಬ್ರುವರಿಯಲ್ಲಿ ಅವರಿಗೆ ಸಲಕರಣೆ ಒದಗಿಸಲಾಗಿತ್ತು. ಆದರೆ ಅದು ಸುಮಾರು 20 ವರ್ಷಗಳ ಹಿಂದಿನ ಸಲಕರಣೆಯಾಗಿತ್ತು! ಭಾರತದಲ್ಲಿ ಜಿಮ್ನಾಸ್ಟಿಕ್ಸ್‌ಅನ್ನು ಗಂಭೀರವಾಗಿ ತೆಗೆದು ಕೊಂಡಿಲ್ಲ ಎಂಬುದಕ್ಕೆ ಇದು ಸಾಕ್ಷಿ. ‘ಸೂಕ್ತ ಸೌಲಭ್ಯ ದೊರೆತ್ತಿ ದ್ದಲ್ಲಿ ಚಿನ್ನ ಅಥವಾ ಬೆಳ್ಳಿ ಜಯಿಸಬಹುದಿತ್ತು’ ಎಂದು ಆಶೀಶ್‌ ಸ್ಪರ್ಧೆಯ ಬಳಿಕ ನುಡಿದಿದ್ದರು. ಜಿಮ್ನಾಸ್ಟ್‌ ಸ್ಪರ್ಧಿಗಳಿಗೆ ಭಾರತ ಮತ್ತು ವಿದೇಶದಲ್ಲಿ ದೊರೆ ಯುವ ಮೂಲಸೌಕರ್ಯಗಳಿಗೆ ಅಜಗಜಾಂತರ ವ್ಯತ್ಯಾಸವಿದೆ. ಜಿಮ್ನಾಸ್ಟಿಕ್ಸ್‌ ಭಾರತದಲ್ಲಿ ಅಷ್ಟೊಂದು ಜನಪ್ರಿಯತೆ ಪಡೆದಿಲ್ಲ. ಜನಪ್ರಿಯವಲ್ಲದ ಕ್ರೀಡೆಯಲ್ಲಿ ಹೆಸರು ಮಾಡುವುದು ಸುಲಭವಲ್ಲ. ತಡವಾಗಿ ಆರಂಭ ಚೀನಾ ಮತ್ತು ರುಮೇನಿಯದಲ್ಲಿ ನಾಲ್ಕರ ಹರೆಯದಲ್ಲೇ ಮಕ್ಕಳನ್ನು ಜಿಮ್ನಾಸ್ಟ್‌ ಮತ್ತು ಈಜು ಸ್ಪರ್ಧೆಗೆ ಸಜ್ಜುಗೊಳಿಸುತ್ತಾರೆ. ಅಂತಹ ವ್ಯವಸ್ಥೆ ಅಲ್ಲಿದೆ. ಆದರೆ ಭಾರತದಲ್ಲಿ ಎಳೆಯ ಮಕ್ಕಳನ್ನು ತರಬೇತಿಗೆ ಕಳುಹಿಸಲು ಹೆತ್ತವರು ಹಿಂಜರಿಯುವರು. ಈ ಹಿಂಜರಿಕೆಗೆ ಪ್ರಮುಖ ಕಾರಣ ಸೂಕ್ತ ಸೌಲಭ್ಯ ಇಲ್ಲದಿರುವುದು. ಪುಟ್ಟ ಮಕ್ಕಳು ಬಿದ್ದು ಎಲ್ಲಿ ಗಾಯಗೊಳ್ಳುವರೋ ಎಂಬ ಭಯ ಹೆತ್ತವರನ್ನು ಕಾಡುವುದು ಸಹಜ. ಏನೇ ಇರಲಿ... ಕ್ರಿಕೆಟ್‌ಅನ್ನೇ ಉಸಿರಾಡುವ, ಕ್ರಿಕೆಟ್‌ ಆಟಗಾರರನ್ನೇ ಆರಾಧಿಸುವ ಜನರಿರುವ ಈ ದೇಶದಲ್ಲಿ ಕೆಲವು ಮಹಿಳೆಯರು ‘ಕ್ರಾಂತಿ’ ಮಾಡಿದ್ದಾರೆ. ಸೈನಾ ನೆಹ್ವಾಲ್‌ ಮತ್ತು ಸಾನಿಯಾ ಮಿರ್ಜಾ ಅವರು ಇದರಲ್ಲಿ ಪ್ರಮುಖರು. ಈ ಇಬ್ಬರನ್ನು ನೋಡಿ ಎಷ್ಟೋ ಹೆಣ್ಣುಮಕ್ಕಳು ಹೊಸ ಕನಸು, ಭರವಸೆಯೊಂದಿಗೆ ರ್‍್ಯಾಕೆಟ್‌ ಹಿಡಿದು ಬ್ಯಾಡ್ಮಿಂಟನ್‌ ಹಾಗೂ ಟೆನಿಸ್‌ ಆಡಲು ಶುರು ಮಾಡಿದ್ದರು.ಇದೀಗ ದೀಪಾ ಕರ್ಮಾಕರ್‌ ಅವರನ್ನು ನೋಡಿ ಹೆಣ್ಣು ಮಕ್ಕಳು ಜಿಮ್ನಾಸ್ಟಿಕ್ಸ್‌ ತರಬೇತಿಯತ್ತ ಒಲವು ತೋರಬಹುದು. ಆದರೆ ಒಂದು ಪ್ರಶ್ನೆ ಕಾಡುತ್ತಿದೆ. ಕನಿಷ್ಠ ಮೂಲ ಸೌಲಭ್ಯ ಹೊಂದಿರುವ ಜಿಮ್ನಾಸ್ಟಿಕ್ಸ್‌ ಕೇಂದ್ರಗಳು ವಿರಳವಾಗಿರುವ ಈ ದೇಶದಲ್ಲಿ ತರಬೇತಿಗೆ ಎಲ್ಲಿಗೆ ಹೋಗಬೇಕು? ರುಮೇನಿಯ ಪ್ರಭುತ್ವ ಅಂತ್ಯ? ಜಿಮ್ನಾಸ್ಟಿಕ್ಸ್‌ನಲ್ಲಿ ರುಮೇನಿಯ ಹಲವು ವರ್ಷಗಳಿಂದ ಪ್ರಬಲ ಶಕ್ತಿ ಎನಿಸಿಕೊಂಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ದೇಶದ ಪ್ರಭುತ್ವ ಅಂತ್ಯಗೊಳ್ಳುವ ಸೂಚನೆ ಕಂಡುಬರುತ್ತಿದೆ. ರಿಯೊ ಕೂಟಕ್ಕೆ ಅರ್ಹತೆ ಪಡೆಯುವಲ್ಲಿ ರುಮೇನಿಯದ ಮಹಿಳಾ ತಂಡ ವಿಫಲವಾಗಿದೆ. 1968ರ ಬಳಿಕ ಇಂತಹ ಪರಿಸ್ಥಿತಿ ಎದುರಾದದ್ದು ಇದೇ ಮೊದಲು. 1976 ರಿಂದ 2012ರ ವರೆಗೆ ಪ್ರತಿ ಒಲಿಂಪಿಕ್‌ನಲ್ಲೂ ರುಮೇನಿಯದ ಮಹಿಳಾ ತಂಡ ಒಂದಲ್ಲ ಒಂದು ಪದಕ ಜಯಿಸಿದೆ. 2000 ಮತ್ತು 2004 ರಲ್ಲಿ ಸತತ ಎರಡು ಚಿನ್ನ ಜಯಿಸಿತ್ತು. ಯಾವುದೇ ದೇಶದ ಮಹಿಳಾ ತಂಡ ಇಂತಹ ಸಾಧನೆ ಮಾಡಿರಲಿಲ್ಲ. ಆದರೆ ಈ ಬಾರಿ ಅರ್ಹತೆ ಪಡೆಯುವಲ್ಲೇ ಎಡವಿದ್ದು ಅಚ್ಚರಿಗೆ ಕಾರಣವಾಗಿದೆ. ರಿಯೊದಲ್ಲಿ ಮಹಿಳೆಯರ ವಿಭಾಗದಲ್ಲಿ ಏಕೈಕ ಸ್ಪರ್ಧಿ (ಕ್ಯಾಟಲಿನಾ ಪೊನೊರ್‌) ಮಾತ್ರ ರುಮೇನಿಯ ತಂಡವನ್ನು ಪ್ರತಿನಿಧಿಸಿದ್ದರು. 1976ರ ಬಳಿಕ ರುಮೇನಿಯದ ಜಿಮ್ನಾಸ್ಟ್‌ಗಳು ಒಟ್ಟು 56 ಪದಕ ಜಯಿಸಿದ್ದಾರೆ ಇದರಲ್ಲಿ 24 ಚಿನ್ನವೂ ಸೇರಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.